ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಯಲ್ಲೇ ಕಾಳು, ಕೇಳೋರಿಲ್ಲ ಜನರ ಗೋಳು

Last Updated 5 ಡಿಸೆಂಬರ್ 2017, 9:05 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಇಲ್ಲಿನ ನೆಹರೂ ಮಾರುಕಟ್ಟೆ (ಎಪಿಎಂಸಿ ಉಪ ಪ್ರಾಂಗಣ) ವ್ಯಾಪಾರಸ್ಥರು ರೈತರು ತರುವ ಗೋವಿನಜೋಳವನ್ನು ರಸ್ತೆಯ ಮೇಲೆಯೇ ಇಟ್ಟ ತೂಕ ಮಾಡುತ್ತಿದ್ದು, ಇದರಿಂದ ಸಂಚಾರಕ್ಕೆ ತೀವ್ರ ತೊಂದರೆ ಆಗುತ್ತಿದೆ.

ನಗರಸಭೆ ಪ್ರೌಢ ಶಾಲೆ, ಆರ್‌ಟಿ ಇಎಸ್‌ ಪ.ಪೂ ಕಾಲೇಜು, ಪ್ರೊ.ಐ.ಜಿ.ಸನದಿ ಕಲಾಭವನ, ಸರ್ಕಾರಿ ಪ್ರಾಥಮಿಕ ಶಾಲೆ ನಂ.1 ಶಾಲೆಗೆ ಹೋಗಲು ಇದೇ ಮಾರ್ಗ ಹೆಚ್ಚಾಗಿ ಬಳಕೆ ಆಗುತ್ತದೆ.

ರಸ್ತೆಯಲ್ಲೇ ತೂಕದ ಯಂತ್ರ ಇಟ್ಟು ಹಮಾಲರು ಗೋವಿನ ಜೋಳ ತೂಕ ಮಾಡಿ, ಚೀಲ ತುಂಬುತ್ತಾರೆ. ಇದರಿಂದ ದ್ವಿಪಥ ರಸ್ತೆಯ ಒಂದು ಭಾಗ ಸಂಪೂರ್ಣ ಬಂದ್‌ ಆಗುತ್ತದೆ. ಜೊತೆಗೆ ಕಾಳು ಸಾಗಿಸುವ ಲಾರಿ, ಟ್ರ್ಯಾಕ್ಟರ್‌, ಟಂಟಂ ಗಾಡಿಗಳನ್ನು ಸಿಕ್ಕ–ಸಿಕ್ಕಲ್ಲಿ ನಿಲ್ಲಿಸುವುದರಿಂದ ನಗರ ಸಭೆ ಕ್ರೀಡಾಂಗಣ, ಈಜುಕೊಳಕ್ಕೆ ಹೋಗುವ ವಿದ್ಯಾರ್ಥಿಗಳು ಹಾಗೂ ಬೈಕ್‌ ಸವಾರರು ಹರ ಸಾಹಸ ಪಡುವಂತಾಗಿದೆ.

‘ರಸ್ತೆ ಮೇಲೆ ಗೋವಿನ ಜೋಳ ಹಾಕುವುದರಿಂದ ಸಂಚಾರಕ್ಕೆ ತೊಂದರೆಯಾದ ಬಗ್ಗೆ ಕ್ರೀಡಾಪಟುಗಳು ಮತ್ತು ಈಜು ಕೊಳಕ್ಕೆ ಹೋಗುವವರು ನನ್ನ ಗಮನಕ್ಕೆ ತಂದಿದ್ದಾರೆ. ವ್ಯಾಪಾರಸ್ಥರಿಗೆ ಹೇಳಿ–ಹೇಳಿ ಸಾಕಾಗಿದೆ. ಈ ಬಗ್ಗೆ ಸಂಚಾರ ಪೊಲೀಸ್‌ ಠಾಣೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ’ ಎಂದು ತಾಲ್ಲೂಕು ಯುವಜನ ಕ್ರೀಡಾಧಿಕಾರಿ ಎಂ.ಸಿ.ಬಲ್ಲೂರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗೋವಿನ ಜೋಳ ತೂಕ ಮಾಡಿ, ಚೀಲ ತುಂಬುವಾಗ ಅದರ ಹೊಟ್ಟು, ದೂಳು ಗಾಳಿಗೆ ತೂರಿ ಸೈಕಲ್‌, ಬೈಕ್‌ಸವಾರರ ಕಣ್ಣು ಆವರಿಸುತ್ತದೆ. ಲಾರಿ ಚಾಲಕರು ರಸ್ತೆ ಬದಿಗೆ ವಾಹನ ನಿಲ್ಲಿಸಿ ಲೋಡ್‌ ಮಾಡುವರೆಗೂ ಗುಟಕಾ ತಿಂದು ಉಗುಳಿ, ಅಲ್ಲಲ್ಲಿ ಮೂತ್ರವನ್ನೂ ಮಾಡಿ ಗಲೀಜು ಮಾಡುತ್ತಾರೆ’ ಎಂದು ವಿದ್ಯಾರ್ಥಿಗಳಾದ ಬೀರಪ್ಪ ಬಳ್ಳಾರಿ ಮತ್ತು ಮಂಜು ಕೊರಮಂಚಿಕರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಕೊಠಡಿ ಆವರಿಸುವ ದೂಳು: ‘ಇಲ್ಲಿನ ರಸ್ತೆ ಮೇಲೆ ದಿನಾಲು ಗೋವಿನಜೋಳ ಹಾಕುವುದರಿಂದ ಶಾಲೆಯ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಅಲರ್ಜಿ ಉಂಟಾಗಿ, ಮೈ ಕೆರೆತ ಶುರುವಾಗಿದೆ. ಈ ಬಗ್ಗೆ ವ್ಯಾಪಾರಸ್ಥರಿಗೆ ಅನೇಕ ತಿಳಿಸಿದ್ದರೂ ಶಾಲೆ ಬಳಿಯೇ ಗೋವಿನಜೋಳ ಹಾಕುವುದನ್ನು ಅವರು ಬಿಡುತ್ತಿಲ್ಲ’ ಎಂದು ನಗರಸಭೆ ಪ್ರೌಢಶಾಲೆಯ ಮುಖ್ಯಶಿಕ್ಷಕ ಸಿ.ಎಚ್‌.ಮೇಗಳಮನಿ ದೂರಿದರು.

‘ಗೋವಿನಜೋಳದ ದೂಳು ಜೋರು ಗಾಳಿ ಬಿಟ್ಟಾಗ ಶಾಲೆಯ ಕೊಠಡಿ ಒಳಗೆ ನುಗ್ಗುತ್ತದೆ. ಕೂಡಲೇ ಮಕ್ಕಳಲ್ಲಿ ಕೆಮ್ಮು ಕಾಣಿಸಿಕೊಳ್ಳುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ’ ಎಂದು ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ನಗರಸಭೆಯ 18ನೇ ವಾರ್ಡ್‌ ಸದಸ್ಯೆ ಜಯಶ್ರೀ ಶಿವಮೊಗ್ಗಿ, ‘ರಸ್ತೆ ಮೇಲೆ ಗೋವಿನಜೋಳ ಹಾಕುವ ಸಂಗತಿ ನಮ್ಮ ಗಮನಕ್ಕೆ ಬಂದಿಲ್ಲ. ನಗರಸಭೆ ಪ್ರೌಢ ಶಾಲೆಗೆ ಮತ್ತು ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಅಲ್ಲಿನ ವ್ಯಾಪಾರಸ್ಥರಿಗೆ ತಿಳಿ ಹೇಳುತ್ತೇನೆ. ಶಾಲೆ ಬಳಿ ಲಾರಿಗಳನ್ನು ನಿಲ್ಲಿಸದಂತೆ ಸಂಚಾರ ಠಾಣೆ ಪೊಲೀಸರ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

* * 

ರಸ್ತೆಯಲ್ಲಿ ವ್ಯಾಪಾರಸ್ಥರು ಗೋವಿನಜೋಳ ತೂಕ ಮಾಡದಂತೆ, ಲಾರಿಗಳನ್ನು ರಸ್ತೆ ಬದಿಗೆ ನಿಲ್ಲಿಸದಂತೆ ಸೂಕ್ತ ಕ್ರಮಕೈಗೊಳ್ಳಲಾಗುವುದು
ವಸಂತ
ಸಬ್‌ಇನ್‌ಸ್ಪೆಕ್ಟರ್‌, ಸಂಚಾರ ಠಾಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT