7

ಬಾಲಿವುಡ್‌ನ ಆಗಸ ಬೆಳಗಿದ ‘ಶಶಿ’

Published:
Updated:
ಬಾಲಿವುಡ್‌ನ ಆಗಸ ಬೆಳಗಿದ ‘ಶಶಿ’

ಶಶಿಕಪೂರ್‌ ಎನ್ನುವ ಹೆಸರು ಕೇಳಿದಾಗಲೆಲ್ಲ ನೆನಪಾಗುವುದು ‘ದೀವಾರ್‌’ ಎನ್ನುವ ಹಳೆಯ ಸಿನಿಮಾ. 1975ರಲ್ಲಿ ಬಾಲಿವುಡ್‌ ಸಿನಿಮಾಗಳಿಗೆ ಹೊಸ ‘ಕಲ್ಟ್‌’ ಒಂದನ್ನು ಪರಿಚಯಿಸಿದ ಅತ್ಯುತ್ತಮ ಚಿತ್ರವದು. ಯಶ್‌ ಚೋಪ್ರಾ ತನ್ನೆಲ್ಲ ಪ್ರತಿಭೆಯನ್ನೂ ಬಸಿದು ನಿರ್ದೇಶಿಸಿದ ಸೂಪರ್‌ಹಿಟ್‌ ಫಿಲಂ. 70ರ ದಶಕದಲ್ಲಿ ಅತ್ಯಧಿಕ ಬಾಕ್ಸಾಫೀಸ್‌ ಕಲೆಕ್ಷನ್‌ ಮಾಡಿದ ನಾಲ್ಕು ಹಿಂದಿ ಸಿನಿಮಾಗಳಲ್ಲಿ ಒಂದು ಎಂದು ಖ್ಯಾತಿ ಹೊಂದಿದ ಆ ಸಿನಿಮಾದ ಸ್ಫೂರ್ತಿಯಲ್ಲೇ ಇವತ್ತಿಗೂ ಬಾಲಿವುಡ್‌ನಲ್ಲಿ ಹೊಸ ಸಿನಿಮಾಗಳು ಬರುವುದುಂಟು! ಬಾಲಿವುಡ್‌ನ ಈವರೆಗಿನ 25 ಅತ್ಯುತ್ತಮ ಸಿನಿಮಾಗಳನ್ನು ಪಟ್ಟಿ ಮಾಡಿದರೆ ನಿಸ್ಸಂಶಯವಾಗಿ ‘ದೀವಾರ್‌’ ಮೊದಲ ಸಾಲಿನಲ್ಲಿ ನಿಲ್ಲುತ್ತದೆ ಎಂದು ವಿಮರ್ಶಕರು ಇಂದಿಗೂ ನಂಬಿರುವ ಸಿನಿಮಾವದು.

ಯಶ್‌ ಚೋಪ್ರಾ, ಅಮಿತಾಭ್‌ ಬಚ್ಚನ್‌, ಶಶಿ ಕಪೂರ್‌, ಸಲೀಂ– ಜಾವೇದ್‌, ನಿರೂಪಾರಾಯ್‌– ಮುಂತಾದ ದಿಗ್ಗಜರೆಲ್ಲ ಒಂದೆಡೆ ಸಂಗಮಿಸಿದ ಚಿತ್ರವದು. ‘ದೀವಾರ್‌’ ಮೂಲಕ ಅಮಿತಾಭ್‌ ಪಡೆದುಕೊಂಡ ‘ಆ್ಯಂಗ್ರಿ ಯಂಗ್ ಮ್ಯಾನ್‌’ ಇಮೇಜ್‌ ಸುಮಾರು ಮೂರು ದಶಕಗಳ ಕಾಲ ಆತನನ್ನು ಕೈಹಿಡಿದು ಮುನ್ನಡೆಸಿತು. ಯಶ್‌ ಚೋಪ್ರಾ ಬಾಲಿವುಡ್‌ನಲ್ಲಿ ನಿರ್ದೇಶಕರಾಗಿ ಭದ್ರ ಬುನಾದಿ ಹಾಕಿಕೊಂಡರು. ಸಲೀಂ– ಜಾವೇದ್‌ ಎಂಬ ಡೈಲಾಗ್‌ ಜೋಡಿ ಖ್ಯಾತಿಯ ತುತ್ತತುದಿಗೇರಿತು. ಆದರೆ ಆ ಚಿತ್ರದಲ್ಲಿ ಅದ್ವಿತೀಯ ಅಭಿನಯಕ್ಕಾಗಿ ‘ಅತ್ಯುತ್ತಮ ಪೋಷಕ ನಟ’ ಫಿಲಂಫೇರ್‌ ಪ್ರಶಸ್ತಿ ಗೆದ್ದದ್ದು ಮಾತ್ರ ಶಶಿ ಕಪೂರ್‌.

ಅಮಿತಾಭ್‌ಗಿಂತ ವಯಸ್ಸಿನಲ್ಲಿ ಐದು ವರ್ಷ ದೊಡ್ಡವರು ಈ ಶಶಿಕಪೂರ್‌. (ಜನ್ಮದಿನ: 18/3/1938) ಆದರೆ ‘ದೀವಾರ್‌’ ಚಿತ್ರದಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿ ನಟಿಸಿದ್ದು ಅಮಿತಾಭನ ತಮ್ಮನ ಪಾತ್ರದಲ್ಲಿ. ಸ್ಮಗ್ಲರ್‌ ಆಗಿದ್ದ ಅಣ್ಣನ ಎದುರು ತಪ್ಪೊಪ್ಪಿಗೆಯ ಪತ್ರ ತೋರಿಸಿ ಸಹಿ ಹಾಕೆಂದು ಒತ್ತಾಯಿಸಿದಾಗ, ಅಣ್ಣ ಪ್ರಶ್ನೆಗಳ ಸುರಿಮಳೆಗೈಯುತ್ತಾನೆ. ಆಗ ಒಮ್ಮಿಂದೊಮ್ಮೆಲೆ ಸಿಟ್ಟಿಗೆದ್ದು ‘ಭಾಯ್‌.. ತುಮ್‌ ಸೈನ್‌ ಕರೋಗೇ ಯಾ ನಹೀ’ ಎಂದು ಅಬ್ಬರಿಸುವ ಶಶಿಕಪೂರ್‌, ಮರುಕ್ಷಣದಲ್ಲೇ ‘ಯೆ ಸಚ್ಛಾಯಿ ತುಮಾರೆ ಔರ್‌ ಮೇರೆ ಬೀಚ್‌ ಮೆ ಏಕ್‌ ದೀವಾರ್‌ ಹೈ ಭಾಯ್‌’ ಎಂದು ಗದ್ಗದ ಸ್ವರಕ್ಕೆ ಇಳಿಯುತ್ತಾರೆ. ಧ್ವನಿಯ ಏರಿಳಿತಗಳಲ್ಲಿ ಶಶಿಕಪೂರ್‌ ಸಾಧಿಸಿದ್ದ ಹಿಡಿತ ಅಪೂರ್ವವಾದದ್ದು.

1975ರಲ್ಲಿ ಒಟ್ಟು ಏಳು ವಿಭಾಗಗಳಲ್ಲಿ ಆ ಸಿನಿಮಾ ‘ಫಿಲಂಪೇರ್‌’ ಪ್ರಶಸ್ತಿ ಪಡೆದು ದಾಖಲೆ ನಿರ್ಮಿಸಿತು. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಪೋಷಕ ನಟ.. ಹೀಗೆ ಪ್ರಶಸ್ತಿಗಳ ಪಟ್ಟಿ ಮುಂದುವರಿಯುತ್ತದೆ. ಆ ಸಿನಿಮಾ ಮೂಲಕ ಖ್ಯಾತಿಯ ಉತ್ತುಂಗಕ್ಕೆ ಏರಿದ ಅಮಿತಾಭ್‌ಗೆ ಅದರಲ್ಲಿ ಶ್ರೇಷ್ಠ ನಟ ಪ್ರಶಸ್ತಿ ಸಿಗಲಿಲ್ಲ. ಇಬ್ಬರು ಸೋದರರ ಮಧ್ಯೆ ತಾಯಿಯ ಪಾತ್ರದಲ್ಲಿ ಅತ್ಯುತ್ತಮ ಅಭಿನಯ ನೀಡಿದ ನಿರೂಪಾ ರಾಯ್‌ಗೂ ಪೋಷಕ ನಟಿ ಪ್ರಶಸ್ತಿ ಗೆಲ್ಲಲಾಗಲಿಲ್ಲ. ಆದರೆ ಶಶಿಕಪೂರ್‌ ಪ್ರಶಸ್ತಿ ಗೆದ್ದದ್ದು ಅವರ ಅಭಿನಯ ಪ್ರೌಡಿಮೆಗೆ ಹಿಡಿದ ಕೈಗನ್ನಡಿ.

ಸಿನಿಮಾ ಜೀವನದುದ್ದಕ್ಕೂ ತಣ್ಣಗೆ ಪ್ರವಹಿಸಿದ ನದಿಯೊಂದರಂತೆ ಇದ್ದ ಶಶಿಕಪೂರ್‌, ಕಳೆದ 20 ವರ್ಷಗಳಿಂದ ಹುಷಾರಿಲ್ಲದೆ ಅಷ್ಟೇ ತಣ್ಣಗೆ ಬದುಕಿದವರು. ಈಗ ‘ಶಶಿಕಪೂರ್‌ ಇನ್ನಿಲ್ಲವಂತೆ’ ಎಂಬ ಸುದ್ದಿ ಕೇಳಿದಾಗ ಬಹಳಷ್ಟು ಮಂದಿ, ‘ಓಹ್‌.. ಅವರು ಇನ್ನೂ ಇದ್ದರಾ...?’ ಎಂದು ಉಚ್ಚರಿಸಿದ್ದರೆ ಅದರಲ್ಲಿ ತಪ್ಪೇನೂ ಇಲ್ಲ. 1984ರಲ್ಲಿ ಪತ್ನಿ ಜೆನಿಫರ್‌ ಕ್ಯಾನ್ಸರ್‌ನಿಂದ ಮೃತಪಟ್ಟ ಬಳಿಕ ಅವರ ಆರೋಗ್ಯ ನಿಧಾನಕ್ಕೆ ಹದಗೆಟ್ಟಿತ್ತು. 1998ರಲ್ಲಿ ‘ಜಿನ್ನಾ’ ಚಿತ್ರದಲ್ಲಿ ನಿರೂಪಕನ ಪಾತ್ರ ವಹಿಸಿದ್ದೇ ಕೊನೆ. ಜೀವಮಾನದ ಸಾಧನೆಗಾಗಿ ಮೂರು ವರ್ಷಗಳ ಹಿಂದೆ ಅವರನ್ನು ‘ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ’ ಅರಸಿಕೊಂಡು ಬಂತು. ಬಹುಶಃ ಮಾಧ್ಯಮಗಳಲ್ಲಿ ಜನರು ಅವರನ್ನು ಸಾರ್ವಜನಿಕವಾಗಿ ನೋಡಿದ್ದು ಅದೇ ಕೊನೆ ಇರಬೇಕು.

(1975ರಲ್ಲಿ ಬೆಂಗಳೂರಿನಲ್ಲಿ ನಡೆದ ‘ದೀವಾರ್’ ಚಿತ್ರದ ಸಮಾರಂಭದಲ್ಲಿ ನಟ ಅಮಿತಾಭ್ ಬಚ್ಚನ್ ಹಾಗೂ ಚಿತ್ರ ನಿರ್ಮಾ‍ಪಕ ಮಾಂಡ್ರೆ ಅವರೊಂದಿಗೆ ಶಶಿಕಪೂರ್ –ಪ್ರಜಾವಾಣಿ ಆರ್ಕೈವ್)

‘ದೀವಾರ್‌’ ಚಿತ್ರದ ಇನ್ನೊಂದು ಡೈಲಾಗ್‌ ಕೂಡಾ ಸಾರ್ವಕಾಲಿಕ ದಾಖಲೆ ನಿರ್ಮಿಸಿತ್ತು. ಅದು ‘ಮೇರಾ ಪಾಸ್‌ ಮಾ ಹೈ’ ಎನ್ನುವ ಡೈಲಾಗ್‌. ‘ಆಜ್‌ ಮೇರೆ ಪಾಸ್‌ ಬಿಲ್ಡಿಂಗ್‌ ಹೈ, ಬಂಗ್ಲಾ ಹೈ, ಗಾಡೀ ಹೈ, ಬ್ಯಾಂಕ್‌ ಬ್ಯಾಲನ್ಸ್‌ ಹೈ. ತೇರೇ ಪಾಸ್‌ ಕ್ಯಾ ಹೈ?’ ಎಂದು ಸ್ಮಗ್ಲರ್ ಪಾತ್ರದ -ಅಮಿತಾಭ್ ಬಚ್ಚನ್‌ ತನ್ನ ಕಂಚಿನ ಕಂಠದಲ್ಲಿ ಪ್ರಶ್ನಿಸುತ್ತಾರೆ. ಶಶಿಕಪೂರ್‌ ಅಷ್ಟೇ ತಣ್ಣನೆಯ, ಆದರೆ ದೃಢವಾದ ಸ್ವರದಲ್ಲಿ ಉತ್ತರಿಸುತ್ತಾರೆ– ‘ಮೇರಾ ಪಾಸ್‌ ಮಾ ಹೈ..!’

ನಾಲ್ಕರ ಎಳವೆಯಲ್ಲೇ ತಂದೆ ಪೃಥ್ವಿರಾಜ್‌ ಕಪೂರರ ನಾಟಕ ಸಂಸ್ಥೆ ‘ಪೃಥ್ವಿ’ಯಲ್ಲಿ ಮುಖಕ್ಕೆ ಬಣ್ಣ ಹಚ್ಚಿದರು. ಬೆಳೆದಂತೆ ಸಂಸ್ಥೆಯ ಅಸಿಸ್ಟೆಂಟ್‌ ಮ್ಯಾನೇಜರ್‌ ಮತ್ತು ನಟನಾಗಿ ದ್ವಿಪಾತ್ರ. ಕೋಲ್ಕತ್ತಾದಲ್ಲಿ ಜನಿಸಿದ ಶಶಿರಾಜ್‌ನ ನಿಜ ನಾಮಧೇಯ, ಬಲ್ಬೀರ್‌ರಾಜ್‌ ಪೃಥ್ವಿರಾಜ್‌ ಕಪೂರ್‌! ರಾಜ್‌ಕಪೂರ್‌ ಮತ್ತು ಶಮ್ಮಿ ಕಪೂರ್‌ರ ತಮ್ಮನಾದರೂ, ನಟನೆಯಲ್ಲಿ ತಮ್ಮದೇ ಆದ ವಿಭಿನ್ನ ಶೈಲಿ.

1951ರಲ್ಲಿ ರಾಜ್‌ಕಪೂರ್‌ಗೆ ಖ್ಯಾತಿ ತಂದುಕೊಟ್ಟ ‘ಆವಾರಾ’ ಚಿತ್ರದಲ್ಲಿ ಎಳೆಯ ರಾಜ್‌ಕಪೂರನಾಗಿ ನಟಿಸಿದ್ದರು. ‘ಸಂಗ್ರಾಮ್‌’ ಚಿತ್ರದಲ್ಲಿ ಅಶೋಕ್‌ಕುಮಾರ್‌ ಸಣ್ಣವನಾಗಿದ್ದಾಗಿನ ಪಾತ್ರ ನಿರ್ವಹಿಸಿದ್ದರು. 1956ರಲ್ಲಿ ರಂಗಭೂಮಿಯಲ್ಲಿಯೇ ಪರಿಚಯವಾದ ಜೆನಿಫರ್‌ ಬಾಳಸಂಗಾತಿಯಾದರು.

ತನ್ನ ಕಾಲದ ಅತ್ಯಂತ ಪ್ರತಿಭಾವಂತ ನಟರ ಜತೆಗೆಲ್ಲ ಪೈಪೋಟಿಯಿಂದ ನಟಿಸಬೇಕಾಗಿ ಬಂದದ್ದು ಶಶಿಕಪೂರ್‌ ಎದುರಿಸಿದ ಕಷ್ಟವೂ ಹೌದು; ಅವರ ಸಾಮರ್ಥ್ಯವೂ ಹೌದು. ಒಟ್ಟು 61 ಸಿನಿಮಾಗಳಲ್ಲಿ ‘ಸಿಂಗಲ್‌ ಹೀರೊ’ ಆಗಿ ನಟಿಸಿದ ಶಶಿಕಪೂರ್, 55 ಮಲ್ಟಿಸ್ಟಾರ್‌ ಸಿನಿಮಾಗಳಲ್ಲಿ ಇನ್ನೊಬ್ಬ ಹೀರೋ ಆಗಿ ನಟಿಸಿದ್ದರು! ಅಮಿತಾಭ್‌ ಜತೆ 1974ರಲ್ಲಿ ‘ರೋಟಿ ಕಪ್‌ಡಾ ಔರ್‌ ಮಕಾನ್‌’ ನಿಂದ ಹಿಡಿದು, ಕಭೀ ಕಭೀ, ತ್ರಿಶೂಲ್, ಕಾಲಾಪತ್ಥರ್‌, ಸುಹಾಗ್‌, ಶಾನ್‌, ಸಿಲ್‌ಸಿಲಾ- ಹೀಗೆ 12ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಮಸ್ಪರ್ಧೆ ನೀಡಿದರು. ಸಂಜೀವ್‌ಕುಮಾರ್‌ ಜತೆ 77ರಲ್ಲಿ ‘ಮುಕ್ತಿ’ ಸಿನಿಮಾದಿಂದ ತೊಡಗಿ ಆರು ಸಿನಿಮಾಗಳಲ್ಲಿ ಹೀರೊ ಆಗಿ ನಟಿಸಿದರು. ‘ಚರಿತ್ರನಟ’ ಪ್ರಾಣ್‌ ಜತೆಗೆ ಒಂಬತ್ತು ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದರು. ವಿನೋದ್‌ ಖನ್ನಾ, ಜಿತೇಂದ್ರ, ರಣಧೀರ್‌ ಕಪೂರ್‌, ರಿಶಿ ಕಪೂರ್‌- ಹೀಗೆ ಆ ಕಾಲದ ಸೂಪರ್‌ ಹೀರೋಗಳ ಜತೆಗೆ ಹೆಗಲೆಣೆಯಾಗಿ ನಟಿಸಿ ಆ ಸಿನಿಮಾಗಳನ್ನು ಯಶಸ್ಸಿನತ್ತ ಒಯ್ದವರು ಶಶಿಕಪೂರ್‌! ಈ ಮಹಾತಾರೆಯರ ಜತೆಗೆ ನಟಿಸಿದ ಎಲ್ಲ ಸಿನಿಮಾಗಳಲ್ಲೂ ಶಶಿಕಪೂರ್‌ ಅವರೆಲ್ಲರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿಲ್ಲದ ಸತ್ಯ!

148 ಹಿಂದಿ ಸಿನಿಮಾ ಮತ್ತು 12 ಇಂಗ್ಲಿಷ್ ಸಿನಿಮಾಗಳಲ್ಲಿ ನಟಿಸಿರುವ ಶಶಿ, 1986ರಲ್ಲಿ ‘ನ್ಯೂಡೆಲ್ಲಿ ಟೈಮ್ಸ್‌’ ಚಿತ್ರದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದರು. 1993ರಲ್ಲಿ ‘ಮುಹಾಫಿಜ್‌’ ಚಿತ್ರದ ನಟನೆಗೆ ವಿಶೇಷ ಜ್ಯೂರಿ ಪ್ರಶಸ್ತಿ ಪಡೆದರು. 1979ರಲ್ಲಿ ಅವರು ನಿರ್ಮಿಸಿದ ಹೊಸ ಅಲೆಯ ಸಿನಿಮಾ ‘ಜುನೂನ್‌’ ರಾಪ್ಟ್ರಪ್ರಶಸ್ತಿ ಗಳಿಸಿತು.

ನಂದಾ ಮತ್ತು ರಾಖಿ ಜತೆಗಿನ ಶಶಿಕಪೂರ್‌ ಜೋಡಿ ಬಾಲಿವುಡ್‌ನಲ್ಲಿ ಸಾಕಷ್ಟು ಕ್ಲಿಕ್‌ ಆಗಿತ್ತು. ಶರ್ಮಿಳಾ ಠಾಗೋರ್‌ ಮತ್ತು ಜೀನತ್‌ ಅಮಾನ್‌, ಶಶಿ ಜತೆಗೆ ಮಿಂಚಿದ ಇನ್ನಿಬ್ಬರು. ಹೇಮಮಾಲಿನಿ, ಪರ್ವೀನ್ ಬಾಬಿ ಮತ್ತು ಮೌಸಮಿ ಚಟರ್ಜಿ ಜತೆಗೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಶಶಿಕಪೂರ್‌ ಅವರನ್ನು ಯಾವತ್ತು ನೆನಪಿಸಿಕೊಂಡರೂ ಕಣ್ಣೆದುರು ನಿಲ್ಲುವುದು ಅಮಿತಾಭ್‌. ಮತ್ತು ಅಭಿಮಾನಿಗಳ ಕಿವಿಯಲ್ಲಿ ರಿಂಗಣಿಸುವುದು ‘ಮೇರಾ ಪಾಸ್‌ ಮಾ ಹೈ’ ಎನ್ನುವ ಆ ಪ್ರಖ್ಯಾತ ಡೈಲಾಗ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry