ಭಾನುವಾರ, ಮಾರ್ಚ್ 7, 2021
22 °C

ಹೃದಯದ ಕಸಿಯ ಸುವರ್ಣ ಮಹೋತ್ಸವ!

ಸಂದೀಪ್ ಜೌಹಾರ್ Updated:

ಅಕ್ಷರ ಗಾತ್ರ : | |

ಹೃದಯದ ಕಸಿಯ ಸುವರ್ಣ ಮಹೋತ್ಸವ!

ಕೇಪ್‌ಟೌನ್‌ನಲ್ಲಿ ಐವತ್ತು ವರ್ಷಗಳ ಹಿಂದೆ ಮೊದಲ ಬಾರಿಗೆ ಮನುಷ್ಯನ ಹೃದಯದ ಕಸಿ ಮಾಡಲಾಯಿತು. ವಿಜ್ಞಾನ ಕ್ಷೇತ್ರದಲ್ಲಿ– ಮತ್ತು ಬಹುಶಃ ಇಡೀ ಮಾನವ ಜನಾಂಗದ ದೃಷ್ಟಿಯಲ್ಲಿ– ಇದೊಂದು ಯುಗಪಲ್ಲಟ ಮುನ್ನಡೆ.

ನಮ್ಮ ಸಾಮೂಹಿಕ ಪ್ರಜ್ಞೆಯಲ್ಲಿ ‘ಹೃದಯ’ವು ಯಾವತ್ತಿಗೂ ಒಂದು ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ‘ಹೃದಯ’ ಎಂಬ ಪದವೇ ಆ ಮಹತ್ವವನ್ನು ಸಂಕೇತಿಸುತ್ತದೆ. ಹೃದಯದ ಕಾರ್ಯಗಳ ಬಗ್ಗೆ ವೈದ್ಯಕೀಯವಾಗಿ ನಾವು ಬಹಳಷ್ಟು ಅರಿತುಕೊಂಡಿದ್ದರೂ ಹೃದಯವನ್ನು ಪ್ರೀತಿ ಹಾಗೂ ಧೈರ್ಯದ ನೆಲೆ ಎಂದೇ ಹಲವರು ಇಂದಿಗೂ ಭಾವಿಸಿದ್ದಾರೆ. ಹೃದಯ ವೈಫಲ್ಯದ ಅಂತಿಮ ಘಟ್ಟದಲ್ಲಿದ್ದ ನಿವೃತ್ತ ದಂತವೈದ್ಯ ಬರ್ನಿ ಕ್ಲಾರ್ಕ್‌ ಅವರಿಗೆ 1982ರಲ್ಲಿ ಜಗತ್ತಿನ ಮೊದಲ ಕೃತಕ ಹೃದಯ ಜೋಡಣೆ ಮಾಡಲಾಯಿತು. ಆಗ, ತನ್ನನ್ನು ಪ್ರೀತಿಸಲು ತನ್ನ ಪತಿಗೆ ಸಾಧ್ಯವಾಗದು ಎಂದು ಕ್ಲಾರ್ಕ್ ಅವರ ಪ‍ತ್ನಿ ಚಿಂತಿತರಾಗಿದ್ದರಂತೆ!

ಹೃದಯ ವೈಫಲ್ಯದ ಅತ್ಯಂತ ಗಂಭೀರ ಹಂತಗಳಲ್ಲಿ ಇರುವವರಿಗೆ ನೀಡುವ ನಿರ್ಣಾಯಕ ಚಿಕಿತ್ಸೆ ಹೃದಯದ ಕಸಿ. ಅರವತ್ತು ಲಕ್ಷ ಅಮೆರಿಕನ್ನರು ಹೃದಯ ವೈಫಲ್ಯದ ಗಂಭೀರ ಹಂತಗಳಲ್ಲಿದ್ದಾರೆ. ಆದರೆ, 1960ರ ದಶಕದವರೆಗೂ ಹೃದಯದ ಕಸಿಯು ಒಂದು ಕನಸಿನಂತೆ ಮಾತ್ರ ಇತ್ತು. ಕಸಿ ಮಾಡಿದ ಹೃದಯ ದೇಹಕ್ಕೆ ಒಗ್ಗಿಕೊಳ್ಳದೆ ಇರುವುದು ಹಾಗೂ ಮಾರಣಾಂತಿಕವಾದ ಸೋಂಕುಗಳು ಹರಡದಂತೆ ತಡೆಯುವುದು ದೊಡ್ಡ ಸವಾಲಾಗಿದ್ದವು. ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗಗಳು ಆ ದಶಕದ ಉತ್ತರಾರ್ಧದ ವೇಳೆಗೆ ಮಾನವ ಹೃದಯ ಕಸಿಯನ್ನು ಸಾಧ್ಯವಾಗಿಸುವ ಮಾರ್ಗವನ್ನು ತೋರಿದ್ದವು.

ಮಾನವನ ಹೃದಯವನ್ನು ಕಸಿ ಮಾಡುವ ಪ್ರಕ್ರಿಯೆಯ ಓಟ ನಾಲ್ಕು ಜನ ಶಸ್ತ್ರಚಿಕಿತ್ಸಕರನ್ನು ಒಳಗೊಂಡಿತ್ತು. ಇದರ ಕುರಿತ ವಿವರಗಳು ಡೊನಾಲ್ಡ್‌ ಮೆಕ್‌ರೇ ಅವರು 2006ರಲ್ಲಿ ಬರೆದ ‘ಎವೆರಿ ಸೆಕೆಂಡ್ ಕೌಂಟ್ಸ್’ (ಪ್ರತಿ ಕ್ಷಣವೂ ಮುಖ್ಯ) ಪುಸ್ತಕದಲ್ಲಿ ದಾಖಲಾಗಿದೆ. ಆ ನಾಲ್ಕು ಜನ ಶಸ್ತ್ರಚಿಕಿತ್ಸಕರಲ್ಲಿ ಕೇಪ್‌ಟೌನ್‌ನ ಗ್ರೂಟ್ ಶೂರ್ ಆಸ್ಪತ್ರೆಯ ಕ್ರಿಶ್ಚಿಯಾನ್ ಬರ್ನಾರ್ಡ್ ಮತ್ತು ಸ್ಟ್ಯಾನ್‌ಫೋರ್ಡ್‌ನ ನಾರ್ಮನ್ ಶಮ್‌ವೇ ಅತ್ಯಂತ ಗಮನಾರ್ಹ ವ್ಯಕ್ತಿಗಳು. ಇವರಿಬ್ಬರೂ ಮಿನೆಸೋಟಾ ವಿಶ್ವವಿದ್ಯಾಲಯದಲ್ಲಿ ಒಟ್ಟಾಗಿ ಕೆಲಸ ಮಾಡಿದವರು. ಅಲ್ಲದೆ, ಇಬ್ಬರ ನಡುವಣ ಸಂಬಂಧ ಅಷ್ಟೇನೂ ಚೆನ್ನಾಗಿರಲಿಲ್ಲ ಎಂದು ಹಲವರು ಹೇಳುತ್ತಾರೆ. ಡಾ. ಬರ್ನಾರ್ಡ್ ಅವರು ತೋರಿಕೆಯ ಮನುಷ್ಯ, ಮೇಲೆ ಬಿದ್ದು ಜಗಳವಾಡುವ ವ್ಯಕ್ತಿ ಎಂದು ಡಾ. ಶಮ್‌ವೇ ಹೇಳುತ್ತಿದ್ದರು. ಇತ್ತ ಬರ್ನಾರ್ಡ್‌ ಅವರು, ‘ಶಮ್‌ವೇ ಅವರು ತಮ್ಮನ್ನು ಕೀಳು ದೇಶಕ್ಕೆ ಸೇರಿದ ವ್ಯಕ್ತಿಯೆಂಬಂತೆ ಕಾಣುತ್ತಿರುವಂತಿದೆ’ ಎಂಬ ಧೋರಣೆ ಹೊಂದಿದ್ದರು.

ಡಾ. ಬರ್ನಾರ್ಡ್ ಅವರು ಹಲವು ಅನನುಕೂಲಗಳನ್ನು ಎದುರಿಸಿದ್ದರು. ಇದೇ ವೇಳೆ, ಡಾ. ಶಮ್‌ವೇ ಅವರು ಪ್ರಾಣಿಗಳಲ್ಲಿ ಹೃದಯ ಕಸಿ ಮಾಡುವ ವಿಚಾರದಲ್ಲಿ ಹೆಚ್ಚಿನ ಅನುಭವ ಹೊಂದಿದ್ದರು. ಡಾ. ಶಮ್‌ವೇ ಮತ್ತು ಸ್ಟ್ಯಾನ್‌ಫೋರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ಇನ್ನೊಬ್ಬ ವೈದ್ಯ ರಿಚರ್ಡ್ ಲೋವರ್ ಅವರು 1959ರಲ್ಲಿ ಮೊದಲ ಬಾರಿಗೆ ನಾಯಿಯ ಹೃದಯ ಕಸಿ ನಡೆಸಿದ್ದರು. ಕಸಿ ಮಾಡಿದ ಹೃದಯ ಹೊಂದಿದ್ದ ನಾಯಿ ಎಂಟು ದಿನ ಬದುಕಿತ್ತು. ಈ ಪ್ರಯೋಗವು ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ಹೃದಯ ಕಸಿ ಮಾಡಬಹುದು, ಹೃದಯ ಪಡೆದ ಪ್ರಾಣಿಯು ಜೀವ ಹಿಡಿದಿಟ್ಟುಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿತ್ತು. 1967ರ ವೇಳೆಗೆ, ಶಮ್‌ವೇ ಅವರು ಪ್ರಯೋಗ ನಡೆಸುತ್ತಿದ್ದ ನಾಯಿಗಳ ಪೈಕಿ ಮೂರನೆಯ ಎರಡರಷ್ಟು ನಾಯಿಗಳು ಒಂದೆರಡು ವರ್ಷಗಳವರೆಗೆ ಬದುಕುವಂತಾಗಿದ್ದವು. ಆ ಹೊತ್ತಿಗೆ ಡಾ. ಶಮ್‌ವೇ ಅವರು ಸರಿಸುಮಾರು ಮುನ್ನೂರು ನಾಯಿಗಳಿಗೆ ಹೃದಯದ ಕಸಿ ಮಾಡಿದ್ದರು. ಡಾ. ಬರ್ನಾರ್ಡ್ ಅವರು ಅಂದಾಜು 50 ಹೃದಯ ಕಸಿ ಮಾಡಿದ್ದರು.

