7

‘15 ವರ್ಷದಿಂದ ಕ್ಷೇತ್ರದ ಸಾಧನೆ ಶೂನ್ಯ’

Published:
Updated:

ಮುಧೋಳ: ‘ಕ್ಷೇತ್ರದಲ್ಲಿ 15 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ನನಗೆ ಸಚಿವ ಸ್ಥಾನದ ಅವಧಿ ಕಡಿಮೆ ಇದೆ. ಆದರೂ ಮುಧೋಳ ಕ್ಷೇತ್ರಕ್ಕೆ ಅಭಿವೃದ್ಧಿ ಕಾಮಗಾರಿ ತರಲು ಪ್ರಯತ್ನಿಸಿದ್ದೇನೆ. ದೊರೆತ ಅವಧಿಯ ಸಂಪೂರ್ಣ ಪ್ರಯೋಜ ಪಡೆದು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

‘ನಾನು ಸಚಿವನಾದ ನಂತರ ಪ್ರಥಮಬಾರಿ ನಗರದಲ್ಲಿ ನಡೆದ ಸಮಾರಂಭದಲ್ಲಿ ಸಾವಿರ ಮನೆಗಳನ್ನು ತರುವುದಾಗಿ ಘೋಷಿಸಿದಂತೆ ಈಗ ಬಸವ ವಸತಿ ಯೋಜನೆ ಅಡಿ ಸಾವಿರ ಮನೆಗಳು, 250 ವಾಜಪೇಯಿ ವಸತಿ ಯೋಜನೆಯಲ್ಲಿ 250 ದೇವರಾಜ ಅರಸು ವಸತಿ ಯೋಜನೆ ಅಡಿಯಲ್ಲಿ ಹಾಗೂ ಕೊಳಚೆ ನಿರ್ಮೂಲನಾ ಯೋಜನೆ ಅಡಿ 250 ಮನೆಗಳನ್ನು ಒಟ್ಟು 1750 ಮಂಜೂರು ಮಾಡಿಸಲಾಗಿದೆ. ಇನ್ನೂ ಅಧಿಕ ಮನೆಗಳನ್ನು ಮಂಜೂರು ಮಾಡಿಸಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಹೇಳಿದರು.

‘ನಗರೋತ್ಥಾನ ಅಡಿ ನಗರದ ಅಭಿವೃದ್ಧಿಗೆ ₹ 25 ಕೋಟಿ ಮಂಜೂರಾತಿ ದೊರೆತಿದೆ. ಇದರಲ್ಲಿ ನಗರದ ವಿವಿಧ 6 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸೌಕರ್ಯಕ್ಕೆ ಅಗತ್ಯವಿರುವ ಕಾಮಗಾರಿಗಳು ನಡೆಯಲಿದೆ. ಎಸ್‌ಸಿಪಿ ಯೋಜನೆ ಅಡಿ ₹ 50 ಲಕ್ಷ ಹರಿಜನ ಗಲ್ಲಿ, ಕಾಂಬಳೆ ಗಲ್ಲಿ ಹಾಗೂ ಮಲ್ಲಮ್ಮ ನಗರದಲ್ಲಿ ರಸ್ತೆ ಅಭಿವೃದ್ಧಿಪಡಿಸಲು, ಎಸ್‌ಎಫ್‌ಸಿ ಯೋಜನೆ ಅಡಿ ₹2.63 ಕೋಟಿಯಲ್ಲಿ ರಸ್ತೆ ಅಭಿವೃದ್ಧಿ, ₹ 75 ಲಕ್ಷದಲ್ಲಿ ರನ್ನ ಕ್ರೀಡಾಂಗಣದಲ್ಲಿ ವಾಕಿಂಗ್ ಟ್ರ್ಯಾಕ್ ನಿರ್ಮಾಣ ಹಾಗೂ ₹ 1.25 ಕೋಟಿಯಲ್ಲಿ ಈಜು ಕೊಳ ನಿರ್ವಾಣ ಹಾಗೂ ₹ 15 ಲಕ್ಷದಲ್ಲಿ ಓಪನ್ ಜಿಮ್, ₹ 1 ಕೋಟಿಯ ಸರ್ಕಾರಿ ಪಿಯು ಕಾಲೇಜ್‌ದಲ್ಲಿ ಪ್ರಯೋಗಾಲಯ, ಎರಡು ಹೆಚ್ಚುವರಿ ಕೊಠಡಿ ಹಾಗೂ ಶೌಚಾಲಯ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ’ ಎಂದರು.

‘ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಹಕ್ಕು ಶಾಸಕ ಕಾರಜೋಳರಿಗೆ ಇಲ್ಲ. ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಕೇಂದ್ರ ಸಚಿವ ಅನಂತ ಕುಮಾರ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಿಮ್ಮಾಪೂರ ಘಟಪ್ರಭಾ ನದಿಯ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳನ್ನು ನುಂಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆವಾಗ ಯಾರು ಅಧಿಕಾರದಲ್ಲಿ ಇದ್ದರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಈ ಯಡಿಯೂರಪ್ಪ, ಶಾಸಕ ಕಾರಜೋಳ ಅವುಗಳನ್ನು ನುಂಗಿದ್ದಾರೆ. ಕಾರಜೋಳರು ಅನಂತಕುಮಾರ್‌ ಮೇಲಿನ ನಿಷ್ಠೆಯನ್ನು ಬದಲಿಸಿ ಈಗ ಯಡಿಯೂರಪ್ಪ ನಿಷ್ಠರ ಬಣ ಸೇರಿರುವುದರಿಂದ, ಯಡಿಯೂರಪ್ಪ ಕೆರಳಿ ಕಾರಜೋಳ ಅನ್ನುವುದರ ಬದಲಾಗಿ ನಮ್ಮ ಹೆಸರು ಹೇಳಿದ್ದಾರೆ’ ಎಂದು ಲೇವಡಿ ಮಾಡಿದರು.

* * 

ಗೋವಿಂದ ಕಾರಜೋಳ ಕ್ಷೇತ್ರಕ್ಕೆ ಏನೂ ಮಾಡಿಲ್ಲ. ಅಧಿಕಾರ ಮದದಿಂದ ತಿರುಗಾಡಿದ್ದೇ ಸಾಧನೆ. ವಿಜಯಪುರಕ್ಕೆ ನೀರು ನೀಡಿದರು, ಬಾಗಲಕೋಟೆಗೆ ನೀಡಿಲ್ಲ ಆರ್.ಬಿ. ತಿಮ್ಮಾಪುರ ಜಿಲ್ಲಾ ಉಸ್ತುವಾರಿ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry