6

ಸಂಸ್ಥೆಗಳು ಸರ್ಕಾರಿ ಶಾಲೆಗಳಿಗೆ ಸೌಲಭ್ಯ ನೀಡಲಿ

Published:
Updated:

ಆನೇಕಲ್‌: ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯಗಳನ್ನು ಕಲ್ಪಿಸಿ ಕೊಡುವ ಮೂಲಕ ಸಂಘ ಸಂಸ್ಥೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ನೆರವು ನೀಡಬೇಕು ಎಂದು ಬಮೂಲ್‌ ನಿರ್ದೇಶಕ ಆರ್.ಕೆ.ರಮೇಶ್ ತಿಳಿಸಿದರು.

ಅವರು ತಾಲ್ಲೂಕಿನ ಹೆನ್ನಾಗರ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸಂಕಲ್ಪ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಲೇಖನ ಸಾಮಗ್ರಿ ಮತ್ತು ಶೈಕ್ಷಣಿಕ ಪರಿಕರಗಳನ್ನು ವಿತರಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಆದರೆ ಸಾರ್ವಜನಿಕರು ಸರ್ಕಾರಿ ಶಾಲೆಗಳ ಬಗೆಗಿನ ಕೀಳರಿಮೆಯಿಂದ ಖಾಸಗಿ ಶಾಲೆಗಳತ್ತ ಒಲವು ತೋರುತ್ತಿದ್ದಾರೆ. ಹಾಗಾಗಿ ಸರ್ಕಾರಿ ಶಾಲೆಗಳನ್ನು ಬಲಪಡಿಸಲು ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಪ್ರೋತ್ಸಾಹ ನೀಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಸಂಕಲ್ಪ ಪ್ರತಿಷ್ಠಾನದ ಅಧ್ಯಕ್ಷ ಹೆನ್ನಾಗರ ಶ್ರೀನಿವಾಸ್ ಮಾತನಾಡಿ, ಆದಾಯದ ಒಂದು ಭಾಗವನ್ನು ಸಮಾಜಸೇವೆಗೆ ಮೀಸಲಿಡಬೇಕೆಂಬ ಚಿಂತನೆಯೊಂದಿಗೆ ಹಲವು ಮಂದಿ ಸಮಾನ ಮನಸ್ಕರು ಒಗ್ಗೂಡಿ ಸಂಕಲ್ಪ ಪ್ರತಿಷ್ಠಾನ ರೂಪಿಸಲಾಗಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಸೇವಾ ಚಟುವಟಿಕೆಗಳನ್ನು ನಡೆಸಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಜೆ.ಪ್ರಸನ್ನಕುಮಾರ್ ಮಾತನಾಡಿ, ಹೆನ್ನಾಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಲು ಗ್ರಾಮ ಪಂಚಾಯಿತಿ ಜೊತೆಗೆ ಹಲವಾರು ಕೈಗಾರಿಕೆಗಳು ನೆರವು ನೀಡಿವೆ. ಹಾಗಾಗಿ ಹೆನ್ನಾಗರ ಹಿರಿಯ ಪ್ರಾಥಮಿಕ ಶಾಲೆ, ಮಾಸ್ತೇನಹಳ್ಳಿ, ಕಾಚನಾಯಕನಹಳ್ಳಿ, ಹೊಸಹಳ್ಳಿ ಗ್ರಾಮಗಳಲ್ಲಿ ಸುಸಜ್ಜಿತ ಶಾಲಾ ಕಟ್ಟಡಗಳು ನಿರ್ಮಾಣವಾಗಿವೆ. ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಹಾಗಾಗಿ ಶಿಕ್ಷಣಕ್ಕಾಗಿ ಎಲ್ಲರೂ ಒತ್ತು ನೀಡಬೇಕು ಎಂದರು.

ಹೆನ್ನಾಗರ ಗ್ರಾಮ ಪಂಚಾಯಿತಿಯ ಎಲ್ಲಾ ಸರ್ಕಾರಿ ಶಾಲೆಗಳಿಗೆ ಸಂಕಲ್ಪ ಪ್ರತಿಷ್ಠಾನದ ವತಿಯಿಂದ ಬ್ಯಾಗ್ ಮತ್ತು ನೋಟ್‌ಪುಸ್ತಕ ವಿತರಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯರಾದ ರಾಮಸ್ವಾಮಿ, ಕಿರಣ್, ಸಂಪಂಗಿ, ಮುಖಂಡ ರಂಜಿತ್, ಹೆನ್ನಾಗರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತುಳಸಿನಾಥ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry