7

ನಿವೇಶನ ರಹಿತರಿಗೆ 6,144 ಮನೆ ನಿರ್ಮಾಣ

Published:
Updated:
ನಿವೇಶನ ರಹಿತರಿಗೆ 6,144 ಮನೆ ನಿರ್ಮಾಣ

ಶಿವಮೊಗ್ಗ: ನಗರದ ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪ ಗ್ರಾಮಗಳಲ್ಲಿ ನಿವೇಶನ ರಹಿತರಿಗೆ ಜಿ+2 ಮಾದರಿಯ 6,144 ಮನೆಗಳನ್ನು ನಿರ್ಮಿಸಲು ಮಹಾನಗರ ಪಾಲಿಕೆಯ ಆಶ್ರಯ ಸಮಿತಿ ತೀರ್ಮಾನಿಸಿದೆ.

ಗೋವಿಂದಾಪುರ ಗ್ರಾಮದಲ್ಲಿ 45 ಎಕರೆ 4 ಗುಂಟೆ ಜಮೀನು ಹಾಗೂ ಗೋಪಿಶೆಟ್ಟಿ ಕೊಪ್ಪ ಗ್ರಾಮದಲ್ಲಿ 19 ಎಕರೆ 23 ಗುಂಟೆ ಜಮೀನು, ಒಟ್ಟು 64 ಎಕರೆ 27 ಗುಂಟೆ ಜಮೀನಿನಲ್ಲಿ ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮದ ಆದೇಶದಂತೆ ಮನೆಗಳನ್ನು ನಿರ್ಮಿಸಲು ಸಿದ್ಧತೆ ನಡೆಸಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?: ರಾಜ್ಯದಲ್ಲಿ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸ್ವೀಕರಿಸಲಾಗುತ್ತಿದೆ. Shivamogga citycorp.org ಜಾಲತಾಣದ Ashraya yojane Application ಮೆನುವಿನಲ್ಲಿ ಅರ್ಜಿಗಳನ್ನು ಸಲ್ಲಿಸ ಬಹುದು. ಡಿ.5ರಿಂದ 28ರವರೆಗೆ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಮೂಲಕ ನಿಗದಿತ ಶುಲ್ಕ ಪಾವತಿಸಲು ಡಿ.30 ಕೊನೆಯ ದಿನವಾಗಿದೆ.

ಅರ್ಜಿ ಶುಲ್ಕ: ಸಾಮಾನ್ಯ ಅರ್ಜಿದಾರರಿಗೆ ಅರ್ಜಿ ಶುಲ್ಕ ₹ 200 ಹಾಗೂ ಇಎಂಡಿ ₹ 8 ಸಾವಿರ ಒಟ್ಟು ₹ 8,200 ಆಗಿದ್ದು, ಪರಿಶಿಷ್ಟ ಅರ್ಜಿ ದಾರರಿಗೆ ಅರ್ಜಿ ಶುಲ್ಕ ₹ 100 ಹಾಗೂ ಇಎಂಡಿ ₹5000, ಒಟ್ಟು ₹ 5,100 ಆಗಿದೆ. ಅರ್ಜಿ ಸಲ್ಲಿಸಿದ ನಂತರ ಕಂಪ್ಯೂಟರ್ ಜನರೇಟೆಡ್ ಚಲನ್‌ ನೊಂದಿಗೆ ನಿಗದಿತ ಶುಲ್ಕವನ್ನು ನಗರದ ಕೆನರಾ ಬ್ಯಾಂಕ್‌ನ ಎಲ್ಲಾ ಶಾಖೆಗಳಲ್ಲಿ, ವಿಜಯಾ ಬ್ಯಾಂಕ್‌ನ ಎಸ್ಆರ್ ಶಾಖೆ, ಇಂಡಿಯನ್ ಬ್ಯಾಂಕ್‌ನ ಮಹಾನಗರ ಪಾಲಿಕೆ ಶಾಖೆ ಹಾಗೂ ಶಿವಮೊಗ್ಗ ಒನ್ ಕೇಂದ್ರಗಳಲ್ಲಿ ನಗದು ಅಥವಾ ಡೆಬಿಟ್ ಕಾರ್ಡ್‌ ಮೂಲಕ ಪಾವತಿಸಿ, ಸ್ವೀಕೃತಿ/ರಶೀದಿ ಪಡೆಯಬೇಕು. ಅರ್ಜಿ ಶುಲ್ಕವನ್ನು ಅರ್ಜಿ ದಾರರಿಗೆ ಹಿಂದಿರುಗಿಸಲಾಗುವುದಿಲ್ಲ. ಇಎಂಡಿ ಮೊತ್ತವನ್ನು ಅರ್ಜಿದಾರರು ಆಯ್ಕೆಯಾಗದಿದ್ದಲ್ಲಿ ಬಡ್ಡಿರಹಿತವಾಗಿ ಹಿಂದಿರುಗಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಅರ್ಹತೆ: 18 ವರ್ಷ ಮೇಲ್ಪಟ್ಟ ಮಹಿಳಾ ಅಭ್ಯರ್ಥಿಗಳಾಗಿರಬೇಕು. ಪುರುಷ ಅಭ್ಯರ್ಥಿಯಾಗಿದ್ದಲ್ಲಿ ಮಾಜಿ ಸೈನಿಕ, ಅಂಗವಿಕಲ, ಸ್ವಾತಂತ್ರ್ಯ ಯೋಧ, ವಿಧುರ ಹಾಗೂ ಹಿರಿಯ ನಾಗರಿಕ ರಾಗಿರಬೇಕು. ನಗರ ಪ್ರದೇಶದಲ್ಲಿ ವಾಸವಾಗಿರಬೇಕು. ಬಿಪಿಎಲ್ ಅಥವಾ ಅಂತ್ಯೋದಯ ಪಡಿತರ ಚೀಟಿ ಹೊಂದಿರಬೇಕು. ಅರ್ಜಿ ದಾರರು ಮತ್ತು ಅವರ ಕುಟುಂಬದವರು ಸ್ವಂತ ನಿವೇಶನ ಅಥವಾ ಮನೆ ಹೊಂದಿರಬಾರದು ಹಾಗೂ ಬೇರೆ ಯಾವುದೇ ಯೋಜನೆ ಯಡಿಯಲ್ಲಿ ನಿವೇಶನ, ವಸತಿ ಸೌಲಭ್ಯ ಪಡೆದಿರಬಾರದು. ಹಿಂದೆ ಯಾವುದಾದರೂ ಯೋಜನೆಯಡಿ ಯಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ವಿವರ ನೀಡಬೇಕು.

ಬೇಕಾಗುವ ದಾಖಲೆಗಳು: ಒಂದು ಪಾಸ್‌ಪೋರ್ಟ್ ಭಾವಚಿತ್ರ, ಆಧಾರ್ ಕಾರ್ಡ್‌, ಬಿಪಿಎಲ್ ಪಡಿತರ ಚೀಟಿ, ಚಾಲ್ತಿಯಲ್ಲಿರುವ ಬ್ಯಾಂಕಿನ ಪಾಸ್‌ಪುಸ್ತಕ, ವಾರ್ಷಿಕ ಆದಾಯ ಪ್ರಮಾಣ ಪತ್ರ(ಲಭ್ಯವಿದ್ದಲ್ಲಿ) ದಾಖಲೆಗಳನ್ನು ನೀಡಬೇಕು.

ಮನೆಯ ಘಟಕ ವೆಚ್ಚ: ಜಿ+2 ಮಾದರಿಯ ಒಂದು ಮನೆಯ ವೆಚ್ಚ ₹5 ಲಕ್ಷ ಆಗಿದ್ದು, ಸಾಮಾನ್ಯ ವರ್ಗದವರಾಗಿದ್ದಲ್ಲಿ ರಾಜ್ಯ ಸರ್ಕಾರ ₹ 1.20 ಲಕ್ಷ, ಕೇಂದ್ರ ಸರ್ಕಾರ ₹ 1.50 ಲಕ್ಷ ಹಾಗೂ ಬ್ಯಾಂಕ್ ಸಾಲ ₹ 1.50 ಲಕ್ಷ ಆಗಿದ್ದು, ಉಳಿದ ₹ 80 ಸಾವಿರವನ್ನು ಫಲಾನುಭವಿಗಳು ಭರಿಸಬೇಕಾಗುತ್ತದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಫಲಾನುಭವಿಗಳಾಗಿದ್ದಲ್ಲಿ ರಾಜ್ಯ ಸರ್ಕಾರ ₹ 1.80 ಲಕ್ಷ, ಕೇಂದ್ರ ಸರ್ಕಾರ ₹ 1.50 ಲಕ್ಷ ಹಾಗೂ ಬ್ಯಾಂಕ್ ಸಾಲ ₹ 1.50 ಲಕ್ಷ ಆಗಿದ್ದು, ಉಳಿದ ₹ 50 ಸಾವಿರವನ್ನು ಫಲಾನುಭವಿಗಳು ಭರಿಸಬೇಕಾಗುತ್ತದೆ.

ಪ್ರತಿ ಮನೆಯ ವಿಸ್ತೀರ್ಣ 365 ಚದರ ಅಡಿಗಳಿದ್ದು, ಪ್ರತಿ ಮನೆಗೆ ವಿದ್ಯುತ್ ಹಾಗೂ ನೀರು ಸರಬರಾಜು ಸೌಲಭ್ಯವಿರುತ್ತದೆ. ಮನೆಗಳನ್ನು ಕರ್ನಾಟಕ ಹೌಸಿಂಗ್ ಬೋರ್ಡ್‌ ನಿರ್ಮಿಸಿಕೊಡಲಿದೆ.

ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ

ಜಿ+2 ಮಾದರಿಯ ಮನೆಗಳಿಗೆ ಅರ್ಜಿಗಳನ್ನು ಶೀಘ್ರವೇ ಪರಿಶೀಲಿಸಿ ಫಲಾನುಭವಿಗಳ ಆಯ್ಕೆ ಮಾಡಲಾಗುವುದು ಎಂದು ಆಶ್ರಯ ಸಮಿತಿ ಅಧ್ಯಕ್ಷರೂ ಆದ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಗತ್ಯವಿದ್ದಲ್ಲಿ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗುವುದು. ಹೆಚ್ಚು ಅರ್ಜಿಗಳು ಸಲ್ಲಿಕೆ ಯಾದಲ್ಲಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದರು. ಹೆಚ್ಚಿನ ಮಾಹಿತಿಗೆ ದೂ: 08182-220799, 08182-268544/268545 ಸಂಪರ್ಕಿಸಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಆಯುಕ್ತ ಮುಲೈ ಮಹಿಲನ್, ಮೇಯರ್ ಏಳುಮಲೈ, ಆಶ್ರಯ ಸಮಿತಿ ಸದಸ್ಯರಾದ ಶಿವಾನಂದಪ್ಪ , ಪ್ರಕಾಶ್, ಆರೀಫ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry