ಸೋಮವಾರ, ಮಾರ್ಚ್ 8, 2021
26 °C

ಇಲಿಯಾನಾಗೆ ಖುಷಿ ದಿನಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಲಿಯಾನಾಗೆ ಖುಷಿ ದಿನಗಳು

ಬಳುಕುವ ಬಳ್ಳಿ ಇಲಿಯಾನಾ ಪಾಲಿಗೆ 2017 ಖುಷಿಖುಷಿಯಾಗಿಯೇ ಕಳೆಯಿತು. ‘ಮುಬಾರಕನ್’ ಮತ್ತು ‘ಬಾದ್‌ಶಾಹೊ’ ಚಿತ್ರಗಳು ಯಶಸ್ಸಿನ ಜೊತೆಗೆ ಖ್ಯಾತಿಯನ್ನೂ ತಂದುಕೊಟ್ಟವು. 2018ರಲ್ಲಿ ಇಲಿಯಾನ ಅಭಿನಯದ ‘ರೈಡ್’ ಮತ್ತು ‘ಬಟ್ಟಿ ಗುಲ್‌ ಮೀಟರ್ ಚಾಲು’ ಚಿತ್ರಗಳು ತೆರೆಕಾಣಲಿವೆ. ಇನ್ನೊಂದು ವರ್ಷ ನಟಿಯ ತುಟಿಯ ಮೇಲೆ ಇದೇ ಖುಷಿಯ ಮುಗುಳ್ನಗೆ ಉಳಿಯಲಿದೆ ಎಂಬ ಮಾತುಗಳು ಈಗ ಕೇಳಿಬರುತ್ತಿವೆ.

ಮುಂಬಯಿಯಲ್ಲಿ ಈಚೆಗಷ್ಟೇ ನಡೆದ ‘ಸ್ಟಾರ್ ಸ್ಕ್ರೀನ್ ಅವಾರ್ಡ್ಸ್‌’ನಲ್ಲಿ ಚಿನ್ನದ ಬಣ್ಣದ ಉಡುಗೆ ತೊಟ್ಟು ಕೆಂಪುಹಾಸಿನ ಮೇಲೆ ಕ್ಯಾಮೆರಾಗಳಿಗೆ ಪೋಸುಕೊಟ್ಟ  ಇಲಿಯಾನ ಡಿ ಕ್ರೂಜ್ ಎಲ್ಲರ ಗಮನ ತನ್ನೆಡೆಗೆ ಸೆಳೆದುಕೊಂಡರು. ತಾನಿಯಾ ಖನುಜಾ ವಿನ್ಯಾಸದ ಗೌನ್‌ ಇಲಿಯಾನಳ ದೇಹಸಿರಿಯನ್ನು ಢಾಳಾಗಿಯೇ ಪ್ರದರ್ಶಿಸಿತು.

ಗೋಧಿ ಮೈಬಣ್ಣದ ನಟಿಗೆ ಚಿನ್ನದ ಬಣ್ಣದ ಗೌನ್‌ ಅಚ್ಚುಕಟ್ಟಾಗಿ ಒಪ್ಪುತ್ತಿತ್ತು. ಕಣ್ಣಿನ ಕಾಡಿಗೆ, ಎತ್ತಿಕಟ್ಟಿದ್ದ ತುರುಬು, ಕಿವಿಗೆ ಇಟ್ಟುಕೊಂಡಿದ್ದ ಇಷ್ಟಗಲದ ಕಿವಿಯೋಲೆ, ತೋಳು–ಮುಂಗೈ ಬಳಿ ಎದ್ದುಕಂಡ ಕಪ್ಪು ಒಳ ಲೈನಿಂಗ್‌ ಬಟ್ಟೆ ಗೌನ್‌ಗೆ ಮತ್ತಷ್ಟು ಮೆರುಗು ತುಂಬಿದ್ದು ಸುಳ್ಳಲ್ಲ. ಸ್ವರ್ಣವರ್ಣದ ಅಪ್ಸರೆಯಂತೆ ಕಾಣುತ್ತಿದ್ದ ಇಲಿಯಾನಾಳನ್ನು ಒಮ್ಮೆ ನೋಡಿದವರು ಮತ್ತೆ ದೃಷ್ಟಿ ಬದಲಿಸಲು ಹರಸಾಹಸ ಪಡಬೇಕಿತ್ತು.

ಈ ಸಂದರ್ಭ ಮಾಧ್ಯಮದವರೊಡನೆ ಖುಷಿಖುಷಿಯಾಗಿ ಮಾತನಾಡಿದ ಇಲಿಯಾನಾ, ‘ಅಗೋಇಗೋ ಅನ್ನುವ ಹೊತ್ತಿಗೆ 2017 ಕಳೆದುಹೋಯ್ತು. ಎರಡು ದೊಡ್ಡ ಚಿತ್ರಗಳು ಬಿಡುಗಡೆಯಾದವು. ನನ್ನ ಪಾಲಿಗೆ ಇದು ನಿಜಕ್ಕೂ ಒಳ್ಳೇ ವರ್ಷ. ಆದ್ರೆ ಬೇಗ ಮುಗಿದು ಹೋಯ್ತು ಅನ್ನೋದೇ ಬೇಜಾರು’ ಎಂದು ನಗುತುಳುಕಿಸಿದರು.

‘ಅಜಯ್‌ ದೇವಗನ್‌ ಜೊತೆಗೆ ‘ರೈಡ್‌’ ಚಿತ್ರದಲ್ಲಿ ನಟಿಸಿದ್ದು ಖುಷಿಕೊಟ್ಟಿದೆ. ಅವರ ಜೊತೆಗೆ ಕೆಲಸ ಮಾಡೋದು ತುಂಬಾ ಸುಲಭ. ಅವರ ಜೊತೆಗೆ ನಟಿಸುವಾಗ ಒಬ್ಬ ದೊಡ್ಡಸ್ಟಾರ್‌ ಜೊತೆಗೆ ಇದ್ದೀನಿ ಅಂತ ಅನಿಸುವುದೇ ಇಲ್ಲ’ ಎಂದಾಗ ಕ್ಯಾಮೆರಾಗಳು ಮತ್ತೊಮ್ಮೆ ಝಳಪಳ ಫ್ಲಾಷ್‌ ಚಿಮ್ಮಿಸಿದವು. ‘ರೈಡ್’ ಚಿತ್ರ 2018ರ ಏಪ್ರಿಲ್‌ನಲ್ಲಿ ತೆರೆಕಾಣುವ ನಿರೀಕ್ಷೆ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.