1967ರ ಕೊನೆಯ ಭಾಗದಲ್ಲಿ ಒಂದು ಘೋಷಣೆ ಮಾಡಿದ ಡಾ. ಶಮ್‌ವೇ, ತಾವು ಹೃದಯದ ಕಸಿಯ ಬಗ್ಗೆ ಮನುಷ್ಯರ ಮೇಲೆ ಪ್ರಯೋಗ ನಡೆಸುವುದಾಗಿ ಹೇಳಿದರು. ‘ಪ್ರಾಣಿಗಳ ಮೇಲೆ ನಡೆಯುತ್ತಿರುವ ಹೃದಯ ಕಸಿಗಳು ಮುಂದುವರಿಯಬೇಕು ಹಾಗೂ ಅವು ಮುಂದುವರಿಯುತ್ತವೆ ಎಂಬುದು ನಿಜ. ಹೀಗಿದ್ದರೂ ನಾವು ಇದನ್ನು ಮನುಷ್ಯರ ಮೇಲೆ ಪ್ರಯೋಗಿಸುವ ಹಂತ ತಲುಪಿದ್ದೇವೆ’ ಎಂದು ಅವರು ಹೇಳಿದ್ದರು. ಆದರೆ, ಹೃದಯವನ್ನು ದಾನ ಮಾಡಲು ಸಿದ್ಧವಿರುವ ವ್ಯಕ್ತಿಯನ್ನು ಹುಡುಕುವ ವಿಚಾರದಲ್ಲಿ ಡಾ. ಶಮ್‌ವೇ ಅವರು ತೊಂದರೆ ಎದುರಿಸಿದರು. ಆ ಸಂದರ್ಭದಲ್ಲಿ ಅಮೆರಿಕದಲ್ಲಿ ಜಾರಿಯಲ್ಲಿದ್ದ ನಿಯಮಗಳ ಅನ್ವಯ, ಮಿದುಳು ನಿಷ್ಕ್ರಿಯಗೊಂಡಿದ್ದರೂ ಹೃದಯ ಬಡಿತ ಇದ್ದಿದ್ದರೆ ಅಂತಹ ವ್ಯಕ್ತಿಗಳಿಂದ ಅಂಗಾಂಗಗಳನ್ನು ಪಡೆಯುವುದಕ್ಕೆ ನಿರ್ಬಂಧ ಇತ್ತು. ಅಂಗಾಂಗಗಳನ್ನು ಪಡೆದುಕೊಳ್ಳಬೇಕು ಎಂದಾದರೆ, ಹೃದಯ ಬಡಿತ ಸಂಪೂರ್ಣವಾಗಿ ನಿಂತಿರಬೇಕು ಎಂದು ನಿಯಮಗಳು ಹೇಳುತ್ತಿದ್ದವು. ಇದನ್ನು ಉಲ್ಲಂಘಿಸಿದರೆ ವೈದ್ಯರ ವಿರುದ್ಧ ಕೊಲೆ ಆರೋಪ ಹೊರಿಸಲು ಅವಕಾಶ ಇತ್ತು.

ಆದರೆ, ಇದೇ ಸಂದರ್ಭದಲ್ಲಿ ಡಾ. ಬರ್ನಾರ್ಡ್‌ ಅವರಿದ್ದ ದಕ್ಷಿಣ ಆಫ್ರಿಕಾದಲ್ಲಿ ಇನ್ನಷ್ಟು ಉದಾರವಾದಿ ಕಾನೂನುಗಳು ಇದ್ದವು. ಇಂಥ ಕಾನೂನುಗಳ ಪರವಾಗಿ ಡಾ. ಬರ್ನಾರ್ಡ್‌ ಅವರೇ ಕೆಲಸ ಮಾಡಿದ್ದರು. ಈ ಕಾನೂನುಗಳ ಅನ್ವಯ, ವ್ಯಕ್ತಿಯೊಬ್ಬ ಬೆಳಕು ಅಥವಾ ನೋವಿಗೆ ಪ್ರತಿಕ್ರಿಯೆಯನ್ನೇ ನೀಡದಿದ್ದರೆ ಆತ ಮೃತಪ‍ಟ್ಟಿದ್ದಾನೆ ಎಂದು ಘೋಷಿಸಲು ನರಶಾಸ್ತ್ರಜ್ಞನಿಗೆ ಅಧಿಕಾರ ಇತ್ತು. ಆ ವ್ಯಕ್ತಿಯ ಕುಟುಂಬದ ಸದಸ್ಯರ ಸಮ್ಮತಿ ಪಡೆದು, ಕಸಿ ಶಸ್ತ್ರಚಿಕಿತ್ಸೆ ನಡೆಸುವ ವೈದ್ಯರ ತಂಡವು ಅಂಗಾಂಗಗಳನ್ನು ಪಡೆದುಕೊಳ್ಳಬಹುದಿತ್ತು. ಹೃದಯವು ರಕ್ತದಿಂದ ಇನ್ನೂ ತೋಯ್ದಿದ್ದರೂ ಅದನ್ನು ಪಡೆದುಕೊಳ್ಳಬಹುದಿತ್ತು.

ಡಾ. ಬರ್ನಾರ್ಡ್‌ ಮತ್ತು ಡಾ. ಶಮ್‌ವೇ ಅವರ ನಡುವೆ ತುರುಸಿನ ಸ್ಪರ್ಧೆ ಇತ್ತು. ಆದರೆ ಡಾ. ಬರ್ನಾರ್ಡ್‌ ಅವರು 1967ರ ಡಿಸೆಂಬರ್ 3ರಂದು ಡಾ. ಶಮ್‌ವೇ ಅವರಿಗಿಂತ ಮುಂದೆ ಬಂದರು. ಡಾ. ಬರ್ನಾರ್ಡ್‌ ಅವರು ತಮ್ಮಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 55 ವರ್ಷ ವಯಸ್ಸಿನ ಲೂಯಿ ವಾಶ್ಕಾಂಸ್ಕಿ ಅವರಿಗೆ ಮಹಿಳೆಯೊಬ್ಬರ ಹೃದಯವನ್ನು ಕಸಿ ಮಾಡಿದರು. ಆ ಮಹಿಳೆಗೆ ಕಾರು ಗುದ್ದಿ, ಅವರ ಮಿದುಳಿಗೆ ಪೆಟ್ಟಾಗಿತ್ತು. ಆದರೆ, ಹೃದಯದ ಕಸಿ ಮಾಡಿಸಿಕೊಂಡ ಲೂಯಿ ಅವರು 18 ದಿನ ಮಾತ್ರ ಬದುಕಿದರು. ದೇಹವು ಹೊಸ ಹೃದಯವನ್ನು ತಿರಸ್ಕರಿಸದಿರಲಿ ಎಂಬ ಉದ್ದೇಶದಿಂದ ನೀಡಿದ ಔಷಧಗಳು ಅವರ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸಿದ್ದವು, ಅದು ಅವರ ಶ್ವಾಸಕೋಶ ಸೋಂಕಿಗೆ ತುತ್ತಾಗಲು ಕಾರಣವಾಯಿತು ಎನ್ನಲಾಗಿದೆ.

ಇದಾದ ಒಂದು ತಿಂಗಳ ನಂತರ, ಅಂದರೆ 1968ರ ಜನವರಿ 6ರಂದು, ಡಾ. ಶಮ್‌ವೇ ಅವರು ಅಮೆರಿಕದ ಮೊದಲ ವಯಸ್ಕ ವ್ಯಕ್ತಿಯ ಹೃದಯ ಕಸಿ ಮಾಡಿದರು. ಆದರೆ ಕಸಿ ಮಾಡಿಸಿಕೊಂಡ 54 ವರ್ಷ ವಯಸ್ಸಿನ ವ್ಯಕ್ತಿ 14 ದಿನಗಳ ನಂತರ ಮೃತಪಟ್ಟ. ಆ ವ್ಯಕ್ತಿ ಸಾವಿಗೆ ಶರಣಾದ ಕಾರಣವನ್ನು ಡಾ. ಶಮ್‌ವೇ ಅವರು, ‘ಸಂಕೀರ್ಣತೆಗಳ ಮಹಾಸಾಗರ’ ಎಂದು ಬಣ್ಣಿಸಿದ್ದರು.

