ಭಾನುವಾರ, ಫೆಬ್ರವರಿ 28, 2021
29 °C

ಮಹಿಳಾ ಕ್ರಿಕೆಟ್‌: ಸರಣಿ ಮೇಲೆ ಆತಿಥೇಯರ ಕಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಿಳಾ ಕ್ರಿಕೆಟ್‌: ಸರಣಿ ಮೇಲೆ ಆತಿಥೇಯರ ಕಣ್ಣು

ಹುಬ್ಬಳ್ಳಿ: ಮೊದಲ ಪಂದ್ಯದಲ್ಲಿ ಸುಲಭವಾಗಿ ಗೆಲುವು ಪಡೆದು ವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ‘ಎ’ ಮಹಿಳಾ ತಂಡ ಬಾಂಗ್ಲಾದೇಶ ‘ಎ’ ವಿರುದ್ಧದ ಏಕದಿನ ಸರಣಿಯಲ್ಲಿ ಮತ್ತೊಂದು ಗೆಲುವಿನತ್ತ ಚಿತ್ತ ನೆಟ್ಟಿದೆ.

ಆದ್ದರಿಂದ ಆತಿಥೇಯ ತಂಡದ ಆಟಗಾರ್ತಿಯರು ಮೊದಲ ಪಂದ್ಯದ ಬಳಿಕ ಹೆಚ್ಚು ವಿಶ್ರಾಂತಿ ಪಡೆಯದೇ ಎರಡೂ ದಿನ ಕಠಿಣ ತಾಲೀಮು ನಡೆಸಿದರು. ಬ್ಯಾಟಿಂಗ್‌ ಅಭ್ಯಾಸಕ್ಕೆ ಒತ್ತುಕೊಟ್ಟರು. ನೆಟ್ಸ್‌ನಲ್ಲಿ ಸ್ಥಳೀಯ ಯುವ ಆಟಗಾರರು ಬೌಲಿಂಗ್‌ ಮಾಡಿದ್ದು ವಿಶೇಷವಾಗಿತ್ತು. ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ಎರಡನೇ ಪಂದ್ಯ ನಡೆಯಲಿದೆ.

ಮುಂದಿನ ವರ್ಷ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಅಂತರರಾಷ್ಟ್ರೀಯ ಸರಣಿ ನಡೆಯಲಿದೆ. ಆ ಸರಣಿಗೆ ಸಜ್ಜಾಗಲು ‘ಎ’ ತಂಡಗಳ ಟೂರ್ನಿ ಪ್ರಮುಖ ವೇದಿಕೆಯಾಗಿದೆ. ಆದ್ದರಿಂದ ಮಹತ್ವ ಕೂಡ ಹೆಚ್ಚಿದೆ.

ಒಟ್ಟು ಮೂರು ಪಂದ್ಯಗಳ ಏಕದಿನ ಸರಣಿ ಇದಾಗಿದ್ದು, ಮೊದಲ ಪಂದ್ಯದಲ್ಲಿ ಅನುಜಾ ಪಾಟೀಲ್‌ ನಾಯಕತ್ವದ ಭಾರತ ‘ಎ’ ತಂಡ 32 ರನ್‌ಗಳ ಗೆಲುವು ಪಡೆದು 1–0ರಲ್ಲಿ ಮುನ್ನಡೆ ಹೊಂದಿದೆ. ಎರಡನೇ ಪಂದ್ಯದಲ್ಲಿ ಗೆಲುವು ಪಡೆದರೆ ಸರಣಿ ಆತಿಥೇಯರ ಪಾಲಾಗಲಿದೆ. ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ಕರ್ನಾಟಕದ ವಿ.ಆರ್‌. ವನಿತಾ ಬ್ಯಾಟಿಂಗ್‌ ಭರವಸೆ ಎನಿಸಿದ್ದಾರೆ.

ಬಾಂಗ್ಲಾಕ್ಕೆ ಜಯ ಅನಿವಾರ್ಯ: ಎರಡೂ ಅಭ್ಯಾಸ ಪಂದ್ಯಗಳಲ್ಲಿ ಕರ್ನಾಟಕ ತಂಡವನ್ನು ಮಣಿಸಿ ವಿಶ್ವಾಸದಿಂದ ವಾಣಿಜ್ಯ ನಗರಿಗೆ ಬಂದಿದ್ದ ಬಾಂಗ್ಲಾದೇಶ ‘ಎ’ ತಂಡ ಸರಣಿ ಜಯದ ಆಸೆ ಜೀವಂತವಾಗಿ ಉಳಿಸಿಕೊಳ್ಳಬೇಕಾದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ.

ಆದ್ದರಿಂದ ಅವರಿಗೆ ಇದು ‘ಮಾಡು ಇಲ್ಲವೇ ಮಡಿ’ ಹೋರಾಟ. ಏಕದಿನ ಪಂದ್ಯದ ಬಳಿಕ ಉಭಯ ತಂಡಗಳು ಬೆಳಗಾವಿಯಲ್ಲಿ ಮೂರು ಪಂದ್ಯಗಳ ಟಿ–20 ಸರಣಿ ಆಡಲಿವೆ.

ಪಂದ್ಯ ಆರಂಭ: ಬೆಳಿಗ್ಗೆ 9ಕ್ಕೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.