ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯ ನಿರ್ಮಾಣ: ಅಂಬೆಗಾಲಿಟ್ಟ ಜಿಲ್ಲೆ

Last Updated 5 ಡಿಸೆಂಬರ್ 2017, 6:26 IST
ಅಕ್ಷರ ಗಾತ್ರ

ಯಾದಗಿರಿ: ‘ಶೌಚಾಲಯ’ ವಿಷಯದಲ್ಲಿ ಜಿಲ್ಲೆಯು ಐದು ವರ್ಷಗಳ ನಂತರ ಅಂಬೆಗಾಲು ಇಟ್ಟಿದೆ. ಈ ಅಂಬೆಗಾಲಿಗೆ 29ನೇ ಸ್ಥಾನ ಲಭಿಸಿದೆ. ಈ ಹೆಜ್ಜೆಗಳು ವೇಗ ಪಡೆಯಲು ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿ ಸಿಬ್ಬಂದಿ ಹಗಲಿರುಳು ಶ್ರಮಿಸಿಸಿದೆ.

2012ರಲ್ಲಿ ಜಿಲ್ಲೆಯಲ್ಲಿ ಸಮೀಕ್ಷೆ ಕೈಗೊಂಡಿದ್ದ ಸ್ವಚ್ಛ ಭಾರತ ಅಭಿಯಾನ ಸಿಬ್ಬಂದಿ 1.20 ಲಕ್ಷ ಕುಟುಂಬಗಳಲ್ಲಿ ಶೌಚಾಲಯಗಳು ಇಲ್ಲ ಎಂಬುದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ವರದಿ ನೀಡಿದ್ದರು. ಅಚ್ಚರಿ ಅಂದರೆ ಶೇ 90ರಷ್ಟು ಗ್ರಾಮ ಪಂಚಾಯಿತಿ ಸದಸ್ಯರು, ಶೇ16ರಷ್ಟು ತಾಲ್ಲೂಕು ಪಂಚಾಯಿತಿ ಸದಸ್ಯರ ಮನೆಗಳಲ್ಲಿಯೇ ಶೌಚಾಲಯ ಇಲ್ಲ ಎಂಬುದು ಆ ವರದಿಯಲ್ಲಿನ ಪ್ರಧಾನ ಅಂಶವಾಗಿತ್ತು.

1,309 ಗ್ರಾಮ ಪಂಚಾಯಿತಿ ಸದಸ್ಯರಿಗೆ ನೋಟಿಸ್‌: ಜಿಲ್ಲೆಯಲ್ಲಿ ಮೂರು ತಾಲ್ಲೂಕು ಪಂಚಾಯಿತಿಗಳಲ್ಲಿ ಒಟ್ಟು 94 ಮಂದಿ ಸದಸ್ಯರಿದ್ದಾರೆ. ಅವರಲ್ಲಿ 14 ಜನ ಸದಸ್ಯರ ಮನೆಗಳಲ್ಲಿ ಶೌಚಾಲಯ ಇಲ್ಲ. ಯಾದಗಿರಿ ತಾಲ್ಲೂಕಿನ ಒಟ್ಟು 769 ಜನ ಗ್ರಾಮ ಪಂಚಾಯಿತಿ ಸದಸ್ಯರಲ್ಲಿ 483 ಜನರು ಶೌಚಾಲಯ ಹೊಂದಿದ್ದರೆ; 415 ಜನರ ಮನೆಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಶಹಾಪುರ ತಾಲ್ಲೂಕಿನ ಒಟ್ಟು 775 ಜನರಲ್ಲಿ 447 ಮಂದಿ ಸದಸ್ಯರ ಹಾಗೂ ಸುರಪುರ ತಾಲ್ಲೂಕಿನ 811ಸದಸ್ಯರಲ್ಲಿ 447 ಜನರ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಂಡಿಲ್ಲ. ಒಟ್ಟಾರೆ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳ ಒಟ್ಟು 1309 ಸದಸ್ಯರಿಗೆ ಸ್ವಚ್ಛ ಭಾರತ ಅಭಿಯಾನ ನೋಡಲ್ ಅಧಿಕಾರಿಯೂ ಆಗಿರುವ ಜಿಲ್ಲಾ ಪಂಚಾಯಿತಿ ಸಿಇಒ ಅವಿನಾಶ್ ಮೆನನ್ ರಾಜೇಂದ್ರನ್‌ ನೋಟಿಸ್‌ ನೀಡಿದ್ದಾರೆ. ನೋಟಿಸ್‌ ಪಡೆದ ಸದಸ್ಯರು ಮೂರು ತಿಂಗಳಾದರೂ ವಿವರಣೆ ನೀಡಿಲ್ಲ.

ಶೌಚಾಲಯ ಹೊಂದದ ಸದಸ್ಯರಿಗೆ ಸಮಯ ನೀಡಿ ಶೌಚಾಲಯ ನಿರ್ಮಿಸಿಕೊಳ್ಳಲು ತಿಳಿವಳಿಕೆ ನೀಡಬೇಕು. ಇಲ್ಲವೇ ನೋಟಿಸ್‌ ನೀಡಬೇಕು. ನೋಟಿಸ್‌ ಗೆ ವಿವರಣೆ ನೀಡದೇ ಉದ್ಧಟತನ ತೋರುವ ಸದಸ್ಯರ ಸದಸ್ಯತ್ವ ರದ್ದುಗೊಳಿಸಬೇಕು ಎಂಬುದಾಗಿ ಸರ್ಕಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಆದರೆ, ಸರ್ಕಾರದ ನಿರ್ದೇಶನ ಪಾಲನೆ ಆಗಿಲ್ಲ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ. ಕಠಿಣ ಕ್ರಮ ಜರುಗಿಸಿದರೆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಸಮಸ್ಯೆ ಮತ್ತಷ್ಟೂ ಬಿಗಡಾಯಿಸುತ್ತದೆ ಎಂಬುದಾಗಿ ಸ್ವಚ್ಛ ಭಾರತ ಅಭಿಯಾನ ಯೋಜನೆಯ ಅಧಿಕಾರಿಗಳು ಹೇಳುತ್ತಾರೆ.

29ನೇ ಸ್ಥಾನಕ್ಕೆ ಏರಿದ ಜಿಲ್ಲೆ: ಮಾನವ ಅಭಿವೃದ್ಧಿ ಸೂಚ್ಯಂಕ ವರದಿ ಪ್ರಕಾರ ಜಿಲ್ಲೆ ಎಲ್ಲಾ ಕ್ಷೇತ್ರಗಳ್ಲಲೂ ಹಿಂದೆ ಉಳಿದಿದೆ. ಶೌಚಾಲಯ ವಿಷಯದಲ್ಲೂ 30ನೇ ಸ್ಥಾನದಲ್ಲಿಯೇ ಇತ್ತು. ಆದರೆ, ಐದು ವರ್ಷಗಳಲ್ಲಿ ನಿರಂತರ ಅರಿವು ಕಾರ್ಯಾಗಾರ, ಮನೆಮನೆಗೆ ಹೋಗಿ ಜನರ ಮನವೊಲಿಸಿದ ಸಿಬ್ಬಂದಿ, ಬೀದಿ ನಾಟಕಗಳ ಮೂಲಕ ಶೌಚಾಲಯ ನಿರ್ಮಾಣದ ಅಗತ್ಯ, ಅದರ ಉಪಯೋಗ ಕುರಿತು ಜನರ ಮನಸ್ಸಿಗೆ ಮುಟ್ಟಿಸುವ ಕೆಲಸ ಮಾಡಲಾಗಿದೆ. ಈಗ ಜನ ಶೌಚಾಲಯ ಕುರಿತು ಯೋಚಿಸಿ ಚರ್ಚಿಸುವಂತಾಗಿದ್ದಾರೆ. ಪರಿಣಾಮವಾಗಿ ಯಾದಗಿರಿ ಜಿಲ್ಲೆ 29ನೇ ಸ್ಥಾನಕ್ಕೆ ಏರಿದೆ. 29ನೇ ಸ್ಥಾನದಲ್ಲಿದ್ದ ವಿಜಯಪುರ ಜಿಲ್ಲೆ 30ನೇ ಸ್ಥಾನಕ್ಕೆ ಕುಸಿದಿದೆ ಎಂಬುದಾಗಿ ಜಿಲ್ಲಾ ಪಂಚಾಯಿತಿ ಸಿಇಒ ಅವಿನಾಶ್ ಮೆನನ್ ರಾಜೇಂದ್ರನ್‌ ಹೇಳುತ್ತಾರೆ.

ಎಷ್ಟು ಶೌಚಾಲಯಗಳು; ವೆಚ್ಚ ಎಷ್ಟು?: ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ವೈಯಕ್ತಿ ಶೌಚಾಲಯ ನಿರ್ಮಾಣ ಅನುಷ್ಠಾನಕ್ಕೆ ಕುರಿತಂತೆ ಇಡೀ ರಾಜ್ಯಕ್ಕೆ ಒಟ್ಟು ₹640 ಕೋಟಿ ಅನುದಾನ ಹಂಚಿಕೆಯಾಗಿದೆ. ಅದರಲ್ಲಿ ಜಿಲ್ಲೆಯಲ್ಲಿ ಇದುವರೆಗೂ ₹41.13 ಕೋಟಿ ಅನುದಾನ ವೆಚ್ಚವಾಗಿದೆ.

‘2013–14ನೇ ಸಾಲಿನಲ್ಲಿ ಜಿಲ್ಲೆಯ ಮೂರು ತಾಲ್ಲೂಕುಗಳು ಸೇರಿ ಒಟ್ಟು 4,147 ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಸಾಧ್ಯವಾಗಿದ್ದು, ಒಟ್ಟು ₹2.69 ಕೋಟಿ ಅನುದಾನ ವೆಚ್ಚ ಮಾಡಲಾಗಿದೆ. ಬಯಲು ಶೌಚಾಲಯವನ್ನೇ ನೆಚ್ಚಿಕೊಂಡಿದ್ದ ಗ್ರಾಮೀಣ ಭಾಗದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸುವುದು ಪ್ರಯಾಸದ ಯತ್ನವಾಗಿತ್ತು. ಆದರೂ ನಾವೂ 4,147 ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಡುವಲ್ಲಿ ಯಶಸ್ಸು ಕಂಡೆವು’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಸಂತ ಕುಲಕರ್ಣಿ ಹೇಳುತ್ತಾರೆ.

2014–15ನೇ ಸಾಲಿನಲ್ಲಿ 11,908 ಶೌಚಾಲಯಗಳಿಗೆ ₹3.55 ಕೋಟಿ; 2015–16ನೇ ಸಾಲಿನಲ್ಲಿ 9,393 ಶೌಚಾಲಯ ನಿರ್ಮಾಣಕ್ಕೆ ₹ 8.8 ಕೋಟಿ, 2016–17ನೇ ಸಾಲಿನಲ್ಲಿ 10,609 ಶೌಚಾಲಯಗಳಿಗೆ ₹14.14 ಕೋಟಿ, 2017–18ನೇ ಪ್ರಸಕ್ತ ಸಾಲಿನ ಅಂತ್ಯದಲ್ಲಿ11,120 ಶೌಚಾಲಯ ಕಾಮಗಾರಿಗಳಿಗೆ ₹11.95 ಕೋಟಿ ಅನುದಾನ ವೆಚ್ಚ ಮಾಡಲಾಗಿದೆ. ಆದರೆ, ಆರಂಭದ ಮೂರು ವರ್ಷ ಅನುದಾನ ಕೇವಲ ಚೆಕ್‌ ಮೂಲಕ ಆಗಿರುವುದರಿಂದ ಫಲಾನುಭವಿಗಳಿಗೆ ಸಹಾಯಧನ ವಿತರಣೆ ಅಷ್ಟಾಗಿ ಆಗಿರಲಿಲ್ಲ. ನಂತರ ಆನ್‌ಲೈನ್‌ ವ್ಯವಸ್ಥೆ ಬಂದ ಮೇಲೆ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಇಎಫ್‌ಎಂಎಸ್‌, ಚೆಕ್‌ ಮೂಲಕ ಸಹಾಯಧನ ವಿತರಣೆ ಆಗಿದೆ. ಈ ವ್ಯವಸ್ಥೆ ಬಂದ ಮೇಲೆ ಶೌಚಾಲಯ ಕಾಮಗಾರಿಗಳ ನಿರ್ಮಾಣ ವೇಗ ಹೆಚ್ಚಿದೆ ಎಂದೂ ವಸಂತ ಕುಲಕರ್ಣಿ ಹೇಳುತ್ತಾರೆ.

ಬಯಲು ಮುಕ್ತ ಗ್ರಾಮ ಪಂಚಾಯ್ತಿ ‘ಮಲ್ಹಾರ’:ಮಲ್ಹಾರ ಗ್ರಾಮ ಪಂಚಾಯ್ತಿಯನ್ನು ಬಯಲು ಶೌಚಮುಕ್ತ ಗ್ರಾಮ ಪಂಚಾಯಿತಿ ಎಂದು ಘೋಷಿಸಲಾಗಿದೆ. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಲಿಂಗೇರಿ ಗ್ರಾಮದಲ್ಲಿ 116 ಶೌಚಾಲಯಗಳು, ಹೆಗ್ಗಣಗೇರಾದಲ್ಲಿ 64 ಶೌಚಾಲಯಗಳು, ಸಾವೂರಿನಲ್ಲಿ 27 ಶೌಚಾಲಯಗಳು, ಮಲ್ಹಾರ ಗ್ರಾಮದಲ್ಲಿ 204 ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಶೇ 100ರಷ್ಟು ಪ್ರಗತಿ ಸಾಧಿಸಿದ್ದು, ಸ್ವಚ್ಛ ಭಾರತ ಮಿಷನ್‌ ನೀಡುವ ರಾಷ್ಟ್ರೀಯ ಪುರಸ್ಕಾರಕ್ಕೆ ‘ಮಲ್ಹಾರ’ ಗ್ರಾಮ ಪಂಚಾಯಿತಿ ಭಾಜನವಾಗಿದೆ.

ಯಾದಗಿರಿ ತಾಲ್ಲೂಕಿನ ಸೈದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ– ಎಸ್. ರಾಂಪುರ, ಟಿ. ವಡಗೇರಾ–ಬೊಲಾರಿ, ನಾರಾಯಣಪುರ–ಜಂಗಿನಗಡ್ಡೆ, ಬಾಡಿಯಾಳ–ಸಾಂಘರ್, ಕಡೇಚೂರು– ಮಾವಿನಹಳ್ಳಿ, ದದ್ದಲ, ಭೂಮರಲದೊಡ್ಡಿ, ಚಂದಾಪುರ, ಠಾಣಾಗುಂದಿ–ಭೂಮಶೆಟ್ಟಿಹಳ್ಳಿ, ಪುಟಪಾಕ–ಮಲ್ಲಾಪುರ ಗ್ರಾಮಗಳಲ್ಲಿ ಸಂಪೂರ್ಣ ಶೌಚಾಲಯಗಳು ನಿರ್ಮಾಣಗೊಂಡಿವೆ. ಆದರೆ, ಅವುಗಳ ಪರಿಶೀಲನೆ ನಡೆಸಿದ ನಂತರ ಬಯಲುಮುಕ್ತ ಗ್ರಾಮಗಳಾಗಿ ಘೋಷಿಸಲಾಗುವುದು ಎಂಬುದಾಗಿ ಸ್ವಚ್ಛ ಭಾರತ ಅಭಿಯಾನ ಯೋಜನೆಯ ನಿರ್ದೇಶಕ ಗುರುನಾಥ ಗೌಡಪ್ಪನವರ ಹೇಳುತ್ತಾರೆ.

ಬಯಲು ಶೌಚ ಮುಕ್ತ ಗ್ರಾಮಗಳೆಷ್ಟು?
ಜಿಲ್ಲೆಯಲ್ಲಿ ಒಟ್ಟು 519 ಹಳ್ಳಿಗಳಿವೆ. ಅವುಗಳಲ್ಲಿ 487 ಜನವಸತಿಯುಳ್ಳದ್ದಾಗಿವೆ. 32 ಹಳ್ಳಿಗಳಲ್ಲಿ ಜನವಸತಿ ಇಲ್ಲ. 2011 ಜನಗತಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 11.74ಲಕ್ಷ ಜನಸಂಖ್ಯೆ ಇದೆ. ಅದರಲ್ಲಿ 5.90 ಲಕ್ಷ ಪುರುಷರು; 5.83ಲಕ್ಷ ಮಹಿಳೆಯರು ಇದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ 9.53 ಲಕ್ಷ ಜನರು ಗ್ರಾಮ ನಿವಾಸಿಗಳಾಗಿದ್ದಾರೆ. ಉಳಿದ 2.20 ಲಕ್ಷ ಜನರು ನಗರ ವಾಸಿಗಳಾಗಿದ್ದಾರೆ. ಅದರಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇ 51.83ರಷ್ಟು ಅಕ್ಷರಸ್ಥರಿದ್ದಾರೆ; ಉಳಿದಂತೆ ಶೇ 48.27ರಷ್ಟು ಅನಕ್ಷರಸ್ಥರು ಇದ್ದಾರೆ. ಹಳ್ಳಿಗಳಲ್ಲಿನ ಈ ಕುಟುಂಬಗಳ ಮನವೊಲಿಸುವುದೇ ಒಂದು ಸವಾಲು. ಆ ಸವಾಲು ಮೀರಿರುವ ಗ್ರಾಮ ಪಂಚಾಯಿತಿ ಸಿಬ್ಬಂದಿ ಬಯಲು ಶೌಚಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಶ್ರಮಿಸಿ ಯಶಸ್ಸು ಕಂಡಿದ್ದಾರೆ ಎನ್ನುತ್ತಾರೆ ಮಲ್ಹಾರ ಗ್ರಾಮ ಪಂಚಾಯಿತಿ ಪಿಡಿಒ ಅನ್ಸರ್‌ ಪಟೇಲ್.

ವೇಗ ಪಡೆದ ಯೋಜನೆ

ಶೌಚಾಲಯ ‘ಗುಂಡಿ’ ಉಚಿತ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಮುಂದಾಗುವ ಫಲಾನುಭವಿಗಳಿಗೆ ‘ಗುಂಡಿ’ಗಳನ್ನು ಉಚಿತವಾಗಿ ತೆಗೆಸಿಕೊಡಲಾಗಿದೆ. ಅನಪೂರದಲ್ಲಿ ಕನಿಷ್ಠ 250ಕ್ಕೂ ಹೆಚ್ಚು ಗುಂಡಿಗಳನ್ನು ಜೆಸಿಬಿ ಬಳಸಿ ತೆಗೆಸಿದ್ದೇನೆ. ಉಚಿತ ಗುಂಡಿ ತೆಗೆದುಕೊಟ್ಟಾಗ ಉಳಿದ ಕೆಲಸವನ್ನು ಫಲಾನುಭವಿಗಳು ಪೂರ್ಣಗೊಳಿಸಿದ್ದಾರೆ. ಈ ರೀತಿಯಿಂದಲೂ ಶೌಚಾಲಯ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಿದ್ದರಿಂದಾಗಿ ಯೋಜನೆ ಸ್ವಲ್ಪಮಟ್ಟಿಗೆ ವೇಗ ಪಡೆದುಕೊಂಡಿದೆ.
ಬಸರೆಡ್ಡಿ ಪಾಟೀಲ ಅನಪೂರಅಧ್ಯಕ್ಷ, ಜಿಲ್ಲಾ ಪಂಚಾಯಿತಿ

ಅರಿವು ದೊಡ್ಡ ಸವಾಲು

ಇಡೀ ಜಿಲ್ಲೆಯ ಪ್ರತಿಯೊಂದು ಗ್ರಾಮಗಳಲ್ಲಿ ಕನಿಷ್ಠ ಶೇ25ರಷ್ಟು ಜನರು ಶೌಚಾಲಯ ಕಟ್ಟಿಕೊಂಡಿದ್ದಾರೆ. ಉಳಿದ ಶೇ 25ರಷ್ಟು ಜನರು ಶೌಚಾಲಯ ನಿರ್ಮಾಣದಲ್ಲಿ ತೊಡಗಿದ್ದಾರೆ. ಉಳಿದವರು ಶೌಚಾಲಯ ಕುರಿತು ಅರಿವು ಪಡೆಯುತ್ತಿದ್ದಾರೆ. ಶೌಚಾಲಯವೇ ಬೇಡ ಎನ್ನುತ್ತಿದ್ದ ಗ್ರಾಮಗಳಲ್ಲಿ ಈ ಸಾಧನೆ ಅಚ್ಚರಿಯೇ ಸರಿ. ಇನ್ನೆರಡು ವರ್ಷಗಳಲ್ಲಿ ಜಿಲ್ಲೆಯ ಎಲ್ಲಾ ಗ್ರಾಮಗಳು ಶೌಚಮುಕ್ತ ಗ್ರಾಮಗಳಾಗಿ ಪರಿವರ್ತನೆ ಆಗಲಿವೆ.  –ಅವಿನಾಶ್ ಮೆನನ್‌ ರಾಜೇಂದ್ರನ್‌,ಸಿಇಒ, ಜಿಲ್ಲಾ ಪಂಚಾಯಿತಿ

ಮಹಿಳೆಯರಿಗೆ ಹೆಚ್ಚು ಉಪಯುಕ್ತ
ಶೌಚಾಲಯಗಳು ಇದ್ದರೂ ಪುರುಷರು ಬಯಲುಶೌಚಕ್ಕೆ ಹೋಗುತ್ತಾರೆ. ಸಾಂಪ್ರದಾಯಿಕ ಪದ್ಧತಿಯನ್ನು ಪುರುಷರು ಬಿಟ್ಟಿಲ್ಲ. ಸಕಲ ಪ್ರಯತ್ನಗಳಿಂದ ಶೇ 10ರಷ್ಟು ಪುರುಷರು ಶೌಚಾಲಯ ಬಳಸುತ್ತಿದ್ದಾರೆ. ಉಳಿದಂತೆ ಶೌಚಾಲಯಗಳು ಮಹಿಳೆಯರಿಗೆ ಹೆಚ್ಚು ಉಪಯುಕ್ತ ಆಗಿವೆ. ಗ್ರಾಮೀಣ ಭಾಗದಲ್ಲಿ ಕತ್ತಲಲ್ಲಿ ರಸ್ತೆ ಪಕ್ಕದಲ್ಲಿ ಇಲ್ಲವೇ ಜಾಲಿಗಿಡಗಳ ಆಸರೆ ಹುಡುಕುತ್ತಿದ್ದ ಮಹಿಳೆಯರು ಈಗ ನಿಟ್ಟುಸಿರು ಬಿಟ್ಟಿದ್ದಾರೆ.   – ವಿಜಯಲಕ್ಷ್ಮಿ, ಪಿಡಿಒ, ವರ್ಕನಳ್ಳಿ ಗ್ರಾಮ ಪಂಚಾಯಿತಿ

ಸಹಾಯಧನ ಎಷ್ಟು?
ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಸ್ವಚ್ಛ ಭಾರತ ಯೋಜನೆಯಡಿ ₹12 ಸಾವಿರ ಹಾಗೂ ಪರಿಶಿಷ್ಟ ಸಮುದಾಯದ ಫಲಾನುಭವಿಗಳಿಗೆ ಒಟ್ಟು ₹15 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತದೆ.

* * 

ಮುಖ್ಯವಾಗಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡಿದ್ದೇವೆ. ಸ್ತ್ರೀಶಕ್ತಿ ಸಂಘಗಳಲ್ಲೂ ಸಂವಹನ ನಡೆಸಿ, ಸಂಘಗಳ ಸಭೆಗಳಲ್ಲಿ ಅರಿವು ಕಾರ್ಯಕ್ರಮ ನಡೆಸಿದ್ದರ ಫಲ ಇಷ್ಟು ಸಾಧನೆ ಎನ್ನಬಹುದು.
ವಸಂತ ಕಲಕರ್ಣಿ ಉಪ ಕಾರ್ಯದರ್ಶಿ ಜಿಲ್ಲಾ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT