ಗುರುವಾರ , ಮಾರ್ಚ್ 4, 2021
30 °C

ಮರದ ಮೇಲೆ ಮನೆಯ ಮಾಡಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರದ ಮೇಲೆ ಮನೆಯ ಮಾಡಿ...

ಪ್ರಕೃತಿಯ ಮಡಿಲಲ್ಲಿ ಮರದ ಮೇಲಿನ ಮನೆಯನೇರಿ ಕಾಲಕಳೆಯುವುದು ಅದ್ಭುತ ಅನುಭವ. ಈ ಕ್ಷಣವನ್ನು ಮತ್ತಷ್ಟು ಸೊಗಸಾಗಿಸಲು ವೈವಿಧ್ಯಮಯ ಮರಗಳ ಮನೆ ನಿರ್ಮಾಣವಾಗಿದೆ. ಪ್ರಪಂಚದಲ್ಲಿಯೇ ಅತಿ ಸುಂದರ ಎನಿಸುವಂತಹ ಮರದ ಮನೆಗಳು ಯಾವುದೆಂಬುದು ನಿಮಗೆ ಗೊತ್ತೆ...

ಹೆಮ್‌ಲಾಫ್ಟ್ (ಕೆನಡಾ): ಈ ಮೊಟ್ಟೆಯಾಕಾರದ ಟ್ರೀ ಹೌಸ್‌ ನಿರ್ಮಿಸಿದ್ದು ಜೋಯಲ್‌ ಅಲೆನ್‌ ಹೆಮ್ಲೋಫ್ಟ್‌. ಎಂಜಿನಿಯರ್‌ ಪದವಿ ಮುಗಿಸಿರುವ ಇವರಿಗೆ ಕೆಲಸ ಸಿಗಲಿಲ್ಲ. ಇದೇ ವೇಳೆ ಬಡಗಿಯೊಬ್ಬರ ಪರಿಚಯವಾಯಿತು. ಅವರಿಂದ ಕಲಿತ ವಿದ್ಯೆಯನ್ನೇ ಜೀವನದ ವೃತ್ತಿಯಾಗಿಸಿಕೊಂಡರು. ಮನೆಯಿಲ್ಲದ ಇವರು ಎಲ್ಲೆಂದರಲ್ಲಿ ಮಲಗುತ್ತಿರುತ್ತಾರೆ. ಇದೇ ವೇಳೆ ಮಾರ್ಕ್‌ ಎಂಬ ವ್ಯಕ್ತಿಯ ಪರಿಚಯವಾಗುತ್ತದೆ. ಇಬ್ಬರಿಗೂ ನೆಲೆ ಇರುವುದಿಲ್ಲ. ಕಾಡಿನಲ್ಲೆಲ್ಲ ಮಲಗುತ್ತಿರುತ್ತಾರೆ. ಇಬ್ಬರಿಗೂ ಸುರಕ್ಷತೆಯ ಚಿಂತೆ ಕಾಡಿದಾಗ ಮರದ ಮೇಲೆ ಹೀಗೊಂದು ಮನೆ ಕಟ್ಟುವ ಯೋಚನೆ ಮೂಡುತ್ತದೆ.

ಬರ್ಡ್‌ ನೆಸ್ಟ್‌ ಟ್ರೀ ಹೌಸ್‌: ಹೊರಗೆ ನೋಡುವಾಗ ಹಕ್ಕಿಗಳ ಗೂಡಿನಂತೆಯೇ ಕಾಣುವ ಇದು ವಿಶೇಷ ವಿನ್ಯಾಸದಿಂದಲೇ ಗಮನ ಸೆಳೆಯುತ್ತದೆ. ಸ್ವೀಡನ್‌ನಲ್ಲಿರುವ ಈ ಟ್ರೀಹೌಸ್‌ನ ಒಳಾಂಗಣ ಅದ್ದೂರಿಯಾಗಿದ್ದು, ಮಲಗುವ ಕೋಣೆ, ಲೀವಿಂಗ್‌ ರೂಂ ಹೊಂದಿದೆ. ವೈಫೈ ಸಂಪರ್ಕ, ಕಂಪ್ಯೂಟರ್‌, ಟಿ.ವಿ. ಸೇರಿದಂತೆ ಎಲ್ಲಾ ಸೌಲಭ್ಯಗಳೂ ಇಲ್ಲಿ ಲಭ್ಯವಿದೆ. 180 ಚದರ ಅಡಿಯಲ್ಲಿ ಇದರ ನಿರ್ಮಾಣ ಮಾಡಲಾಗಿದೆ.

***

ಮೂರು ಅಂತಸ್ತಿನ ಟ್ರೀಹೌಸ್‌: ಅಪರೂಪ ಎನ್ನುವಂತಿರುವ ಈ ಟ್ರೀ ಹೌಸ್‌ ಇರುವುದು ಬ್ರಿಟಿಷ್‌ ಕೊಲಂಬಿಯಾ ಕಾಡಿನಲ್ಲಿ. ಎರ್ನೆಸ್‌ ಮತ್ತು ಡೋರಿಸ್‌ ನೀಧಂ ಅವರ ಕೈಚಳಕದಿಂದ ನಿರ್ಮಾಣವಾಗಿರುವ ಮನೆಯಿದು. 1950ರಲ್ಲಿ ಇದರ ನಿರ್ಮಾಣ ಮಾಡಲಾಯಿತು. ಜಾನಪದ ಸಂಸ್ಕೃತಿ ನೆನಪಿಸುವ ಹಲವು ಪ್ರತಿಮೆಗಳು ಇಲ್ಲಿವೆ. ಕುಟುಂಬದವರೆಲ್ಲ ಕಳೆಯಲು ಇದು ಪ್ರಶಸ್ತ ತಾಣ.

***

ಮನುಷ್ಯರು, ಹಕ್ಕಿಯ ಟ್ರೀಹೌಸ್‌: ವಿಶೇಷ ಎನಿಸುವ ಈ ಟ್ರೀ ಹೌಸ್‌ ಇರುವುದು ಜಪಾನಿನಲ್ಲಿ. ಒಂದು ಬದಿಯಲ್ಲಿ ಹಕ್ಕಿಗಳಿಗಾಗಿ ಗೂಡು, ಇನ್ನೊಂದು ಬದಿಯಲ್ಲಿ ಮನುಷ್ಯರು. ಜಪಾನಿನ ನೆಡೊ ಎನ್ನುವವರು ಇದರ ವಿನ್ಯಾಸಕಾರ. ಹಕ್ಕಿಗಳಿಗಾಗಿಯೇ 78 ಗೂಡುಗಳನ್ನು ಇದರಲ್ಲಿ ನಿರ್ಮಾಣ ಮಾಡಲಾಗಿದೆ. ಹಕ್ಕಿಗಳ ಚಿಲಿಪಿಲಿ ನಾದದ ಜೊತೆಗೆ ಅವುಗಳ ಜೀವನರೀತಿಯನ್ನು ಇಲ್ಲಿ ಆಸ್ವಾದಿಸಬಹುದು.

***

ಪ್ಲೇನ್‌ ಟ್ರೀಹೌಸ್‌: ವಿಮಾನದ ಮಾದರಿಯಲ್ಲಿರುವ ಈ ಐಶಾರಾಮಿ ಟ್ರೀ ಹೌಸ್‌ ಇರುವುದು ಸ್ಪೇನ್ನಲ್ಲಿ. ಕಡಲಿನ ಬಳಿ ಇರುವ ಈ ಟ್ರೀಹೌಸ್‌ನಲ್ಲಿ ಕಾಲ ಕಳೆಯುವುದೇ ಅದ್ಭುತ ಅನುಭವ ನೀಡುತ್ತದೆ. 1965ನಲ್ಲಿ ಇದರ ನಿರ್ಮಾಣ ಮಾಡಲಾಯಿತು. ಇದರಲ್ಲಿ ಎರಡು ಮಲಗುವ, ಹೋಟೆಲ್‌, ಕಿಂಡರ್‌ಗಾರ್ಟನ್ಸ್‌ ಇದೆ. ಒಂದು ರಾತ್ರಿ ಕಳೆಯಲು ಇಲ್ಲಿ ಬರೋಬ್ಬರಿ 32 ಸಾವಿರ ತೆರಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.