ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿಗರ ಸೆಳೆಯುತ್ತಿರುವ ಭೀಷ್ಮ ಕೆರೆ

Last Updated 4 ಡಿಸೆಂಬರ್ 2017, 8:49 IST
ಅಕ್ಷರ ಗಾತ್ರ

ಗದಗ: ನಗರದ ಹೃದಯ ಭಾಗದಲ್ಲೇ ಇರುವ 103 ಎಕರೆ ವಿಸ್ತೀರ್ಣದ ಐತಿಹಾಸಿಕ ಭೀಷ್ಮ ಕೆರೆಯು ಈಗ ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳ್ಳುತ್ತಿದೆ. ವಾರಾಂತ್ಯದ ದಿನಗಳಲ್ಲಿ ಇಲ್ಲಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣುತ್ತಿದೆ.

ಇಲ್ಲಿನ ಬಸವೇಶ್ವರ ಮೂರ್ತಿ, ಮಕ್ಕಳ ಉದ್ಯಾನ, ಬೋಟಿಂಗ್‌ ಮತ್ತು ಪ್ರತಿ ಭಾನುವಾರ ಬೆಳಿಗ್ಗೆ ಮತ್ತು ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇಲ್ಲಿನ ಉದ್ಯಾನದಲ್ಲಿ ಆಯೋಜಿಸುವ ‘ಉದಯರಾಗ’ ಮತ್ತು ‘ಸಂಧ್ಯಾರಾಗ’ ಸಂಗೀತ ಕಾರ್ಯಕ್ರಮಗಳು ಜನರನ್ನು ಆಕರ್ಷಿಸುತ್ತಿವೆ.

ಇಡೀ ನಗರಕ್ಕೆ ಸ್ವಾಗತ ಕೋರುವಂತೆ ಭೀಷ್ಮಕೆರೆ ಹರಡಿಕೊಂಡಿದೆ. ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಕೆರೆಯನ್ನು ತುಂಗಭದ್ರಾ ನೀರಿನಿಂದ ಭರ್ತಿ ಮಾಡಿರುವುದರಿಂದ ಮತ್ತೆ ದೋಣಿ ವಿಹಾರ ಪ್ರಾರಂಭಗೊಂಡಿದೆ. ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಪೇಟೆಂಡ್ ಸ್ಟಾರ್ಕ್‌, ಕೆನ್ನೀಲಿ ಬಕ ಸೇರಿ ಹಲವು ವಲಸೆ ಪಕ್ಷಿಗಳು ಕೆರೆಯಂಗಳಕ್ಕೆ ಬಂದಿಳಿದಿವೆ. ಉದ್ಯಾನ ವೀಕ್ಷಣೆ ಹಾಗೂ ದೋಣಿ ವಿಹಾರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗಿದೆ. ಶನಿವಾರ, ಭಾನುವಾರ ಕುಟುಂಬ ಸಮೇತರಾಗಿ ಇಲ್ಲಿಗೆ ಬಂದು ದೋಣಿ ವಿಹಾರದ ಖುಷಿ ಅನುಭವಿಸಿ ಹೋಗುತ್ತಿದ್ದಾರೆ.

‘ಮೊದಲು ಉದ್ಯಾನ ವೀಕ್ಷಣೆ ಉಚಿತವಾಗಿತ್ತು. ಈಗ ₹ 10 ಪ್ರವೇಶ ದರ ನಿಗದಿಪಡಿಸಲಾಗಿದೆ. ಬಸವೇಶ್ವರ ಪುತ್ಥಳಿ ಇರುವ ಸ್ಥಳದಲ್ಲೇ, ನೆಲ ಮಾಳಿಗೆ
ಯಲ್ಲಿ ಬಸವೇಶ್ವರ ಜೀವನ ದರ್ಶನ ಮಾಡಿಸುವ ಸಿಮೆಂಟ್‌ ಕಲಾಕೃತಿಗಳನ್ನು ಇಡಲಾಗಿದೆ’ ಎಂದು ಇಲ್ಲಿ ಭದ್ರತೆಗೆ ನಿಯೋಜನೆಗೊಂಡಿರುವ ಪ್ರವಾಸಿ ಮಿತ್ರ ಪಡೆಯ ಸಿಬ್ಬಂದಿ ಹೇಳಿದರು.

‘ವಾರಾಂತ್ಯದ ದಿನಗಳಲ್ಲಿ ಸಂಗೀತ ಮತ್ತು ಪ್ರಕೃತಿಯ ಸೊಬಗನ್ನು ಸವಿಯನ್ನು ಹೆಚ್ಚಿನ ಜನರು ಬರತೊಡಗಿದ್ದಾರೆ. ವರ್ಷದ ಹಿಂದೆ ಬೆರಳೆಣಿಕೆಯಷ್ಟು ಪ್ರವಾಸಿಗರು ಬರುತ್ತಿದ್ದರು. ಈಗ ವಿವಿಧ ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮಗಳಿಂದ ನೂರಾರು ಜನರು ಇಲ್ಲಿಗೆ ಬರುತ್ತಿದ್ದಾರೆ.

ಸದ್ಯ ಉದ್ಯಾನ ಪ್ರವೇಶಕ್ಕೆ ಶುಲ್ಕ ನಿಗದಿಪಡಿಸಿರುವುದರಿಂದ ಪುಂಡ ಪೋಕರಿಗಳು ಹಾವಳಿ ಕಡಿಮೆ ಆಗಿದೆ. ಪ್ರವಾಸಿಗರಿಗೆ ರಕ್ಷಣೆ ಒದಗಿಸುವ ದೃಷ್ಟಿಯಿಂದ ಪ್ರವಾಸಿಮಿತ್ರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಇಲ್ಲಿ ವಾಯುವಿಹಾರಕ್ಕೆ ಬಂದಿದ್ದ ನಿವೃತ್ತ ಶಿಕ್ಷಕ ಎಸ್‌.ಎಫ್‌ ಶೆಟ್ಟರ್‌ ಅಭಿಪ್ರಾಯಪಟ್ಟರು.

‘ಭೀಷ್ಮ ಕೆರೆಯ ಆವರಣದ ಉದ್ಯಾನಕ್ಕೆ ಪ್ರತಿ ಭಾನುವಾರ ಕುಟುಂಬ ಸಮೇತ ಬರುತ್ತೇವೆ. ಮಕ್ಕಳ ಜತೆ ಉದ್ಯಾನದಲ್ಲಿ ಆಟವಾಡುತ್ತೇವೆ. ಇದರಿಂದ ತುಂಬಾ ಖುಷಿಯಾಗುತ್ತದೆ. ಕೆಲವೊಮ್ಮೆ ದೋಣಿವಿಹಾರ ಮಾಡುತ್ತೇವೆ. ಜಿಲ್ಲಾಡಳಿತ ಈ ಪ್ರದೇಶದಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ನಗರದ ನಿವಾಸಿ ಕಿರಣಕುಮಾರ ರಾಮಗಿರಿ.

‘ಭೀಷ್ಮ ಕೆರೆ ಆವರಣದ ಉದ್ಯಾನದಲ್ಲಿ ಭಾನುವಾರ ಕಳೆಯುವುದರಿಂದ ಮನಸ್ಸಿಗೆ ಸಂತೋಷವಾಗುತ್ತದೆ. ಇಲ್ಲಿನ ಮಕ್ಕಳ ಉದ್ಯಾನವನ್ನು ಅಭಿವೃದ್ಧಿಪಡಿಸಬೇಕು ಮತ್ತು ಅದನ್ನು ಮಕ್ಕಳು ಮಾತ್ರ ಬಳಸುವಂತೆ ನಿರ್ಬಂಧ ಹೇರಬೇಕು. ಈ ನಿಟ್ಟಿನಲ್ಲಿ ಶೀಘ್ರ ಕ್ರಮ ವಹಿಸಬೇಕು’ ಎಂದು ನಗರದ ನಿವಾಸಿ ಸುರೇಶ ನಡುವಿನಮನಿ ಆಗ್ರಹಿಸಿದರು.

* * 

ಭೀಷ್ಮಕೆರೆಯನ್ನು ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗಿದೆ. ಹಂತ ಹಂತವಾಗಿ ಇಲ್ಲಿ ಮೂಲಸೌಕರ್ಯ ಕಲ್ಪಿಸಲಾಗುವುದು. ಕೆರೆಯ ಕಾವಲಿಗೆ ಸಿಬ್ಬಂದಿ ನಿಯೋಜಿಸಲಾಗಿದೆ
ಮನ್ಸೂರ್‌ ಅಲಿ
ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT