7

ಕುಸಿದ ಬದನೆ ಬೆಲೆ; ಮಲ್ಲಿಗೆ ದುಬಾರಿ

Published:
Updated:
ಕುಸಿದ ಬದನೆ ಬೆಲೆ; ಮಲ್ಲಿಗೆ ದುಬಾರಿ

ಮೈಸೂರು: ಬದನೆಕಾಯಿ ಬೆಲೆಯಲ್ಲಿ ಕುಸಿತವಾಗಿದ್ದು, ಬೆಳೆಗಾರರಿಗೆ ನಷ್ಟವಾಗತೊಡಗಿದೆ. ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 6ಕ್ಕೆ ಉದ್ದ ನೆಯ ಬದನೆ ದರ ಇಳಿದಿದೆ. ರೈತರು ಈ ಬೆಲೆ ಕಂಡು ನಿರಾಸೆ ಅನುಭವಿಸಿದರು.

ಉತ್ತಮ ಮಳೆಯಾಗಿದ್ದರಿಂದ ಬದನೆ ಇಳುವರಿ ಹೆಚ್ಚಾಗಿ ಅಧಿಕ ಪ್ರಮಾ ಣದಲ್ಲಿ ಮಾರುಕಟ್ಟೆ ಬರಲಾರಂಭಿಸಿದೆ. ಇದಕ್ಕೆ ಪೂರಕವಾಗಿ ಬೇಡಿಕೆಯೂ ಹೆಚ್ಚಾಗುತ್ತಿಲ್ಲ. ಇದರಿಂದ ಬೆಲೆ ಕುಸಿತವಾಗಿದೆ.

ಕಳೆದ ತಿಂಗಳು ದಿನವೊಂದಕ್ಕೆ ಸುಮಾರು 89 ಕ್ವಿಂಟಲ್‌ನಷ್ಟು ಉದ್ದನೆಯ ಬದನೆ ಮಾರುಕಟ್ಟೆಗೆ ಬರುತ್ತಿತ್ತು. ಇದರ ಪ್ರಮಾಣ ಇದೀಗ 122 ಕ್ವಿಂಟಲ್‌ಗೆ ಹೆಚ್ಚಿದೆ. ದುಂಡನೆಯ ಬದನೆಯೂ 42 ಕ್ವಿಂಟಲ್‌ನಿಂದ 86 ಕ್ವಿಂಟಲ್‌ಗೆ ಹೆಚ್ಚಿದೆ. ಉದ್ದನೆಯ ಬದನೆಯ ಗರಿಷ್ಠ ಬೆಲೆ ₹ 8 ಇದ್ದರೆ, ದುಂಡನೆಯ ಬದನೆಯ ಗರಿಷ್ಠ ಬೆಲೆ ₹ 7 ಇದೆ. ಇವುಗಳ ಕನಿಷ್ಠ ಬೆಲೆ ₹ 6ಕ್ಕೆ ಕುಸಿದಿದೆ.

ಟೊಮೆಟೊ ಮತ್ತು ಬೀನ್ಸ್ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಕಳೆದ ವಾರ ಸಗಟು ಬೆಲೆ ಕೆ.ಜಿಗೆ ₹ 17 ಇದ್ದದ್ದು, ಈ ಬಾರಿ ₹ 19ಕ್ಕೆ ಅಲ್ಪ ಏರಿಕೆ ಕಂಡಿವೆ. ಈ ವಾರ ಕೆ.ಜಿಗೆ ₹ 30ರಷ್ಟು ನುಗ್ಗೆಕಾಯಿ ದರದಲ್ಲಿ ಹೆಚ್ಚಳ ಕಂಡಿದೆ. ಕಳೆದ ವಾರ ಸಗಟು ದರ ಕೆ.ಜಿಗೆ ₹ 50 ಇದ್ದುದು ಈಗ ₹ 80 ಆಗಿದೆ.

ದಪ್ಪಮೆಣಸಿನಕಾಯಿ ದರ ₹ 25ರಿಂದ ₹ 26ಕ್ಕೆ, ಕ್ಯಾರೆಟ್ ₹ 38ರಿಂದ ₹ 40ಕ್ಕೆ ಹೆಚ್ಚಳ ಕಂಡಿದೆ. ಬೀಟ್‌ರೂಟ್ ₹ 18ರಿಂದ ₹ 25ಕ್ಕೆ ಹೆಚ್ಚಿದೆ. ಹಸಿಮೆಣಸಿನಕಾಯಿ ದರವು ₹ 22ರಿಂದ ₹ 20ಕ್ಕೆ, ಎಲೆಕೋಸು ₹ 24ರಿಂದ ₹ 19ಕ್ಕೆ ಇಳಿಕೆಯಾಗಿವೆ.

ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಒಂದು ಮೊಟ್ಟೆಗೆ ಕಳೆದ ವಾರ ₹ 4.75ರಲ್ಲಿ ಮಾರಾಟವಾಗುತ್ತಿತ್ತು. ಈಗ ಇದರ ದರ ₹ 4.35ಕ್ಕೆ ಇಳಿಕೆ ಕಂಡಿದೆ.

ಕರ್ನಾಟಕ ರಾಜ್ಯ ಪೌಲ್ಟ್ರಿ ಫಾರ್ಮರ್ಸ್ ಅಂಡ್ ಬ್ರೀಡರ್ಸ್ ಅಸೋಸಿಯೇಷನ್ ದರದಲ್ಲಿ ಏರಿಳಿತವಾಗಿದೆ. ಬ್ರಾಯ್ಲರ್ ಪೇರೆಂಟ್ ಕೋಳಿ ದರ ₹ 105ರಲ್ಲಿ ಇದ್ದುದು ₹ 95ಕ್ಕೆ ಕಡಿಮೆಯಾಗಿದ್ದರೆ, ಕಮರ್ಷಿಯಲ್ ಬ್ರಾಯ್ಲರ್ ದರ ಕೆ.ಜಿಗೆ ₹ 74 ಇದ್ದುದು ₹ 77ಕ್ಕೆ ಹೆಚ್ಚಾಗಿದೆ. ಏಲಕ್ಕಿ ಬಾಳೆಹಣ್ಣಿನ ದರ ಕಳೆದ ವಾರದ ದರವಾದ ಕೆ.ಜಿಗೆ ₹ 50ರಲ್ಲೇ ಹಾಪ್‌ಕಾಮ್ಸ್‌ನಲ್ಲಿ ಮುಂದುವರಿದಿದೆ. ಆದರೆ, ಇನ್ನಿತರ ಕಡೆ ಇದರ ಬೆಲೆ ₹ 60 ದಾಟಿದೆ.

ಹೂಗಳ ಕೊರತೆ; ದರ ಹೆಚ್ಚಳ

ವಿವಿಧ ಬಗೆಯ ಹೂಗಳ ಇಳುವರಿ ಕಡಿಮೆಯಾಗತೊಡಗಿದೆ. ಇದರಿಂದ ಮಾರುಕಟ್ಟೆಗೆ ಇವುಗಳ ಆವಕ ಕಡಿಮೆಯಾಗಿ ಬೆಲೆಗಳು ಹೆಚ್ಚಿವೆ. ತಮಿಳುನಾಡಿನಿಂದ ಬರುತ್ತಿದ್ದ ಮಲ್ಲಿಗೆಯ ಪ್ರಮಾಣದಲ್ಲಿ ತೀವ್ರ ಕುಸಿತವಾಗಿದೆ. ಇದರಿಂದ ಕೆ.ಜಿಗೆ ಇದರ ದರ ₹ 460ಕ್ಕೆ ಹೆಚ್ಚಿದೆ. ಮರಳೆ ₹ 320, ಸೇವಂತಿಗೆ ₹ 500, ಗುಲಾಬಿ ₹ 160ರಲ್ಲಿ ಮಾರಾಟಗೊಳ್ಳುತ್ತಿವೆ. ಸದ್ಯ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವ ಕಾಕಡ ₹ 240ಕ್ಕೆ ಸಿಗುತ್ತಿದೆ.

ಈ ಕುರಿತು ‘ಪ್ರಜಾವಾಣಿ’‍ಗೆ ಪ್ರತಿಕ್ರಿಯಿಸಿದ ದೇವರಾಜ ಮಾರುಕಟ್ಟೆಯ ಹೂವಿನ ವ್ಯಾಪಾರಿ ನರೇಂದ್ರಕುಮಾರ್, ‘ಸಾಮಾನ್ಯವಾಗಿ ನವೆಂಬರ್‌ನಿಂದ ಫೆಬ್ರುವರಿವರೆಗೆ ಕಾಕಡ ಬಿಟ್ಟು ಉಳಿದ ಹೂಗಳ ಇಳುವರಿ ಕಡಿಮೆಯಾಗುತ್ತದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೂಗಳ ಆವಕ ಸ್ವಲ್ಪ ಹೆಚ್ಚೇ ಇದೆ’ ಎಂದು ತಿಳಿಸಿದರು.

ತರಕಾರಿ  ಹಿಂದಿನ ವಾರ ಈ ವಾರ (₹ನಲ್ಲಿ)

ಟೊಮೆಟೊ               16-17                         17-19

ಕ್ಯಾರೆಟ್                  28–38                         35-40

ಬೀನ್ಸ                   16–17                         18-19

ಬೀಟ್‌ರೂಟ್‌             15–18                         18-25

ಬದನೆ                    09–10                          06-07

ಎಲೆಕೋಸು             22–24                          17-19

ದಪ್ಪಮೆಣಸಿನಕಾಯಿ    22–25                          25-26

ನುಗ್ಗೆಕಾಯಿ               40–50                          60-80

ಹಸಿಮೆಣಸಿನಕಾಯಿ     20–22                         18-20

ಈರುಳ್ಳಿ                  18–40                          20-40

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry