ಬುಧವಾರ, ಮಾರ್ಚ್ 3, 2021
19 °C

ಒಂದೇ ತಾಸಿನಲ್ಲಿ ಆಹಾರ ಪದಾರ್ಥ ಖಾಲಿ

ಜಿ.ಎಸ್.ಮಹೇಶ್‌ Updated:

ಅಕ್ಷರ ಗಾತ್ರ : | |

ಒಂದೇ ತಾಸಿನಲ್ಲಿ ಆಹಾರ ಪದಾರ್ಥ ಖಾಲಿ

ಹಾಸನ: ರಸಗೊಬ್ಬರ ಬಳಸದೆ, ಕ್ರಿಮಿನಾಶಕ ಸಿಂಪಡಿಸದೆ ಬೆಳೆಯಲಾಗಿದ್ದ ತರಕಾರಿ, ಹಣ್ಣು ಮತ್ತು ಆಹಾರ ಧಾನ್ಯಗಳ ಲೋಕ ಅಲ್ಲಿ ತೆರೆದುಕೊಂಡಿತ್ತು. ಸಂತೆ ಚಿಕ್ಕದಾದರೂ ಕೊಳ್ಳುವವರ ಸಂಖ್ಯೆ ಕಡಿಮೆಯೇನೂ ಇರಲಿಲ್ಲ. ಸಾವಯವ ಪದಾರ್ಥಗಳ ರುಚಿ ಕಂಡವರು ಖರೀದಿಗೆ ಬಂದಿದ್ದರು.

ಪರಿಶುದ್ಧ ಆಹಾರ ಆರ್ಗ್ಯಾನಿಕ್ ಫಾರ್ಮರ್ ಅಸೋಸಿಯೇಷನ್ ಹಾಗೂ ಸ್ವದೇಶಿ ಜಾಗರಣ ಮಂಚ್, ಅವನಿ ಆರ್ಗ್ಯಾನಿಕ್ಸ್ ವತಿಯಿಂದ ಆರ್‌.ಸಿ. ರಸ್ತೆಯ ಎನ್‌ಸಿಸಿ ಕಚೇರಿ ಎದುರು ಭಾನುವಾರ ಆಯೋಜಿಸಿದ್ದ ಸಾವಯವ ಸಂತೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.

ಕೊಡಗು ಹಾಗೂ ಹಾಸನ ಜಿಲ್ಲೆಗಳ ಸಾವಯವ ಕೃಷಿಕರ ಒಕ್ಕೂಟದ ಸದಸ್ಯರು ಬೆಳೆದ ಆಹಾರ ಧಾನ್ಯಗಳನ್ನು 40 ಮಳಿಗೆಗಳಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿತ್ತು. ಸಂತೆ ಆರಂಭಗೊಂಡ 1 ಗಂಟೆಯಲ್ಲೇ ಬಹುತೇಕ ಮಳಿಗೆಗಳಲ್ಲಿ ಆಹಾರ ಪದಾರ್ಥಗಳು ಖಾಲಿಯಾಯಿತು. ಹಣ್ಣು, ತರಕಾರಿ, ಸೊಪ್ಪು ಹಾಪ್‌ಕಾಮ್ಸ್‌ ದರದಲ್ಲಿ ಗ್ರಾಹಕರಿಗೆ ಮಾರಾಟ ಮಾಡಿದರು.

ಹಣ್ಣು, ತರಕಾರಿಗಳ ಜತೆಗೆ ಎಸ್.ಡಿ.ಎಂ ಆಯುರ್ವೇದ ಆಸ್ಪತ್ರೆ ವತಿಯಿಂದ ಔಷಧಿ ಸಸ್ಯಗಳಾದ ತುಳಸಿ ₹ 15, ಚಿತ್ರಕ, ಶತವರಿ, ಭಂಗರಾಜ, ಕಾಂಚಾನಾರ ಸಸಿಗಳನ್ನು ತಲಾ ₹ 50ಕ್ಕೆ ಮಾರಾಟ ಮಾಡಲಾಯಿತು.

ಮತ್ತೊಂದು ವಿಶೇಷವೆಂದರೆ ನವಣೆ ಪಾಯಸ, ನವಣೆ ಬಿಸಿಬೇಳೆ ಬಾತು ಪ್ಲೇಟ್‌ಗೆ ₹ 30 ರಂತೆ ಮಾರಾಟವಾಯಿತು. ಸಂತೆಗೆ ಬಂದವರು ಸಿರಿಧಾನ್ಯದಿಂದ ತಯಾರಿಸಿದ ಪಾಯಸ ಹಾಗೂ ಬಿಸಿ ಬೇಳೆಬಾತ್ ರುಚಿ ಸವಿದರು. ನಾಟಿ ಹಸುವಿನ ಬೆಣ್ಣೆ, ತುಪ್ಪ, ಅನಾನಸ್‌, ಕಿತ್ತಳೆ, ಸಪೊಟ, ದೋಸೆ ಅಕ್ಕಿ, ಕೆಂಪಕ್ಕಿ, ರಾಜಮುಡಿ ಅಕ್ಕಿ, ಜೇನುತುಪ್ಪ ವಿಶೇಷ ಆಕರ್ಷಣೆಯಾಗಿದ್ದವು.

‘ಪ್ರಾಯೋಗಿಕವಾಗಿ ಆಯೋಜಿಸಿರುವ ಸಂತೆಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ತಿಂಗಳ ಮೊದಲ ಭಾನುವಾರ ನಡೆಸಲು ನಿರ್ಧರಿಸಲಾಗಿದೆ. ಆದರೆ ಗ್ರಾಹಕರು ಪ್ರತಿ ಭಾನುವಾರ ನಡೆಸುವಂತೆ ಕೋರುತ್ತಿದ್ದಾರೆ. ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಒಕ್ಕೂಟದ ಅಧ್ಯಕ್ಷ ಶಿವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹತ್ತು ಕೆ.ಜಿ. ನಾಟಿ ಹಸು ಬೆಣ್ಣೆ ಅರ್ಧ ಗಂಟೆಯಲ್ಲಿ ಖಾಲಿಯಾಯಿತು. ಅರ್ಧ ಕೆ.ಜಿ ತುಪ್ಪ ₹ 500ಕ್ಕೆ ಮಾರಾಟ ಮಾಡಿದೆ. ಇಷ್ಟು ಖರ್ಚಾಗುತ್ತದೆ ಎಂದು ಗೊತ್ತಿದ್ದರೆ ಹೆಚ್ಚು ತರುತ್ತಿದೆ’ ಎಂದು ಬೇಲೂರಿನ ಬೆಣ್ಣೆ ವ್ಯಾಪಾರಿ ನಂಜುಂಡೇಗೌಡ ಹೇಳಿದರು.

ಸ್ವದೇಶಿ ಜಾಗರಣ ಮಂಚ್ ಅಧ್ಯಕ್ಷ ಜಗದೀಶ್, ‘ರೈತರು ಲಾಭ ಹೊಂದಬೇಕಾದರೆ ತಾವು ಬೆಳೆದ ಬೆಳೆಗಳಿಂದ ಉಪ ಉತ್ಪನ್ನ ತಯಾರಿಸಬೇಕು. ತಾವೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬೇಕು’ ಎಂದರು.

ಆಕಾಶವಾಣಿ ಕೃಷಿರಂಗ ವಿಭಾಗದ ಮುಖ್ಯಸ್ಥ ವಿಜಯ ಅಂಗಡಿ, ‘ನಿಸರ್ಗದಲ್ಲಿ ಸಿಗುವ ಎಷ್ಟೋ ಪದಾರ್ಥಗಳನ್ನು ಪೂರ್ವಜರು ಹಸಿಯಾಗಿ ತಿಂದು ನೂರಾರು ವರ್ಷ ಆರೋಗ್ಯವಾಗಿ ಬದುಕಿದ್ದರು. ಆಹಾರವನ್ನು ಬೇಯಿಸಿ ಸಾಯಿಸಿ ತಿನ್ನುತ್ತಿದ್ದೇವೆ. ಪರಿಸರದಲ್ಲಿ ಸಿಗುವ ಗೆಣಸು, ಸೊಪ್ಪು, ಕೆಲ ತರಕಾರಿ ಮತ್ತು ಮೊಳಕೆ ಕಾಳುಗಳನ್ನು ಹಸಿಯಾಗಿ ತಿನ್ನುವುದರಿಂದ ಆರೋಗ್ಯ ವೃದ್ಧಿಸುತ್ತದೆ’ ಎಂದು ಸಲಹೆ ನೀಡಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.