ಬೇರೆ ವ್ಯಕ್ತಿಯ ದೇಹದ ಅಂಗವನ್ನು ಇನ್ನೊಬ್ಬನಿಗೆ ಕಸಿ ಮಾಡಿದಾಗ ಉಂಟಾಗುವ ಸಮಸ್ಯೆಗಳನ್ನು ನಿವಾರಿಸಲು ಕೊಡುವ ಔಷಧಗಳು ಸುಧಾರಿಸಿವೆ. ಇದರಿಂದಾಗಿ ಹೃದಯ ಕಸಿ ನಂತರದ ದೂರಗಾಮಿ ಪರಿಣಾಮಗಳು ಉತ್ತಮವಾಗಿವೆ. ಕಸಿಯ ನಂತರ ಅಂದಾಜು ಶೇಕಡ 85ರಷ್ಟು ರೋಗಿಗಳು ಕನಿಷ್ಠ ಒಂದು ವರ್ಷ ಬದುಕುತ್ತಿದ್ದಾರೆ.

ಕಸಿಯ ನಂತರ ರೋಗಿಗಳು ಬದುಕುಳಿಯುವ ಸರಾಸರಿ ಅವಧಿಯು ಬಹುಶಃ 12 ವರ್ಷಗಳಿಗಿಂತ ಹೆಚ್ಚಾಗಿದೆ. ರೋಗಿಯು ಮೊದಲ ಒಂದು ವರ್ಷದಲ್ಲಿ ಮೃತಪಡದಿದ್ದರೆ ಆತ 14 ವರ್ಷಗಳವರೆಗೆ ಬದುಕುಳಿಯುವ ಸಾಧ್ಯತೆ ಇದೆ.

ಹೃದಯ ಕಸಿಯು ಹಲವಾರು ಜನರ ಜೀವ ಉಳಿಸಿದ್ದರೂ ತಮಗೆ ಸೂಕ್ತವಾಗುವ ಅಂಗಾಂಗ ಸಿಗುವುದಕ್ಕಾಗಿ ಕಾಯುವ ಅವಧಿಯಲ್ಲಿ ಹಲವರು ಜೀವ ಕಳೆದುಕೊಳ್ಳುತ್ತಿದ್ದಾರೆ. ಪ್ರತಿ ವರ್ಷ ಅಮೆರಿಕದ ಮೂರು ಸಾವಿರ ಜನ ಮಾತ್ರ ಹೃದಯ ಕಸಿಗೆ ಒಳಗಾಗುತ್ತಾರೆ. ಇದೇ ಅವಧಿಯಲ್ಲಿ ಹೃದಯ ಕಸಿಯ ಅವಕಾಶಕ್ಕಾಗಿ ಕಾಯುವವರ ಸಂಖ್ಯೆ ನಾಲ್ಕು ಸಾವಿರ. ಅಂಗಾಂಗ ದಾನಕ್ಕೆ ಪ್ರೋತ್ಸಾಹ ನೀಡಲು ಅಭಿಯಾನಗಳು ನಡೆದಿದ್ದರೂ ದಾನಕ್ಕೆ ಲಭ್ಯವಿರುವ ಅಂಗಾಂಗಗಳ ಸಂಖ್ಯೆ ವರ್ಷಗಳಿಂದಲೂ ಹಾಗೇ ಉಳಿದಿದೆ. ಇದರ ಪರಿಣಾಮವೆಂಬಂತೆ, ಹೃದಯ ಕಸಿ ಮಾಡಿಸಿಕೊಳ್ಳುವ ಆಯ್ಕೆಯು ತುಸು ಸವಾಲಿನದ್ದಾಗಿಯೇ ಉಳಿದಿದೆ. ‘ಲಾಟರಿ ಆಡುವುದು ಬಡತನಕ್ಕೆ ಯಾವ ರೀತಿಯಲ್ಲಿ ಮದ್ದಾಗಬಹುದೋ, ಅದೇ ರೀತಿಯಲ್ಲಿ ಹೃದಯ ವೈಫಲ್ಯಕ್ಕೆ ಹೃದಯ ಕಸಿಯು ಮದ್ದಾಗಬಲ್ಲದು’ ಎಂದು ವ್ಯಾಂಡರ್‌ಬಿಲ್ಟ್‌ನಲ್ಲಿನ ಹೃದಯ ಕಸಿ ತಜ್ಞ ಲಿನ್ ವಾರ್ನರ್‌ ಸ್ಟೀವನ್‌ಸನ್‌ ಹೇಳಿದ್ದಾರೆ.

ಈ ಕಾರಣದಿಂದಾಗಿ, ಹೃದಯದ ಕೆಲಸವನ್ನು ಮಾಡುವಂತಹ ಕೃತಕ ಸಾಧನವೊಂದನ್ನು ಅಳವಡಿಸುವುದು ಹೃದ್ರೋಗ ತಜ್ಞರು ಹಾಗೂ ಶಸ್ತ್ರಚಿಕಿತ್ಸಾ ತಜ್ಞರ ಮಹತ್ವಾಕಾಂಕ್ಷೆಯಾಗಿದೆ. ಶಾಶ್ವತ ಕೃತಕ ಹೃದಯಗಳನ್ನು 1980ರಲ್ಲೇ ಪರಿಚಯಿಸಲಾಯಿತಾದರೂ ಅವು ಇಂದಿಗೂ ತೀರಾ ಸಂಕೀರ್ಣವಾಗಿಯೇ ಇವೆ. ‘ಎಡ ಹೃತ್ಕುಕ್ಷಿಯ ಸಹಾಯಕ ಸಾಧನ’ವು ಈವರೆಗಿನ ಅತ್ಯಂತ ವಿಶ್ವಾಸಾರ್ಹ ಸಾಧನ. ಇದು ಎಡ ಹೃತ್ಕುಕ್ಷಿಯಿಂದ ಹೊರಡುವ ಪ್ರಧಾನ ರಕ್ತನಾಳ ಮಹಾಪಧಮನಿಗೆ ನೇರವಾಗಿ ರಕ್ತವನ್ನು ಪೂರೈಸುತ್ತದೆ. ಈ ಸಾಧನಗಳಿಗೂ ತಮ್ಮದೇ ಆದ ಮಿತಿ ಇದೆ. ಈ ಸಾಧನಗಳು ರಕ್ತ ಹೆಪ್ಪುಗಟ್ಟುವಿಕೆಗೆ, ಪಾರ್ಶ್ವವಾಯುವಿಗೆ ಮತ್ತು ರಕ್ತದ ಸೋರುವಿಕೆಗೆ ಕಾರಣವಾಗುತ್ತವೆ. ಅಲ್ಲದೆ, ಹೃದಯದ ಎರಡೂ ಭಾಗಗಳು ವಿಫಲಗೊಂಡ ಸಂದರ್ಭದಲ್ಲಿ ಈ ಸಾಧನಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ.ಹೀಗಿದ್ದರೂ ಹಲವು ಹೃದ್ರೋಗಿಗಳಿಗೆ ಇರುವ ಅತಿದೊಡ್ಡ ಆಶಾಕಿರಣ ಹೃದಯದ ಕಸಿ. ಕೌಶಲ, ಬದ್ಧತೆ ಮತ್ತು ದಕ್ಷಿಣ ಆಫ್ರಿಕದ ಶಸ್ತ್ರಚಿಕಿತ್ಸಕನ ಹೃದಯವಂತಿಕೆಯ ಮೂಲಕ 50 ವರ್ಷಗಳ ಹಿಂದೆ ಮೂಡಿದ ಆಶಾಕಿರಣ ಇದು.

(‘ಇಂಟರ್ನ್‌: ಎ ಡಾಕ್ಟರ್ಸ್‌ ಇನಿಷಿಯೇಷನ್‌’ ಪುಸ್ತಕವನ್ನು ಲೇಖಕ ಬರೆದಿದ್ದಾರೆ)

ದಿ ನ್ಯೂಯಾರ್ಕ್‌ ಟೈಮ್ಸ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.