ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಳಿ ಬೆಳಕಿನಲಿ ಬೆಡಗಿಯರು

Last Updated 5 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನಂಗಳದಲ್ಲಿ ಅದಾಗಲೇ ಚಂದಿರ ವಿರಾಜಮಾನನಾಗಿದ್ದ. ಬಹುಬಣ್ಣದ ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿದ್ದ ವೇದಿಕೆಯಲ್ಲಿ ಅಂದದ ಬೆಡಗಿಯರ ಬಳುಕು ನಡಿಗೆಗೆ ಸಾಕ್ಷಿಯಾಗಲು ಕ್ಯಾಮೆರಾಗಳು ಕಾತರಿಸಿದ್ದವು. ವೇದಿಕೆಯ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ದು ಬಾಲೆಯರ ಬಳುಕು ನಡೆ.

‘ಎಂಜಿ ಲಿಡೊ ಫ್ಯಾಷನಬಲ್‌ ಒನ್‌’ನ ನಾಲ್ಕನೇ ಆವೃತ್ತಿಯ ಕಾರ್ಯಕ್ರಮ ‘ಒನ್‌ ಎಂಜಿ ಲಿಡೊ ಮಾಲ್‌’ನಲ್ಲಿ ಈಚೆಗೆ ನಡೆಯಿತು. ಬೆಂಗಳೂರಿನ ವಸ್ತ್ರ ವಿನ್ಯಾಸಕ ರಮೇಶ್‌ ಡೆಂಬ್ಲ ವಿನ್ಯಾಸ ಮಾಡಿದ್ದ ‘ಬ್ರಾಂಡ್‌ ಕೃಷ್ಣ ಡೆಂಬ್ಲ’ ವಸ್ತ್ರಗಳು ಫ್ಯಾಷನ್‌ ಶೋನಲ್ಲಿ ಪ್ರದರ್ಶನಗೊಂಡು ವೀಕ್ಷಕರ ಮೆಚ್ಚುಗೆ ಪಡೆಯಿತು.

ಅಡಿಯಿಂದ ಮುಡಿಯವರೆಗೆ ವಿಭಿನ್ನವಾಗಿ ಸಿಗಾರಗೊಂಡಿದ್ದ ರೂಪದರ್ಶಿಗಳ ಆತ್ಮವಿಶ್ವಾಸದ ಹೆಜ್ಜೆ ರ‍್ಯಾಂಪಿನ ಮೌಲ್ಯವನ್ನು ವೃದ್ಧಿಸುವಂತಿತ್ತು. ಬಹು ವಿನ್ಯಾಸದ ಉಡುಗೆ ತೊಟ್ಟ ಬೆಡಗಿಯರ ಭಿನ್ನಾಣಕ್ಕೆ ವೇದಿಕೆಯೇ ಬೀಗುತ್ತಿತ್ತು. ಪಾಶ್ಚಾತ್ಯ ಹಾಗೂ ದೇಶಿಯ ಉಡುಪುಗಳ ಸಂಗಮಕ್ಕೆ ಕಾರ್ಯಕ್ರಮ ಕನ್ನಡಿಯಾಯಿತು.

‘2017ನೇ ಸಾಲಿನ ಟ್ರೆಂಡಿಂಗ್ ಉಡುಪುಗಳು’ ಈ ಫ್ಯಾಷನ್‌ ಶೋದ ಆಶಯ. ಈ ವರ್ಷ ಜನಪ್ರಿಯವಾಗಿದ್ದ ಎಂ ಅ್ಯಂಡ್‌ ಎಸ್‌, ಬೀಯಿಂಗ್‌ ಹ್ಯೂಮನ್, ಫ್ಯಾಬ್‌ ಇಂಡಿಯಾ, ಸ್ಮೂರ್, ಅಲ್ಡೊ, ಹೈಡಿಸೈನ್, ಹೋಲಿ, ಆಯೆಷಾ, ಅ್ಯಂಡ್‌, ಗ್ಲೋಬಲ್ ದೇಸಿ, ಡಾಮಿಲಾನೊ ಹಾಗೂ ಎಫ್‌ಬಿಬಿ ಬ್ರಾಂಡ್‌ನ ಉಡುಪುಗಳನ್ನು ರೂಪದರ್ಶಿಗಳು ಪ್ರದರ್ಶಿಸಿದರು.

ದೇಶಿಯ ಉಡುಪಿಗೆ ಆಧುನಿಕತೆಯ ಮೆರಗು ನೀಡಿದ್ದ ‘ಗ್ಲೋಬಲ್‌ ದೇಸಿ’ ಪಾಶ್ಚಾತ್ಯ ರಾಷ್ಟ್ರಗಳಲ್ಲಿಯೂ ಭಾರತೀಯ ವಸ್ತ್ರವನ್ನು ಧರಿಸಿ ಬೀಗಲು ಸಹಕಾರಿಯಾಗಿತ್ತು. ಸಮಾಜಸೇವೆಯ ಉದ್ದೇಶದಿಂದ ನಟ ಸಲ್ಮಾನ್‌ ಖಾನ್‌ ಆರಂಭಿಸಿರುವ ಬೀಯಿಂಗ್‌ ಹ್ಯೂಮನ್‌ ಮತ್ತು ಫ್ಯಾಬ್‌ ಇಂಡಿಯಾದ ಉಡುಗೆಗಳು ಸಮಕಾಲೀನ ವಸ್ತ್ರಗಳ ಪರಿಕಲ್ಪನೆಯನ್ನು ಮೆಲಕು ಹಾಕುವಂತಿದ್ದವು.

ಎಲ್ಲೆಡೆ ಮೊಳಗುತ್ತಿದ್ದ ಇಂಗ್ಲಿಷ್‌ ಹಾಗೂ ಹಿಂದಿ ಸಂಗೀತದ ಲಯಕ್ಕೆ ಬದ್ಧವಾಗಿ ಒಮ್ಮೆ ತುಂಡುಡುಗೆ, ಮತ್ತೊಮ್ಮೆ ನೆಲಕ್ಕೆಳೆಯುವ ಉದ್ದನೆಯ ಉಡುಗೆ ತೊಟ್ಟು ಮಂದಸ್ಮಿತರಾಗಿ ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕುವ ಲಲನೆಯರಿಗೆ ಮತ್ತಷ್ಟು ಮೆರಗು ನೀಡಿದ್ದು ಅವರ ಕೈಯಲ್ಲಿರುವ ಚೆಂದನೆಯ ಬ್ಯಾಗುಗಳು. ಕಚೇರಿಗೆ ಕೊಂಡೊಯ್ಯುವ ಸರಳ ಬ್ಯಾಗ್‌ಗಳಿಂದ ಹಿಡಿದು ಪಾರ್ಟಿಗಳಲ್ಲಿ ಮಹಿಳೆಯರನ್ನು ಆಕರ್ಷಣೆಯ ಕೇಂದ್ರ ಬಿಂದುವಾಗಿಸುವ ಸುಂದರವಾದ ಇಟಲಿಯ ವಿನ್ಯಾಸದ ಡಾಮಿಲಾನೊ ಬ್ಯಾಗುಗಳು ರೂಪದರ್ಶಿಗಳ ತೋಳುಗಳಲ್ಲಿ ಬಂಧಿಯಾಗಿದ್ದವು.

ಕಾರ್ಯಕ್ರಮವನ್ನು ಭಾರತೀಯತೆಗೆ ಒಗ್ಗಿಸಿದ್ದೂ, ದೇಶಿಯ ಬಣ್ಣ ನೀಡಿದ್ದು ರಮೇಶ್ ಡೆಂಬ್ಲ ಅವರ ವಿನ್ಯಾಸದ ‘ಬ್ರಾಂಡ್‌ ಕೃಷ್ಣ ಡೆಂಬ್ಲ’. ಫ್ಯಾಷನ್ ಶೋನ ಕೊನೆಯ ಸುತ್ತಿನಲ್ಲಿ ರಾರಾಜಿಸಿದ ಈ ಉಡುಪು ವೀಕ್ಷಕರಿಂದ ಹೆಚ್ಚು ಚೆಪ್ಪಾಳೆ ಗಿಟ್ಟಿಸಿತು. ಕಡು ಕೆಂಪು, ನೀಲಿ, ನೇರಳೆ, ಗುಲಾಬಿ, ಹಳದಿ, ಹಸಿರು, ಬಣ್ಣದ ಸಾಂಪ್ರದಾಯಿಕ ಉಡುಗೆ ಹೆಚ್ಚು ಆಪ್ತವೆನಿಸಿತು. ಪಾಶ್ಚಾತ್ಯ ಉಡುಪುಗಳಲ್ಲಿ ಕಪ್ಪು ರಾಜಬಣ್ಣವಾಗಿ ರಾರಾಜಿಸಿದರೆ, ಭಾರತೀಯ ಉಡುಪುಗಳಲ್ಲಿ ಕೆಂಪು ಮತ್ತು ನೀಲಿ ರಾಜಮನ್ನಣೆಗೆ ಪಾತ್ರವಾದವು. ನಸುಗೆಂಪು ಬಣ್ಣದ ಗಾಘ್ರಾ ಅದಕ್ಕೊಪ್ಪುವ ಆಭರಣ, ಕಡುನೀಲಿಯ ಸೀರೆಯ ಅಂಚಿನಲ್ಲಿ ಅರಳಿದ್ದ ಬಂಗಾರ ಬಣ್ಣದ ಕಸೂತಿ ದೇಶಿಯ ಉಡುಪಿನ ಶ್ರೀಮಂತಿಕೆಯನ್ನು ಸಾರಿದವು.

ನಡಿಗೆಯಲ್ಲಿಯೇ ನೃತ್ಯದ ಲಯವಿದ್ದ ಲಲನೆಯರು, ಹಾಡಿಗೆ ಒಪ್ಪುವಂತೆ ಹೆಜ್ಜೆ ಹಾಕುತ್ತಿದ್ದರೆ ವೀಕ್ಷಕರ ಎದೆಬಡಿತ ಗತಿ ತಪ್ಪುತ್ತಿತ್ತು. ಫ್ಯಾಷನ್‌ ಶೋನ ಅಂತಿಮ ಸುತ್ತು ಎಂದು ನಿರೂಪಕ ಘೋಷಿಸುತ್ತಿದ್ದಂತೆ ಪ್ರೇಕ್ಷಕರ ಮುಖದಲ್ಲಿ ಕಾಣಿಸಿಕೊಂಡ ತುಸು ಬೇಸರದ ಛಾಯೆ ಒಮ್ಮೆಗೆ ಮಾಯವಾಗುವಂತೆ ವೇದಿಕೆ ಪ್ರವೇಶಿಸಿದ್ದು, ‘ಗೂಗ್ಲಿ’ ಖ್ಯಾತಿಯ ನಟಿ ಕೃತಿ ಕರಬಂಧ. ನೀಲಿ ಬಣ್ಣದ ಉದ್ದನೆಯ ಉಡುಗೆ, ಅದಕ್ಕೊಪ್ಪುವ ತಿಳಿ ಕೆಂಪು ಬಣ್ಣದ ಕೇಶವಿನ್ಯಾಸ, ಮಿಂಚಿನಂತೆ ಆಕರ್ಷಿಸುತ್ತಿದ್ದ ನೀಲಿ ಬೊಟ್ಟಿನೊಂದಿಗೆ ರ‍್ಯಾಂಪ್ ಮೇಲೆ ನಡೆದು ಬಂದ ನಟಿಯನ್ನು ಅಭಿಮಾನಿಗಳು ಚಪ್ಪಾಳೆ, ಶಿಳ್ಳೆಗಳೊಂದಿಗೆ ಸ್ವಾಗತಿಸಿದರು.

ಅದುವೆರೆಗೂ ಇಂಗ್ಲಿಷ್‌ ಪದಗಳಿಂದ ವ್ಯಾಪಿಸಿದ್ದ ವೇದಿಕೆಯಲ್ಲಿ ಮೊದಲ ಬಾರಿಗೆ ಕನ್ನಡ ಡಿಂಡಿಮ ಬಾರಿಸಲು ಕೃತಿ ದನಿಯಾದರು. ಕನ್ನಡದಲ್ಲಿ ಮಾತು ಆರಂಭಿಸಿ ನೆರೆದಿದ್ದವರ ಹುಬ್ಬೇರುವಂತೆ ಮಾಡಿದರು. ರಮೇಶ್ ಡೆಂಬ್ಲೆ ಅವರೊಂದಿಗೆ ಹೆಜ್ಜೆ ಹಾಕಿ, ಹೊಸಶ್ರೇಣಿಯ ವಿನ್ಯಾಸದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT