7

‘ಕೈ’ ಪಾಳೆಯದಲ್ಲಿ ಮತ್ತೆ ಭಿನ್ನಮತ ಸ್ಫೋಟ?

Published:
Updated:
‘ಕೈ’ ಪಾಳೆಯದಲ್ಲಿ ಮತ್ತೆ ಭಿನ್ನಮತ ಸ್ಫೋಟ?

ಚಿಕ್ಕಬಳ್ಳಾಪುರ: ಕೆಲ ತಿಂಗಳಿಂದ ತಣ್ಣಗಾಗಿದ್ದ ಜಿಲ್ಲಾ ಪಂಚಾಯಿತಿಯ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಸದಸ್ಯರ ನಡುವಿನ ‘ಮುನಿಸಿನ’ ಕಾವಿಗೆ ಮತ್ತೆ ಕಿಡಿ ಹೊತ್ತಿಕೊಂಡಿದೆ. ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಅವರಿಂದ ರಾಜೀನಾಮೆ ಪಡೆದುಕೊಳ್ಳುವಂತೆ ‘ಸ್ವಪಕ್ಷೀಯ’ ಸದಸ್ಯರು ಒತ್ತಡ ಹೇರಲು ಸಿದ್ಧತೆ ನಡೆಸಿದ್ದಾರೆ.

ಕಳೆದ ಜುಲೈನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಕೇಶವರೆಡ್ಡಿ ಅವರು ನವೆಂಬರ್ ಮುಗಿಯುವುದರೊಳಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಆದರೆ ಈವರೆಗೆ ಅವರು ರಾಜೀನಾಮೆ ನೀಡಿಲ್ಲ ಎನ್ನುವ ವಿಚಾರ ಈ ಹಿಂದೆ ‘ಬಂಡಾಯ’ ಎದ್ದಿದ್ದ ಸದಸ್ಯರನ್ನು ಪುನಃ ಕೆರಳಿಸಿದೆ.

ಕೇಶವರೆಡ್ಡಿ ಅವರು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪ್ರತಿಯೊಂದರಲ್ಲೂ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದವರು ಸೇರಿದಂತೆ ಸದಸ್ಯರೆಲ್ಲರೂ ಕಳೆದ ಫೆಬ್ರುವರಿ, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಕರೆದ ಸಾಮಾನ್ಯ ಸಭೆಗಳನ್ನು ಬಹಿಷ್ಕರಿಸಿದ್ದರು.

ಇದೇ ಸಂದರ್ಭದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ 21 ಸದಸ್ಯರ ಪೈಕಿ 14 ಸದಸ್ಯರು ಅಧ್ಯಕ್ಷರ ರಾಜೀನಾಮೆಗೆ ಪಟ್ಟು ಹಿಡಿದಿದ್ದರು. ಪಕ್ಷದೊಳಗಿನ ‘ಜಗಳ’ ಬೀದಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ಏ.27 ರಂದು ಬೆಂಗಳೂರಿನಲ್ಲಿ ಈ ಆಂತರಿಕ ಕಲಹವನ್ನು ಉಪಶಮನಗೊಳಿಸಲು ಕರೆದಿದ್ದ ಸಭೆ ಕೂಡ ಫಲ ನೀಡಿರಲಿಲ್ಲ.

ಇದರಿಂದಾಗಿ ಜುಲೈನಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ‘ಕೈ’ಗಾಯಕ್ಕೆ ಮುಲಾಮು ಹಚ್ಚುವ ಕೆಲಸ ನಡೆದಿತ್ತು. ಆ ಸಭೆಯಲ್ಲಿ ಕಾಂಗ್ರೆಸ್‌ನ ರಾಜ್ಯ ಸಹ ಉಸ್ತುವಾರಿ ಮಧು ಯಾಸ್ಕಿಗೌಡ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಂಸದರಾದ ವೀರಪ್ಪ ಮೊಯಿಲಿ, ಕೆ.ಎಚ್.ಮುನಿಯಪ್ಪ, ಜಿಲ್ಲೆಯ ಕಾಂಗ್ರೆಸ್ ಶಾಸಕರು, ಮುಖಂಡರು ಮತ್ತು ಅಸಮಾಧಾನಗೊಂಡ ಸದಸ್ಯರು ಭಾಗವಹಿಸಿದ್ದರು.

ಸಭೆಯಲ್ಲಿ ದೂರು ಹೇಳಿಕೊಂಡ ಸದಸ್ಯರು ಕೇಶವರೆಡ್ಡಿ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಆಗ ಸಿದ್ದರಾಮಯ್ಯ ಮತ್ತು ಪರಮೇಶ್ವರ್‌ ಅವರು ಚರ್ಚೆ ನಡೆಸಿ ‘ಕೇಶವರೆಡ್ಡಿ ಅವರು ತಕ್ಷಣಕ್ಕೆ ರಾಜೀನಾಮೆ ನೀಡುವುದು ಬೇಡ. ನವೆಂಬರ್ 30ರೊಳಗೆ ರಾಜೀನಾಮೆ ನೀಡುತ್ತಾರೆ’ ಎಂದು ಹೇಳುವ ಮೂಲಕ ಅಸಮಾಧಾನಗೊಂಡಿದ್ದ ಸದಸ್ಯರನ್ನು ಸಮಾಧಾನಪಡಿಸಿ ಕಳುಹಿಸಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿದ್ದವು.

ಇದೀಗ ನವೆಂಬರ್‌ ಕಳೆದರೂ ಕೇಶವರೆಡ್ಡಿ ಅವರು ರಾಜೀನಾಮೆ ನೀಡದಿರುವುದು ‘ಕೈ’ ಬಣದಲ್ಲಿ ಮತ್ತೊಮ್ಮೆ ‘ಬಂಡಾಯ’ದ ಬಿರುಗಾಳಿ ಎಬ್ಬಿಸುವ ಸುಳಿವು ನೀಡಿದೆ. ‘ರಾಜೀನಾಮೆ ವಿಚಾರವಾಗಿ ವರಿಷ್ಠರ ಗಮನ ಸೆಳೆಯುವ ನಿಟ್ಟಿನಲ್ಲಿ ಮಂಗಳವಾರ ‘ಬಂಡಾಯ’ ಸದಸ್ಯರು ಸಭೆ ಸೇರಲು ನಿರ್ಧರಿಸಿದ್ದೇವೆ. ಕೇಶವರೆಡ್ಡಿ ಅವರು ರಾಜೀನಾಮೆ ನೀಡದಿದ್ದರೆ ಮುಂದೆ ತೆಗೆದುಕೊಳ್ಳಬಹುದಾದ ನಿರ್ಧಾರಗಳ ಬಗ್ಗೆ ಆ ಸಭೆಯಲ್ಲಿ ಚರ್ಚೆ ನಡೆಯಲಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಸದಸ್ಯರೊಬ್ಬರು ತಿಳಿಸಿದರು.

‘ಒಂದೊಮ್ಮೆ ಕೇಶವರೆಡ್ಡಿ ಅವರು ವರಿಷ್ಠರ ಮಾತಿಗೆ ಬೆಲೆ ನೀಡಿ ರಾಜೀನಾಮೆ ನೀಡದಿದ್ದರೆ ಚಿತ್ರದುರ್ಗದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅವರ ರೀತಿ ಇವರನ್ನು ಕೂಡ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸುವಂತೆ ಕೆಪಿಸಿಸಿ ಅಧ್ಯಕ್ಷರ ಮೇಲೆ ಒತ್ತಡ ಹಾಕುತ್ತೇವೆ. ಇವರ ಸರ್ವಾಧಿಕಾರಿ ಧೋರಣೆಯಿಂದ ಕಳೆದ ಒಂದೂವರೆ ವರ್ಷದಿಂದ ಜಿಲ್ಲಾ ಪಂಚಾಯಿತಿಯಲ್ಲಿ ಯಾವ ಕೆಲಸ, ಕಾರ್ಯಗಳು ನಡೆಯುತ್ತಿಲ್ಲ’ ಎಂದು ಹೇಳಿದರು.

ಈ ನಡುವೆ ಕೇಶವರೆಡ್ಡಿ ಅವರು ಡಿಸೆಂಬರ್ 7ಕ್ಕೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಕರೆದಿದ್ದಾರೆ. ‘ಆ ಸಭೆಯಲ್ಲಿ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಒಪ್ಪಿಕೊಂಡರೆ ಮಾತ್ರ ನಾವು ಸಭೆಗೆ ಭಾಗವಹಿಸುತ್ತೇವೆ. ಇಲ್ಲವಾದರೆ ನಮ್ಮ ಮುಂದೆ ಸಾಕಷ್ಟು ಆಯ್ಕೆಗಳಿವೆ. ನಮ್ಮ ನಾಯಕರೊಂದಿಗೆ ಚರ್ಚಿಸಿ ಅವುಗಳಲ್ಲಿ ಒಂದು ತೀರ್ಮಾನಕ್ಕೆ ಬರುತ್ತೇವೆ. ಅಧ್ಯಕ್ಷರಂತೂ ಬದಲಾಗಲೇ ಬೇಕು ಎನ್ನುವುದು ನಮ್ಮ ಪ್ರಮುಖ ಬೇಡಿಕೆ’ ಎಂದು ಸದಸ್ಯರೊಬ್ಬರು ತಿಳಿಸಿದರು.

‘ನವೆಂಬರ್‌ ಮುಗಿಯುವುದರೊಳಗೆ ಕೇಶವರೆಡ್ಡಿ ಅವರು ರಾಜೀನಾಮೆ ಕೊಡಬೇಕಿತ್ತು. ಆದರೆ ಈವರೆಗೆ ಕೊಟ್ಟಿಲ್ಲ. ಈ ವಿಚಾರದಲ್ಲಿ ಸದ್ಯ ಸದಸ್ಯರಲ್ಲಿ ಅಸಮಾಧಾನ ಮೂಡಿರುವುದು ನಿಜ. ಆದರೆ ನಾವು ನಮ್ಮ ನಾಯಕರು ನಿರ್ಧಾರಕ್ಕೆ ಬದ್ಧರಾಗಿದ್ದೇವೆ’ ಎಂದು ಚಿಂತಾಮಣಿಯ ಊಲವಾಡಿ ಕ್ಷೇತ್ರದ ಸದಸ್ಯ ಶಿವಣ್ಣ ಹೇಳಿದರು.

ಅಧ್ಯಕ್ಷ ಗಾದಿಗೆ ಪೈಪೋಟಿ

ಸದ್ಯ ಜಿಲ್ಲೆಯ ಕಾಂಗ್ರೆಸ್ ವಲಯದಲ್ಲಿ ಒಂದೆಡೆ ಕೇಶವರೆಡ್ಡಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಸಲು ಒತ್ತಡ ತರುವ ಕೆಲಸಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಆ ಸ್ಥಾನ ಅಲಂಕರಿಸಲು ನಾಲ್ಕು ಸದಸ್ಯರ ನಡುವೆ ತೀವ್ರ ಪೈಪೋಟಿ ನಡೆದಿದೆ.

ಗೌರಿಬಿದನೂರಿನ ಹೊಸೂರು ಕ್ಷೇತ್ರದ ಸದಸ್ಯ ಎಚ್‌.ವಿ.ಮಂಜುನಾಥ್‌, ಚಿಂತಾಮಣಿ ಬಟ್ಲಹಳ್ಳಿ ಕ್ಷೇತ್ರದ ಸದಸ್ಯ ಸ್ಕೂಲ್‌ ಸುಬ್ಬಾರೆಡ್ಡಿ, ಊಲವಾಡಿ ಕ್ಷೇತ್ರದ ಸದಸ್ಯ ಶಿವಣ್ಣ, ಬಾಗೇಪಲ್ಲಿ ಕಸಬಾ ಕ್ಷೇತ್ರದ ಸದಸ್ಯ ಎಂ.ಬಿ.ಚಿಕ್ಕನರಸಿಂಹಯ್ಯ (ಚಿನ್ನಿ) ಅವರ ನಡುವೆ ಅಧ್ಯಕ್ಷ ಗಾದಿ ಏರಲು ಪೈಪೋಟಿ ಹೆಚ್ಚಿದೆ ಎಂದು ತಿಳಿದು ಬಂದಿದೆ.

ಮಂಜುನಾಥ್‌ ಅವರ ಪರವಾಗಿ ಶಾಸಕ ಶಿವಶಂಕರ್‌ ರೆಡ್ಡಿ, ಸ್ಕೂಲ್‌ ಸುಬ್ಬಾರೆಡ್ಡಿ ಮತ್ತು ಶಿವಣ್ಣ ಅವರನ್ನು ಬೆಂಬಲಿಸಿ ಮುಖಂಡ ಎಂ.ಸಿ.ಸುಧಾಕರ್ ಮತ್ತು ಚಿಕ್ಕನರಸಿಂಹಯ್ಯ ಅವರ ಪರವಾಗಿ ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಅವರು ವರಿಷ್ಠರ ಮಟ್ಟದಲ್ಲಿ ‘ಲಾಬಿ’ ನಡೆಸಿದ್ದಾರೆ ಎನ್ನಲಾಗಿದೆ.

ಈ ಪೈಕಿ ಕೇಶವರೆಡ್ಡಿ ಅವರ ಉತ್ತರಾಧಿಕಾರಿ ಯಾರಾಗುತ್ತಾರೆ ಎನ್ನುವುದು ಸದ್ಯದ ಕುತೂಹಲ. ‘ನಮ್ಮ ಗುಂಪಲ್ಲಿ ಯಾರಿಗಾದರೂ ಅಧ್ಯಕ್ಷ ಸ್ಥಾನ ಸಿಗಲಿ. ಒಟ್ಟಿನಲ್ಲಿ ಕೇಶವರೆಡ್ಡಿ ಅವರನ್ನು ಕೆಳಗೆ ಇಳಿಸಿದರೆ ಸಾಕು’ ಎಂದು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

* * 

ಜುಲೈನಲ್ಲಿ ನಡೆದ ಸಭೆಯಲ್ಲಿ ನಾನು ಇರಲಿಲ್ಲ. ಈವರೆಗೆ ವರಿಷ್ಠರು ನನಗೆ ರಾಜೀನಾಮೆ ಕೊಡಿ ಎಂದು ಹೇಳಿಲ್ಲ. ಹೇಳಿದರೆ ಖಂಡಿತ ರಾಜೀನಾಮೆ ಕೊಡುತ್ತೇನೆ.

ಪಿ.ಎನ್.ಕೇಶವರೆಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry