7

ಬಿಜೆಪಿಯಿಂದ ಇವಿಎಂ ದುರ್ಬಳಕೆ ಆರೋಪ

Published:
Updated:
ಬಿಜೆಪಿಯಿಂದ ಇವಿಎಂ ದುರ್ಬಳಕೆ ಆರೋಪ

ರಾಮನಗರ: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್‌ ಮತ ಯಂತ್ರಗಳ ಬದಲಿಗೆ ಹಳೆಯ ಪದ್ಧತಿಯಂತೆ ಮತಪತ್ರಗಳನ್ನೇ ಬಳಸಬೇಕು ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಚುನಾವಣಾ ಆಯೋಗವನ್ನು ಒತ್ತಾಯಿಸಿದರು.

ದೇಶದ ಸಾರ್ವತ್ರಿಕ ಚುನಾವಣೆಗಳಲ್ಲಿ ಕೇಂದ್ರದಲ್ಲಿನ ಸರ್ಕಾರಗಳು ಇವಿಎಂಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಲೇ ಬಂದಿವೆ. 2009, 2014ರ ಲೋಕಸಭೆ ಚುನಾವಣೆಗಳಲ್ಲಿ ಈ ಯಂತ್ರಗಳನ್ನು ಮಾರ್ಪಡಿಸಿ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲಾಗಿದೆ. ಈಚೆಗೆ ನಡೆದ ಪಂಚರಾಜ್ಯ ಚುಣಾವಣೆಗಳ ಪೈಕಿ ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಇದನ್ನು ಕೇಂದ್ರ ಸರ್ಕಾರವು ದುರ್ಬಳಕೆ ಮಾಡಿಕೊಂಡ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿದೆ. ಈ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕರ್ನಾಟಕದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಗೆಲ್ಲಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಕುತಂತ್ರ ರೂಪಿಸುತ್ತಿದ್ದಾರೆ. ಹೀಗಾಗಿ ಇಲ್ಲಿ ಮತಪತ್ರಗಳನ್ನೇ ಮತ್ತೆ ಬಳಕೆಗೆ ತರಬೇಕು. ಈ ಕುರಿತು ಈಗಾಗಲೇ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದ್ದು, ಹೋರಾಟ ಮುಂದುವರಿಸಲಾಗುವುದು ಎಂದರು.

ಮುಂಬಡ್ತಿ ನೀಡಿ: ಪರಿಶಿಷ್ಟ ಜಾತಿ ಹಾಗೂ ಪಂಗಡದ ಸರ್ಕಾರಿ ನೌಕರರಿಗೆ ಮುಂಬಡ್ತಿ ಮೀಸಲಾತಿ ಸಂಬಂಧ ರಾಜ್ಯ ಸರ್ಕಾರವು ಮತ್ತೊಮ್ಮೆ ಸುಗ್ರಿವಾಜ್ಞೆ ಹೊರಡಿಸಿ ರಾಜ್ಯಪಾಲರ ಅಂಕಿತ ಪಡೆಯಬೇಕು ಎಂದು ಅವರು ಒತ್ತಾಯಿಸಿದರು.

ಸುಪ್ರೀಂ ಕೋರ್ಟ್‌ ಮುಂಬಡ್ತಿ ಮೀಸಲಾತಿಗೆ ತಡೆ ಒಡ್ಡಿದ್ದು, ನೌಕರರಿಗೆ ಹಿನ್ನಡೆಯಾಗಿದೆ. ಹೀಗಾಗಿ ಸರ್ಕಾರವು ಮತ್ತೊಮ್ಮೆ ದಲಿತ, ಹಿಂದುಳಿದ ನೌಕರರ ಹಿತಾಸಕ್ತಿ ಕಾಯಲು ಮನಸ್ಸು ಮಾಡಬೇಕು ಎಂದರು.

ರಾಜ್ಯದಲ್ಲಿ ಸುಮಾರು 70 ಲಕ್ಷ ಮಂದಿ ಅಕ್ರಮ–ಸಕ್ರಮ ಹಾಗೂ ಬಗರ್‌ಹುಕುಂ ಜಮೀನಿಗಾಗಿ ಅರ್ಜಿ ಸಲ್ಲಿಸಿ ಕುಳಿತಿದ್ದಾರೆ. ಫಾರ್ಮ್‌ ನಂ 50–53 ಹಾಗೂ 94 ಸಿ.ಸಿ. ಅಡಿ ಅರ್ಜಿಗಳ ವಿಲೇವಾರಿಯನ್ನು ಸರ್ಕಾರವು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಸಾವಿರಾರು ಹಳ್ಳಿಗಳಲ್ಲಿ ದಲಿತರು ಸ್ಮಶಾನದ ಸಮಸ್ಯೆ ಎದುರಿಸುತ್ತಿದ್ದು, ಬದಲಿ ವ್ಯವಸ್ಥೆ ಮಾಡಬೇಕು. ಆದಿವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆಯ ಅಡಿ ಭೂಮಿ ಮಂಜೂರು ಮಾಡಬೇಕು. ರಾಜ್ಯದಲ್ಲಿ ಸುಮಾರು 1,500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಎಲ್ಲ ಕುಟುಂಬಗಳಿಗೂ ಪರಿಹಾರ ದೊರಕಿಸಿಕೊಡಬೇಕು. ಎಂದು ಆಗ್ರಹಿಸಿದರು.

ಚುನಾವಣೆಗೆ ಸಿದ್ಧತೆ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಎಲ್ಲ 224 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ ಎಂದರು. ಬಿಎಸ್‌ಪಿ ರಾಜ್ಯ ಕಾರ್ಯದರ್ಶಿಗಳಾದ ಬಿ. ಅನ್ನದಾನಪ್ಪ, ಮಲ್ಲಿಕಾರ್ಜುನ, ಜಿಲ್ಲಾ ಘಟಕದ ಅಧ್ಯಕ್ಷ ಎಂ. ನಾಗೇಶ್‌, ಸಂಯೋಜಕ ನೀಲಿ ರಮೇಶ್‌, ಕಾರ್ಯದರ್ಶಿಗಳಾದ ಟಿ. ಕೃಷ್ಣಮೂರ್ತಿ, ಟಿ. ಗೋಪಿ. ಕನಕಪುರ ತಾಲ್ಲೂಕು ಘಟಕದ ಅಧ್ಯಕ್ಷ ಕೃಷ್ಣಪ್ಪ ನೇರಳೆದೊಡ್ಡಿ, ಅಚ್ಚನೂರು ಶಿವರಾಜು ಇದ್ದರು.

ಡಿಕೆಶಿ ಕೈಬಿಡಲು ಒತ್ತಾಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಮುನಿಯಪ್ಪ ಒತ್ತಾಯಿಸಿದರು. ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಹೋರಾಟಗಾರರನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಲಾಗಿದೆ. ಇಡೀ ಜಿಲ್ಲಾಡಳಿತವೇ ಅವರ ಕಪಿಮುಷ್ಟಿಯಲ್ಲಿ ಸಿಲುಕಿದೆ. ಈಚೆಗೆ ನಡೆದ ಐ.ಟಿ. ದಾಳಿಯಲ್ಲಿ ಅವರ ಬಳಿ ಅಪಾರ ಅಕ್ರಮ ಸಂಪತ್ತು ಪತ್ತೆಯಾಗಿದೆ. ಹೀಗಿದ್ದೂ ಮುಖ್ಯಮಂತ್ರಿಗಳು ಅವರನ್ನು ರಕ್ಷಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

* * 

ಪ್ರಧಾನಿ ಮೋದಿ ಸರ್ವಾಧಿಕಾರಿಯಾಗಿ ಹೊರಹೊಮ್ಮುತ್ತಿರುವುದು ಆತಂಕಕಾರಿ ಬೆಳವಣಿಗೆ. ಇಡೀ ದೇಶವನ್ನು ಮೋದಿ, ಅಮಿತ್‌ ಷಾ, ಜೇಟ್ಲಿ ಹಾಗೂ ಅಂಬಾನಿಗಳು ನಿಯಂತ್ರಿಸುತ್ತಿದ್ದಾರೆ

ಮಾರಸಂದ್ರ ಮುನಿಯಪ್ಪ

ರಾಜ್ಯ ಉಸ್ತುವಾರಿ, ಬಿಎಸ್‌ಪಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry