ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಗ್ರ ಹೋರಾಟಕ್ಕೆ ಅಮಿತ್ ಷಾ ಸೂಚನೆ’ ಎಂದ ಪ್ರತಾಪ್‌ ಸಿಂಹ; ‘ಉಗ್ರ ಹೋರಾಟ’ ಪಕ್ಷದ ನೀತಿಯಲ್ಲ ಎಂದ ಬಿಜೆಪಿ ನಾಯಕರು

ಅಮಿತ್‌ ಷಾ ಹೇಳಿದ್ದರ ಅರ್ಥ ಬೇರೆ: ಬಿಜೆಪಿ ನಾಯಕರು
Last Updated 4 ಡಿಸೆಂಬರ್ 2017, 16:16 IST
ಅಕ್ಷರ ಗಾತ್ರ

ಬೆಂಗಳೂರು: ‘ಉಗ್ರ ಹೋರಾಟ ನಡೆಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಸೂಚನೆ ನೀಡಿದ್ದರು’ ಎಂದು ಮೈಸೂರು– ಕೊಡಗು ಕ್ಷೇತ್ರದ ಬಿಜೆಪಿ ಸಂಸದ, ಯುವ ಮೋರ್ಚಾ ಅಧ್ಯಕ್ಷ ಪ್ರತಾಪ್‌ಸಿಂಹ, ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ ಹಾಕಿರುವ ವಿಡಿಯೊ ವೈರಲ್ ಆಗಿದೆ.

ಸತ್ಯ, ನ್ಯಾಯಕ್ಕಾಗಿ ಆಗ್ರಹಿಸಿ ಗಾಂಧಿ ಮಾರ್ಗದಲ್ಲಿ ಹೋರಾಟ ನಡೆಸುವ ಬದಲು ಉಗ್ರ ಸ್ವರೂಪದ ಹೋರಾಟ ನಡೆಸುವುದು ಬಿಜೆಪಿಯ ರಾಜಕೀಯ ನೀತಿಯೇ ಎಂಬ ಪ್ರಶ್ನೆಯ ಸುತ್ತ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಯೂ ನಡೆಯುತ್ತಿದೆ. ಸಂಸದರೇ ಕಾನೂನು ಕೈಗೆತ್ತಿಕೊಂಡರೆ ಜನಸಾಮಾನ್ಯರು ಏನು ಮಾಡಿಯಾರು? ಪರಿಸ್ಥಿತಿ ಹೀಗೆ ಮುಂದುವರಿದರೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಹೇಗೆ ಎಂಬ ಚರ್ಚೆಗೂ ಪ್ರತಾಪ್ ಮಾತುಗಳು ದಾರಿ ಮಾಡಿಕೊಟ್ಟಿವೆ.

ಹನುಮ ಜಯಂತಿ ಆಚರಣೆಗೆ ಸರ್ಕಾರ ಮುಕ್ತ ಅವಕಾಶ ಕೊಟ್ಟಿದ್ದರೆ ಇಂತಹ ಹೋರಾಟದ ಪ್ರಮೇಯವೇ ಬರುತ್ತಿರಲಿಲ್ಲ. ಮುಸ್ಲಿಮರಿಗೆ ಮುಕ್ತ ಅವಕಾಶ ನೀಡುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ‘ಹಿಂದೂ’ಗಳ ಹಕ್ಕನ್ನು ಕಿತ್ತುಕೊಳ್ಳುತ್ತಿದೆ ಎಂಬ ಆಕ್ರೋಶವೂ ಜಾಲತಾಣದಲ್ಲಿ ಬಲವಾಗಿದೆ. ‘ಪ್ರತಾಪ್‌ಸಿಂಹ ಬ್ಯಾರಿಕೇಡ್ ಮೇಲೆ ಕಾರನ್ನು ನುಗ್ಗಿಸಿಲ್ಲ, ಎರಡು ಬ್ಯಾರಿಕೇಡ್‌ಗಳ ಮಧ್ಯೆ ತೂರಿಸಿಕೊಂಡು ಹೋಗಲು ಮುಂದಾದರು’ ಎಂದೂ ಕೆಲವರು ಪ್ರತಿಪಾದಿಸಿದ್ದಾರೆ.

ಪ್ರತಾಪ್ ಹೇಳಿದ್ದೇನು?
ನವೆಂಬರ್‌ 30ರಂದು ಫೇಸ್‌ಬುಕ್‌ನಲ್ಲಿ 24 ನಿಮಿಷದ ವಿಡಿಯೊ ಅಪ್‌ ಲೋಡ್ ಮಾಡಿರುವ ಪ್ರತಾಪ್‌, ತಮ್ಮ ವಿರುದ್ಧದ ಅನೇಕ ಟೀಕೆಗಳಿಗೆ ಉತ್ತರ ನೀಡಿದ್ದಾರೆ.

‘ಕರ್ನಾಟಕಕ್ಕೆ ಬಂದಿದ್ದ ಅಮಿತ್‌ ಷಾ ಯುವ ಮೋರ್ಚಾ ಸಭೆ ಕರೆದಿದ್ದರು. ಆ ಸಭೆಯಲ್ಲಿ ಯುವ ಮೋರ್ಚಾದಿಂದ ಏನೇನು ಹೋರಾಟ ಕೈಗೊಂಡಿದ್ದೀರಿ ಎಂದು ಕೇಳಿದರು. ನಾವು ನಡೆಸಿದ ಹೋರಾಟಗಳನ್ನು ವಿವರಿಸಿದ ಬಳಿಕ, ಟಿಯರ್‌ ಗ್ಯಾಸ್‌, ಲಾಠಿ ಚಾರ್ಜ್ ಆಗುವಂತಹ ಹೋರಾಟ ನಡೆಸಿಲ್ಲ. ಆ ಥರ ನಡೆಯಬೇಕು ಎಂದರೆ ಉಗ್ರ ಹೋರಾಟ ಮಾಡಬೇಕು ಎಂದು ಸೂಚಿಸಿದ್ದರು. ಮುಂದಿನ ದಿನಗಳಲ್ಲಿ ಅಂತಹ ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದೆ’ ಎಂದು ವಿಡಿಯೊದಲ್ಲಿ ವಿವರಿಸಿದ್ದರು.

ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಡಿ.3ರಂದು ಹಮ್ಮಿಕೊಂಡಿದ್ದ ಹನುಮಜಯಂತಿಗೆ ಹೊರಟಿದ್ದ ಪ್ರತಾಪ್‌ ಸಿಂಹ ಅವರನ್ನು ಪೊಲೀಸರು ತಡೆದರು. ಹನುಮ ಜಯಂತಿ ಮೆರವಣಿಗೆಗೆ ಅನುಮತಿ ಪಡೆಯುವಾಗ ನೀಡಿದ್ದ ದಾರಿಯಲ್ಲೆ ಮೆರವಣಿಗೆ ಸಾಗಬೇಕು, ಉಲ್ಲಂಘಿಸುವಂತಿಲ್ಲ ಎಂದು ಪೊಲೀಸರು ಸೂಚಿಸಿದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಾಪ್‌, ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದರು. ಆಗ ಬ್ಯಾರಿಕೇಡ್‌ ಹಾಕಿದ ಪೊಲೀಸರು, ಕಾರು ಮುಂದೆ ಹೋಗದಂತೆ ಅಡ್ಡಿಪಡಿಸಿದರು.

ಇದನ್ನು ಒಪ್ಪದ ಪ್ರತಾಪ್‌, ಕಾರನ್ನು ಮುಂದೆ ಬಿಡಲು ತನ್ನ ಚಾಲಕರಿಗೆ ಸೂಚಿಸಿದರು. ಕರ್ನಾಟಕ ಸರ್ಕಾರಕ್ಕೆ ಸೇರಿದ್ದ ಕಾರು ಅದು ಆಗಿದ್ದರಿಂದಾಗಿ ಚಾಲಕ ಹಿಂದೇಟು ಹಾಕಿದರು.ಚಾಲಕನ ಸ್ಥಾನದಲ್ಲಿ ಕುಳಿತ ಪ್ರತಾಪ್‌, ಬ್ಯಾರಿಕೇಡ್ ಲೆಕ್ಕಿಸದೇ ಕಾರನ್ನು ಮುನ್ನುಗ್ಗಿಸಿದರು. ಬ್ಯಾರಿಕೇಡ್‌ ಪಕ್ಕದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಗೆ ಇದರಿಂದ ಗಾಯವಾಗಿದೆ. ಕರ್ತವ್ಯಕ್ಕೆ ಅಡ್ಡಿ ಹಾಗೂ ಕಾನೂನು ಉಲ್ಲಂಘನೆಯ ಆರೋಪದ ಮೇಲೆ ಪ್ರತಾಪ್ ಅವರನ್ನು ಬಂಧಿಸಿದ ಪೊಲೀಸರು, ಮೊಕದ್ದಮೆ ದಾಖಲಿಸಿದ್ದಾರೆ.

‘ಪೊಲೀಸರ ಕರ್ತವ್ಯಕ್ಕೆ ನಾನು ಅಡ್ಡಿ ಮಾಡಿಲ್ಲ. ಬಿಳಿಕೆರೆ ಬಳಿ ಸಾರ್ವಜನಿಕರನ್ನೂ ಅನುಮಾನದಿಂದ ತಪಾಸಣೆ ಮಾಡಲಾಗುತ್ತಿತ್ತು. ಅದನ್ನು ಪ್ರಶ್ನಿಸಿ ನಾನೇ ಡ್ರೈವ್ ಮಾಡಿಕೊಂಡು ಹುಣಸೂರಿಗೆ ಹೊರಟೆ. ನನ್ನ ಕಾರಿಗೆ ಬ್ಯಾರಿಕೇಡ್ ಸಿಕ್ಕಿಕೊಂಡು ಎಳೆದುಕೊಂಡು ಹೋಯಿತು. ಅದನ್ನೇ ಪೊಲೀಸರು ದೊಡ್ಡದು ಮಾಡಿ ಕೇಸ್ ಹಾಕಿದ್ದಾರೆ. ನಾನು ಅದಕ್ಕೆ ಕೇರ್ ಮಾಡಲ್ಲ’ ಎಂದು ಪ್ರತಾಪ್‌ ಪ್ರತಿಪಾದಿಸಿದ್ದಾರೆ.

ವಿನಾಕಾರಣ ಅಮಿತ್‌ ಷಾ ಹೆಸರು: ಯಡಿಯೂರಪ್ಪ


ಕಲಬುರ್ಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ‘ಉಗ್ರಸ್ವರೂಪದ ಪ್ರತಿಭಟನೆ ನಡೆಸುವಂತೆ ಅಮಿತ್‌ ಷಾ ಸೂಚಿಸಿದ್ದಾರೆ ಎಂದು ಪ್ರತಾಪ್‌ ಸಿಂಹ ಹೇಳಿದ ಆಡಿಯೊ ವೈರಲ್‌ ಆಗಿದೆ ಎನ್ನುವುದು ಅರ್ಥಹೀನ. ಇದು ಸುಳ್ಳು ಮಾಹಿತಿ. ವಿನಾಕಾರಣ ಅಮಿತ್‌ ಷಾ ಹೆಸರು ಎಳೆದು ತರುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ಪ್ರತಾಪ್‌, ಬ್ಯಾರಿಕೇಡ್‌ಗೆ ವಾಹನ ಗುದ್ದಿಸಿಲ್ಲ. ಅಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದೇ ತಪ್ಪು. ಬಂಧಿತ ಬಿಜೆಪಿ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತೇವೆ’ ಎಂದೂ ಅವರು ಎಚ್ಚರಿಸಿದ್ದಾರೆ.

ಅಮಿತ್‌ ಷಾ ಪ್ರತಾಪ್‌ ಸಿಂಹರಿಗೆ ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ: ಜಗದೀಶ ಶೆಟ್ಟರ್‌


‘ಪ್ರತಾಪ್ ಸಿಂಹ ವಿಡಿಯೊ ಹೇಳಿಕೆಯನ್ನು ನಾನು ನೋಡಿಲ್ಲ. ಅಮಿತ್‌ ಷಾ ಅವರಿಗೆ ಏನು ಹೇಳಿದ್ದಾರೆ ಎಂಬ ಬಗ್ಗೆ ನನ್ನನ್ನು ಕೇಳಿದರೆ ಹೇಗೆ ಹೇಳಲಿ. ಅವರ ಅಭಿಪ್ರಾಯವನ್ನೇ ಪಡೆಯರಿ. ಅವರು ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರೆ ಅದರ ಬಗ್ಗೆ ನಾನು ಪ್ರತಿಕ್ರಿಯಿಸಬಹುದಿತ್ತು. ನನಗೆ ಗೊತ್ತಿಲ್ಲದ ವಿಷಯಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ಉಗ್ರ ಹೋರಾಟ ಎನ್ನುವುದು ಪಕ್ಷದ ನೀತಿಯಲ್ಲ’ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಹೇಳಿದರು.

ಅಮಿತ್‌ ಷಾ ಸುಪ್ರೀಂ ಬಾಸ್‌. ಅವರು ಹೇಳಿದ್ದನ್ನು ಪಾಲಿಸಬೇಕು: ಡಿ.ವಿ. ಸದಾನಂದಗೌಡ


ಕೇಂದ್ರ ಸಾಂಖ್ಯಿಕ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ. ಸದಾನಂದಗೌಡ, ‘ಉಗ್ರ ರೀತಿಯ ಹೋರಾಟ ನಡೆಸಬೇಕು ಎಂಬುದು ಪಕ್ಷದ ನೀತಿ ಹೇಗೆ ಆಗಲು ಸಾಧ್ಯ? ಸಮಯ, ಸಂದರ್ಭ ನೋಡಿಕೊಂಡು ನಾಯಕರಾದವರು ಹೋರಾಟದ ಮುಂದಿನ ಹೆಜ್ಜೆ ಇಡುತ್ತಾರೆ. ನಮ್ಮ ಪಕ್ಷದ ಸಂವಿಧಾನದಂತೆ ಅಮಿತ್‌ ಷಾ ಸುಪ್ರೀಂ ಬಾಸ್‌. ಅವರು ಹೇಳಿದ್ದನ್ನು ಪಾಲನೆ ಮಾಡಬೇಕು. ಸಂಸದರು ಕಾನೂನು ಕೈಗೆತ್ತಿಕೊಂಡರು ಎಂದಲ್ಲ. ಆದರೆ, ಒಬ್ಬ ಸಂಸದರನ್ನು 13 ಗಂಟೆಗಳ ಕಾಲ ವಾಹನದಲ್ಲಿ ಕೂರಿಸಿಕೊಂಡು ಪೊಲೀಸರು ಅಡ್ಡಾಡಿಸಿದರು. ಅದು ಯಾವ ಕಾನೂನಿನಲ್ಲಿದೆ’ ಎಂದೂ ಅವರು ಪ್ರಶ್ನಿಸಿದರು.

ಇದ್ಯಾವ ಸೀಮೆ ಹೋರಾಟ ಎಂದಿದ್ದರು ಅಮಿತ್ ಷಾ: ಕೆ.ಎಸ್‌. ಈಶ್ವರಪ್ಪ


ಮಾಜಿ ಉಪಮುಖ್ಯಮಂತ್ರಿ, ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ, ‘ಬೆಂಗಳೂರಿಗೆ ಬಂದಿದ್ದ ಅಮಿತ್ ಷಾ, ಯುವ ಮೋರ್ಚಾ ಹೋರಾಟದ ಬಗ್ಗೆ ವಿವರಣೆ ಪಡೆದಿದ್ದರು. ಇದ್ಯಾವ ಸೀಮೆ ಹೋರಾಟ, ಸರ್ಕಾರವನ್ನು ಎಚ್ಚರಿಸುವ ರೀತಿ ಹೋರಾಟ ಮಾಡಿ ಎಂದಿದ್ದರು. ಲಾಠಿ ಚಾರ್ಜ್‌, ಟಿಯರ್ ಗ್ಯಾಸ್ ಸಿಡಿಸುವ ಹೋರಾಟ ನಡೆಸಿ ಅಂತಲ್ಲ. ಅಷ್ಟಕ್ಕೂ ಈ ವಿಷಯದಲ್ಲಿ ಪೊಲೀಸರು ಮೂರ್ಖತನ ಮಾಡಿದ್ದಾರೆ. ಮುಸ್ಲಿಮರಿಗೆ ಎಲ್ಲಿ ಬೇಕಾದರೂ ಮೆರವಣಿಗೆ ತೆಗೆಯಲು ಅವಕಾಶ ನೀಡುವ ಪೊಲೀಸರು ಹಿಂದೂಗಳಿಗೆ ನಿರ್ಬಂಧ ವಿಧಿಸುವುದು ಸರಿಯಲ್ಲ. ಆರೋಗ್ಯ ಸರಿಯಿದ್ದರೆ ನಾನೂ ಹುಣಸೂರಿನ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದೆ’ ಎಂದರು.

ಉಗ್ರ ಹೋರಾಟ ಎಂದರೆ ಅದು ಪೊಲೀಸರ ವಿರುದ್ಧ ಅಲ್ಲ: ಆರ್. ಅಶೋಕ್


ಮಾಜಿ ಗೃಹ ಸಚಿವ ಹಾಗೂ ಶಾಸಕ ಆರ್. ಅಶೋಕ್, ‘ಇದು ಅತಿ ಸೂಕ್ಷ್ಮ ವಿಷಯ. ಅದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಉಗ್ರ ಹೋರಾಟ ಎಂದರೆ ಅದು ಪೊಲೀಸರ ವಿರುದ್ಧ ಅಂತಲ್ಲ. ಸರ್ಕಾರದ ವಿರುದ್ಧ ಅಷ್ಟೆ’ ಎಂದು ಹೇಳಿದರು.

ಪ್ರತಾಪ್ ಸಿಂಹ ವಿಡಿಯೊ ಎಲ್ಲಿ ಹಾಕಿದ್ದಾರೆ?: ಎಸ್‌. ಸುರೇಶ್ ಕುಮಾರ್


ಮಾಜಿ ಕಾನೂನು ಸಚಿವ, ಶಾಸಕ ಎಸ್‌. ಸುರೇಶ್ ಕುಮಾರ್, ‘ಉಗ್ರ ಹೋರಾಟ ಎಂಬುದು ಪಕ್ಷದ ನೀತಿಯೇ? ಛೆ.. ಛೆ ಹಾಗೆಲ್ಲ ಇಲ್ಲ. ಪ್ರತಾಪ್ ಸಿಂಹ ವಿಡಿಯೊ ಎಲ್ಲಿ ಹಾಕಿದ್ದಾರೆ? ಫೇಸ್‌ ಬುಕ್‌ನಲ್ಲಾ? ಸಾಂಕೇತಿಕ ಹೋರಾಟದಿಂದ ಪ್ರಯೋಜನವಿಲ್ಲ. ಜನರ ಕಷ್ಟಗಳಿಗೆ ಪರಿಹಾರ ಸಿಗುವಂತೆ ಪರಿಣಾಮಕಾರಿ ಹೋರಾಟ ನಡೆಸಿ ಎಂದು ಅಮಿತ್‌ ಷಾ ಅವರು ಹೇಳಿದ್ದಿರಬೇಕು. ಅದರ ಅರ್ಥ ಉಗ್ರ ಹೋರಾಟ ಎಂದಲ್ಲ. ಪ್ರಾಯಶಃ ಸಿದ್ದರಾಮಯ್ಯ ಅವರು ಈ ಹಿಂದೆ ವಿಧಾನಸಭೆಯ ಬಾಗಿಲಿಗೆ ಕಾಲಿನಿಂದ ಒದ್ದಿದ್ದರು. ಅದರಿಂದ ಪ್ರೇರಣೆ ಪಡೆದ ಅವರು (ಪ್ರತಾಪ್‌) ಈ ರೀತಿ ಹೋರಾಟ (ಬ್ಯಾರಿಕೇಡ್‌ ಮೇಲೆ ಕಾರು ನುಗ್ಗಿಸುವ) ನಡೆಸಿರಬಹುದು. ಹ್ಹ. . ಹ್ಹ’ ಎಂದು ಅವರು ನಕ್ಕರು.

ಈ ಕುರಿತು ಅಭಿಪ್ರಾಯ ಪಡೆಯಲು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಎಚ್.ಎನ್. ಅನಂತಕುಮಾರ್‌ ಅವರಿಗೆ ಮೂರು ಬಾರಿ ಕರೆ ಮಾಡಿದಾಗ, ಕರೆ ಸ್ವೀಕರಿಸಿದ ಆಪ್ತ ಸಹಾಯಕರು, ‘ಈಗಾಗಲೇ ಮೈಸೂರಿನಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ’ ಎಂದಷ್ಟೇ ಹೇಳಿದರು.

ಇದನ್ನೂ ಓದಿ...
ಯಾರೇ ಆದರೂ ಕಾನೂನು ಒಂದೇ: ರಾಮಲಿಂಗಾರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT