ಸೋಮವಾರ, ಮಾರ್ಚ್ 8, 2021
25 °C

ಅಕ್ರಮ ಮಳಿಗೆಗಳ ತೆರವಿಗೆ ಒತ್ತಾಯಿಸಿ ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕ್ರಮ ಮಳಿಗೆಗಳ ತೆರವಿಗೆ ಒತ್ತಾಯಿಸಿ ರೈತರ ಪ್ರತಿಭಟನೆ

ಬೆಂಗಳೂರು: ಕೆ.ಆರ್.ಮಾರುಕಟ್ಟೆಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮಳಿಗೆಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಬಿಬಿಎಂಪಿ ಕೇಂದ್ರ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.‌

ಇದಕ್ಕೂ ಮುನ್ನ, ಕೆ.ಆರ್.ಮಾರುಕಟ್ಟೆಯ ಹೂವು ಮಾರಾಟ ಜಾಗದಿಂದ ಬಿಬಿಎಂಪಿ ಕೇಂದ್ರ ಕಚೇರಿ ವರೆಗೆ ರೈತರು ಬೃಹತ್ ಪ್ರತಿಭಟನೆ ನಡೆಸಿದರು. ರಸ್ತೆಯುದ್ದಕ್ಕೂ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹತ್ತಾರು ವರ್ಷಗಳಿಂದ ಮಾರುಕಟ್ಟೆಯ ಖಾಲಿ ಜಾಗದಲ್ಲಿ ಹೂವು ಮಾರುತ್ತಿದ್ದೆವು. ಇದಕ್ಕೆ ಬಿಬಿಎಂಪಿಗೆ ಅಲ್ಪ ಪ್ರಮಾಣದ ತೆರಿಗೆ ಪಾವತಿಸುತ್ತಿದ್ದೆವು. ಆದರೆ, ಕೆಲ ದಿನಗಳ ಹಿಂದೆ ಕೆಲವರು ಖಾಲಿ ಜಾಗದಲ್ಲಿ ನಾಲ್ಕು ಮಳಿಗೆಗಳನ್ನು ನಿರ್ಮಿಸಿದ್ದಾರೆ. ಇದರಿಂದ ಹೂವು ಮಾರಾಟಕ್ಕೆ ತೊಂದರೆಯಾಗಿದೆ ಎಂದು ರೈತರು ಅಳಲು ತೋಡಿಕೊಂಡರು.

ಬಿಬಿಎಂಪಿ ಅಧಿಕಾರಿಗಳು ಮಾರುಕಟ್ಟೆಯಲ್ಲಿ ಬಲಾಢ್ಯರ ಪ್ರಭಾವ ಹಾಗೂ ಹಣದ ಆಮಿಷಕ್ಕೆ ಒಳಗಾಗಿ ಅಂಗಡಿಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ ಹೂವು ಮಾರಲು ಜಾಗವಿಲ್ಲದೆ ಕಮಿಷನ್ ಆಧಾರದ ಮೇಲೆ ಅಂಗಡಿಗಳಲ್ಲಿ ಹೂವು ಮಾರುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿದಿನ ₹ 1,500 ನಷ್ಟವಾಗುತ್ತಿದೆ. ರೈತರ ಹಿತ ಕಾಪಾಡಲು ಬಿಬಿಎಂಪಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಣ್ಣ ವ್ಯಾಪಾರಿಗಳ ಅನುಕೂಲಕ್ಕೆ ಮಾರುಕಟ್ಟೆಯಲ್ಲಿ ನಿರ್ಮಿಸಿರುವ 101 ಮಳಿಗೆಗಳನ್ನು ಕೆಲವರು ₹10–₹20 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಈ ಬಗ್ಗೆ ಕಣ್ಣಿದ್ದರೂ ಕುರುಡರಾಗಿದ್ದಾರೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ದೂರಿದರು.

ಆಯುಕ್ತರಿಗೆ ರೈತರ ಮನವಿ: ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕುವಂತೆ ಕೋರಿ ರೈತರು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅವರಿಗೆ ಮನವಿ ಪತ್ರ ನೀಡಿದರು.

ಮಂಜುನಾಥ ಪ್ರಸಾದ್‌ ಪ್ರತಿಕ್ರಿಯಿಸಿ, ‘ಯಾವುದೇ ಕಾರಣಕ್ಕೂ ಅವರಿಗೆ ರೈತರ ಅನ್ಯಾಯವಾಗಲು ಬಿಡುವುದಿಲ್ಲ. ಅಕ್ರಮವಾಗಿ ತಲೆ ಎತ್ತಿವೆ ಎನ್ನಲಾದ ಮಳಿಗೆಗಳ ಬಗ್ಗೆ ಪರಿಶೀಲಿಸಿ, ತಪ್ಪು ಕಂಡುಬಂದಲ್ಲಿ ಮಂಗಳವಾರ ರಾತ್ರಿಯೇ ಅವುಗಳನ್ನು ತೆರವುಗೊಳಿಸುತ್ತೇವೆ’ ಎಂದು ಭರವಸೆ ನೀಡಿದರು.

‘ಮಾರುಕಟ್ಟೆಯಲ್ಲಿ ರೌಡಿಗಳ ಹಾವಳಿ ಹೆಚ್ಚಾಗಿದೆ. ಸಣ್ಣ ವ್ಯಾಪಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ರೈತರು ದೂರಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸುತ್ತೇನೆ’ ಎಂದರು.‌

‘ಮಾರುಕಟ್ಟೆಯಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ನಿರ್ಮಾಣ ಹಾಗೂ ವ್ಯಾಪಾರಿಗಳ ಮತ್ತು ಗ್ರಾಹಕರ ಭದ್ರತೆಗಾಗಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲು ಶೀಘ್ರವೇ ಟೆಂಡರ್‌ ಕರೆಯುತ್ತೇವೆ’ ಎಂದು ಹೇಳಿದರು.

ನಗರದ ಕೆಲ ರಸ್ತೆಗಳಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿ ನಡೆಯುತ್ತಿದೆ. ಇದರಿಂದ ಸಂಚಾರ ದಟ್ಟಣೆ ಉಂಟಾಗಿದೆ. ಕಾಮಗಾರಿ ಮುಗಿಯುವ ವರೆಗೆ ಜನರು ಸಹಕರಿಸಬೇಕು

–ಎನ್.ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ

 

ರೈತರ ಪ್ರತಿಭಟನೆ: ಸಂಚಾರ ದಟ್ಟಣೆ

ಕೆ.ಆರ್.ಮಾರುಕಟ್ಟೆಯಿಂದ ಪುರಭವನದ ವರೆಗೆ ಮಂಗಳವಾರ ಸಾವಿರಾರು ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದ್ದರಿಂದ ಸುತ್ತಮುತ್ತಲ ರಸ್ತೆಗಳಲ್ಲಿ ಬೆಳಿಗ್ಗೆ 11.30ರಿಂದ ಮಧ್ಯಾಹ್ನ 2ರ ವರೆಗೆ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು.

ಮೆರವಣಿಗೆ ಸಾಗುತ್ತಿದ್ದ ಮಾರ್ಗದಲ್ಲಿ ಕೆಲಕಾಲ ವಾಹನ ಸಂಚಾರವೇ ಬಂದ್‌ ಆಗಿತ್ತು. ಕೆ.ಆರ್.ಮಾರುಕಟ್ಟೆಯಿಂದ ರಾಜರಾಜೇಶ್ವರಿ ನಗರದ ಮೈಸೂರು ರಸ್ತೆ ವರೆಗೂ ದಟ್ಟಣೆ ಕಂಡು ಬಂತು. ಇದರಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಕಾರ್ಪೊರೇಷನ್ ವೃತ್ತ, ಜೆ.ಸಿ.ರಸ್ತೆ, ಚಾಮರಾಜಪೇಟೆ ಹಾಗೂ ಮೆಜೆಸ್ಟಿಕ್‌ ಸುತ್ತಮುತ್ತಲೂ ದಟ್ಟಣೆ ಇತ್ತು. ಜನರು, ವಾಹನಗಳ ದಟ್ಟಣೆಯ ಮಧ್ಯೆಯೇ ನಡೆದುಕೊಂಡು ಹೋಗಿ ಮೈಸೂರು ರಸ್ತೆಯನ್ನು ದಾಟಿದರು. ಇದನ್ನು ಮನಗಂಡ ಸ್ಥಳದಲ್ಲಿದ್ದ ಪೊಲೀಸರು, ಚಲಿಸುತ್ತಿದ್ದ ವಾಹನಗಳನ್ನು ತಡೆದು ರಸ್ತೆ ದಾಟಲು ಜನರಿಗೆ ಅನುಕೂಲ ಮಾಡಿಕೊಟ್ಟರು.

ನಗರದ ಸುತ್ತಮುತ್ತಲ ಭಾಗಗಳಿಂದ ಖಾಸಗಿ ವಾಹನಗಳಲ್ಲಿ ರೈತರು, ಪ್ರತಿಭಟನೆಗೆ ಬಂದಿದ್ದರು. ಅವರು ತಮ್ಮ ವಾಹನಗಳನ್ನು ರಸ್ತೆಗಳ ಬದಿಯಲ್ಲಿ ನಿಲ್ಲಿಸಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದರಿಂದ ದಟ್ಟಣೆ ಹೆಚ್ಚಾಗಿತ್ತು. ಕೆಲಗಂಟೆಗಳ ಬಳಿಕ ಅಂಥ ವಾಹನಗಳನ್ನು ಸಂಚಾರ ಪೊಲೀಸರು ಬೇರೆಡೆ ಸ್ಥಳಾಂತರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.