7

‘ಕೃಷಿ ಮಾಹಿತಿ ರಥಯಾತ್ರೆ’ಗೆ ಚಾಲನೆ

Published:
Updated:
‘ಕೃಷಿ ಮಾಹಿತಿ ರಥಯಾತ್ರೆ’ಗೆ ಚಾಲನೆ

ಕುಷ್ಟಗಿ: ಹಿಂಗಾರು ಹಂಗಾಮಿನಲ್ಲಿ ರೈತರು ವೈಜ್ಞಾನಿಕ ರೀತಿಯಲ್ಲಿ ಅನುಸರಿಸಬೇಕಾದ ಬೇಸಾಯ, ಬೆಳೆ ಮತ್ತು ಸಸ್ಯ, ಭೂ ಸಂರಕ್ಷಣೆ, ಮಳೆ ನೀರಿನ ಸಂಗ್ರಹಣೆ ಮಹತ್ವ ಇತರೆ ವಿಷಯಗಳ ಬಗ್ಗೆ ರೈತರಿಗೆ ಮಾಹಿತಿ ನೀಡುವ ‘ಸಮಗ್ರ ಕೃಷಿ ಮಾಹಿತಿ ರಥ ಯಾತ್ರೆ’ಗೆ ಸೋಮವಾರ ಚಾಲನೆ ನೀಡಲಾಯಿತು. ಪಟ್ಟಣದ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ.ಮಹೇಶ ಚಾಲನೆ ನೀಡಿದರು.

‘ಕೃಷಿ ವ್ಯವಸ್ಥೆಯಲ್ಲಿ ಆಗಿರುವ ಹೊಸ ವಿಧಾನಗಳು ಮತ್ತು ತಾಂತ್ರಿಕ ಆವಿಷ್ಕಾರಗಳ ಬಗ್ಗೆ ಕಾಲಕಾಲಕ್ಕೆ ರೈತರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಕೃಷಿ ಇಲಾಖೆ ಸಿಬ್ಬಂದಿ ಮುತುವರ್ಜಿ ವಹಿಸಬೇಕು. ರೈತರೊಂದಿಗೆ ನಿರಂತರ ಸಂಪರ್ಕ ಹೊಂದಿ ಬೇಸಾಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು’ ಎಂದು ಮಹೇಶ ಹೇಳಿದರು.

ರಥ ಯಾತ್ರೆ ಕುರಿತು ಮಾಹಿತಿ ನೀಡಿದ ಸಹಾಯಕ ಕೃಷಿ ನಿರ್ದೇಶಕ ವೀರಣ್ಣ ಕಮತರ, ‘ಕೃಷಿ ಇಲಾಖೆ ನಡಿಗೆ ರೈತರ ಮನೆ ಬಾಗಿಲಿಗೆ ವಿನೂತನ ಕಾರ್ಯಕ್ರಮದ ಮೂಲಕ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ರೈತರು ಇರುವಲ್ಲಿಯೇ ಹೋಗಿ ಅರಿವು ಮೂಡಿಸುವ ವಿನೂತನ ಕಾರ್ಯಕ್ರಮ ಡಿ.5ರಿಂದ ತಾಲ್ಲೂಕಿನಾದ್ಯಂತ ನಡೆಯಲಿದೆ. ರಥಯಾತ್ರೆಯೊಂದಿಗೆ ತೆರಳುವ ತಾಂತ್ರಿಕ ಸಿಬ್ಬಂದಿ ರೈತರಿಗೆ ಸಮಗ್ರ ಮಾಹಿತಿ ಒದಗಿಸುವರು. ರೈತರು ಈ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ವಿಜಯ ನಾಯಕ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಹಾಂತಮ್ಮ ಪೂಜಾರ, ಸದಸ್ಯರಾದ ಭೀಮಣ್ಣ, ನಾಗಪ್ಪ ದೋಟಿಹಾಳ, ಕೃಷಿ ಇಲಾಖೆ ಅಧಿಕಾರಿಗಳಾದ ಪ್ರಕಾಶ ತಾರಿವಾಳ, ನಾಗನಗೌಡ ಪೊಲೀಸಪಾಟೀಲ, ಸಿಬ್ಬಂದಿ ಶೇಖರಯ್ಯ ಹಿರೇಮಠ, ಬಸವರಾಜ ಪಾಟೀಲ ಪಾಲ್ಗೊಂಡಿದ್ದರು.

* * 

ಇಲಾಖೆ ಸಿಬ್ಬಂದಿ ರೈತರನ್ನು ನೇರವಾಗಿ ಭೇಟಿ ಮಾಡಿ ಸಮಗ್ರ ಮಾಹಿತಿ ನೀಡಲಿದ್ದಾರೆ. ರೈತರ ಸಂದೇಹಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲಿದ್ದಾರೆ

ವೀರಣ್ಣ ಕಮತರ ಸಹಾಯಕ ಕೃಷಿ ನಿರ್ದೇಶಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry