ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಜ ಸ್ಥಿತಿಗೆ ಮರಳಿದ ಹುಣಸೂರು ನಗರ

Last Updated 5 ಡಿಸೆಂಬರ್ 2017, 5:31 IST
ಅಕ್ಷರ ಗಾತ್ರ

ಹುಣಸೂರು: ಹನುಮ ಜಯಂತಿಯ ವೇಳೆ ಉಂಟಾದ ಘರ್ಷಣೆಯಿಂದ ಉದ್ವಿಗ್ನಗೊಂಡಿದ್ದ ನಗರ ಸೋಮವಾರ ಸಹಜ ಸ್ಥಿತಿಗೆ ಮರಳಿದೆ. ಜೆಎಲ್‌ಬಿ ರಸ್ತೆಯನ್ನು ಹೊರತುಪಡಿಸಿ ಉಳಿದೆಡೆ ವಾಣಿಜ್ಯ ವಹಿವಾಟು ಎಂದಿನಂತೆ ನಡೆಯಿತು.

ನಿಷೇಧಾಜ್ಞೆ ಇರುವುದರಿಂದ ನಗರ ವ್ಯಾಪ್ತಿಯ ಶಾಲೆ ಮತ್ತು ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿತ್ತು. ಆದರೆ, ಉಳಿದಂತೆ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿದವು. ಸಾರಿಗೆ ಸಂಚಾರವೂ ಸಹಜವಾಗಿತ್ತು.

ಹನುಮ ಜಯಂತಿಯ ಮೆರವಣಿಗೆ ವೇಳೆ ಉಂಟಾದ ಗಲಾಟೆಯಲ್ಲಿ ಸಂಘ ಪರಿವಾರದ 92 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ಸಂಸದ ಪ್ರತಾಪ ಸಿಂಹ ಅವರ ಬಂಧನ ಖಂಡಿಸಿ ಬಿಜೆಪಿ ಸೋಮವಾರ ಹುಣಸೂರು ಬಂದ್‌ಗೆ ಕರೆ ನೀಡಿತ್ತು.

ಹೀಗಾಗಿ, ಬೆಳಿಗ್ಗೆ ನಗರದ ಎಲ್ಲೆಡೆ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಸಾರ್ವಜನಿಕರ ಸಂಚಾರವೂ ವಿರಳವಾಗಿತ್ತು. ಆದರೆ ಬಂದ್‌ ಕರೆಯನ್ನು ಬಿಜೆಪಿ ಮುಖಂಡರು ಹಿಂಪಡೆದರು. ಹೀಗಾಗಿ, ಮಧ್ಯಾಹ್ನದ ಬಳಿಕ ಜನಜೀವನ ಸಹಜ ಸ್ಥಿತಿಗೆ ಮರಳಿತು.

ಎರಡೂವರೆ ಸಾವಿರಕ್ಕೂ ಹೆಚ್ಚು ಪೊಲೀಸರು ಭದ್ರತೆ ಒದಗಿಸಿದ್ದಾರೆ. ನಗರ ಪ್ರವೇಶಿಸುವ ಎಲ್ಲ ವಾಹನಗಳನ್ನು ಪರಿಶೀಲಿಸಲಾಯಿತು. ಪ್ರಮುಖ ಬೀದಿಗಳಲ್ಲಿ ಪೊಲೀಸರು ಪಥಸಂಚಲನ ನಡೆಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

92 ಮಂದಿ ಬಂಧಿತರ ಬಿಡುಗಡೆ: ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ 92 ಮಂದಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಮೈಸೂರು ಕೇಂದ್ರ ಕಾರಾಗೃಹದಲ್ಲಿದ್ದ 58 ಬಂಧಿತರಿಗೆ ಸೋಮವಾರ ಜಾಮೀನು ಲಭಿಸಿತು.

ಇದಕ್ಕೂ ಮುನ್ನ ಸಂಸದೆ ಶೋಭಾ ಕರಂದ್ಲಾಜೆ ಅವರು ಜೈಲಿಗೆ ತೆರಳಿ ಅವರ ಜತೆ ಮಾತುಕತೆ ನಡೆಸಿದರು. ಕೆ.ಆರ್‌.ನಗರ ಜೈಲಿನಲ್ಲಿದ್ದ 29 ಮಂದಿಯನ್ನು ಭಾನುವಾರ ತಡರಾತ್ರಿ ಬಿಡುಗಡೆ ಮಾಡಲಾಗಿತ್ತು. ಉಳಿದ ಐವರಿಗೆ ನೋಟಿಸ್‌ ನೀಡಿ ಪೊಲೀಸರು ಬಿಡುಗಡೆ ಮಾಡಿದ್ದರು.

ಪ್ರತಾಪ ವಿಡಿಯೊ ವೈರಲ್‌
ಮೈಸೂರು: ಯುವ ಮೋರ್ಚಾ ಕಾರ್ಯಕರ್ತರು ಉಗ್ರ ಪ್ರತಿಭಟನೆ ನಡೆಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ನೀಡಿದ ಸೂಚನೆಯನ್ನು ಹಂಚಿಕೊಂಡ ಸಂಸದ ಪ್ರತಾಪಸಿಂಹ ಅವರ ವಿಡಿಯೊ ವೈರಲ್‌ ಆಗಿದೆ.

‘ಈಚೆಗೆ ರಾಜ್ಯಕ್ಕೆ ಭೇಟಿ ನೀಡಿದ ಷಾ ಅವರು ಯುವ ಮೋರ್ಚಾ ಹೋರಾಟದ ಬಗ್ಗೆ ಮಾಹಿತಿ ಕೇಳಿದರು. ಲಾಠಿ ಚಾರ್ಜ್‌ ಆಗುವಂತಹ ಹೋರಾಟಗಳನ್ನು ಮಾಡಿದ್ದೀರಾ ಎಂದು ಪ್ರಶ್ನಿಸಿದರು. ಇಂತಹ ಪ್ರತಿಭಟನೆಗಳನ್ನು ಈವರೆಗೆ ಮಾಡಿಲ್ಲ, ಇನ್ನು ಮುಂದೆ ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದ್ದೆ’ ಎಂದು ಪ್ರತಾಪಸಿಂಹ ಅವರೇ ಹೇಳಿಕೊಂಡಿರುವುದು ವಿಡಿಯೊದಲ್ಲಿದೆ.

ಹುಣಸೂರು ಗಲಾಟೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಇದು ಹರಿದಾಡುತ್ತಿದೆ. ಇದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT