ಶನಿವಾರ, ಫೆಬ್ರವರಿ 27, 2021
31 °C

ಮೋಡ ಕವಿದು ಮೂಡ್‌ ಹಾಳಾಯ್ತೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋಡ ಕವಿದು ಮೂಡ್‌ ಹಾಳಾಯ್ತೆ...

ಇಂದೇಕೋ ಮನಸು ಮಂಕಾಗಿದೆ. ಯಾವ ಕೆಲಸ ಮಾಡಲೂ ಇಷ್ಟವಿಲ್ಲ. ಕಾರಣವೇ ಇಲ್ಲದೆ ಅಳು ಬರುತ್ತಿದೆ. ಹಾಗೇ ಸುಮ್ಮನೆ ನಿದ್ದೆ ಮಾಡೋಣ ಎನಿಸುತ್ತಿದೆ.

ಮೋಡ ಕವಿದ ವಾತಾವರಣ ಅಥವಾ ಚುಮುಚುಮು ಚಳಿಯ ದಿನಗಳಲ್ಲಿ ಇಂಥ ಭಾವನೆಗಳು ಅನೇಕರನ್ನು ಕಾಡುತ್ತವೆ. ಚಳಿಗಾಲದಲ್ಲಿ ಇದ್ದಕ್ಕಿದ್ದಂತೆ ಮೂಡ್‌ಔಟ್‌ ಆಗುವುದಕ್ಕೆ ಕಾರಣವೇನು? ಒತ್ತಡ, ಖಿನ್ನತೆ, ಭಯದ ಭಾವ ಮನಸನ್ನಾವರಿಸುವುದೇಕೆ? ಚಳಿಗಾಲದಲ್ಲಿ ಉಂಟಾಗುವ ಈ ಎಲ್ಲಾ ಒತ್ತಡಗಳಿಂದ ಹೊಸಬರುವುದು ಹೇಗೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ಮೂಡ್‌ ಬದಲಾವಣೆಗೆ ಕಾರಣ: ಕಾಲಮಾನಕ್ಕೆ ತಕ್ಕಂತೆ ಮೂಡ್‌ನಲ್ಲಿ ಬದಲಾವಣೆಯಾಗುವುದಕ್ಕೆ ಸೀಸನಲ್‌ ಅಫೆಕ್ಟಿವ್‌ ಡಿಸಾರ್ಡರ್‌ (SAD) ಎಂದು ಕರೆಯಲಾಗುತ್ತದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಬೆಳಕಿನ ಪ್ರಖರತೆ ಕಡಿಮೆ ಇರುತ್ತದೆ. ಬೆಳಕಿನ ಪ್ರಖರತೆಗೆ ನಮ್ಮ ದೇಹ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದರ ಮೇಲೆ ನಮ್ಮ ಮೂಡ್‌ ನಿರ್ಧಾರವಾಗುತ್ತದೆ. ನಮ್ಮ ಕಣ್ಣನ್ನು ಪ್ರವೇಶಿಸುವ ಬೆಳಕು ಹಾರ್ಮೋನ್‌ಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ನಮ್ಮ ಮನಸ್ಥಿತಿಯಲ್ಲಿ ಬದಲಾವಣೆ ಉಂಟಾಗುತ್ತದೆ.

ಮನಸು ಸರಿ ಇಲ್ಲ ಎಂದು ಕತ್ತಲ ಕೋಣೆಯಲ್ಲಿ ಮಂಕಾಗಿ ಕುಳಿತುಕೊಳ್ಳುವ ಬದಲು ಹೊರಗೆ ಒಂದು ಸುತ್ತು ಓಡಾಡಿ ಬನ್ನಿ. ಕಿಟಕಿಯ ಪಕ್ಕಕ್ಕೆ ಕುಳಿತು ಬೆಳಕು ಹಾಗೂ ನಿಸರ್ಗ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ. ನಿಮ್ಮ ಮೂಡ್ ಸ್ವಲ್ಪ ಚುರುಕಾಗುತ್ತದೆ.

ಇಂಥ ಮೂಡ್ ಇದ್ದಾಗ ದೈಹಿಕ ಚಟುವಟಿಕೆ ಆಧಾರಿತ ಕೆಲಸಗಳಲ್ಲಿ ಹೆಚ್ಚೆಚ್ಚು ತೊಡಗಿಕೊಳ್ಳಿ. ಖಿನ್ನತೆಯ ಮನಸ್ಥಿತಿಯಿಂದ ಹೊರಬರಲು ವ್ಯಾಯಾಮ ಮಹತ್ವದ ಪಾತ್ರ ವಹಿಸುತ್ತದೆ. ಸೂರ್ಯನ ಬೆಳಕು ಚೆನ್ನಾಗಿ ಇರುವಲ್ಲಿ ವ್ಯಾಯಾಮ ಮಾಡುವುದು ಉತ್ತಮ. ಮಿದುಳಿನಲ್ಲಿ ಉತ್ಪತ್ತಿಯಾಗುವ ಸೆರಟಿನನ್‌ ರಾಸಾಯನಿಕ ನಮ್ಮ ಮೂಡ್‌ಗೆ ಸಂಬಂಧಿಸಿದ್ದು. ಚಟುವಟಿಕೆ ಹಾಗೂ ವ್ಯಾಯಾಮದಿಂದಾಗಿ ಸೆರಟಿನನ್‌ ಪ್ರಮಾಣದಲ್ಲಿ ಬದಲಾವಣೆಯಾಗಿ ಮನಸ್ಸು ಆಹ್ಲಾದಕರವಾಗಿರುತ್ತದೆ. ಚಳಿಗಾಲದ ಖಿನ್ನತೆ ನಿವಾರಣೆಗೆ ಮಧ್ಯಾಹ್ನ ಒಂದು ಗಂಟೆ ವಾಕ್‌ ಮಾಡುವುದು ಉತ್ತಮ ಪರಿಹಾರ ಎಂದು ಕೆಲಸ ಸಂಶೋಧನೆಗಳು ಹೇಳುತ್ತವೆ.

ಆಹಾರ ಹೀಗಿರಲಿ: ಮಂಕು ಮೂಡ್ ಇರುವವರ ಮನಸು ಚುರುಕು ಮಾಡಿಕೊಳ್ಳಲು ನಾನಾ ದಾರಿಗಳಿವೆ. ಚಳಿಗಾಲದಲ್ಲಿ ಚಾಕೊಲೆಟ್‌, ಪಾಸ್ತಾ, ಬ್ರೆಡ್‌ ಮುಂತಾದ ಸಿಹಿ ಹಾಗೂ ಕಾರ್ಬೊಹೈಡ್ರೇಟ್‌ ಅಂಶ ಹೆಚ್ಚಿರುವ ಪದಾರ್ಥಗಳನ್ನು ಸೇವಿಸಬೇಕು ಎನಿಸುವುದು ಸಹಜ. ಹಣ್ಣು, ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಒಳಿತು. ಸಿಹಿ ತಿಂಡಿ ಸೇವನೆ ನಿಯಂತ್ರಿಸಿ.

ಅಮಿನೊ ಆ್ಯಸಿಡ್‌ ಹೊಂದಿದ ಆಹಾರಗಳು ಮೂಡ್‌ ಬೂಸ್ಟರ್‌ನಂತೆ ಕೆಲಸ ಮಾಡುತ್ತವೆ. ಒಮೆಗಾ 3 ಫ್ಯಾಟಿ ಆಸಿಡ್ಸ್‌ ಹೊಂದಿರುವ ಆಹಾರಗಳು ಯಾವಾಗಲೂ ಖುಷಿಖುಷಿಯಾಗಿರುವಂತೆ ಪ್ರೇರೇಪಿಸುತ್ತವೆ. ಅಗಸೆ ಬೀಜ, ವಾಲ್‌ನಟ್ಸ್‌, ಸಾಲ್ಮನ್‌ಗಳಲ್ಲಿ ಒಮೆಗಾ 3 ಫ್ಯಾಟಿ ಆ್ಯಸಿಡ್‌ ಅಂಶ ಹೆಚ್ಚಿರುತ್ತದೆ. ಚಳಿಗಾಲದಲ್ಲಿ ಬೆರ್ರಿಹಣ್ಣುಗಳ ಸೇವನೆ ಉತ್ತಮ. ಸ್ಟ್ರಾಬೆರ್ರಿ, ಬ್ಲೂಬೆರ್ರಿ, ರಸಬೆರ್ರಿ ಹಣ್ಣುಗಳು ಒತ್ತಡ, ಆತಂಕವನ್ನು ಬಹುಬೇಗನೆ ನಿಯಂತ್ರಿಸುತ್ತವೆ. ನಿಮ್ಮ ಬ್ಯಾಗ್‌ನಲ್ಲಿ ಈ ಹಣ್ಣುಗಳಿಗಾಗಿ ಜಾಗ ಮೀಸಲಿಟ್ಟುಕೊಳ್ಳಿ.

ಹಸಿರು ತರಕಾರಿ, ಸೊಪ್ಪು, ಓಟ್‌ಮೀಲ್‌, ಸೂರ್ಯಕಾಂತಿ ಬೀಜ, ಕಿತ್ತಳೆ, ಧಾನ್ಯಗಳು, ಬೇಳೆಕಾಳುಗಳು (ಲೆಂಟಿಲ್ಸ್‌), ಅಲಸಂದೆ, ಸೋಯಾಬೀನ್‌ಗಳಲ್ಲಿ ಫೋಲಿಕ್‌ ಆ್ಯಸಿಡ್‌ ಅಂಶ ಹೆಚ್ಚಿರುತ್ತದೆ. ನಿಮ್ಮ ಆಹಾರದಲ್ಲಿ ಇವುಗಳನ್ನು ಹೆಚ್ಚಾಗಿ ಬಳಸಿ. ವಿಟಮಿನ್‌ ಬಿ 12 ಹೊಂದಿರುವ ಆಹಾರಕ್ಕೆ ಆದ್ಯತೆ ಕೊಡಿ. ‘ವಿಟಮಿನ್‌ ಡಿ’ ಅಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಹಾಲು, ಮೊಟ್ಟೆಯ ಹಳದಿ ಭಾಗ, ಅಣಬೆ, ಮೀನು ಸೇವನೆಗೆ ಆದ್ಯತೆ ಇರಲಿ. ಕುಂಬಳಕಾಯಿ ಬೀಜಗಳಿಂದ ಮಾಡಿದ ಆಹಾರ ಸೇವನೆಯೂ ಪರಿಣಾಮಕಾರಿ.

ಬಾಳೆಹಣ್ಣಿನಲ್ಲಿ ಟ್ರಿಪ್ಟೊಫಾನ್‌ ಮತ್ತು ಮ್ಯಾಗ್ನೀಶಿಯಂ ಗಣನೀಯ ಪ್ರಮಾಣದಲ್ಲಿದೆ. ಚಳಿಗಾಲದಲ್ಲಿ ರಸಬಾಳೆಯ ಸೇವನೆಯು ಮನಸಿನಲ್ಲಿ ಹರಿದಾಡುವ ನಕಾರಾತ್ಮಕ ಭಾವನೆಗಳನ್ನು ಬದಿಗೆ ಸರಿಸಬಲ್ಲದು. ಆತಂಕ ಕಡಿಮೆ ಮಾಡಿ ಚೆನ್ನಾಗಿ ನಿದ್ದೆ ತರುವ ಶಕ್ತಿಯೂ ಬಾಳೆಹಣ್ಣಿಗೆ ಇದೆ.

(ವಿವಿಧ ವೆಬ್‌ಸೈಟ್‌ಗಳಿಂದ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.