7

ಓದಲು ಆಸೆಯೇ, ಇಲ್ಲಿದೆ ಪುಸ್ತಕ

Published:
Updated:
ಓದಲು ಆಸೆಯೇ, ಇಲ್ಲಿದೆ ಪುಸ್ತಕ

ಪುಸ್ತಕಗಳಿಂದ ಮನುಷ್ಯ ತನ್ನದಲ್ಲದ ಅನುಭವಗಳನ್ನು ಪಡೆದು, ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾನೆ. ಆ ಮೂಲಕ ತಾನು ಇರುವ ಸ್ಥಳದಲ್ಲಿಯೇ ಲೋಕದ ಅನುಭವಗಳನ್ನು ಪಡೆಯುವ ಅವಕಾಶಗಳನ್ನು ತನ್ನದಾಗಿಸಿಕೊಳ್ಳುತ್ತಾನೆ. ಈ ರೀತಿ ಜನರ ಜ್ಞಾನದಾಹವನ್ನು ತಣಿಸುವಲ್ಲಿ ನಿರತವಾಗಿದೆ ‘ರೀಡ್ ಎ ಬುಕ್’ ತಂಡ.

ಎರಡು ವರ್ಷಗಳ ಹಿಂದೆ ಇಬ್ಬರು ಪುಸ್ತಕಪ್ರೇಮಿಗಳು ಆರಂಭಿಸಿದ ಈ ತಂಡದಲ್ಲಿ ಇಂದು 400 ಸದಸ್ಯರು ಇದ್ದಾರೆ. ನಗರದ ಮೂಲೆಮೂಲೆಗಳಲ್ಲಿರುವ ಪುಸ್ತಕಪ್ರೇಮಿಗಳನ್ನು ಒಂದೆಡೆ ಕಲೆಹಾಕುವಲ್ಲಿ ಈ ತಂಡದ ಪ್ರಯತ್ನ ಸಾಗಿದೆ. ತಮ್ಮ ವೈಯಕ್ತಿಕ ಸಂಗ್ರಹದಲ್ಲಿರುವ ಪುಸ್ತಕಗಳನ್ನೇ ಇತರ ಆಸಕ್ತರಿಗೂ ತಲುಪಿಸಲು ನೆರವಾಗುವುದು ಈ ತಂಡದ ವೈಶಿಷ್ಟ್ಯ.

ನೀವು ಓದಲು ಇಚ್ಚಿಸುವ ಪುಸ್ತಕವನ್ನು ಏಳು ದಿನಗಳ ಒಳಗಾಗಿ ತಲುಪಿಸಲಾಗುತ್ತದೆ. ಹೀಗೆ ಪಡೆದ ಪುಸ್ತಕವನ್ನು ಶಾಶ್ವತವಾಗಿ ನಿಮ್ಮ ಬಳಿ ಇರಿಸಿಕೊಳ್ಳುವಂತಿಲ್ಲ. ನಿಗದಿತ ಅವಧಿಯೊಳಗೆ ಸಂಬಂಧಿಸಿದವರಿಗೆ ಮರಳಿಸಬೇಕು. ಒಮ್ಮೆ ಖರೀದಿಸಿದ ಪುಸ್ತಕವನ್ನು ನಾವು ಓದುತ್ತೇವೆ. ಓದಿಮುಗಿಸಿದ ಪುಸ್ತಕಗಳು ಕಪಾಟುಗಳಲ್ಲಿ ಬಹುಕಾಲ ಉಳಿದುಬಿಡುತ್ತವೆ. ಪುಸ್ತಕಗಳನ್ನು ಪರಸ್ಪರ ಹಂಚಿಕೊಂಡರೆ ಇತರರಿಗೂ ಉಪಯುಕ್ತ ಎನ್ನುವುದು ಈ ತಂಡದ ಪರಿಕಲ್ಪನೆ.

ತಂಡದಿಂದ ಪುಸ್ತಕ ಪಡೆಯಲು ಇಚ್ಚಿಸುವವರು ‘ರೀಡ್ ಎ ಬುಕ್’ (Read a Book) ಫೇಸ್‌ಬುಕ್ ಪುಟದಲ್ಲಿರುವ ‘ಬುಕ್ ನೌ’ (Book Now) ಬಟನ್ ಕ್ಲಿಕ್ ಮಾಡಬೇಕು. ತಕ್ಷಣ, ಗೂಗಲ್ ಪುಟದಲ್ಲಿ ಅರ್ಜಿಯೊಂದು (ಗೂಗಲ್ ಫಾರ್ಮ್‌) ತೆರೆದುಕೊಳ್ಳುತ್ತದೆ. ಇಲ್ಲಿ ನಿಮ್ಮ ಸಂಪರ್ಕ ವಿಳಾಸ, ನೀವು ಓದಲು ಇಚ್ಚಿಸುವ ಪುಸ್ತಕದ ಮಾಹಿತಿಯನ್ನು ತುಂಬಬೇಕು. ನೀವು ಓದಲು ಇಚ್ಚಿಸುವ ಪುಸ್ತಕವನ್ನು ನೇರವಾಗಿ ಅಥವಾ ಕೊರಿಯರ್ ಮೂಲಕ ಏಳು ದಿನಗಳ ಒಳಗಾಗಿ ನಿಮಗೆ ತಲುಪಿಸಲಾಗುತ್ತದೆ.

ಹೀಗೆ ಪಡೆದ, ಆ ಪುಸ್ತಕವನ್ನು ಒಂದು ತಿಂಗಳ ಕಾಲ ನಿಮ್ಮ ಬಳಿ ಇಟ್ಟುಕೊಳ್ಳಬಹುದು. ನೀವು ಓದಿ ಮುಗಿದ ತಕ್ಷಣ, ಬೇರೆ ಯಾರಾದರೂ ಆ ಪುಸ್ತಕವನ್ನು ಇಚ್ಛಿಸಿದರೆ ಅವರಿಗೆ ತಲುಪಿಸುವ ಕೆಲಸ ಮಾಡಬಹುದು. ಪುಸ್ತಕ ಪಡೆದಿದ್ದಕ್ಕೆ ಯಾವುದೇ ಶುಲ್ಕ ತೆರಬೇಕಿಲ್ಲ. ತಂಡದಲ್ಲಿರುವ ಕೆಲವರ ಬಳಿ ಒಂದು ಸಾವಿರಕ್ಕೂ ಅಧಿಕ ಪುಸ್ತಕಗಳಿವೆ. ಅವಲ್ಲಿರುವ ಪುಸ್ತಕಗಳನ್ನು ನೀವು, ನಿಮ್ಮ ಬಳಿ ಇರುವ ಪುಸ್ತಕಗಳನ್ನು ಅವರು ಓದಬಹುದಾಗಿದೆ.

ಸದ್ಯಕ್ಕೆ ಈ ತಂಡದಲ್ಲಿ ಕಥೆ, ಕಾದಬರಿಗಳನ್ನು ಹೊಂದಿರುವವರೇ ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಈ ತಂಡವು ಮಾರುಕಟ್ಟೆಗೆ ಬರುವ ಹೊಸ ಪುಸ್ತಕಗಳು, ಹೊಸ ಪ್ರಕಾಶಕರನ್ನು ತನ್ನ ಜೋಳಿಗೆಗೆ ತುಂಬಿಸಿಕೊಂಡಿದೆ. ಮಾರುಕಟ್ಟೆಯಲ್ಲಿ ಹೆಚ್ಚು ಸಂಚಲನ ಸೃಷ್ಟಿಸಿರುವ ಪುಸ್ತಕಗಳ ದೊಡ್ಡ ಸಂಗ್ರಹವೂ ಈ ತಂಡದಲ್ಲಿದೆ.

ಆ್ಯನ್‍ಸ್ಯುಟೆಬಲ್ ಬಾಯ್, ಕ್ಯಾಚರ್ ಇನ್ ದ ರಾಯ್, ಸ್ಟೀಫನ್ ಕಿಂಗ್ಸ್ ಅವರ ಹಾರರ್ ಫಿಕ್ಷನ್, ದಿ ಫೌಂಟೇನ್ ಹೆಡ್, ದಿ ಡೈರಿ ಆಫ್ ಎ ವಿಂಪಿ ಕಿಡ್ ಸಿರೀಸ್, ಟ್ರೇನ್ ಟು ಪಾಕಿಸ್ತಾನ, ಮಲಾಲಾ ಆತ್ಮಕತೆ ಸೇರಿದಂತೆ ಹಲವು ಜನಪ್ರಿಯ ಪುಸ್ತಕಗಳು ತಂಡದ ಸದಸ್ಯರ ಬಳಿ ಇವೆ.

ಸಿನಿಮಾಗಳನ್ನು ವೀಕ್ಷಿಸುವ ವಿಮರ್ಶಕರು ರೇಟಿಂಗ್‌ ಕೊಡುವುದನ್ನು ನೀವು ಗಮನಿಸಿರಬಹುದು. ಅದೇ ರೀತಿ ‘ರೀಡ್‌ ಎ ಬುಕ್‌’ ತಂಡದ ಸದಸ್ಯರು ಹೊಸ ಪುಸ್ತಕಗಳನ್ನು ಖರೀದಿಸಿ, ಅದರ ಬಗ್ಗೆ ಚಿತ್ರ ಸಮೇತ ಫೇಸ್‍ಬುಕ್ ಪುಟದಲ್ಲಿ ಬರೆಯುತ್ತಾರೆ. ಪುಸ್ತಕದ ಹೂರಣ, ಲೇಖಕನ ವಿಶೇಷತೆ, ವಿಮರ್ಶೆಯ ಜೊತೆಗೆ ರೇಟಿಂಗ್‌ಗಳನ್ನೂ ಹಾಕುತ್ತಾರೆ. ಹೊಸ ಓದುಗರಿಗೆ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳಲು ಈ ರೇಟಿಂಗ್ ಸಹಾಯಕ ಎಂಬ ಅಭಿಪ್ರಾಯ ಅವರದು.

‘ನಮ್ಮ ಬಳಿ ಈಗ ಇಂಗ್ಲೀಷ್ ಪುಸ್ತಕಗಳು ಮಾತ್ರ ಲಭ್ಯವಿದೆ. ಕೆಲವರು ಕನ್ನಡ ಪುಸ್ತಕಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆಯೂ ಗಮನಹರಿಸುತ್ತೇವೆ’ ಎನ್ನುತ್ತಾರೆ ‘ರೀಡ್‌ ಎ ಬುಕ್‌’ನ ಸಂಸ್ಥಾಪಕರಲ್ಲಿ ಒಬ್ಬರಾದ ಕನಿಕಾ ಜಿಂದಾಲ್. ಈ ತಂಡ ತಿಂಗಳಿಗೊಮ್ಮೆ ಒಂದೆಡೆ ಸೇರಿ ಪುಸ್ತಕ ಜಗತ್ತು ಹಾಗೂ ಸಮಕಾಲೀನ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸುತ್ತದೆ. ಪುಸ್ತಕ ಲೋಕ ನಿಮಗೂ ಪ್ರಿಯವಾಗಿದ್ದರೆ ಈ ಕೆಳಗಿನ facebook.com/readabook.in ಲಿಂಕ್ ಬಳಸಿ. 'ರೀಡ್‌ ಎ ಬುಕ್’ ಮೂಲಕ ನಿಮ್ಮ ಜ್ಞಾನದ ಹರಹು ಹೆಚ್ಚಿಸಿಕೊಳ್ಳಿ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry