3

ಮೂಡಿಗೆರೆ: ಅಘೋಷಿತ ಬಂದ್‌ ವಾತಾವರಣ

Published:
Updated:

ಮೂಡಿಗೆರೆ: ದತ್ತ ಜಯಂತಿ ಅಂಗವಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತವು ತಾಲ್ಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ಇಕ್ಕೆಲದ ಹೋಟೆಲ್‌, ಅಂಗಡಿಗಳನ್ನು ಬಂದ್‌ ಮಾಡಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಅಘೋಷಿತ ಬಂದ್‌ ವಾತಾವರಣ ಸೃಷ್ಟಿಯಾಗಿತ್ತು.

ಪಟ್ಟಣದ ಸೇರಿದಂತೆ ಬಿದರಹಳ್ಳಿ, ಹೊರಟ್ಟಿ, ಸಬ್ಬೇನಹಳ್ಳಿ, ಬಣಕಲ್‌, ಕೊಟ್ಟಿಗೆಹಾರಗಳಲ್ಲಿ ಮುಂಜಾನೆಯಿಂದ ರಾತ್ರಿಯವರೆಗೂ ಹೋಟೆಲ್‌ ಹಾಗೂ ಅಂಗಡಿಗಳನ್ನು ಬಂದ್‌ಮಾಡಿಸಿದ್ದು, ಇದರಿಂದ ದತ್ತಭಕ್ತರು ಮಾತ್ರವಲ್ಲದೇ, ಹೋಟೆಲ್‌ಗಳನ್ನೇ ಆಶ್ರಯಿಸಿರುವ ಕಾರ್ಮಿಕರು, ಆಟೊ ಚಾಲಕರು, ಸಾರಿಗೆ ಸಿಬ್ಬಂದಿ ಪ್ರಯಾಣಿಕರು ಇಡೀ ದಿನ ಊಟವಿಲ್ಲದೇ ಪರದಾಡಿದರು. ಪಟ್ಟಣದ ಒಳಭಾಗಗಳಲ್ಲೂ ಭಾನುವಾರ ಹೋಟೆಲ್‌, ಅಂಗಡಿಗಳು ಸಂಪೂರ್ಣವಾಗಿ ಮುಚ್ಚಿದ್ದವು.

ಪ್ರತಿದಿನ ಸುಮಾರು 25 ಕ್ಕೂ ಅಧಿಕ ಬಸ್‌ಗಳು ಪಟ್ಟಣದ ಬಸ್‌ ನಿಲ್ದಾಣದಲ್ಲಿ ಊಟಕ್ಕೆ ಬಿಡುತ್ತಿದ್ದು, ಭಾನುವಾರ ಹೋಟೆಲ್‌ ಬಂದ್‌ ಆಗಿರುವ ಮಾಹಿತಿಯಿಲ್ಲದೇ, ಊಟಕ್ಕಾಗಿ ಬಂದ ಪ್ರಯಾಣಿಕರು, ಹಿಡಿ ಶಾಪ ಹಾಕುತ್ತಾ ಹಿಂದಿರುಗುತ್ತಿದ್ದ ದೃಶ್ಯ ಕಂಡು ಬಂದಿತು.

‘ಕೊಟ್ಟಿಗೆಹಾರದಲ್ಲಿ ಊಟಕ್ಕೆ ಬಿಡಬೇಕಾಗಿತ್ತು. ಅಲ್ಲಿ ಹೋಟೆಲ್‌ ಬಂದ್‌ ಆಗಿದ್ದರಿಂದ ಮೂಡಿಗೆರೆಯಲ್ಲಿ ಬಿಡುತ್ತೇವೆ ಎಂದು ಕರೆ ತಂದರು. ಇಲ್ಲಿಯೂ ಊಟವಿಲ್ಲ. ಇದೀಗ ಚಿಕ್ಕಮಗಳೂರಿನಲ್ಲೂ ಊಟವಿಲ್ಲ ಎನ್ನುತ್ತಿದ್ದಾರೆ. ಬಸ್‌ನಲ್ಲಿರುವ ಮಕ್ಕಳು ಹಸಿವು ಎಂದು ಅಳುತ್ತಿದ್ದಾರೆ. ಇನ್ನು ಜಿಲ್ಲಾ ಗಡಿ ದಾಟಲು ಕನಿಷ್ಠ 3 ಗಂಟೆ ಬೇಕು. ಅಲ್ಲಿಯವರೆಗೂ ಮಕ್ಕಳು ಹಸಿದಿರಲು ಸಾಧ್ಯವೇ, ಕನಿಷ್ಠ ಜಿಲ್ಲಾಡಳಿತವೂ ಮೊದಲೇ ಮಾಹಿತಿ ನೀಡಿದ್ದರೆ ಪ್ರಯಾಣವನ್ನು ಕೈಗೊಳ್ಳುತ್ತಿರಲಿಲ್ಲ ಎಂದು’ ಬಿಸ್ಕೇಟ್‌ಗಾಗಿ ಪಟ್ಟಣದಲ್ಲಿ ಅಲೆದಾಡುತ್ತಿದ್ದ ರಾಣಿಬೆನ್ನೂರಿನ ಶಿವಕುಮಾರ್‌ ಆಕ್ರೋಶ ವ್ಯಕ್ತ ಪಡಿಸಿದರು. ಊಟಕ್ಕಾಗಿ ಬಸ್‌ ಚಾಲಕರು ಹಾಗೂ ಪ್ರಯಾಣಿಕರ ನಡುವೆ ವಾಗ್ವಾದ ನಡೆಯುತ್ತಿದ್ದ ದೃಶ್ಯ ಕಂಡು ಬಂದಿತು.

‘ಮುಂಜಾನೆ 4 ಕ್ಕೆ ಹೋಟೆಲ್‌ಗೆ ಬಂದ ಪೊಲೀಸರು, ಹೋಟೆಲ್‌ಗಳನ್ನು ಬಂದ್‌ ಮಾಡಿಸಿದರು. ಇದರಿಂದ ಮುಂಜಾನೆ 8ರ ವರೆಗೂ ವ್ಯಾಪಾರ ಮಾಡೋಣವೆಂದು ಸಿದ್ಧಪಡಿಸಿಕೊಂಡಿದ್ದ ಆಹಾರ ಪದಾರ್ಥವೆಲ್ಲವೂ ನಷ್ಟವಾಯಿತು. ಇಡೀ ದಿನ ಆಟೊ ಚಾಲಕರು, ವ್ಯಾನ್‌ ಚಾಲಕರು ಊಟಕ್ಕಾಗಿ ಬಂದಿದ್ದರು. ಇಂದು ಅವರಿಗೂ ಊಟ ಇಲ್ಲದಂತಾಯಿತು’ ಎಂದು ಬಸ್‌ ನಿಲ್ದಾಣದ ಸಮೀಪವಿರುವ ಹೋಟೆಲ್‌ ಮಾಲೀಕರೊಬ್ಬರು ಅಳಲು ತೋಡಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry