ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ಲಸಿಕೆಗೂ ಬೇಕು ನೋಟು

Last Updated 5 ಡಿಸೆಂಬರ್ 2017, 6:08 IST
ಅಕ್ಷರ ಗಾತ್ರ

ತುಮಕೂರು: 100 ಹಣ ‍ಪಡೆದು ಮಕ್ಕಳಿಗೆ ಲಸಿಕೆ ಹಾಕುತ್ತಿರುವುದು ಕಂಡುಬಂದಿದೆ. ಹಣ ಪಡೆಯುತ್ತಿರುವ ಚಿತ್ರೀಕರಣದ ವಿಡಿಯೊ ಸಹ ’ಪ್ರಜಾವಾಣಿ’ಗೆ ಲಭ್ಯವಾಗಿದೆ.ಜಿಲ್ಲಾಸ್ಪತ್ರೆಯ ಉಚಿತ ಲಸಿಕಾ ಕೇಂದ್ರದ ಸಿಬ್ಬಂದಿ ಪೋಷಕರಿಂದ ₹ 50, 

ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಈ ಲಸಿಕಾ ಕೇಂದ್ರದಲ್ಲಿ ಮಕ್ಕಳಿಗೆ ಪ್ರತಿ ದಿನ ಉಚಿತ ಲಸಿಕೆ ಹಾಕಬೇಕಾಗಿದೆ. ಆದರೆ ಇಲ್ಲಿನ ಸಿಬ್ಬಂದಿ ಮಾತ್ರ ಹಣ ಪಡೆದು ಲಸಿಕೆ ಹಾಕುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಹಲವು ಪೋಷಕರು ‘ಪ್ರಜಾವಾಣಿ’ ಕಚೇರಿಗೆ ದೂರವಾಣಿ ಕರೆ ಮಾಡಿ ಹಣ ಪಡೆಯುತ್ತಿರುವ ಬಗ್ಗೆ ದೂರಿದ್ದರು. ಈ ಕಾರಣ ಲಸಿಕಾ ಕೇಂದ್ರಕ್ಕೆ ‍’ಪ್ರಜಾವಾಣಿ’ ಪ್ರತಿನಿಧಿ ಭೇಟಿ ನೀಡಿದಾಗ ರಾಜಾರೋಷವಾಗಿ ಹಣ ಪಡೆಯುವುದು ಕಂಡುಬಂತು.

ಪೋಲಿಯೊ, ಹೆಪಟೈಟಿಸ್‌–ಬಿ, ಬಾಲಕ್ಷಯ, ಗಂಟಲು ಮಾರಿ, ನಾಯಿ ಕೆಮ್ಮು, ಧನುರ್ವಾಯು, ನ್ಯುಮೋನಿಯಾ, ದಡಾರ, ರುಬೆಲ್ಲಾ, ಮೆದುಳು ಜ್ವರಕ್ಕೆ ಇಲ್ಲಿ ಲಸಿಕೆ ಹಾಕಬೇಕು.

‘ಮಗುವಿಗೆ ಲಸಿಕೆ ಹಾಕಿಸಲೆಂದು ಕೊರಟಗೆರೆಯಿಂದ ಇಲ್ಲಿಗೆ ಬಂದಿದ್ದೇನೆ. ಉಚಿತವಾಗಿ ಲಸಿಕೆ ನೀಡುತ್ತಾರೆ ಎಂದು ಹೇಳಿದ್ದರು. ಆದರೆ ಸಿಬ್ಬಂದಿ ₹ 50 ಕೇಳಿದರು. ಹಣ ಕೊಟ್ಟಿದ್ದಕ್ಕೆ ರಸೀದಿ ನೀಡಿಲ್ಲ’ ಎಂದು ಕೊರಟಗೆರೆಯ ನಾಗೇಂದ್ರ ತಿಳಿಸಿದರು.

‘ಮಕ್ಕಳ ಆರೋಗ್ಯದ ಬಗ್ಗೆಯೇ ಹೆಚ್ಚು ಕಾಳಜಿ ವಹಿಸುವುದರಿಂದ ಸುಮ್ಮನೆ ಅವರು ಕೇಳಿದಷ್ಟು ಕೊಟ್ಟು ಬರಬೇಕಾಗಿದೆ. ನಮಗೆ ಉಚಿತ ಎಂದು ಗೊತ್ತಿರಲಿಲ್ಲ. ₹ 100 ಕೊಟ್ಟೆವು. ಕನಿಷ್ಠ ಪಕ್ಷ ಇದನ್ನು ಎಲ್ಲರಿಗೂ ಕಾಣುವಂತೆ ಬೋರ್ಡ್ ಬರೆದು ಹಾಕಿದ್ದರೆ ನಮಗೆ ಗೊತ್ತಾಗುತ್ತಿಲ್ಲ. ಸಿಬ್ಬಂದಿ, ಜನರಿಂದ ಹಣ ಪಡೆಯುವುದು ಎಷ್ಟರ ಮಟ್ಟಿಗೆ ಸರಿ’ ಎಂದು ಹೆಸರು ಹೇಳಲಿಚ್ಛಿಸದ ತಾಯಿಯೊಬ್ಬರು ಪ್ರಶ್ನಿಸಿದರು.

‘ಮಕ್ಕಳ ಆರೋಗ್ಯ ಬಹಳ ಸೂಕ್ಷ್ಮ ವಿಚಾರವಾಗಿರುವುದರಿಂದ ಸಿಬ್ಬಂದಿಗೆ ಹಣ ಕೊಡುವುದು ತಪ್ಪು ಎಂದು ತಿಳಿದಿದ್ದರೂ ಹೆದರಿಕೊಂಡು ಅವರನ್ನು ಕೇಳಲು ಹೋಗುವುದಿಲ್ಲ. ಈಗ ಪ್ರಶ್ನೆ ಕೇಳಿದರೆ ಇನ್ನೊಮ್ಮೆ ಬಂದಾಗ ಮಗುವನ್ನು ಸರಿಯಾಗಿ ನೋಡಿಕೊಳ್ಳದೇ ಹೋಗಬಹುದು ಎನ್ನುವ ಭಯ ಪೋಷಕರಲ್ಲಿರುತ್ತದೆ’ ಎನ್ನುತ್ತಾರೆ ತುಮಕೂರಿನ ಗಂಗಮ್ಮ.

ಸಿಬ್ಬಂದಿ ಆದಾಯದ ಲೆಕ್ಕಾಚಾರ: ’ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಇನ್ನೆಲ್ಲ ದಿನವೂ ಲಸಿಕಾ ಕೇಂದ್ರ ಕಾರ್ಯನಿರ್ವಹಿಸುತ್ತದೆ. ಅಂದರೆ ತಿಂಗಳಿಗೆ ಸುಮಾರು 22 ದಿನವಾದರೂ ಕೇಂದ್ರ ತೆರೆದಿರುತ್ತದೆ. ಪ್ರತಿನಿತ್ಯ ಕನಿಷ್ಠ 50 ಮಕ್ಕಳಿಗೆ ಲಸಿಕೆ ಹಾಕಲಾಗುತ್ತದೆ.

ಪ್ರತಿಯೊಬ್ಬರಿಂದ ಕನಿಷ್ಠ ₹ 50 ಪಡೆದರೂ ದಿನಕ್ಕೆ ₹2 500, ತಿಂಗಳಿಗೆ ₹ 55,000 ಸಂಗ್ರಹವಾಗಲಿದೆ’ ಎಂದು ಆಸ್ಪತ್ರೆಯ ಬೇರೆ ವಿಭಾಗದ ಸಿಬ್ಬಂದಿಯೊಬ್ಬರು ಲೆಕ್ಕಾಚಾರ ಹಾಕಿದರು.

ಸಿ.ಸಿ ಟಿವಿ ಕ್ಯಾಮೆರಾ ಹಾಕುತ್ತೇವೆ...
ಲಸಿಕಾ ಕೇಂದ್ರದಲ್ಲಿ ಪೋಷಕರಿಂದ ಸಿಬ್ಬಂದಿ ಹಣ ಪಡೆಯುವ ಬಗ್ಗೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವೀರಭದ್ರಯ್ಯ ಅವರನ್ನು ಪ್ರಶ್ನಿಸಿದಾಗ ಸ್ವಲ್ಪ ತಬ್ಬಿಬ್ಬಾದರು. ‘ಜಿಲ್ಲಾಸ್ಪತ್ರೆಯಲ್ಲಿ ಬಹುತೇಕ ಎಲ್ಲಾ ಕಡೆ ಸಿ.ಸಿ ಟಿವಿ ಕ್ಯಾಮೆರಾ ಕಣ್ಗಾವಲಿದೆ. ಆದರೆ ಲಸಿಕಾ ಕೇಂದ್ರದಲ್ಲಿ ಮಾತ್ರ ಇದುವರೆಗೆ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಿರಲಿಲ್ಲ. ಹೀಗಾಗಿಯೇ ಅಲ್ಲಿ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ’ ಎಂದು ಅವರು ಹೇಳಿದರು.

‘ಈ ಕೇಂದ್ರದ ಮೇಲ್ವಿಚಾರಣೆಗೆಂದು ಅಧಿಕಾರಿಯೊಬ್ಬರನ್ನು ನೇಮಕ ಮಾಡಲಾಗಿದೆ. ಅವರೂ ಸಹ ಈ ಬಗ್ಗೆ ನನಗೆ ಮಾಹಿತಿ ನೀಡಿಲ್ಲ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದು ತಿಳಿಸಿದರು.

’ಉಚಿತವಾಗಿ ಲಸಿಕೆ ಹಾಕಲಾಗುತ್ತದೆ. ಯಾರೂ ಹಣ ನೀಡಬಾರದು ಎಂದು ಹಿಂದೆ ದೊಡ್ಡದಾಗಿ ಬ್ಯಾನರ್‌, ಫಲಕ ಹಾಕಲಾಗಿತ್ತು. ಅದನ್ನು ಕಿತ್ತು ಹಾಕಲಾಗಿದೆ. ಈಗ ಮತ್ತೊಮ್ಮೆ ಬ್ಯಾನರ್‌, ಫಲಕ ಹಾಕಿಸುತ್ತೇನೆ. ಪೋಷಕರು ಯಾವುದೇ ಕಾರಣಕ್ಕೂ ಹಣ ನೀಡಬಾರದು’ ಎಂದು ಮನವಿ ಮಾಡಿದರು.

ಮಕ್ಕಳ ಹಕ್ಕುಗಳ ಉಲ್ಲಂಘನೆ
‘ಬಡವರು ಮಕ್ಕಳಿಗೆ ಲಸಿಕೆ ಹಾಕಿಸುವುದೇ ಕಷ್ಟ. ಹೀಗಿರುವಾಗ ಹಣ ಪಡೆದು ಲಸಿಕೆ ಹಾಕುವುದು ಅಕ್ಷಮ್ಯ ಅಪರಾಧ. ಇದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ’ ಎಂದು ಮಾನವ ಹಕ್ಕುಗಳ ಕಾರ್ಯಕರ್ತ ರಮೇಶ್‌ ಬಾಬು ದೂರಿದರು.

‘ಲಸಿಕೆ ಕೇಂದ್ರದಲ್ಲಿ ಉಚಿತ ಲಸಿಕೆ ಹಾಕುವಂಥ ವಾತಾವರಣ ನಿರ್ಮಾಣ ಮಾಡುವಂತೆ ಮಾನವ ಹಕ್ಕುಗಳ ಆಯೋಗ, ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡುತ್ತೇನೆ’  ಎಂದು ತಿಳಿಸಿದರು.

ಹಣ ಕೇಳಿದರೆ ಕಾಲ್‌ ಮಾಡಿ

‘ಲಸಿಕೆ ಹಾಕಲು ಹಣ ಕೇಳಿದರೆ ನನ್ನನ್ನು ಸಂಪರ್ಕಿಸಬಹುದು. ಆ ತಕ್ಷಣವೇ ನಾನು ಅಂತಹ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ’ ಎಂದು ವೀರಭದ್ರಯ್ಯ ತಿಳಿಸಿದರು. ’ನನ್ನ ಮೊಬೈಲ್‌– 9449843178 ಕರೆ ಮಾಡಿ ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT