ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದತ್ತ ಪೀಠದಲ್ಲಿ ಭಕ್ತರ ದಂಡು; ಪಾದುಕೆ ದರ್ಶನ

Last Updated 4 ಡಿಸೆಂಬರ್ 2017, 7:35 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ದತ್ತ ಜಯಂತಿ ಅಂಗವಾಗಿ ಇನಾಂ ದತ್ತಾತ್ರೇಯ ಪೀಠಕ್ಕೆ ಭಾನುವಾರ ವಿವಿಧೆಡೆಗಳಿಂದ ಬಂದಿದ್ದ ಸಹಸ್ರಾರು ದತ್ತಮಾಲಾಧಾರಿಗಳು ಗುರುದತ್ತಾತ್ರೇಯ ಸ್ವಾಮಿ ಪಾದುಕೆ ದರ್ಶನ ಮಾಡಿ ಪುನೀತ ಭಾವ ಮೆರೆದರು.

ಮುಂಜಾನೆಯಿಂದಲೇ ದತ್ತಮಾಲಾಧಾರಿಗಳು ಇರುಮುಡಿ ಹೊತ್ತು ದತ್ತಪೀಠಕ್ಕೆ ತೆರಳಿದರು. ಕೆಲವರು ಮಾರ್ಗ ಮಧ್ಯೆ ಹೊನ್ನಮ್ಮನ ಹಳ್ಳದಲ್ಲಿ ಮಿಂದು ಸಾಗಿದರು. ಪೀಠದ ಪ್ರವೇಶ ದ್ವಾರದಿಂದ ಸಾಲಾಗಿ ತೆರಳಿ ಗುಹೆಯೊಳಗಿನ ಪಾದುಕೆ ದರ್ಶನ ಮಾಡಿ, ಹರಕೆ ಸಲ್ಲಿಸಿ, ಭಕ್ತಿ ಸಮರ್ಪಿಸಿದರು. ಈ ಭಾರಿ ಭಕ್ತರ ಸಂಖ್ಯೆ ಹೆಚ್ಚು ಇತ್ತು.

ಪ್ರವೇಶ ದ್ವಾರದಿಂದ ಸುಮಾರು ಎರಡೂವರೆ ಕಿಲೋ ಮೀಟರ್‌ ವರೆಗೆ ಭಕ್ತರ ಸಾಲು ಇತ್ತು. ಮಧ್ಯಾಹ್ನದ ನಂತರವೂ ಭಕ್ತರ ದಂಡು ಪೀಠದತ್ತ ಸಾಗಿತು. ಪೀಠದ ಆವರಣದಲ್ಲಿರುವ ಸಭಾಂಗಣದಲ್ಲಿ ಗಣಪತಿ ಹೋಮ, ದತ್ತಹೋಮ, ಹವನಗಳೂ ನಡೆದವು. ಅನಸೂಯಾದೇವಿ, ಅತ್ರಿಮುನಿ, ಗುರುದತ್ತಾತ್ರೇಯ ಮೂರ್ತಿಗೆ ಪೂಜೆ ನೆರವೇರಿಸಲಾಯಿತು.

ಟ್ರಾಫಿಕ್‌ ಜಾಮ್‌: ಪೀಠದಿಂದ ಸುಮಾರು ಮೂರು ಕಿಲೋ ಮೀಟರ್‌ವರೆಗೆ ಟ್ರಾಫಿಕ್‌ ಜಾಮ್‌ ಆಗಿತ್ತು. ವಾಹನಗಳ ದಟ್ಟಣೆ ನಿಯಂತ್ರಿಸಿ ಸಂಚಾರಕ್ಕೆ ಅನುವು ಮಾಡಲು ಪೊಲೀಸರು ಹರಸಾಹಸಪಟ್ಟರು.

ಜಿಲ್ಲೆ ಮತ್ತು ಹೊರಜಿಲ್ಲೆಗಳಿಂದ ವಾಹನಗಳಲ್ಲಿ ಭಕ್ತರು ಬಂದಿದ್ದರು. ದತ್ತಪೀಠ ಆವರಣ ಕೆಸರಿಮಯವಾಗಿತ್ತು. ಭಗವಧ್ವಜಗಳ ಹಾರಾಟ, ಕೇಸರಿ ವಸ್ತ್ರಧಾರಿಗಳ ಓಡಾಟ ಜೋರಾಗಿತ್ತು. ಪೊಲೀಸ್‌ ಬಿಗಿ ಭದ್ರತೆಯೂ ಇತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ನಗರದಲ್ಲಿ ಅಂಗಡಿಮುಂಗಟ್ಟುಗಳನ್ನು ಮುಚ್ಚಿಸಿತ್ತು. ನಗರದಲ್ಲಿ ಅಘೋಷಿತ ಬಂದ್‌ ವಾತಾವರಣ ಇತ್ತು.

ನಗರದಲ್ಲಿ ಸಂಜೆ ಕೆಲವು ಕಿಡಿಗೇಡಿಗಳು ಖಾಸಗಿ ಬಸ್‌ ಮೇಲೆ ಕಲ್ಲು ತೂರಿ ಗಾಜು ಪುಡಿಗೊಳಿಸಿದ್ದಾರೆ. ಉಪ್ಪಳ್ಳಿಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಸ್ಥಿತಿ ನಿಯಂತ್ರಣ ನಿಟ್ಟಿನಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ವಿಶ್ವಹಿಂದೂ ಪರಿಷತ್‌ ಮತ್ತು ಬಜರಂಗದಳ ನೇತೃತ್ವದಲ್ಲಿ ಮೂರು ದಿನಗಳಿಂದ ನಡೆದ ದತ್ತ ಜಯಂತಿ ಉತ್ಸವವು ಕೆಲ ಕಹಿಗಳೊಂದಿಗೆ ಭಾನುವಾರ ಸಂಪನ್ನಗೊಂಡಿತು.

ನಿರ್ಬಂಧಿತ ಪ್ರದೇಶದಲ್ಲಿ ಭಗಧ್ವಜ ನೆಟ್ಟ ದತ್ತಭಕ್ತ
ಚಿಕ್ಕಮಗಳೂರು: ದತ್ತಭಕ್ತರೊಬ್ಬರು ದತ್ತ ಪೀಠದ ಆವರಣದ ಬೇಲಿ ಏರಿ ಜಿಗಿದು ನಿರ್ಬಂಧಿತ ಪ್ರದೇಶದಲ್ಲಿ ಭಗದ್ವಜ ನೆಟ್ಟಿದ್ದರಿಂದ ಕೆಲಕಾಲ ಬಿಗುವಿನ ವಾತಾವಾರಣ ನಿರ್ಮಾಣವಾಗಿತ್ತು.

ಕೂಡಲೇ ನಾಲ್ಕೈದು ಪೊಲೀಸರು ಆ ದತ್ತಭಕ್ತನನ್ನು ನಿಷೇಧಿತ ಪ್ರದೇಶದಿಂದ ಹೊರಕ್ಕೆ ಎಳೆದೊಯ್ದುರು. ಈ ಸಂದರ್ಭದಲ್ಲಿ ತಳ್ಳಾಟ ನಡೆಯಿತು. ಬೇಲಿ ಪಕ್ಕದಲ್ಲಿ ಅಳವಡಿಸಿದ್ದ ಮರದ ಕಟ್ಟಿಗೆಗಳ ಬ್ಯಾರಿಕೆಡ್‌ ನೂಕಾಟದಲ್ಲಿ ಬಿದ್ದಿತ್ತು. ಕೆಲವರು ಕೇಸರಿ ಶಲ್ಯಗಳನ್ನು ಗಂಟುಕಟ್ಟಿ ನಿರ್ಬಂಧಿತ ಪ್ರದೇಶದ ಕಡೆಗೆ ತೂರಿದರು. ಆಗ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಹರಸಾಹಸಪಟ್ಟರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಶಾಸಕ ಸಿ.ಟಿ.ರವಿ ಮಾತನಾಡಿ ‘ಶಲ್ಯ ತೂರುವುದು ಸನ್ಮಾನ ಅಲ್ಲ ಅಪಮಾನ. ಯಾರೂ ಇಂಥ ಕೆಲಸ ಮಾಡಬಾರದು. ಮಾಲಾಧಾರಿಗಳಾಗಿ ಕೆಟ್ಟ ಘೋಷಣೆಗಳನ್ನು ಕೂಗುವುದು ಸಂಸ್ಕಾರ ಅಲ್ಲ’ ಎಂದು ಹೇಳಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಗೋರಿಗೆ ನೆಟ್ಟಿದ್ದ ನಾಮಫಲಕ ಉರುಳಿಸಿದ ದತ್ತಭಕ್ತರು
ಚಿಕ್ಕಮಗಳೂರು: ದತ್ತಪೀಠ ಆವರಣದಲ್ಲಿನ ನಿರ್ಬಂಧಿತ ಪ್ರದೇಶದೊಳಗೆ ಗೋರಿಗೆ ನೆಟ್ಟಿದ್ದ ನಾಮಫಲಕವನ್ನು ದತ್ತಭಕ್ತರು ಉರುಳಿಸಿದ್ದರಿಂದ ಕೆಲಕಾಲ ಬಿಗುವಿನ ಪರಿಸ್ಥಿತಿ ಸೃಷ್ಟಿಯಾಯಿತು.

ನಿರ್ಬಂಧಿತ ಪ್ರದೇಶಕ್ಕ ಅಳವಡಿಸಿರುವ ತಂತಿಬೇಲಿ ನುಸುಳಿ ದತ್ತಭಕ್ತರು ಒಳಕ್ಕೆ ನುಗ್ಗಿದ್ದರು. ಒಬ್ಬರು ಭಗವಧ್ವಜ ನೆಡಲು ಮುಂದಾದರು. ಪೊಲೀಸರು ಹರಸಾಹಸಪಟ್ಟು ದತ್ತಭಕ್ತರನ್ನು ಹೊರಹಾಕಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ದತ್ತಭಕ್ತರ ನಡುವೆ ಎಳೆದಾಟ ನಡೆಯಿತು.

ಗೋರಿಗಳಿದ್ದ ನಿರ್ಬಂಧಿತ ಪ್ರದೇಶದ ಸುತ್ತಲಿದ್ದ ದತ್ತಭಕ್ತರನ್ನು ಪೊಲೀಸರು ಚದುರಿಸಿದರು. ಐಜಿಪಿ ಹೇಮಂತ್‌ ನಿಂಬಾಳ್ಕರ್‌, ಎಸ್ಪಿ ಅಣ್ಣಾಮಲೈ, ಎಎಸ್ಪಿ ಕೆ.ಎಚ್‌.ಜಗದೀಶ್‌ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT