ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿದ್ದರಾಮಯ್ಯ ಪಾಪದ ಪಿಂಡ: ಹುಟ್ಟಿದೆಡೆಯೇ ಮುಗಿಸಬೇಕು’

Last Updated 4 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ‘ಸಿದ್ದರಾಮಯ್ಯ ಎಂಬ ಪಾಪದ ಪಿಂಡವು ಎಲ್ಲಿ ಹುಟ್ಟಿದೆಯೋ ಅದನ್ನು ಅಲ್ಲಿಯೇ ಮುಗಿಸಬೇಕು’ ಎಂದು ಕೇಂದ್ರ ಕೌಶಲಾಭಿವೃದ್ಧಿ ಹಾಗೂ ಉದ್ಯಮಶೀಲ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಇಲ್ಲಿ ಸೋಮವಾರ ಹೇಳಿದರು.‌

ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಯಾರಿಗೂ ಬೇಡವಾಗಿದೆ. ಈ ಪಿಂಡವನ್ನು ಇಲ್ಲಿಂದ ಕಿತ್ತೊಗೆಯದೇ ಇದ್ದರೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟ ಎಂದರು.

‘ಬಿಜೆಪಿಯಲ್ಲಿ ಗಾಂಧಿ ತತ್ವದ ಮೂರು ಮಂಗಗಳಂತೆ ಕೆಟ್ಟದ್ದನ್ನು ನೋಡಬಾರದು, ಕೇಳಬಾರದು, ಆಡಬಾರದು ಎಂಬ ಹಲವರಿದ್ದಾರೆ. ಇಂತಹ
ವರು ತಮ್ಮಲ್ಲಿ ಬದಲಾವಣೆ ತಂದುಕೊಳ್ಳಬೇಕು. ಇದನ್ನು ಯಾರು ಒಪ್ಪುವುದಿಲ್ಲವೊ ಅವರು ಪಕ್ಷದಿಂದ ಹೊರ ನಡೆಯಬಹುದು. ಸುಸಂಸ್ಕೃತ ಹೇಡಿಗಳು ಎದ್ದು ಹೋದರೆ ಬೇಸರವಿಲ್ಲ’ ಎಂದು ಕುಟುಕಿದರು.

‘ಬಿಜೆಪಿ ನಾಯಕರನ್ನು ತುಚ್ಛವಾಗಿ ಬಯ್ಯುವಾಗ ಸಿದ್ದರಾಮಯ್ಯ ಅವರ ಸಂಸ್ಕೃತಿ ಎಲ್ಲಿ ಹೋಗಿತ್ತು? ಕುತಂತ್ರಿಗಳಿಗೆ ಕುತಂತ್ರದಿಂದಲೇ ಬುದ್ಧಿ ಕಲಿಸಬೇಕು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ಗೌರವ ಕೊಟ್ಟವರಿಗೆ ಮರಳಿ ಗೌರವ ನೀಡಬೇಕು. ಇಲ್ಲವಾದಲ್ಲಿ ಕೆಟ್ಟ ಮಾತಿನಲ್ಲೇ ಉತ್ತರಿಸಬೇಕು’ ಎಂದು ಮೊನಚಾಗಿ ಹೇಳಿದರು.

ಮೈಸೂರು ನಾಯಕರಿಗೆ ತಾಕತ್ತಿಲ್ಲ: ಹುಣಸೂರಿನಲ್ಲಿ ಸಂಸದ ಪ್ರತಾಪ ಸಿಂಹ ಅವರನ್ನು ಬಂಧಿಸಿದಂತೆ, ಉತ್ತರ ಕನ್ನಡದಲ್ಲಿ ಆಗಿದ್ದರೆ ಇಡೀ ಜಿಲ್ಲೆ ಹೊತ್ತಿ ಉರಿಯುತ್ತಿತ್ತು. ಅಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಆ ಶಕ್ತಿಯಿದೆ. ಇಂತಹ ತಾಕತ್ತು ಮೈಸೂರಿನ ಬಿಜೆಪಿ ನಾಯಕರಿಗೆ ಇದೆಯೇ? ಎಂದು ಪ್ರಶ್ನಿಸಿದರು. ‘ಕಾರ್ಯಕರ್ತರು ಎದ್ದು ನಿಂತರೆ ಪೊಲೀಸರಿಗೆ ಜಾಗ ಇಲ್ಲದಂತೆ ಆಗಬೇಕು. ಇಂತಹ ಶಕ್ತಿಯನ್ನು ನಾಯಕರು ಅವರಲ್ಲಿ ತುಂಬಬೇಕು’ ಎಂದರು.

ಕಾವೇರಿ ನದಿಯಲ್ಲಿ ಮುಳುಗುತ್ತದೆ: ಮೈಸೂರು, ಚಾಮರಾಜನಗರ ಭಾಗದಲ್ಲಿರುವ 15 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಕನಿಷ್ಠ 10ರಲ್ಲಾದರೂ ಗೆದ್ದರೆ ರಾಜ್ಯದಲ್ಲಿ ಅಧಿಕಾರ ಹಿಡಿಯಬಹುದು. ಇಲ್ಲವಾದಲ್ಲಿ ಬಿಜೆಪಿಯು ಕಾವೇರಿ ನೀರಿನಲ್ಲಿ ಮುಳುಗುತ್ತದೆ ಎಂದು ಹೇಳಿದರು.

‘ಟಿಕೆಟ್‌ಗಾಗಿ ನಾಯಕರು ಕಿತ್ತಾಡುವುದು ಬೇಡ. ಫೋಟೊ ನಾಯಕರು ಯಾರು, ಚಮಚಾಗಳು ಯಾರೆಂಬುದು ಪಕ್ಷದ ಹೈ ಕಮಾಂಡ್‌ಗೆ ಗೊತ್ತಿದೆ. ಈ ಬಾರಿ ಅತ್ಯಂತ ಪಾರದರ್ಶಕ ವಾಗಿ ಗೆಲ್ಲುವ ಪ್ರಾಮಾಣಿಕ ನಾಯಕರಿಗೆ ಟಿಕೆಟ್‌ ನೀಡಲಾಗುವುದು’ ಎಂದರು.

‘ಗೆಲ್ಲುವ ಅಭ್ಯರ್ಥಿ ಬೇರೆ ಪಕ್ಷದಲ್ಲಿದ್ದರೆ ಅವರನ್ನು ಪಕ್ಷಕ್ಕೆ ಕರೆತಂದು ಟಿಕೆಟ್‌ ಕೊಡಬೇಕು. ಇಲ್ಲವಾದಲ್ಲಿ ಆ ಅಭ್ಯರ್ಥಿಯನ್ನು ಮುಗಿಸಿಬಿಡಬೇಕು’ ಎಂದರು.

'ತಲೆ ಕಡಿದು ತಂದವರಿಗೆ ₹10 ಲಕ್ಷ ಬಹುಮಾನ'

‌ಬಾಗಲಕೋಟೆ: ‘ಹುಬ್ಬಳ್ಳಿಯ ಗಣೇಶಪೇಟೆಯು ಪಾಕಿಸ್ತಾನದಂತೆ ಕಾಣುತ್ತಿದೆ’ ಎಂದು ಹೇಳಿರುವ ಮುತುವಲ್ಲಿ ಅಬ್ದುಲ್‌ ಹಮೀದ್‌ ಅವರ ತಲೆ ಕಡಿದು ತಂದವರಿಗೆ ₹ 10 ಲಕ್ಷ ನೀಡುವುದಾಗಿ ರಾಜ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಸವರಾಜ ಯಂಕಂಚಿ ಘೋಷಿಸಿದ್ದಾರೆ.

‘ಈ ಹೇಳಿಕೆ ನೀಡಿ ಎರಡು ದಿನಗಳಾದರೂ ಮುತುವಲ್ಲಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ರಾಷ್ಟ್ರೀಯತೆಯ ವಿಚಾರ ಬಂದಾಗ ಈ ರೀತಿಯಾಗಿ ಪ್ರತಿಕ್ರಿಯಿಸಬೇಕಾಗುತ್ತದೆ’ ಎಂದು ಸೋಮವಾರ ಇಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT