3

ಚೌಡಯ್ಯ ಗದ್ದುಗೆಗೆ ಪೂಜೆ ಮಾಡಿದ ಸ್ವಾಮೀಜಿ

Published:
Updated:
ಚೌಡಯ್ಯ ಗದ್ದುಗೆಗೆ ಪೂಜೆ ಮಾಡಿದ ಸ್ವಾಮೀಜಿ

ಗುತ್ತಲ/ ರಾಣೆಬೆನ್ನೂರು: ತಾಲ್ಲೂಕಿನ ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಸಮೀಪದ ಚೌಡಯ್ಯದಾನಪುರದಲ್ಲಿನ ಚೌಡಯ್ಯನವರ ಗದ್ದುಗೆಗೆ (ಐಕ್ಯ ಮಂಟಪ) ಭಾನುವಾರ ಪೂಜೆ ಸಲ್ಲಿಸಿದರು.

ಚೌಡಯ್ಯದಾನಪುರ ಗ್ರಾಮಸ್ಥರ ವಿರೋಧದ ಕಾರಣ ಈ ಹಿಂದಿನ ಸಂದರ್ಭಗಳಲ್ಲಿ ಸ್ವಾಮೀಜಿಗೆ ಪೂಜೆ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮಠದ ಭಕ್ತರು ಜಿಲ್ಲಾಡಳಿತದ ಮೊರೆ ಹೋಗಿದ್ದರು.

‘ಯಾವುದೇ ಧಾರ್ಮಿಕ ಪೂಜಾ ಸ್ಥಳವನ್ನು ಪೂಜಿಸುವ ಹಕ್ಕು ಎಲ್ಲ ಪ್ರಜೆಗಳಿಗೆ ಇದೆ. ಐಕ್ಯಮಂಟಪವು ಸರ್ಕಾರಕ್ಕೆ ಸೇರಿದ ಸ್ಥಳದಲ್ಲಿದ್ದು, ಸಂವಿಧಾನದ ಪ್ರಕಾರ ಎಲ್ಲರಿಗೂ ಪೂಜಿಸುವ ಹಕ್ಕು ಇದೆ. ಆದರೆ, ಶಾಂತಿ–ಸುವ್ಯವಸ್ಥೆಗೆ ಧಕ್ಕೆ ಬಾರದ ರೀತಿಯಲ್ಲಿ ಪೂಜೆ ನಡೆಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ. ಆದೇಶದಲ್ಲಿ ತಿಳಿಸಿದ್ದರು. ಹೀಗಾಗಿ ಭಾನುವಾರ ಸ್ವಾಮೀಜಿ ಭಕ್ತರ ಜೊತೆ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರಳಿ ಪೂಜೆ ಸಲ್ಲಿಸಿದರು.

ಬಳಿಕ ಮಠದಲ್ಲಿ ನಡೆದ ಹುಣ್ಣಿಮೆಯ ಶಿವಾನುಭ ಗೋಷ್ಠಿಯಲ್ಲಿ ಮಾತನಾಡಿದ ನಿಜಶರಣ ಅಂಬಿಗರ ಚೌಡಯ್ಯನವರ ಗುರು ಪೀಠದ ಪೀಠಾಧಿಪತಿ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ‘ಮುಂದೆ ಗುರಿ ಇದ್ದು, ಹಿಂದೆ ಗುರು ಇದ್ದಾಗ ಮಾತ್ರ ಯಾವುದೇ ಸಮಾಜ ಸುಧಾರಣೆ ಕಾಣಲು ಸಾಧ್ಯ. ಪೀಠದ ರಕ್ಷಣೆಯು ಭಕ್ತರ ಕೈಯಲ್ಲಿದೆ. ಗುರು ಅಣತಿಯಂತೆ ಸಮಾಜ ನಡೆದುಕೊಂಡಾಗ ಅಭಿವೃದ್ಧಿ ಸಾಧಿಸಬಹುದು’ ಎಂದರು.

‘ಬಸವಣ್ಣನ ಐಕ್ಯಮಂಟಪದ ದರ್ಶನ ಪಡೆಯಲು ಎಲ್ಲ ಸಮುದಾಯಕ್ಕೆ ಅವಕಾಶ ಇದೆ. ಅದೇ ರೀತಿ ಚೌಡಯ್ಯನವರ ಐಕ್ಯ ಮಂಟಪದ ಅಭಿವೃದ್ಧಿ ಆಗಬೇಕು’ ಎಂದು ಆಶಿಸಿದರು. ಪೀಠದ ಕಾರ್ಯಾಧ್ಯಕ್ಷ ಬಸವರಾಜ ಸಪ್ಪನಗೋಳ ಮಾತನಾಡಿ, ‘ಗಂಗಾಮತ ಸಮಾಜಕ್ಕೆ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿಯೇ ಗುರುಗಳು. ಅವರನ್ನು ಹೊರತು ಪಡಿಸಿ, ಬೇರೆ ಗುರುಗಳು ಇಲ್ಲ’ ಎಂದರು.

ಸಮಾಜಕ್ಕೆ ಯಾರು ಅನ್ಯಾಯ ಮಾಡಬೇಡಿ. ಪೀಠವನ್ನು ಗೌರವಿಸಿ, ಗುರುವಿನ ಆದೇಶವಿಲ್ಲದೇ ಮುಂದುವರಿಯಬೇಡಿ ಎಂದರು. ಗಂಗಾಮತ ಸಮಾಜದ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ವಸಂತಮ್ಮ ಮಾತನಾಡಿ, ‘ಸಮಾಜದಲ್ಲಿ ಸಂಘಟನೆ, ಒಗ್ಗಟ್ಟು, ಸಹಕಾರದ ಕೊರತೆ ಇದೆ’ ಎಂದರು.

ಮಂಡ್ಯದ ಡಾ.ಪೂರ್ಣಾನಂದ ಮಾತನಾಡಿ, ‘ಈ ಹಿಂದೆ ಹಂಪಿ ಮತ್ತು ಬಳ್ಳಾರಿಯಲ್ಲಿ ಗುರುಪೀಠ ಸ್ಥಾಪನೆಯಾಗಿತ್ತು. ಆದರೆ, ವಿಫಲಗೊಂಡಿತು. ಈ ಸ್ಥಳದಲ್ಲಿ ಸಫಲಗೊಂಡಿದೆ. ಇದನ್ನು ಉಳಿಸಿ, ಬೆಳೆಸಬೇಕು’ ಎಂದರು.

ಇದಕ್ಕೂ ಮೊದಲು ಲಿಂ. ಶಾಂತಮುನಿ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಭಕ್ತರ ಜೊತೆ ತೆರಳಿ ಚೌಡಯ್ಯದಾನಪುರದಲ್ಲಿನ ನಿಜಶರಣ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪದಲ್ಲಿ ಸ್ಥಳೀಯ ಅರ್ಚರ ಮೂಲಕ ಪೂಜೆ ಸಲ್ಲಿಸಿದರು. ಗ್ರಾಮಸ್ಥರು ಅಡ್ಡಿ ಪಡಿಸದೇ ಸಹಕರಿಸಿದರು.

ಹುರಳಿಹಾಳ ಗ್ರಾಮದ ಗಂಗಮತ ಸಮಾಜದವರು ಅನ್ನ ಸಂತರ್ಪಣೆ ನೆರವೇರಿಸಿದರು.

ಗಂಗಾಮತ ಸಮಾಜದ ಮುಖಂಡರಾದ ಮಂಜುನಾಥ ಭೋವಿ, ಹೊನ್ನಪ್ಪ ತಿಮ್ಮೇನಹಳ್ಳಿ, ಪ್ರವೀಣ ವಡ್ನಿಕೊಪ್ಪ, ಕೃಷ್ಣಮೂರ್ತಿ ವಡ್ನಿಕೊಪ್ಪ, ಪರಶುರಾಮ ಸೊನ್ನದ, ಗೂರಪ್ಪ ಜಿದ್ದಿ, ಪ್ರಶಾಂತ, ಶಂಕರ ಮ್ಯಾಗೇರಿ, ಅಶೋಕ ವಾಲಿಕಾರ, ಪ್ರಕಾಶ ಸೊನ್ನದ, ಎಚ್.ಎಮ್.ದಂಡಿನ, ಕೆ.ಎಸ್.ನೀಲಪ್ಪನವರ, ರಾಮಚಂದ್ರ ಐರಣಿ, ಬಿ.ರಾಮಪ್ಪ. ರಾಜಪ್ಪ ಅಂಬಿಗೇರ ಇದ್ದರು.

ಸಿಪಿಐಗಳಾದ ಬಾಸು ಚೌಹಾಣ, ಮರಳಸಿದ್ದಪ್ಪ, ಸಬ್‌ ಇನ್‌ಸ್ಪೆಕ್ಟರ್ ಟಿ. ಮಂಜಣ್ಣ, ಸಿದ್ದಾರೂಢ ಬಡಿಗೇರ, ಬಸವರಾಜ ಕಾಮನಬೈಲ, ಶ್ರೀಶೈಲಾ ಚೌಗಲಾ, ಮಂಜಣ್ಣ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

* * 

ಗುರು ಪೀಠ ಹಾಗೂ ಗುರುಗಳ ರಕ್ಷಣೆಗೆ ಸಮಾಜ ಬಾಂಧವರೆಲ್ಲ ಟೊಂಕ ಕಟ್ಟಿ ನಿಲ್ಲುವುದೇ, ನಮ್ಮನ್ನು ನಾವೇ ರಕ್ಷಿಸಿಕೊಳ್ಳುವ ವಿಧಾನ

ಬಸವರಾಜ ಸಪ್ಪನಗೋಳ

ಪೀಠದ ಕಾರ್ಯಾಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry