ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಂಬರು ಕಾಣದ ರಸ್ತೆ, ಪ್ರಯಾಣಿಕರ ಗೋಳು

Last Updated 5 ಡಿಸೆಂಬರ್ 2017, 8:20 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕಿನ ಪಾತಪಾಳ್ಯ ಹೋಬಳಿಯ ತೋಳಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆದಿನಾರಾಯಣಪುರ ಬಾಪನಾನಕುಂಟೆ ಕೆರೆಯ ಬದಿಯಲ್ಲಿ ಹಾದುಹೋಗುವ ಪೆದ್ದರೆಡ್ಡಿಪಲ್ಲಿಗೆ ಸಂಪರ್ಕಿಸುವ ಏಕೈಕ ರಸ್ತೆಯಲ್ಲಿ ಮಣ್ಣು ಕೊಚ್ಚಿಹೋಗಿ ಜಲ್ಲಿಕಲ್ಲು ಮೇಲೆದ್ದಿರುವುದು ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ.

'ನಗರಗಳಲ್ಲಿ ಕಾಂಕ್ರಿಟ್‌ ರಸ್ತೆಗಳು ಬಂದಾಗಿದೆ. ಆದರೆ ಈ ರಸ್ತೆ ಇದುವರೆಗೂ ಡಾಂಬರನ್ನೇ ಕಂಡಿಲ್ಲ. ರಸ್ತೆಯಲ್ಲಿ ಆಳವಾದ ಗುಂಡಿಗಳು ಬಿದ್ದಿರುವುದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿದೆ' ಎಂದು ಗ್ರಾಮದ ನಿವಾಸಿ ಎ.ಎನ್.ನರೇಂದ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

'ನಮ್ಮೂರಿನಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ ಎಂದು ಇರುವ ಕಿರಿಯ ಪ್ರಾಥಮಿಕ ಶಾಲೆಯನ್ನು ಅಧಿಕಾರಿಗಳು ಮುಚ್ಚಿದ್ದಾರೆ. ಪುಟಾಣಿ ಮಕ್ಕಳು ದಿನನಿತ್ಯ ಒಂದು ಕಿ.ಮೀ ದೂರವಿರುವ ಪೆದ್ದರೆಡ್ಡಿಪಲ್ಲಿ ಶಾಲೆಗೆ ಇದೇ ರಸ್ತೆಯ ಮೂಲಕ ನಡೆದು ಹೋಗಬೇಕು. ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ಮಕ್ಕಳು ಮರಳಿ ಮನೆ ತಲುಪುವವರೆಗೂ ಜೀವ ಅಂಗೈಯಲ್ಲಿ ಹಿಡಿದು ಕಾಯುತ್ತಿರುತ್ತೇವೆ’ ಎಂದು ತಾಯಂದಿರು ಬೇಸರ ವ್ಯಕ್ತಪಡಿಸುತ್ತಾರೆ.

‘ತೋಳ್ಳಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಮ್ಮವಾಂಡ್ಲಪಲ್ಲಿ, ಪೆದ್ದರೆಡ್ಡಿಪಲ್ಲಿ, ಯರ್ರಪೆಂಟ್ಲ, ಕಲ್ಲಿಪಲ್ಲಿ, ಸುಜ್ಞಾನಂಪಲ್ಲಿ ಗ್ರಾಮಸ್ಥರು ಪಂಚಾಯಿತಿ ಕೇಂದ್ರಸ್ಥಾನಕ್ಕೆ ಸಂಪರ್ಕಿಸುವ ಏಕೈಕ ರಸ್ತೆಯಾಗಿದೆ. ಮಳೆಗಾಲ ಬಂತೆಂದರೆ ರಸ್ತೆಯಲ್ಲಿ ಕೆಸರು ತುಂಬಿಕೊಂಡು ಓಡಾಡಲು ಕೂಡ ಸಾಧ್ಯವಿಲ್ಲದಂತೆ ಆಗುತ್ತದೆ’ ಎನ್ನುತ್ತಾರೆ ಗ್ರಾಮಸ್ಥರು.

'ವೃದ್ಧರು, ಗರ್ಭಿಣಿ ಸ್ತ್ರೀಯರನ್ನು ಚಿಕಿತ್ಸೆಗಾಗಿ ಪಟ್ಟಣದ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಗ್ರಾಮಕ್ಕೆ ತುರ್ತು ಸಂದರ್ಭದಲ್ಲಿ ಕೂಡ ವಾಹನದವರು ಬರಲು ಮನಸ್ಸು ಮಾಡುವುದಿಲ್ಲ. ಪ್ರಶ್ನಿಸಿದರೆ ನಿಮ್ಮ ಊರಿನ ರಸ್ತೆ ಹದಗೆಟ್ಟಿದೆ ಎಂದು ದೂರುತ್ತಾರೆ' ಎಂದು ವಿದ್ಯಾರ್ಥಿ ಎ.ಜಿ.ನಾಗರಾಜ್ ತಿಳಿಸುತ್ತಾರೆ.

ಈ ಬಗ್ಗೆ ಸಂಬಂಧಿಸಿದ ಅಧಿಕಾರಿ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸಮಸ್ಯೆಗೆ ಪರಿಹಾರ ನೀಡಲು ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯ್ತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರಾದ ಈಶ್ವರ ರೆಡ್ಡಿ, ನಾಗರಾಜ್‌ ರಾವ್‌, ನಂಜುಂಡ, ಎ.ಎನ್.ನರೇಂದ್ರ, ಪಿ.ಎಸ್.ಮನೋಜ್‌ ಕುಮಾರ್‌, ಮಹೇಶ್, ಅಶೋಕ, ಎ.ಜಿ.ವೆಂಕಟೇಶ್, ಆಂಜನೇಯಲು, ಮುತ್ತರಾಯಕಿಟ್ಟ, ಭಾರತಮ್ಮ, ಲಕ್ಷ್ಮೀನರಸಮ್ಮ, ಕನಕ ನಾರಾಯಣರೆಡ್ಡಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT