ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಚ್ಚಿ ಮೆಟ್ರೋ ಲೋಗೊ 'ಪುಟ್ಟ ಆನೆ'ಗೆ 'ಕುಮ್ಮನಾನ' ಎಂದು ಹೆಸರಿಡುವಂತೆ ಒತ್ತಾಯ!

Last Updated 4 ಡಿಸೆಂಬರ್ 2017, 17:23 IST
ಅಕ್ಷರ ಗಾತ್ರ

ಕೊಚ್ಚಿ: ಕೇರಳದ ಕೊಚ್ಚಿ ಮೆಟ್ರೋ ರೈಲಿನ ಲೋಗೊ ಪುಟ್ಟ ಆನೆಗೊಂದು ಹೆಸರಿಡಿ ಎಂದು ಕೊಚ್ಚಿ ಮೆಟ್ರೋ ರೈಲ್ ಲಿಮಿಟೆಡ್ (ಕೆಎಂಆರ್‍ಎಲ್) ಫೇಸ್‍ಬುಕ್ ಪೋಸ್ಟ್ ಮೂಲಕ ಆಹ್ವಾನ ನೀಡಿತ್ತು .

ನನಗೆ ಅಪ್ಪು, ತೊಪ್ಪಿ, ಕುಟ್ಟನ್ ಎಂಬ ಹೆಸರು ಯಾವುದೂ ಬೇಡ. ಚಂದದ ಹೆಸರೊಂದನ್ನು ಸೂಚಿಸಿ ಬಹುಮಾನ ಗೆಲ್ಲಿ ಎಂದು ಕೆಎಂಆರ್‍ಎಲ್ ಫೇಸ್‍ಬುಕ್‍ ಪೋಸ್ಟ್ ಮೂಲಕ ನೆಟಿಜನ್‍ಗಳಿಗೆ ಅವಕಾಶ ನೀಡಿತ್ತು. ಅತೀ ಹೆಚ್ಚು ಲೈಕ್ ಸಿಗುವ ಹೆಸರನ್ನು ಈ ಪುಟ್ಟ ಆನೆಗೆ ಇಡಲಾಗುವುದು ಎಂದು ಕೆಎಂಆರ್‍ಎಲ್ ಹೇಳಿತ್ತು.

ಕೆಎಂಆರ್‍ಎಲ್‍ನ ಈ ಪೋಸ್ಟ್ ಗೆ ನೆಟಿಜನ್‍ಗಳಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಲಿಜೋ ವರ್ಗೀಸ್ ಎಂಬವರು ಈ ಪುಟ್ಟ ಆನೆಗೆ ಕುಮ್ಮನಾನ ಎಂದು ಹೆಸರಿಡಿ ಎಂದು ಕಾಮೆಂಟ್ ಮಾಡಿದ್ದರು. ಕೇರಳದ ಬಿಜೆಪಿ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ಅವರ ಹೆಸರನ್ನು ಕೊಚ್ಚಿ ಮೆಟ್ರೋದ ಲೋಗೊಗೆ ಇಡಬೇಕು. ಕುಮ್ಮನಂ+ ಆನ =ಕುಮ್ಮನಾನ ಎಂಬುದು ಸರಿಯಾದ ಹೆಸರು ಎಂಬುದು ಟ್ರೋಲರ್‍‍ಗಳ ವಾದ. ಕುಮ್ಮನಾನ ಎಂಬ ಕಾಮೆಂಟ್‍ಗೆ  34 ಸಾವಿರಕ್ಕಿಂತಲೂ ಹೆಚ್ಚು ಲೈಕ್ ಸಿಕ್ಕಿದೆ. ಹಾಗಾಗಿ ಅತೀ ಹೆಚ್ಚು ಲೈಕ್ ಸಿಕ್ಕಿದ ಹೆಸರನ್ನೇ ಕೊಚ್ಚಿ ಮೆಟ್ರೋ ಲೋಗೊಗೆ ಇಡಬೇಕೆಂದು ನೆಟಿಜನ್‍ಗಳು ಒತ್ತಾಯಿಸಿದ್ದಾರೆ.

ಅದೇ ವೇಳೆ ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣತ್ತಾನಂ ಅವರನ್ನು ಹಾಸ್ಯ ಮಾಡಿ ಕಣ್ಣತ್ತಾನ, ಕೊಚ್ಚಿಯ ಕೊಚ್ಚು ಆನ (ಕೊಚ್ಚಿಯ ಪುಟ್ಟ ಆನೆ) ಕೊಚ್ಚಾನ, ಕುಮ್ಕಿ, ಶಾಜಿಪಾಪ್ಪಾನ್, ಅಶ್ವತಿ ಅಚ್ಚು  ಮೊದಲಾದ ಹೆಸರುಗಳನ್ನೂ ನೆಟಿಜನ್‍ಗಳು ಸೂಚಿಸಿದ್ದಾರೆ.

ಆದಾಗ್ಯೂ, ಕುಮ್ಮನಾನ ಎಂಬ ಹೆಸರಿಗೆ ಅತೀ ಹೆಚ್ಚು ಲೈಕ್‍ಗಳು ಬಂದಿದ್ದರೂ, ಒಬ್ಬ ವ್ಯಕ್ತಿಯನ್ನು ಅಪಹಾಸ್ಯ ಮಾಡುವುದು ಸರಿಯಲ್ಲ. ಹಾಗಾಗಿ ಈ ಹೆಸರನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೆಎಂಆರ್‍ಎಲ್ ಹೇಳಿದೆ.

ಆದರೆ ಇದನ್ನು ಒಪ್ಪದ ನೆಟಿಜನ್‍ಗಳು ಕೆಎಂಆರ್‍ಎಲ್ ಕೊಟ್ಟ ಮಾತನ್ನು ಪಾಲಿಸಲೇ ಬೇಕು. ಅತೀ ಹೆಚ್ಚು ಲೈಕ್  ಸಿಕ್ಕಿದ  ಹೆಸರನ್ನು ಆಯ್ಕೆ ಮಾಡುವುದಾಗಿ ಹೇಳಿದ್ದರಿಂದ ಕುಮ್ಮನಾನ ಎಂಬ ಹೆಸರನ್ನೇ ಆಯ್ಕೆ ಮಾಡಬೇಕು. ಕೊಚ್ಚಿ ಮೆಟ್ರೋ ಲೋಗೊವನ್ನು ಯಾವುದೇ ಹೆಸರಿಟ್ಟು ಕರೆದರೂ ನಾವು ಕುಮ್ಮನಾನ ಎಂದೇ ಕರೆಯುತ್ತೇವೆ ಎಂದು ರೊಚ್ಚಿಗೆದ್ದಿದ್ದಾರೆ. ಅಷ್ಟೇ ಅಲ್ಲದೆ ಕುಮ್ಮನಾನ ಎಂಬ ಫೇಸ್‍ಬುಕ್ ಪೇಜ್ ಆರಂಭ ಮಾಡಿ #StandWithകുമ്മനാന  #കുമ്മനാനായോടൊപ്പം #stand_with_കുമ്മനാനാ
#justice4കുമ്മനാനാ ಎಂಬ ಹ್ಯಾಶ್‍ಟ್ಯಾಗ್ ಅಭಿಯಾನವೂ ಆರಂಭವಾಗಿದೆ.

ಹೆಸರು ಸೂಚಿಸಲಿರುವ ಕೊನೆಯ ದಿನಾಂಕ ಡಿ.4 ಸೋಮವಾರ ಆಗಿದ್ದು, ಕೆಎಂಆರ್‍ಎಲ್ ಪೇಚಿಗೆ ಸಿಲುಕಿದೆ. ಶೀಘ್ರದಲ್ಲೇ ಕೆಎಂಆರ್‍‍ಎಲ್ ‍ನ ಮೂವರು ಸದಸ್ಯರ ಸಮಿತಿಯು ಹೆಸರನ್ನು ಆಯ್ಕೆ ಮಾಡಿ ವಿಜಯಿಗೆ ಬಹುಮಾನ ಘೋಷಿಸುವುದಾಗಿ ಮೂಲಗಳು ಹೇಳಿವೆ.

ಈ ಬಗ್ಗೆ ಕುಮ್ಮನಂ ರಾಜಶೇಖರನ್ ಅವರಲ್ಲಿ ಕೇಳಿದಾಗ, ಈ ಬಗ್ಗೆ ನಾನೇನೂ ಹೇಳುವುದಿಲ್ಲ. ನನ್ನನ್ನು ಹೊಗಳುವವರನ್ನೂ ತೆಗಳುವವರನ್ನೂ ನಾನು ಒಂದೇ ರೀತಿಯಾಗಿ ನೋಡುತ್ತೇನೆ ಎಂದು ಹೇಳಿರುವುದಾಗಿ ಮನೋರಮಾ ನ್ಯೂಸ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT