ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌: ಜಾತಿ ಬಿಟ್ಟು ಲೆಕ್ಕಾಚಾರವೇ ಇಲ್ಲ

Last Updated 5 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಅಹಮದಾಬಾದ್‌: ವಿಧಾನಸಭೆ ಚುನಾವಣೆ ಘೋಷಣೆಗೆ ಮೊದಲೇ ಗುಜರಾತ್‌ನಲ್ಲಿ ಆರಂಭವಾಗಿದ್ದ ಜಾತಿ ಆಧರಿತ ಚಳವಳಿಗಳಿಂದಾಗಿ ಈ ಬಾರಿಯ ಚುನಾವಣೆಯ ಕೇಂದ್ರದಲ್ಲಿ ‘ಜಾತಿ’ಯೇ ಇರುವ ಸಾಧ್ಯತೆ ಇದೆ. ಅದರ ಸೂಚನೆ ಎಂಬಂತೆ ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಜಾತಿ ಲೆಕ್ಕಾಚಾರದಲ್ಲಿಯೇ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿವೆ.

ಮೀಸಲಾತಿಗಾಗಿ ಭಾರಿ ಹೋರಾಟ ನಡೆಸುತ್ತಿರುವ ಪಟೇಲ್‌ ಸಮುದಾಯ ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ಅಭ್ಯರ್ಥಿಗಳಿಗೆ ಎರಡೂ ಪಕ್ಷಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್‌ ನೀಡಿವೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಪಟೇಲ್‌ ಸಮುದಾಯಕ್ಕೆ ಸೇರಿದವರು 50 ಮಂದಿ ಇದ್ದರೆ ಕಾಂಗ್ರೆಸ್‌ ಪಟ್ಟಿಯಲ್ಲಿ 41 ಜನರಿದ್ದಾರೆ. ಆಡಳಿತಾರೂಢ ಬಿಜೆಪಿಯು ಒಬಿಸಿಯ 58 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ ವಿರೋಧ ಪಕ್ಷ ಕಾಂಗ್ರೆಸ್‌ 62 ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದೆ. ಬಿಜೆಪಿಯಿಂದ 13 ಮತ್ತು ಕಾಂಗ್ರೆಸ್‌ನಿಂದ 14 ದಲಿತರು ಸ್ಪರ್ಧಿಸುತ್ತಿದ್ದಾರೆ.

‘ಹೆಚ್ಚುವರಿ ಶೇ 4ರಿಂದ 5ರಷ್ಟು ಮತಗಳನ್ನು ಪಡೆಯುವುದೇ ಈ ಬಾರಿಯ ಚುನಾವಣೆಯ ವಿಶೇಷ’ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

ಯಾವುದೇ ಜಾತಿಯ ಬೆಂಬಲವನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ. ಅದೇ ಹೊತ್ತಿಗೆ, ಸಿಟ್ಟಾಗಿ ದೂರ ಹೋಗಿರುವ ಜಾತಿಗಳ ಮತ ಪಡೆಯಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ. ‘ಕೇವಲ ಶೇ ನಾಲ್ಕರಿಂದ ಐದರಷ್ಟು ಮತಗಳನ್ನು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾದರೂ ಕಾಂಗ್ರೆಸ್‌ ಚಿತ್ರಣವನ್ನೇ ಬದಲಿಸಬಲ್ಲುದು’ ಎಂದು ರಾಜಕೀಯ ವಿಶ್ಲೇಷಕ ಅಚ್ಯುತ್‌ ಯಾಜ್ಞಿಕ್‌ ಹೇಳುತ್ತಾರೆ.

ಜಾತಿಗಳ ಮುಖಂಡರಾದ ಹಾರ್ದಿಕ್‌ ಪಟೇಲ್‌, ಅಲ್ಪೇಶ್‌ ಠಾಕೊರ್‌ ಮತ್ತು ಜಿಗ್ನೇಶ್‌ ಮೆವಾನಿ ಅವರನ್ನು ತಮ್ಮತ್ತ ಸೆಳೆದುಕೊಂಡಿದ್ದರೂ ಕಾಂಗ್ರೆಸ್‌ ನಿಚ್ಚಳ ಗೆಲುವು ಸಾಧಿಸಬಹುದು ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಹಿಂದಿನ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್‌ ಸ್ಥಾನಗಳ ಸಂಖ್ಯೆಯನ್ನು ಉತ್ತಮಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

2002, 2007 ಮತ್ತು 2012ರ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಸುಮಾರು ಶೇ 40ರಷ್ಟು ಮತಗಳು ದೊರಕಿದ್ದವು. ಬಿಜೆಪಿಗೆ ಶೇ 49ರಷ್ಟು ಮತ ಸಿಕ್ಕಿತ್ತು. ಈ ಬಾರಿ ಶೇ ನಾಲ್ಕರಿಂದ ಐದರಷ್ಟು ಮತಗಳು ಹೆಚ್ಚುವರಿಯಾಗಿ ಸಿಕ್ಕರೆ ಕಾಂಗ್ರೆಸ್‌ಗೆ ಭಾರಿ ಅನುಕೂಲ ಆಗಬಹುದು ಎಂಬುದು ಯಾಜ್ಞಿಕ್‌ ಅವರ ಲೆಕ್ಕಾಚಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT