7

ಕ್ಷುಲ್ಲಕ ಕಾರಣಕ್ಕೆ ಕಲ್ಲು ತೂರಾಟ: 24 ಮಂದಿ ಬಂಧನ

Published:
Updated:
ಕ್ಷುಲ್ಲಕ ಕಾರಣಕ್ಕೆ ಕಲ್ಲು ತೂರಾಟ: 24 ಮಂದಿ ಬಂಧನ

ಬೆಳಗಾವಿ: ಇಲ್ಲಿನ ಶಹಾಪುರದ ಅಳವನಗಲ್ಲಿ ಕಾರ್ನರ್‌ ಹಾಗೂ ಕೇಂದ್ರ ಬಸ್‌ನಿಲ್ದಾಣ ಸಮೀಪದ ಕಾಮತ್‌ ಗಲ್ಲಿಯಲ್ಲಿ ಕಿಡಿಗೇಡಿಗಳು ಭಾನುವಾರ ತಡರಾತ್ರಿ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಈ ಸ್ಥಳಗಳಲ್ಲಿ ಕೆಲಕಾಲ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು. ಎರಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 27 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯಲ್ಲಿ ಎರಡು ಆಟೊ ರಿಕ್ಷಾಗಳಿಗೆ ಹಾನಿಯಾಗಿದೆ. ಅಳವನಗಲ್ಲಿಯಲ್ಲಿ ಪಾಲಿಕೆ ಸದಸ್ಯ ಶಿವಾಜಿ ಕುಡುಚಕರ ಅವರ ಸೋದರನ ಪುತ್ರನ ಮದುವೆಯ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ, ಸ್ಪೀಕರ್‌ ತಗುಲಿದ್ದರಿಂದ ಈದ್‌ ಮಿಲಾದ್ ಅಂಗವಾಗಿ ಹಾಕಿದ್ದ ಬಾವುಟ ಕೆಳಕ್ಕೆ ಬಿದ್ದಿದೆ. ಇದರಿಂದ ಮುಸ್ಲಿಂ ಹಾಗೂ ಹಿಂದೂಗಳ ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ.

ಆಗ ಕೆಲ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಘಟನೆಯಲ್ಲಿ ಆಟೊರಿಕ್ಷಾಕ್ಕೆ ಹಾನಿಯಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಗುಂಪುಗಳನ್ನು ಚದುರಿಸಿ, ಪರಿಸ್ಥಿತಿ ಹತೋಟಿಗೆ ತಂದರು. ರಸ್ತೆಯಲ್ಲಿ ಹಾಕಿಗಿದ್ದ ಪೆಂಡಾಲ್‌ ತೆರವುಗೊಳಿಸಿದರು. ಕಾಮತ್‌ ಗಲ್ಲಿಯಲ್ಲಿ ಯುವಕನೊಬ್ಬ ಸ್ಕೂಟರ್‌ನಲ್ಲಿ ಅತಿವೇಗವಾಗಿ ಹೋಗುತ್ತಿದ್ದ. ಇದನ್ನು ಹಿಂದೂ ಯುವಕರ ಗುಂಪು ಪ್ರಶ್ನಿಸಿದೆ. ಈ ವೇಳೆ ಮಾತಿನ ಚಕಮಕಿ ನಡೆದಿದೆ. ಕೆಲವರು ಆತನನ್ನು ಥಳಿಸಿದ್ದಾರೆ. ಬಳಿಕ ಆತ ತನ್ನೊಂದಿಗೆ ಕೆಲವರನ್ನು ಕರೆತಂದಿದ್ದಾನೆ.

ಈ ವೇಳೆ ಎರಡೂ ಗುಂಪುಗಳ ನಡುವೆ ವಾಗ್ವಾದ, ಘರ್ಷಣೆ ನಡೆದಿದೆ. ಈ ವೇಳೆ ಕೆಲವರು ಕಲ್ಲು ತೂರಿದ್ದಾರೆ. ಘಟನೆಯಲ್ಲಿ ಆಟೊರಿಕ್ಷಾದ ಗಾಜು ಪುಡಿಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಪರಿಸ್ಥಿತಿ ಶಾಂತ: ಎರಡೂ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲಿ ಸೋಮವಾರ ಜನಜೀವನ ಎಂದಿನಂತೆಯೇ ಇತ್ತು. ‘ಘಟನೆಗೆ ಸಂಬಂಧಿಸಿದಂತೆ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ 10 ಮುಸ್ಲಿಂ ಹಾಗೂ 7 ಮಂದಿ ಹಿಂದೂಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಬಳ್ಳಾರಿ ಜೈಲಿಗೆ ರವಾನಿಸಲಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ’ ಎಂದು ಮಾರ್ಕೆಟ್‌ ಠಾಣೆ ಇನ್‌ಸ್ಪೆಕ್ಟರ್‌ ಎಸ್‌. ಪ್ರಶಾಂತ್‌ ತಿಳಿಸಿದರು.

‘ಅಳವನಗಲ್ಲಿಯಲ್ಲಿ ನಡೆದ ಕಲ್ಲು ತೂರಾಟ ಪ್ರಕರಣ ಸಂಬಂಧಿಸಿದಂತೆ ಐವರು ಹಿಂದೂಗಳು ಹಾಗೂ ಇಬ್ಬರು ಮುಸ್ಲಿಮರನ್ನು ಬಂಧಿಸಲಾಗಿದೆ.  ಮತ್ತಷ್ಟು ಆರೋಪಿಗಳಿಗೆ ಶೋಧ ನಡೆದಿದೆ. ಘಟನೆಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ’ ಎಂದು ಇನ್‌ಸ್ಪೆಕ್ಟರ್‌ ಜಾವೇದ್‌ ಮುಶಾಪುರಿ ಮಾಹಿತಿ ನೀಡಿದರು.

ಎರಡು ಗುಂಪುಗಳಿಂದ ಪ್ರತಿಭಟನೆ: ‘ಅಳವನಗಲ್ಲಿಯಲ್ಲಿ ಕಲ್ಲುತೂರಾಟ ಪ‍್ರಕರಣದಲ್ಲಿ ಐವರು ಹಿಂದೂಗಳನ್ನು ಬಂಧಿಸಲಾಗಿದೆ. ಗಲಾಟೆಗೆ ಕಾರಣವಾದ ಮುಸ್ಲಿಂ ಗುಂಪಿನಲ್ಲಿ ಇಬ್ಬರನ್ನು ಮಾತ್ರವೇ ಬಂಧಿಸಿ, ಅನ್ಯಾಯ ಮಾಡಲಾಗಿದೆ’ ಎಂದು ಆರೋಪಿಸಿ ಬಿಜೆಪಿ ಮುಖಂಡ, ಮಾಜಿ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಹಿಂದೂಗಳು ಶಹಾಪುರ ಠಾಣೆಗೆ ಮುತ್ತಿಗೆ ಹಾಕಿದರು. ನಂತರ, ಎದುರಿನ ರಸ್ತೆಯಲ್ಲಿ ಧರಣಿ ಕುಳಿತರು.

ಆಟೊರಿಕ್ಷಾಕ್ಕೆ ಹಾನಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುಸ್ಲಿಮರ ಗುಂಪು ಕೂಡ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿತು. ಎರಡೂ ಗುಂಪುಗಳು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು. ಇದರಿಂದ ಠಾಣೆಯ ಆವರಣದಲ್ಲಿ ಸೋಮವಾದ ಮಧ್ಯಾಹ್ನದವರೆಗೂ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಎರಡೂ ಗುಂಪುಗಳ ಮನವೊಲಿಸಲು ಪೊಲೀಸರು ಹರಸಾಹಸಪಡಬೇಕಾಯಿತು.

ಅಭಯ್‌ ನೇತೃತ್ವದಲ್ಲಿ ಪ್ರತಿಭಟಿಸುತ್ತಿದ್ದ ಹಿಂದೂಗಳು, ‘ಪೂರ್ವ ನಿಯೋಜಿತ ಕೃತ್ಯವಿದು. ಆರೋಪಿಗಳನ್ನು ಬಂಧಿಸಿ  ಕರೆತರಬೇಕು. ಅಲ್ಲಿವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದರು.ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು. ನಂತರ ಎಪಿಸಿಗಳಾದ ಸಿ.ಟಿ. ವಿಜಯ ಕುಮಾರ್‌, ಶಂಕರ ಮಾರಿಹಾಳ ಪ್ರತಿಭಟನಾಕಾರರ ಮನವೊಲಿಸಿದರು.

ಯುವಕನಿಗೆ ಥಳಿತ

ಬೆಳಗಾವಿ: ಶಹಾಪುರ ಠಾಣೆ ಎದುರು ಬಿಜೆಪಿ ಮುಖಂಡ ಅಭಯ ಪಾಟೀಲ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಮೊಬೈನ್‌ನಲ್ಲಿ ವಿಡಿಯೊ ಮಾಡುತ್ತಿದ್ದ ಯುವಕನಿಗೆ ಕೆಲ ಪ್ರತಿಭಟನಾಕಾರರು ಥಳಿಸಿದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.

ಚಾವಡಿ ಗಲ್ಲಿ‌ ನಿವಾಸಿ ಅಬ್ದುಲ್ ರಜಾಕ್ ಸಳೇಬಾವಿ ಹಲ್ಲೆಗೊಳಗಾದವರು. ಅವರಿಗೆ ಬಾಯಿ, ಎದೆ ಹಾಗೂ ಹೊಟ್ಟೆ ಭಾಗಕ್ಕೆ ಥಳಿಸಲಾಗಿದೆ. ತಕ್ಷಣ ಅವರನ್ನು ಠಾಣೆಗೆ ಕರೆದೊಯ್ದು ಪೊಲೀಸರು, ನೀರು ಕುಡಿಸಿ ಸಂತೈಸಿದರು.

‘ನೋಡಿಕೊಳ್ಳುತ್ತೇವೆ’

‘ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅವರು, ಇವರು ಎಂದು ನೋಡುತ್ತಿರಲಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದೆವು. ಈಗಿನ ಕಾಂಗ್ರೆಸ್ ಸರ್ಕಾರ ತಾರತಮ್ಯ ಮಾಡುತ್ತಿದೆ. ನಮ್ಮ ಸರ್ಕಾರ ಬರಲಿ ನೋಡಿಕೊಳ್ಳುತ್ತೇವೆ’ ಎಂದು ಬಿಜೆಪಿ ಮುಖಂಡ ಅಭಯ ಪಾಟೀಲ ಅವರು ಸವಾಲು ಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry