7

ಕೊಟ್ಟೂರೇಶ್ವರ ಲಕ್ಷದೀಪೋತ್ಸವ ಸಂಪನ್ನ

Published:
Updated:

ಕೂಡ್ಲಿಗಿ: ತಾಲ್ಲೂಕಿನ ಕೊಟ್ಟೂರಿನಲ್ಲಿ ಸೋಮವಾರ ನಡೆದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಕಾರ್ತಿಕೋತ್ಸವದಲ್ಲಿ ಸಾವಿರಾರು ಭಕ್ತರು ಭಕ್ತಿ–ಶ್ರದ್ಧೆಯಿಂದ ಪಾಲ್ಗೊಂಡರು.

ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶವೆಲ್ಲವೂ ರಾತ್ರಿ ಲಕ್ಷ ದೀಪಗಳ ಬೆಳಕಿನಿಂದ ಕಂಗೊಳಿಸುತ್ತಿತ್ತು. ಭಕ್ತರು ಜಯಘೋಷ ಮಾಡುತ್ತಾ ಮಣ್ಣಿನ ಪ್ರಣತಿಗಳಲ್ಲಿ ಎಣ್ಣೆ ಬತ್ತಿಯ ದೀಪ ಬೆಳಗಿ ಇಷ್ಟದೇವರಿಗೆ ಕೈಮುಗಿದರು. ನಂತರ ಚೌಕಾಕಾರದ ತೊಟ್ಟಿಯಲ್ಲಿ ಕೊಬ್ಬರಿ ಹಾಕಿ ಸುಟ್ಟು ಹರಕೆ ತೀರಿಸಿದರು. ಸೂರ್ಯಾಸ್ತವಾದ ಬಳಿಕ ಕ್ರಿಯಾಮೂರ್ತಿಗಳಾದ ಶಂಕರಸ್ವಾಮಿ ಮತ್ತು ಕೊಟ್ಟೂರು ದೇವರು ದೀಪೋತ್ಸವಕ್ಕೆ ಚಾಲನೆ ನೀಡಿದರು.

ಭಕ್ತಸಾಗರ: ಜಿಲ್ಲೆಯವರಷ್ಟೇ ಅಲ್ಲದೆ, ದಾವಣಗೆರೆ, ಗದಗ, ಮತ್ತು ಚಿತ್ರದುರ್ಗ ಜಿಲ್ಲೆಯ ಪಟ್ಟಣ ಹಾಗೂ ಹಳ್ಳಿಗಳಿಂದ ಬೆಳಿಗ್ಗೆಯಿಂದಲೇ ಸಾಗರದ ರೀತಿ ಭಕ್ತರು ಕೊಟ್ಟೂರಿಗೆ ಬಂದು ನೆರೆಯುತ್ತಿದ್ದರು. ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದು ಹಣ್ಣು –ಕಾಯಿ ಆರ್ಶೀವಾದ ಪಡೆದರು.

ಭಕ್ತರ ಅನುಕೂಲಕ್ಕಾಗಿ ಬೆಳಗಿನ ಜಾವವೇ ಪೂಜಾ ಕಾರ್ಯಗಳನ್ನು ಪೂರೈಸಿ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿತ್ತು. ಕಾರ್ತಿಕದ ಸಡಗರ ಪಟ್ಟಣದ ಎಲ್ಲ ಬೀದಿಗಳಲ್ಲಿ ಮನೆ ಮಾಡಿತ್ತು.

ಪಾದಯಾತ್ರೆ: ದೂರದ ಲಕ್ಷೇಶ್ವರ ಪಟ್ಟಣದಿಂದ ನೂರಕ್ಕೂ ಹೆಚ್ಚು ಭಕ್ತರು ಪಾದಯಾತ್ರೆ ಮೂಲಕ ಬಂದಿದ್ದರು. ಹಲವರು ಮುಂಜಾನೆಯೇ ಮೂರ್ಕಲ್ ಮಠದಿಂದ ಹಿರೇಮಠದವರೆಗೆ ದೀಡು ನಮಸ್ಕಾರ ಹಾಕಿಕೊಂಡ ಬಂದು ಭಕ್ತಿ ಸಮರ್ಪಿಸಿದರು. ಉತ್ಸವದ ಪ್ರಯುಕ್ತ ತೊಟ್ಟಿಲುಮಠ ಮತ್ತು ಗಚ್ಚಿನಮಠದಲ್ಲೂ ಹೆಚ್ಚು ಭಕ್ತರು ನೆರೆದಿದ್ದರು.

ಕೊಟ್ಟೂರೇಶ್ವರ ಮಾಲೆ ಧರಿಸಿದ್ದ ಸ್ಥಳೀಯ ಹಾಗೂ ವಿವಿಧ ಪ್ರದೇಶಗಳ ಭಕ್ತರು ಶುಭ್ರ ಬಿಳಿ ವಸ್ತ್ರ ತೊಟ್ಟು ಗುಂಪಾಗಿ ಬಂದು ದರ್ಶನ ಪಡೆದರು. ಕೊಟ್ಟೂರೇಶ್ವರ ಕಲ್ಯಾಣ ಮಂಟಪ ಸಮಿತಿಯು ದೀಪೋತ್ಸವವನ್ನು ಏರ್ಪಡಿಸಿತ್ತು.

ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಎಸ್.ಪಿ.ಬಿ. ಮಹೇಶ್, ದೇವಸ್ಥಾನದ ಕಾರ್ಯನಿರ್ವಹಕಧಿಕಾರಿ ಎಚ್.ಹಾಲಪ್ಪ, ದೈವದವರಾದ ಆರ್.ಎಂ. ಗುರುಸ್ವಾಮಿ, ಸಕ್ಕರೆಗೌಡ್ರು ಕೊಟ್ರಗೌಡ, ಕೆ. ಸಿದ್ದನಗೌಡ, ಕೆ. ಮಂಜುನಾಥಗೌಡ, ಕೆ.ಎಸ್.ವಿವೇಕಾನಂದ ಗೌಡ, ಪ್ರೇಮಾನಂದಗೌಡ, ಗುರುಸಿದ್ದನಗೌಡ, ಸೋಗಿ ವೀರೇಶ, ಎ. ಅಜ್ಜಪ್ಪ, ಬಂದಾತರ ಹಾಲಪ್ಪ, ಸಂಕಪ್ಪ, ರೇವಣಸಿದ್ದಪ್ಪ, ಗಡ್ಡಿ ಮಂಜುನಾಥ, ಹರಾಳ್ ಸುರೇಶ, ರೇವಣ್ಣ, ಪಂಪಾಪತಿ, ಆಯಗಾರರಾದ ನಾಗೇಂದ್ರಪ್ಪ, ಕೊಟ್ರೇಶ, ಚಿನ್ನ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry