ಗುರುವಾರ , ಫೆಬ್ರವರಿ 25, 2021
17 °C

ಕುರುಬರಿಗೆ ಅನ್ಯಾಯ ಮಾಡುತ್ತಿರುವ ಸಿದ್ದರಾಮಯ್ಯ: ಎಚ್.ಡಿ. ದೇವೇಗೌಡ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುರುಬರಿಗೆ ಅನ್ಯಾಯ ಮಾಡುತ್ತಿರುವ ಸಿದ್ದರಾಮಯ್ಯ: ಎಚ್.ಡಿ. ದೇವೇಗೌಡ ಟೀಕೆ

ಬಳ್ಳಾರಿ: ‘ಇಡೀ ಕುರುಬ ಸಮುದಾಯ ಸಿದ್ದರಾಮಯ್ಯ ಬೆಂಬಲಕ್ಕಿದೆ. ಆದರೆ, ಕುರುಬ ಸಮುದಾಯದವರಿಗೆ ಸೂಕ್ತ ಅಧಿಕಾರ ನೀಡದೆ ತಾವೇ ಎಲ್ಲವನ್ನೂ ನಿಭಾಯಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಜನರ ತೆರಿಗೆ ಹಣವನ್ನು ದುಂದುವೆಚ್ಚ ಮಾಡುತ್ತಿದ್ದಾರೆ. 12 ಜನ ರಾಜಕೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಿಕೊಳ್ಳುವ ಅಗತ್ಯವೇನಿದೆ. 12 ಜನ ರಾಜಕೀಯ ಕಾರ್ಯದರ್ಶಿಗಳ ಜವಾಬ್ದಾರಿ ಏನು. ಅವರ ಕಾರು ಇತರೆ ಸೌಲಭ್ಯಗಳಿಗೆ ಅನಗತ್ಯ ವೆಚ್ಚ ಮಾಡಲಾಗುತ್ತಿದೆ. 120 ನಿಗಮ ಮಂಡಳಿಗಳೂ ಆರ್ಥಿಕವಾಗಿ ಭಾರವಾಗಿವೆ’ ಎಂದರು.

‘ಪೂರ್ಣ ಬಹುಮತ ಹೊಂದಿರುವ ರಾಷ್ಟ್ರೀಯ ಪಕ್ಷದ ಆಡಳಿತ ಇರುವ ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರಿಗೆ ಅಧಿಕಾರ ಕಳೆದುಕೊಳ್ಳುವ ಭಯ ಇರಬೇಕು. ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು ಕೆಂಪಯ್ಯನನ್ನು ಸೂಪರ್ ಹೋಮ್ ಮಿನಿಸ್ಟರ್ ಮಾಡಲಾಗಿದೆ. ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಸದ್ಯಕ್ಕೆ ಏನೂ ಮಾತನಾಡುವುದಿಲ್ಲ’ ಎಂದು ತಿಳಿಸಿದರು.

‘ನಾನು ಹೆಗಲ ಮೇಲೆ ಹೊತ್ತುಕೊಂಡು ಮೆರೆದ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದಾಗಲೇ ಕಾಂಗ್ರೆಸ್ ಜತೆ ಕೈಜೋಡಿಸಿ ನನ್ನನ್ನು ತುಳಿಯಲು ಪ್ರಯತ್ನಿಸಿದ್ದರು. ಎಂ.ಪಿ. ಪ್ರಕಾಶ್ ಮತ್ತು ತಾವು ಜೆಡಿಎಸ್ ತೊರೆದರೆ ಪಕ್ಷಕ್ಕೆ ಭವಿಷ್ಯ ಇಲ್ಲ ಎಂದು ಆಗ ಸಿದ್ದರಾಮಯ್ಯ ತಿಳಿದುಕೊಂಡಿದ್ದರು. ಪ್ರಾದೇಶಿಕ ಪಕ್ಷವನ್ನು ಉಳಿಸುವ ಜವಾಬ್ದಾರಿ ಕನ್ನಡಿಗರ ಮೇಲಿದೆ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.