ಶನಿವಾರ, ಫೆಬ್ರವರಿ 27, 2021
21 °C
ಗುರುತ್ವಾಕರ್ಷಣೆಯಲ್ಲಿ ಉಂಟಾಗುವ ವ್ಯತ್ಯಾಸದಿಂದ ಅಧ್ಯಯನ ನಡೆಸಿದ ವಿಜ್ಞಾನಿಗಳು

ಭೂಕಂಪ ತೀವ್ರತೆ: ಶೀಘ್ರ ಪತ್ತೆಗೆ ನೂತನ ವಿಧಾನ

ಪಿಟಿಐ Updated:

ಅಕ್ಷರ ಗಾತ್ರ : | |

ಭೂಕಂಪ ತೀವ್ರತೆ: ಶೀಘ್ರ ಪತ್ತೆಗೆ ನೂತನ ವಿಧಾನ

ಲಂಡನ್: ದೊಡ್ಡ ಮಟ್ಟದಲ್ಲಿ ಸಂಭವಿಸುವ ಭೂಕಂಪದ ತೀವ್ರತೆಯನ್ನು ಶೀಘ್ರ ಪತ್ತೆ ಹಚ್ಚಲು ವಿಜ್ಞಾನಿಗಳು ನೂತನ ವಿಧಾನ ಕಂಡುಹಿಡಿದಿದ್ದಾರೆ.

ಪ್ರಸ್ತುತ ವಿಜ್ಞಾನಿಗಳು ಭೂಕಂಪದಿಂದ ಉಂಟಾಗುವ ತರಂಗಾಂತರಗಳನ್ನು ಆಧರಿಸಿ ತೀವ್ರತೆ ಅಂದಾಜಿಸುತ್ತಿದ್ದಾರೆ.

2011ರಲ್ಲಿ ಜಪಾನ್‌ನ ತೊಹೊಕುವಿನಲ್ಲಿ ಸಂಭವಿಸಿದ ಭೂಕಂಪನದ ವೇಳೆ ಫ್ರಾನ್ಸ್‌ನ ಪ್ಯಾರಿಸ್‌ ಡಿಡೆರೊಟ್‌ ವಿಶ್ವವಿದ್ಯಾಲಯ ಮತ್ತು ಅಮೆರಿಕದ ಕ್ಯಾಲಿಫೋರ್ನಿಯಾ ತಂತ್ರಜ್ಞಾನ ಸಂಸ್ಥೆಯ ಸಂಶೋಧಕರು ನಡೆಸಿದ ಅಧ್ಯಯನದಿಂದ, ಗುರುತ್ವಾಕರ್ಷಣೆಯಲ್ಲಿ ಉಂಟಾಗುವ ಬದಲಾವಣೆಯಿಂದ ತ್ವರಿತವಾಗಿ ಭೂಕಂಪದ ತೀವ್ರತೆ ಪತ್ತೆ ಮಾಡಬಹುದು ಎಂದು ತಿಳಿದುಬಂದಿದೆ.

ಗುರುತ್ವಾಕರ್ಷಣ ವಲಯದಲ್ಲಿ ವ್ಯತ್ಯಾಸ: ಭೂಕಂಪ ಸಂಭವಿಸಿದ ತಕ್ಷಣ ಗುರುತ್ವಾಕರ್ಷಣ ವಲಯದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ತರಂಗಾಂತರಗಳ ವಿಧಾನಕ್ಕಿಂತ ಹೆಚ್ಚು ವೇಗವಾಗಿ ಈ ವಿಧಾನದಿಂದ ಭೂಕಂಪನದ ತೀವ್ರತೆ ಪತ್ತೆ ಮಾಡಬಹುದು ಎಂದು ’ಸೈನ್ಸ್ ಜರ್ನಲ್‌’ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ಭೂಕಂಪದಿಂದ ಭೂಮಿಯ ಗುರುತ್ವಾಕರ್ಷಣ ವಲಯಕ್ಕೆ ಅಡ್ಡಿ ಉಂಟಾಗುತ್ತದೆ. ಇದರಿಂದ ಭಿನ್ನವಾದ ತರಂಗಾಂತರಗಳು ಉಂಟಾಗುತ್ತವೆ. ಈ ತರಂಗಾಂತರಗಳು ಬೆಳಕಿನಷ್ಟು ವೇಗವಾಗಿ ಇರುವುದರಿಂದ ಭೂಕಂಪದ ತೀವ್ರತೆಯನ್ನು ತ್ವರಿತವಾಗಿ ಪತ್ತೆ ಮಾಡಲು ಸಾಧ್ಯ ಎಂದು ಸಂಶೋಧಕರು ವಿವರಿಸಿದ್ದಾರೆ.

2011ರಲ್ಲಿ ತೊಹೊಕುವಿನಲ್ಲಿ ಸಂಭವಿಸಿದ ಭೂಕಂಪ ರಿಕ್ಟರ್ ಮಾಪಕದಲ್ಲಿ 9.1 ತೀವ್ರತೆ ದಾಖಲಿಸಿತ್ತು. ಈ ಭೂಕಂಪದ ವೇಳೆ ಮೊದಲ ಬಾರಿಗೆ ವಿಜ್ಞಾನಿಗಳು 10 ಸೆಸ್ಮೊಮೀಟರ್‌ಗಳನ್ನು ಬಳಸಿ ಗುರುತ್ವಾಕರ್ಷಣೆಯಲ್ಲಿ ಉಂಟಾದ ಬದಲಾವಣೆಗಳ ಸಂಕೇತಗಳನ್ನು ದಾಖಲಿಸಿದರು.

ಭೂಕಂಪದ ತೀವ್ರತೆಗೆ ಗುರುತ್ವಾಕರ್ಷಣೆಯ ವಲಯ ಸೂಕ್ಷ್ಮವಾಗಿ ಸ್ಪಂದಿಸುತ್ತದೆ. ಆದ್ದರಿಂದ, ಭೂಕಂಪದ ತೀವ್ರತೆಯನ್ನು ತ್ವರಿತವಾಗಿ ಪತ್ತೆ ಮಾಡಲು ಇದು ಉತ್ತಮ ವಿಧಾನ ಎನ್ನುವುದನ್ನು ವಿಜ್ಞಾನಿಗಳು ಈ ಸಂದರ್ಭ ಕಂಡುಕೊಂಡಿದ್ದಾರೆ.

8–8.5ಕ್ಕಿಂತ ಕಡಿಮೆ ತೀವ್ರತೆಯ ಭೂಕಂಪದ ಸಂದರ್ಭಗಳಲ್ಲೂ ಈ ನೂತನ ವಿಧಾನ ಬಳಸಲು ಸಾಧ್ಯವಾಗುವಂತೆ ಮಾಡುವುದು ಸದ್ಯಕ್ಕೆ ವಿಜ್ಞಾನಗಳಿಗೆ ಇರುವ ಸವಾಲಾಗಿದೆ.

ಏಕೆಂದರೆ 8ಕ್ಕಿಂತ ಕಡಿಮೆ ತೀವ್ರತೆಯ ಭೂಕಂಪದ ವೇಳೆ, ಭೂಕಂಪದ ತೀವ್ರತೆಯಿಂದ ಉಂಟಾಗುವ ತರಂಗಾಂತರಗಳಿಗಿಂತಲೂ ಗುರುತ್ವಾಕರ್ಷಣ ವಿಧಾನದಲ್ಲಿ ಉಂಟಾಗುವ ತರಂಗಾಂತರಗಳು ದುರ್ಬಲವಾಗಿರುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.