ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಗೊಡಚಿ ವೀರಭದ್ರೇಶ್ವರ ಜಾತ್ರೆ

Last Updated 4 ಡಿಸೆಂಬರ್ 2017, 6:51 IST
ಅಕ್ಷರ ಗಾತ್ರ

ಗೊಡಚಿ (ರಾಮದುರ್ಗ ತಾಲ್ಲೂಕು): ಈ ಭಾಗದ ಜಾಗೃತ ಕ್ಷೇತ್ರ ಮತ್ತು ಉತ್ತರ ಕರ್ನಾಟಕದ ಧರ್ಮಸ್ಥಳ ಎಂದೇ ಖ್ಯಾತಿ ಪಡೆದಿರುವ ರಾಮದುರ್ಗ ತಾಲ್ಲೂಕಿನ ಗೊಡಚಿ ವೀರಭದ್ರೇಶ್ವರ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ಸಂಜೆ ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಪುರವಂತರ ಸಮ್ಮುಖದಲ್ಲಿ ಗೊಡಚಿ ವೀರಭದ್ರನ ಉತ್ಸವ ಮೂರ್ತಿಯನ್ನು ರಥದಲ್ಲಿ ಸ್ಥಾಪಿಸಿದಾಗ ‘ಹರ ಹರ ಮಹಾದೇವ’ ಎಂದು ಭಕ್ತರು ಹಾಕಿದ ಘೋಷಣೆ ಮುಗಿಲು ಮುಟ್ಟಿತು. ತೇರ ಬಜಾರದಲ್ಲಿಯ ಎಲ್ಲ ವ್ಯಾಪಾರಿ ಮಳಿಗೆಗಳನ್ನು ರಥೋತ್ಸವಕ್ಕೆ ಮುಂಚೆ ತೆರವುಗೊಳಿಸಲಾಗಿತ್ತು. 50 ಮೀಟರ್‌ ದೂರದವರೆಗೆ ಕ್ರಮಿಸಿದ ರಥವು ನಂತರ ಮೂಲ ಸ್ಥಾನಕ್ಕೆ ಮರಳಿದಾಗ ಭಕ್ತರು ಚಪ್ಪಾಳೆ ಮೂಲಕ ಹ‌ರ್ಷ ವ್ಯಕ್ತಪಡಿಸಿದರು. ದೇವರಿಗೆ ನಮಿಸಿ ಪುನೀತಭಾವ ತಳೆದರು. ಮಹಿಳೆಯರು, ಮಕ್ಕಳು, ಯುವಕರು ತೊಟ್ಟಿಲು ಜೋಕಾಲಿ, ಉಗಿಬಂಡಿ, ವಿವಿಧ ಆಟಗಳಲ್ಲಿ ಪಾಲ್ಗೊಂಡು ಖುಷಿಪಟ್ಟರು.

ಬೆಳವಲ ಖರೀದಿಗೆ ಮುಗಿಬಿದ್ದರು: ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಭಕ್ತರು, ಈ ಜಾತ್ರೆಯು ‘ಬೆಳವಲ ಹಣ್ಣಿನ ಪ್ರಸಿದ್ಧ ಜಾತ್ರೆ’ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದರು. ವ್ಯಾಪಾರಿಗಳು 15–20 ಟ್ರಕ್‌ಗಳಲ್ಲಿ ತಂದಿದ್ದ ಬೆಳವಲ ಹಣ್ಣಿನ ವ್ಯಾಪಾರವು ಅಗ್ಗದ ಬೆಲೆಗೆ ಲಭ್ಯವಾಯಿತು. ಸಿಹಿ ಹುಗ್ಗಿಯ ಸವಿಯನ್ನು ನೀಡಬಲ್ಲ ಬೆಳವಲ ಹಣ್ಣನ್ನು ಜನರು ಮುಗಿಬಿದ್ದು ಖರೀದಿಸಿದರು.

‘ಬೆಳವಲ ಹಣ್ಣಿನೊಳಗೆ ಬೆಲ್ಲ ಸೇರಿಸಿ ಮತ್ತೆ ಸೊಗಟೆಗೆ ತುಂಬಿ ಒಂದು ದಿನ ಇಡಬೇಕು. ಒಂದು ದಿನ ಪೂರ್ತಿ ಕಳೆತ ನಂತರ ಸೇವಿಸಿದರೆ ಉತ್ತರ ಕರ್ನಾಟಕದ ಹುಗ್ಗಿಯ ರುಚಿ ದೊರೆಯುತ್ತದೆ’ ಎಂದು ಓಬಳಾಪುರದ ಜ್ಯೋತಿ ಬುಡ್ಡಾಗೋಳ ತಿಳಿಸಿದರು.

ಈ ಬಾರಿ ಬೋರೆ ಹಣ್ಣು ಮತ್ತು ಬಾಳೆ ಹಣ್ಣಿನ ವ್ಯಾಪಾರವು ಭರ್ಜರಿಯಾಗಿ ನಡೆಯಿತು. ಉತ್ತಮ ಬೆಳೆ ಬಂದ ಪ್ರಯುಕ್ತ ಡಜನ್‌ ಬೆಳವಲ ಹಣ್ಣು ₹ 60ಕ್ಕೆ ಮಾರಾಟವಾದವು. ಕೆ.ಜಿ. ಬೋರೆ ಹಣ್ಣಿಗೆ ₹ 20ರಿಂದ 25ರ ದರವಿತ್ತು. ಉತ್ತಮ ತಳಿಯ ರೇಷ್ಮೆ ಬಾಳೆಹಣ್ಣು ₹15–20ಕ್ಕೆ ಒಂದು ಡಜನ್‌ ಲಭ್ಯವಾಗುತ್ತಿತ್ತು. ಜವಾರಿ ಬಾಳೆ ಹಣ್ಣು ಕೂಡ ₹35ರಿಂದ 40ಕ್ಕೆ ದೊರೆಯಿತು.

ಅನುಕೂಲಕ್ಕಾಗಿ ವ್ಯವಸ್ಥೆ: ‘ಸಾಗಣೆ ಮತ್ತಿತರ ವೆಚ್ಚ ಇರುತ್ತದೆ. ಲಾಭ ಎಲ್ಲಿಂದ ಬರಬೇಕು? ಬಲಿತ ಬೆಳವಲ ಹಣ್ಣನ್ನು ಹಾವೇರಿ ಮತ್ತು ಶಿಗ್ಗಾವಿಯಿಂದ ತಂದು ಮಾರಬೇಕಾಗುತ್ತದೆ’ ಎಂದು ವ್ಯಾಪಾರಿ ಗೊಡಚಿಯ ಮಾರುತಿ ರೈನಾಪುರ ತಿಳಿಸಿದರು.

ತಾಲ್ಲೂಕು ಆಡಳಿತದ ವತಿಯಿಂದ ತೆರೆದಿದ್ದ ಹನ್ನೆರಡು ವಸ್ತು ಪ್ರದರ್ಶನ ಮಳಿಗೆಗಳನ್ನು ಶಾಸಕ ಅಶೋಕ ಪಟ್ಟಣ ಉದ್ಘಾಟಿಸಿದರು. ಇದೇ ತಿಂಗಳ 7ರವರೆಗೆ ಜಾತ್ರೆ ಜರುಗಲಿದೆ. ಕೊನೆಯ ದಿನ ಲಕ್ಷ ದೀಪೋತ್ಸವ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT