ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸ್ವಾಧೀನಾಧಿಕಾರಿ ಕಚೇರಿ ಸ್ಥಳಾಂತರಕ್ಕೆ ರೈತರ ವಿರೋಧ

Last Updated 5 ಡಿಸೆಂಬರ್ 2017, 6:44 IST
ಅಕ್ಷರ ಗಾತ್ರ

ಕೋಲಾರ: ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸದಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ನಗರದಲ್ಲಿ ಸೋಮವಾರ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ಅಭಿವೃದ್ಧಿ ಕಾಮಗಾರಿಗಳಿಗೆ ಕೃಷಿ ಜಮೀನು ಸ್ವಾಧೀನಪಡಿಸಿಕೊಂಡ ಸಂದರ್ಭದಲ್ಲಿ ಭೂಪರಿಹಾರ ಕಲ್ಪಿಸಲು ಮತ್ತು ರೈತರ ಕಷ್ಟಗಳಿಗೆ ಸ್ಪಂದಿಸಲು ಕೋಲಾರದಲ್ಲೇ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಇರುವುದರಿಂದ ಅನುಕೂಲವಾಗಿತ್ತು. ಆದರೆ, ಅಧಿಕಾರಿಗಳು ವೈಯಕ್ತಿಕ ಲಾಭಕ್ಕೆ ಮತ್ತು ದಲ್ಲಾಳಿಗಳ ಹಿತಕ್ಕಾಗಿ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸುವಂತೆ ಶಿಫಾರಸು ಮಾಡಿದ್ದಾರೆ ಎಂದು ಆರೋಪಿಸಿದರು.

‘ಕಚೇರಿಯು ಬೆಂಗಳೂರಿಗೆ ಸ್ಥಳಾಂತರವಾದರೆ ಜಿಲ್ಲೆಯ ರೈತರಿಗೆ ಸಮಸ್ಯೆಯಾಗುತ್ತದೆ. ಅಧಿಕಾರಿಗಳು ಭೂಪರಿಹಾರಕ್ಕಾಗಿ ರೈತರನ್ನು ಬೆಂಗಳೂರಿಗೆ ಅಲೆದಾಡಿಸಿ ದಲ್ಲಾಳಿಗಳ ಮೂಲಕ ಲಂಚ ಪಡೆಯುವ ಹುನ್ನಾರ ಮಾಡಿದ್ದಾರೆ. ಸ್ಥಳೀಯ ರೈತರು ಹಾಗೂ ರೈತ ಮುಖಂಡರೊಂದಿಗೆ ಚರ್ಚೆ ನಡೆಸದೆ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ’ ಎಂದು ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.

ಅಭಿವೃದ್ಧಿ ಯೋಜನೆಗಳಿಗೆ ಭೂಮಿ ಕೊಟ್ಟಿರುವ ಜಿಲ್ಲೆಯ ರೈತರು ಭೂಪರಿಹಾರಕ್ಕಾಗಿ ನ್ಯಾಯಾಲಯ ಮತ್ತು ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಗೆ ವರ್ಷಾನುಗಟ್ಟಲೇ ಅಲೆಯುತ್ತಿದ್ದಾರೆ. ದಲ್ಲಾಳಿಗಳ ಜತೆ ಶಾಮೀಲಾಗಿರುವ ಅಧಿಕಾರಿಗಳು ಭೂಪರಿಹಾರ ಕೊಡದೆ ರೈತರನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಚೇರಿ ಸ್ಥಳಾಂತರವಾದರೆ ರೈತರ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತದೆ ಎಂದು ಹೇಳಿದರು.

ಹೆದ್ದಾರಿ ಬಂದ್‌: ಕಚೇರಿಯನ್ನು ಕೋಲಾರದಲ್ಲೇ ಮುಂದುವರಿಸಬೇಕು. ಕಚೇರಿಯಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ಭೂಪರಿಹಾರವನ್ನು ಶೀಘ್ರವೇ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಧರಣಿನಿರತರು ಎಚ್ಚರಿಕೆ ನೀಡಿದರು.

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಹರಿಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ, ಸದಸ್ಯರಾದ ನಾಗರಾಜಗೌಡ, ಫಾರೂಕ್‌ ಪಾಷಾ, ರಂಜಿತ್ ಕುಮಾರ್, ಉಮಾಗೌಡ, ವಿಜಯಪಾಲ್, ಮಂಜು, ವೆಂಕಟೇಶ್, ಭರತ್, ಕೃಷ್ಣೇಗೌಡ, ನಾರಾಯಣಸ್ವಾಮಿ ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT