3

ರಾಮ ಕಾಡಿಗೆ ಹೋಗಲು ಇನ್ನಾರು ತಿಂಗಳು ತಡ!

Published:
Updated:
ರಾಮ ಕಾಡಿಗೆ ಹೋಗಲು ಇನ್ನಾರು ತಿಂಗಳು ತಡ!

ನೀನಾಸಂ ಸತೀಶ್‌ ನಾಯಕನಾಗಿ ನಟಿಸುತ್ತಿರುವ ‘ರಾಮನು ಕಾಡಿಗೆ ಹೋದನು’ ಚಿತ್ರ ವಿಭಿನ್ನ ಶೀರ್ಷಿಕೆ ಮತ್ತು ಫಸ್ಟ್‌ ಲುಕ್‌ನಿಂದಲೇ ಗಮನ ಸೆಳೆದಿತ್ತು. ಈ ಸಿನಿಮಾ ನಿಂತುಹೋಗಿದೆ ಎಂಬ ಸುದ್ದಿ ಇತ್ತೀಚೆಗೆ ಗಾಂಧಿನಗರದ ಗಲ್ಲಿಗಳಲ್ಲಿ ಹೊಗೆಯಾಡುತ್ತಿತ್ತು. ಆದರೆ ಇದೀಗ ಸತೀಶ್‌ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

‘ಸ್ವಲ್ಪ ವಿಳಂಬವಾಗಬಹುದು, ಆದರೆ ರಾಮ ಕಾಡಿಗೆ ಹೋಗುವುದು ಮಾತ್ರ ಖಾತ್ರಿ’ ಎಂಬುದು ಅವರ ಸ್ಪಷ್ಟನೆ.

ಈ ರಾಮ ಕಾಡಿಗೆ ಹೋಗುವ ಕಾರ್ಯಕ್ರಮವನ್ನು ಆರು ತಿಂಗಳ ಮುಂದೂಡಲಾಗಿದೆಯಂತೆ. ಇದಕ್ಕೆ ಕಾರಣವನ್ನು ಕೇಳಿದರೆ ಹುಲುಸಾಗಿ ಬೆಳೆದ ಗಡ್ಡವನ್ನು ನೀವಿಕೊಂಡು ನಗುತ್ತಾರೆ ಸತೀಶ್. ಹೌದು, ರಾಮನ ಚಿತ್ರ ತಡವಾಗುವುದಕ್ಕೆ ಸತೀಶ್‌ ಗಡ್ಡವೇ ಕಾರಣ!

‘ಸದ್ಯಕ್ಕೆ ನಾನು ‘ಗೋದ್ರಾ’, ‘ಅಯೋಗ್ಯ’ ಮತ್ತು ಒಂದು ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಆ ಮೂರು ಚಿತ್ರಗಳ ಪಾತ್ರಗಳಿಗೂ ಗಡ್ಡ ಬೇಕು. ಆದರೆ ‘ರಾಮನು ಕಾಡಿಗೆ ಹೋದನು’ ಸಿನಿಮಾದ ನಾಯಕನಿಗೆ ಗಡ್ಡ ಇರುವುದಿಲ್ಲ. ಗಡ್ಡ ತೆಗೆಯದೇ ಚಿತ್ರೀಕರಣ ಮಾಡಲು ಸಾಧ್ಯವಾಗುವುದಿಲ್ಲ. ಗಡ್ಡ ತೆಗೆದರೆ ಉಳಿದ ಮೂರು ಚಿತ್ರಗಳಿಗೆ ತೊಂದರೆಯಾಗುತ್ತದೆ. ಅಲ್ಲದೇ ಈ ಚಿತ್ರ ನಮ್ಮದೇ ಸಂಸ್ಥೆಯಲ್ಲಿ ನಿರ್ಮಾಣವಾಗುತ್ತಿದೆ. ಆದ್ದರಿಂದ ಉಳಿದ ಮೂರು ಚಿತ್ರಗಳ ಚಿತ್ರೀಕರಣ ಮುಗಿಸಿಕೊಂಡು ಈ ಚಿತ್ರವನ್ನು ಕೈಗೆತ್ತಿಕೊಂಡರಾಯ್ತು ಎಂದುಕೊಂಡಿದ್ದೇವೆ’ ಎಂದು ಸುದೀರ್ಘವಾಗಿಯೇ ವಿವರಿಸುತ್ತಾರೆ ಸತೀಶ್‌.

ಆ ಮೂರು ಚಿತ್ರಗಳ ಕೆಲಸ ಮುಗಿಯಲು ಇನ್ನು ಆರು ತಿಂಗಳ ಸಮಯ ಬೇಕು. ಆದ್ದರಿಂದ ಆರು ತಿಂಗಳ ನಂತರವೇ ಕಾಡಿಗೆ ಹೋಗಲು ಅವರು ನಿರ್ಧರಿಸಿದ್ದಾರೆ.

ಇದರ ಜತಗೇ ‘ಕೆಲವರು ಈ ಚಿತ್ರ ನಿಂತುಹೋಗಿದೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ನನ್ನ ಬಳಿ ಯಾರೂ ಕೇಳುವುದಿಲ್ಲ. ಅವರಷ್ಟಕ್ಕೆ ಅವರೇ ಕಲ್ಪನೆ ಮಾಡಿಕೊಂಡು ಇಂಥ ಗಾಳಿಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ’ ಎಂದು ಬೇಸರವನ್ನೂ ಅವರು ವ್ಯಕ್ತಪಡಿಸುತ್ತಾರೆ.

ವಿಕಾಸ್ ಪಂಪಾಪತಿ ಹಾಗೂ ವಿನಯ್ ಪಂಪಾಪತಿ ಸಹೋದರರು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಐಶಾನಿ ಶೆಟ್ಟಿ ನಾಯಕಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry