ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವದಂತಿ: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

Last Updated 5 ಡಿಸೆಂಬರ್ 2017, 8:37 IST
ಅಕ್ಷರ ಗಾತ್ರ

ಮೊಳಕಾಲ್ಮುರು: ನೆರೆಯ ಆಂಧ್ರಪ್ರದೇಶ ಮೂಲಕ ತಾಲ್ಲೂಕಿಗೆ ಎರಡು ಗಂಡಾನೆಗಳು ಕಾಲಿಟ್ಟಿವೆ ಎಂಬ ವದಂತಿ ಸೋಮವಾರ ವ್ಯಾಪಕವಾಗಿ ಹಬ್ಬಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಶನಿವಾರ ಹಾಗೂ ಭಾನುವಾರ ಆಂಧ್ರಪ್ರದೇಶದ ಗಡಿ ಗ್ರಾಮಗಳಲ್ಲಿ ಆನೆಗಳು ದಾಳಿ ನಡೆಸಿ ಇಬ್ಬರನ್ನು ಬಲಿ ತೆಗೆದುಕೊಂಡಿತ್ತು. ಇದರ ಬೆನ್ನಲ್ಲೇ ಭಾನುವಾರ ಸಂಜೆ ತಾಲ್ಲೂಕಿನ ಗಡಿಯಲ್ಲಿನ ಮಾರಮ್ಮನ ದೇವಸ್ಥಾನ ಬಳಿ ಕಾಣಿಸಿಕೊಂಡಿವೆ ಎಂಬ ಸುದ್ದಿಯನ್ನು ಮಾಧ್ಯಮಗಳ ಮೂಲಕ ತಿಳಿದ ಜನರು, ದಿನವಿಡೀ ಸಿಕ್ಕ–ಸಿಕ್ಕವರ ಬಳಿ ‘ಏನಾಯಿತಂತೆ ಆನೆ ಕಥೆ’ ಎಂದು ಪ್ರಶ್ನಿಸುತ್ತಿದ್ದ ದೃಶ್ಯ ಕಂಡು ಬಂತು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌ ಜಿ.ಕೊಟ್ರೇಶ್‌, ‘ ಬೆಳಿಗ್ಗೆ ಪ್ರಥಮವಾಗಿ ಮರ್ಲಹಳ್ಳಿ ಬಳಿ ಆನೆಗಳು ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿತು. ಇದನ್ನು ಆಧಿರಿಸಿ ಇಡೀ ದಿನ ಬೋಡಗುಡ್ಡ, ಮೇಕೆಬಂಡೆ, ತಿಮ್ಮಪ್ಪಗುಡ್ಡ ತಪ್ಪಲು, ಆಂಧ್ರದ ಗಡಿಯ ಅರಣ್ಯ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಲಾಯಿತು. ಆನೆಗಳು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಆದರೆ ಮರ್ಲಹಳ್ಳಿ ಬಳಿ ಹೆಜ್ಜೆಗಳು ಪತ್ತೆಯಾಗಿವೆ’ ಎಂದು ಹೇಳಿದರು.

ಆಂಧ್ರಪ್ರದೇಶದ ಹಾಗೂ ಮೊಳಕಾಲ್ಮುರಿನ ಕಂದಾಯ, ಅರಣ್ಯ ಇಲಾಖೆ ಸಿಬ್ಬಂದಿ ಭಾನುವಾರ ರಾತ್ರಿಯೇ ಬೀಡು ಬಿಟ್ಟಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೊಳಕಾಲ್ಮುರು, ಮರ್ಲಹಳ್ಳಿ, ಸಮೀಪದ ತೋಟಗಳಲ್ಲಿ, ಕೋನಸಾಗರ, ಊಡೇವು, ತೋಪು ಹಾಗೂ ಆಂಧ್ರಪ್ರದೇಶದ ಗಡಿ ಗ್ರಾಮಗಳಲ್ಲಿ ಧ್ವನಿವರ್ಧಕ ಮೂಲಕ ಎಚ್ಚರದಿಂದ ಇರುವಂತೆ ಗ್ರಾಮಸ್ಥರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ನೇರಳಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮುದಿಕಪ್ಪ ಮಾತನಾಡಿ, ‘ಮರ್ಲಹಳ್ಳಿಯಲ್ಲಿನ ಬಂಡೀಕಪ್ಪ ಅವರ ಮೆಕ್ಕೇಜೋಳ ತೋಟದಲ್ಲಿ ಎರಡು ಆನೆಗಳು ಬಂದು ಬೆಳೆ ಹಾನಿ ಮಾಡಿವೆ. ನಂತರ ತಿಮ್ಮಪ್ಪನಗುಡ್ಡದತ್ತ ಹೋಗಿದ್ದನ್ನು ಗ್ರಾಮಸ್ಥರು ನೋಡಿದ್ದಾರೆ’ ಎಂದು ಹೇಳಿದರು.

ಬಿಟಿಪಿ ಡ್ಯಾಂ ಕಡೆಗೆ ಪ್ರಯಾಣ?
ಆಂಧ್ರಪ್ರದೇಶದ ರಾಯದುರ್ಗ ತಾಲ್ಲೂಕಿನ ಬಿಟಿಪಿ ಡ್ಯಾಂ ಕಡೆಗೆ ಆನೆಗಳು ಸೋಮವಾರ ಸಂಜೆ ಹೋಗಿದ್ದನ್ನು ತಾಲ್ಲೂಕಿನ ಗಡಿ ಗ್ರಾಮ ಊಡೇವಿನಲ್ಲಿ ಜನರು ನೋಡಿದ್ದಾಗಿ ಹೋಳಿದ್ದಾರೆ. ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಾಗುವುದು ಎಂದು ತಹಶೀಲ್ದಾರ್ ಕೊಟ್ರೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT