ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಸೇವೆಗೆ ಬರಲು ವೈದ್ಯರಿಗೇಕೆ ಹಿಂಜರಿಕೆ?

Last Updated 4 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಸರ್ಕಾರಿ ನೌಕರಿಗೆ ಅರ್ಜಿ ಕರೆದರೆ ಸಾಕು. ಒಂದೊಂದು ಹುದ್ದೆಗೂ ಸಾವಿರಗಟ್ಟಲೆ ಜನ ಅರ್ಜಿ ಹಾಕುತ್ತಾರೆ. ಇದರರ್ಥ, ಸರ್ಕಾರಿ ಕೆಲಸ ಎಂದರೆ ಅಂತಹ ಆಕರ್ಷಣೆ. ಆದರೆ ಸರ್ಕಾರಿ ಆಸ್ಪತ್ರೆಗಳ ತಜ್ಞ ವೈದ್ಯರ ಹುದ್ದೆಗಳು ಮಾತ್ರ ಇದಕ್ಕೆ ಅಪವಾದ. ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ 1072 ತಜ್ಞ ವೈದ್ಯರ ಹುದ್ದೆಗಳಿಗೆ ಅರ್ಜಿ ಕರೆದಿತ್ತು. ಆದರೆ ಅರ್ಜಿ ಸಲ್ಲಿಸಿದವರು ಬರೀ 707 ಜನ. ಜನರಲ್‌ ಮೆಡಿಸಿನ್‌, ಜನರಲ್‌ ಸರ್ಜನ್‌, ಪ್ರಸೂತಿ ಮತ್ತು ಸ್ತ್ರೀರೋಗ, ಮಕ್ಕಳ ಚಿಕಿತ್ಸೆ, ಕಣ್ಣು, ಚರ್ಮರೋಗ, ರೇಡಿಯಾಲಜಿ ವಿಭಾಗಗಳಲ್ಲಿ ಮಂಜೂರಾದ ಹುದ್ದೆಗಳಿಗಿಂತ ಕಡಿಮೆ ಅರ್ಜಿಗಳು ಬಂದಿವೆ. ಹಾಗೆಂದು ನಮ್ಮ ರಾಜ್ಯದಲ್ಲಿ ನುರಿತ ವೈದ್ಯರ ಕೊರತೆ ಇದೆ ಎಂದು ಭಾವಿಸಿದರೆ ತಪ್ಪಾದೀತು.

ಖಾಸಗಿ ಆಸ್ಪತ್ರೆಗಳಲ್ಲಿ, ಕಾರ್ಪೊರೇಟ್‌ ಆಸ್ಪತ್ರೆಗಳಲ್ಲಿ ಪ್ರದರ್ಶಿಸುವ ತಜ್ಞ ವೈದ್ಯರ ಪಟ್ಟಿ ನೋಡಿದರೆ ಸಾಕು; ಅಲ್ಲಿನ ಎಲ್ಲ ತಜ್ಞ ವಿಭಾಗಗಳಲ್ಲೂ ವೈದ್ಯರು ತುಂಬಿ ತುಳುಕುತ್ತಿರುತ್ತಾರೆ. ಆದರೆ ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ಮಾತ್ರ ಇದಕ್ಕೆ ತದ್ವಿರುದ್ಧ. ಸರ್ಕಾರಿ ವೈದ್ಯರ ಹುದ್ದೆ ಅಷ್ಟೊಂದು ಆಕರ್ಷಕವಾಗಿಲ್ಲ ಎಂಬುದಕ್ಕೆ ಇದಕ್ಕಿಂತ ಒಳ್ಳೆಯ ನಿದರ್ಶನ ಸಿಗಲಾರದು. ಸರ್ಕಾರಿ ವ್ಯವಸ್ಥೆಯಲ್ಲಿ ತಜ್ಞ ವೈದ್ಯರಿಗೆ ರೋಗಿಗಳ ತಪಾಸಣೆ ಮತ್ತು ಚಿಕಿತ್ಸೆಗಿಂತ ಆಡಳಿತಾತ್ಮಕ ಕೆಲಸದ ಹೊರೆಯೇ ಜಾಸ್ತಿ ಎನ್ನುವ ಸ್ಥಿತಿ ಇದೆ. ‘ವರದಿ ತಯಾರಿಸು, ಸಭೆಗೆ ಹಾಜರಾಗು, ಅಲ್ಲಿ ಹೀನಾಮಾನವಾಗಿ ಬೈಸಿಕೊ, ಗಣ್ಯರು ಅಥವಾ ಮೇಲಧಿಕಾರಿಗಳು ಬಂದಾಗ ಪುಷ್ಪಗುಚ್ಛ ಹಿಡಿದು ಸ್ವಾಗತಿಸು’ ಎನ್ನುವಂತಹ ಕೆಲಸಗಳಲ್ಲಿಯೇ ತಮ್ಮ ಸಮಯ, ಪ್ರತಿಭೆ ವ್ಯರ್ಥವಾಗುತ್ತದೆ ಎನ್ನುವ ಆತಂಕ ಅನೇಕ ವೈದ್ಯರದು. ಅದಕ್ಕಿಂತಲೂ ಹೆಚ್ಚಾಗಿ, ಸರ್ಕಾರಿ ಹುದ್ದೆಯಲ್ಲಾದರೆ ತಿಂಗಳ ಸಂಬಳವನ್ನೇ ನೆಚ್ಚಿಕೊಳ್ಳಬೇಕು (ಆದರೆ ಇಲ್ಲೂ ಬೇಕಾದಷ್ಟು ಅಪವಾದಗಳಿವೆ), ಸಮರ್ಪಕ ಸೌಲಭ್ಯಗಳಿಲ್ಲದ ಗ್ರಾಮೀಣ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸಬೇಕು.

ಆದರೆ, ಖಾಸಗಿಯಾಗಿ ವೃತ್ತಿ ಮಾಡಿದರೆ ಅಥವಾ ನಗರ ಪ್ರದೇಶಗಳ ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ಸೇರಿಕೊಂಡರೆ ಕೈತುಂಬ ಹಣ; ಹೆಚ್ಚಿನ ಕಲಿಕೆಗೋಸ್ಕರ ಬಂಡವಾಳವಾಗಿ ಹಾಕಿದ ಕೋಟಿಗಟ್ಟಲೆ ಹಣವನ್ನು ಮರಳಿ ಗಳಿಸುವುದು ಸುಲಭ. ಹೀಗಿರುವಾಗ ಸರ್ಕಾರಿ ವೈದ್ಯರ ಕೆಲಸ ಯಾರಿಗೆ ಬೇಕು ಎನ್ನುವಂತಹ ಮನೋಭಾವ ಕೂಡ ವೈದ್ಯಕೀಯ ಪದವೀಧರರಲ್ಲಿ ಬೆಳೆಯುತ್ತಿದೆ. ಇದು ಅಪಾಯಕಾರಿ ಮತ್ತು ವೈದ್ಯ ವೃತ್ತಿ ಧರ್ಮಕ್ಕೆ ವಿರುದ್ಧವಾದುದು.

ಅನುಭವಿ ಮತ್ತು ತಜ್ಞ ವೈದ್ಯರ ಕೊರತೆಯಿಂದಾಗಿ ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ದಿನೇ ದಿನೇ ದೊಡ್ಡ ಸಮಸ್ಯೆಯಾಗುತ್ತಿದೆ. ಲಭ್ಯ ಮಾಹಿತಿಗಳ ಪ್ರಕಾರ, ನಮ್ಮಲ್ಲಿ 10,189 ಜನರಿಗೆ ಒಬ್ಬರು ಸರ್ಕಾರಿ ವೈದ್ಯರಿದ್ದಾರೆ. 2046 ಜನರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿರುವ ಹಾಸಿಗೆಯ ಸಂಖ್ಯೆ ಬರೀ ಒಂದು. ಪ್ರತಿ 90,343 ಜನರಿಗೆ ಒಂದು ಸರ್ಕಾರಿ ಆಸ್ಪತ್ರೆ ಇದೆ. ಅಂದರೆ ಸರ್ಕಾರಿ ವಲಯದಲ್ಲಿ ಆಸ್ಪತ್ರೆಗಳು ಮತ್ತು ವೈದ್ಯರ ಸಂಖ್ಯೆ ತುಂಬ ಕಡಿಮೆ ಇದೆ. ರಾಷ್ಟ್ರೀಯ ಮಟ್ಟದಲ್ಲಿ ಆರೋಗ್ಯಕ್ಕೆ ಮಾಡುತ್ತಿರುವ ವೆಚ್ಚ ಜಿಡಿಪಿಯ ಶೇ 1.4 ಮಾತ್ರ.

ಹೀಗಿರುವಾಗ ‘ಕಡಿಮೆ ಖರ್ಚಿನಲ್ಲಿ ಎಲ್ಲರಿಗೂ ಆರೋಗ್ಯ’ ಎನ್ನುವುದು ಬರೀ ಕನಸಾಗಿಯೇ ಉಳಿಯುತ್ತದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಕೇಂದ್ರ ಸರ್ಕಾರ ಈಗ ಸಿದ್ಧಪಡಿಸಿರುವ ರಾಷ್ಟ್ರೀಯ ಆರೋಗ್ಯ ನೀತಿಯು ಆರೋಗ್ಯ ಕ್ಷೇತ್ರಕ್ಕಾಗಿ ಮಾಡುವ ವೆಚ್ಚವನ್ನು ನಿರ್ದಿಷ್ಟ ಅವಧಿಯ ಒಳಗೆ ಜಿಡಿಪಿಯ ಶೇ 2.5ಕ್ಕೆ ಹೆಚ್ಚಿಸುವ ಉದ್ದೇಶ ಹೊಂದಿದೆ. ಇದನ್ನು ಪ್ರಾಮಾಣಿಕವಾಗಿ ಕಾರ್ಯರೂಪಕ್ಕೆ ತಂದರೆ ಸರ್ಕಾರಿ ಆಸ್ಪತ್ರೆಗಳ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರದ ಸ್ಥಿತಿ ಸುಧಾರಿಸಬಹುದು. ಆದರೆ ವೈದ್ಯರ ನೇಮಕ ಆಗದಿದ್ದರೆ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ವೈದ್ಯರು ಮುಂದೆ ಬರದಿದ್ದರೆ ಇಷ್ಟೆಲ್ಲ ಖರ್ಚು ಮಾಡಿ ಪ್ರಯೋಜನ ಏನು? ಜನ ಆರೋಗ್ಯದಿಂದ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಆದ್ದರಿಂದ ಈ ಸಮಸ್ಯೆಗೆ ಏನಾದರೂ ಒಂದು ಪರಿಹಾರವನ್ನು ಹುಡುಕಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT