ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಭರವಸೆಗಳ ಸುರಿಮಳೆ

Last Updated 4 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಅಹಮದಾಬಾದ್‌: ಗುಜರಾತಿನಲ್ಲಿ ಎರಡು ದಶಕಗಳಿಗೂ ಹೆಚ್ಚಿನ ಅವಧಿಯ ಬಿಜೆಪಿ ಆಡಳಿತವನ್ನು ಕೊನೆಗೊಳಿಸುವ ಪ್ರಯತ್ನಕ್ಕೆ ಬಲ ತುಂಬಲು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಭರವಸೆಗಳ ಸುರಿಮಳೆಗೈದಿದೆ. ಇದೇ 9 ಮತ್ತು 14ರಂದು ನಡೆಯಲಿರುವ ಎರಡು ಹಂತಗಳ ಚುನಾವಣೆಗೆ ಸೋಮವಾರ ಪ್ರಣಾಳಿಕೆ ಬಿಡುಗಡೆ ಮಾಡಿದೆ.

ಮಹಿಳೆಯರಿಗೆ ಮನೆ, ರೈತರ ಸಾಲ ಮನ್ನಾ, ಕೃಷಿಗೆ ಉಚಿತ ನೀರು, ಯುವ ಜನರಿಗೆ ನಿರುದ್ಯೋಗ ಭತ್ಯೆ, ತೆರಿಗೆ ದರ ಇಳಿಕೆ, ವಿದ್ಯುತ್‌ ದರ ಅರ್ಧಕ್ಕೆ ಕಡಿತ, ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಹಲವು ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ. ಪಟೇಲ್‌ನಂತಹ ಮೇಲ್ವರ್ಗದ ಸಮುದಾಯಗಳಿಗೆ ‘ವಿಶೇಷ ಸೌಲಭ್ಯ’ಗಳನ್ನೂ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ.

ಇದು ಜನರ ಪ್ರಣಾಳಿಕೆ ಎಂದು ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಭರತ್‌ಸಿಂಹ ಸೋಲಂಕಿ ಹೇಳಿದ್ದಾರೆ. ಸಮಾಜದ ವಿವಿಧ ವರ್ಗಗಳ ಜನರಲ್ಲಿ ಅಶಾಂತಿ ಮೂಡಿಸುವ ಎಲ್ಲ ನೋವನ್ನು ಇದು ಪರಿಹರಿಸಲಿದೆ ಎಂದು ಅವರು ಹೇಳಿದ್ದಾರೆ. ರಾಜ್ಯಸಭೆಯ ಸದಸ್ಯ ಮಧು ಸೂದನ್‌ ಮಿಸ್ತ್ರಿ ಅವರ ಅಧ್ಯಕ್ಷತೆಯ ಸಮಿತಿ ಪ್ರಣಾಳಿಕೆ ಸಿದ್ಧಪಡಿಸಿದೆ.

ಪಟೇಲ್‌ ಸಮುದಾಯದ ಮೀಸ ಲಾತಿಗಾಗಿ ಹೋರಾಟ ನಡೆಸುತ್ತಿರುವ ಪಾಟಿದಾರ್‌ ಅನಾಮತ್‌ ಆಂದೋಲನ ಸಮಿತಿಯ ಜತೆಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಮೀಸಲಾತಿ ನೀಡುವುದಕ್ಕಾಗಿ ಮಸೂದೆಯೊಂದನ್ನು ಮಂಡಿಸಲಾಗುವುದು ಎಂಬುದನ್ನು ಪ್ರಣಾಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ರಾಜ್ಯದ 25 ಲಕ್ಷ ಯುವಜನರು ಸ್ವಉದ್ಯೋಗ ಕೈಗೊಳ್ಳುವುದಕ್ಕಾಗಿ ₹32 ಸಾವಿರ ಕೋಟಿಯ ಸಂಚಿತ ನಿಧಿ ಸ್ಥಾಪನೆ ಪ್ರಣಾಳಿಕೆಯ ಮತ್ತೊಂದು ಪ್ರಮುಖ ಅಂಶ. ಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಿಸುವ ಪದ್ಧತಿಯನ್ನು ರದ್ದುಪಡಿಸಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಈಗ ಇರುವ ಎಲ್ಲ ಗುತ್ತಿಗೆ ಕಾರ್ಮಿಕರನ್ನು ಕಾಯಂ ಮಾಡುವುದು ಇನ್ನೊಂದು ಭರವಸೆ.

ನಿರುದ್ಯೋಗಿ ಯುವ ಜನರಿಗೆ ತಿಂಗಳಿಗೆ ₹4 ಸಾವಿರ ಭತ್ಯೆ ನೀಡುವ ಪ್ರಸ್ತಾವವನ್ನು ಕಾಂಗ್ರೆಸ್‌ ಜನರ ಮುಂದಿರಿಸಿದೆ. ನವೋದ್ಯಮ ತೊಡಗುವ ಯುವಕ–ಯುವತಿಯರಿಗೆ ಶೇ ನೂರರಷ್ಟು ಸಾಲ ನೀಡುವ ಭರವಸೆಯನ್ನೂ ನೀಡಲಾಗಿದೆ.

**

ಮಹಿಳೆಯರ ವಿರುದ್ಧದ ಅಪರಾಧ ಕೃತ್ಯಗಳ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯಗಳು

ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಅಥವಾ ಸ್ಮಾರ್ಟ್‌ಫೋನ್‌

ಪೆಟ್ರೋಲ್‌, ಡೀಸೆಲ್‌ ದರ ಲೀಟರ್‌ಗೆ ₹10 ಕಡಿತ

ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿಯಲ್ಲಿ ಬದಲಾವಣೆ ಇಲ್ಲ

ಕೃಷಿಗೆ ದಿನಕ್ಕೆ 16 ತಾಸು ವಿದ್ಯುತ್‌

ನಿರುದ್ಯೋಗಿಗಳಿಗೆ ತಿಂಗಳಿಗೆ ₹4,000 ಭತ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT