7

ನಳಪಾಕದ ಉಚಿತ ತಾಣ ಕುಕ್‌ಪ್ಯಾಡ್‌

Published:
Updated:
ನಳಪಾಕದ ಉಚಿತ ತಾಣ ಕುಕ್‌ಪ್ಯಾಡ್‌

ವಿಶ್ವದಾದ್ಯಂತ ರುಚಿಕರ, ಆರೋಗ್ಯಕರ, ವೈವಿಧ್ಯಮಯ ಆಹಾರ, ತಿನಿಸುಗಳನ್ನು ತಯಾರಿಸಲಾಗುತ್ತಿದೆ. ಒಂದೊಂದು ಸಮುದಾಯ, ಪ್ರದೇಶ, ದೇಶ, ಸಂಸ್ಕೃತಿಗೆ ವಿಭಿನ್ನ ಮತ್ತು ವೈಶಿಷ್ಟ್ಯಪೂರ್ಣವಾದ ಅಸಂಖ್ಯ ಪಾಕ ವಿಧಾನಗಳು ಆಹಾರ ಪ್ರಿಯರ ಹೊಟ್ಟೆ ತಣ್ಣಗಿಡುತ್ತವೆ. ಪರಂಪರಾಗತವಾಗಿ ಬಂದಿರುವ ಅಡುಗೆ ತಯಾರಿಕೆಯ ಕಲೆಯು ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಲಭ್ಯವಾಗುತ್ತಿದೆ. ಟೆಲಿವಿಷನ್‌ ಚಾನೆಲ್‌, ಫೇಸಬುಕ್‌ನಂತಹ ಸಾಮಾಜಿಕ ಮಾಧ್ಯಮಗಳು ಪಾಕ ವಿಧಾನ ಹಂಚಿಕೊಳ್ಳುವ ವೇದಿಕೆಗಳಾಗಿವೆ.

ಅಸಂಖ್ಯ ಪಾಕ ವಿಧಾನಗಳಲ್ಲಿ ಯಾವುದನ್ನೂ ಖಚಿತವಾಗಿ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಪಾಕ ವಿಧಾನವೂ ಒಂದು ಅಪೂರ್ವ ಕಲೆ. ಅದೀಗ ದೊಡ್ಡ ಉದ್ದಿಮೆಯಾಗಿ ಬೆಳೆದಿರುವುದೂ ನಿಜ. ಜಪಾನಿನ ಪಾಕ ವಿಧಾನಕ್ಕೆ ಮೀಸಲಾಗಿರುವ ಅಲ್ಲಿಯ ಕುಟುಂಬಗಳಿಗೆ ಮಾತ್ರ ಸೀಮಿತವಾಗಿದ್ದ ವಿಶಿಷ್ಟ ಪಾಕ ಕಲೆಯನ್ನು ಎಲ್ಲರಿಗೂ ಪರಿಚಯಿಸಲು ಹೊರಟಿರುವ ಕುಕ್‌ಪ್ಯಾಡ್‌ ಇಂಕ್‌ (Cookpad Inc) ಈಗ ಭಾರತಕ್ಕೂ ಕಾಲಿಟ್ಟಿದೆ.

ಟೋಕಿಯೊ ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಕುಕ್‌ಪ್ಯಾಡ್‌, 1998ರಲ್ಲಿ ಅಕಿ ಸಾನು ಅವರಿಂದ ಸ್ಥಾಪನೆಗೊಂಡಿದೆ. ಪಾಕ ವಿಧಾನಕ್ಕೆ ಸಂಬಂಧಿಸಿದ ಆಹಾರ ತಂತ್ರಜ್ಞಾನ ಸಂಸ್ಥೆಯೊಂದು ಸಾರ್ವಜನಿಕರಿಂದ ಹಣ ಸಂಗ್ರಹಿಸಿ (ಐಪಿಒ) ಉದ್ದಿಮೆ ವಹಿವಾಟು ವಿಸ್ತರಿಸಿದ ವಿಶ್ವದ ಏಕೈಕ ವಿಶಿಷ್ಟ ಉದ್ದಿಮೆ ಇದಾಗಿದೆ. ಸದ್ಯಕ್ಕೆ ಸಂಸ್ಥೆಯು ಜಪಾನ್‌ನಲ್ಲಿ ಚಂದಾದಾರಿಕೆ ಆಧರಿಸಿ ಶೇ 60ರಷ್ಟು ಮತ್ತು ಜಾಹೀರಾತಿನಿಂದ ಶೇ 40ರಷ್ಟು ವರಮಾನ ಗಳಿಸುತ್ತಿದೆ.

‘ಜಪಾನಿನ ಈ ಆಹಾರ ತಂತ್ರಜ್ಞಾನ ಸಂಸ್ಥೆ ‘ಪ್ರತಿ ದಿನ ಅಡುಗೆ ರಂಜನೀಯವಾಗಿರಲಿ’ ಎನ್ನುವ ಧ್ಯೇಯವಾಕ್ಯ ಹೊಂದಿದೆ. ಮನೆಯಲ್ಲಿಯೇ ಅಡುಗೆ ತಯಾರಿಸುವುದರಿಂದ ಸಹಜವಾಗಿಯೇ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ, ಕಾರ್ಬೊಹೈಡ್ರೇಟ್‌, ಸಕ್ಕರೆ ಮತ್ತು ಕೊಬ್ಬು ಸೇವಿಸಲು ಸಾಧ್ಯವಾಗುತ್ತದೆ. ಇದರಿಂದ ಆರೋಗ್ಯಕರ ಆಹಾರ ಸೇವನೆಯೂ ರೂಢಿಯಾಗುತ್ತದೆ’ ಎಂದು ಸಂಸ್ಥೆಯ ಭಾರತದ (ಕುಕ್‌ಪ್ಯಾಡ್‌ ಇಂಡಿಯಾದ) ಮುಖ್ಯಸ್ಥರಾಗಿರುವ ಶ್ರೀನಿವಾಸ್‌ ಮುಟ್ನುರೆ ಹೇಳುತ್ತಾರೆ.

‘ಪಾಕ ವಿಧಾನಗಳನ್ನು ಉಚಿತವಾಗಿ ಹಂಚಿಕೊಳ್ಳುವ ವಿಶಿಷ್ಟ ಜಾಗತಿಕ ವೇದಿಕೆ ಇದಾಗಿದೆ. ಇಂಡೊನೇಷ್ಯಾ, ಥಾಯ್ಲೆಂಡ್‌, ಇಟಲಿ ಮತ್ತಿತರ ದೇಶಗಳ ವಿಶಿಷ್ಟ ಪಾಕ ವಿಧಾನಗಳ ವಿವರಗಳೆಲ್ಲ ಇಲ್ಲಿ ಲಭ್ಯ. ಅಂತರ್ಜಾಲ ತಾಣ ಮತ್ತು ಮೊಬೈಲ್‌ ಆ್ಯಪ್‌ನಲ್ಲೂ (cookpad app) ಆಸಕ್ತರು ತಮ್ಮ, ತಮ್ಮ ಪಾಕ ವಿಧಾನಗಳನ್ನು ಇಲ್ಲಿ ಉಚಿತವಾಗಿ ಪರಿಚಯಿಸಿ ಉಳಿದವರ ಜತೆ ಹಂಚಿಕೊಳ್ಳಬಹುದು. ಆಸಕ್ತರು ಈ ಪಾಕ ವಿಧಾನ ಬಳಸಿ ತಯಾರಿಸಿದ ರುಚಿಕರ ಆಹಾರ, ತಿನಿಸುಗಳ ಸ್ವಾದ ಆಧರಿಸಿ ಅದಕ್ಕೆ ಶ್ರೇಯಾಂಕವನ್ನೂ ನೀಡಬಹುದು. ಇಲ್ಲಿ ಇತರರ ಪಾಕ ವಿಧಾನ ಅನುಕರಿಸಲು ಸಾಧ್ಯವಿಲ್ಲದ ಬಗೆಯಲ್ಲಿ ತಂತ್ರಜ್ಞಾನ ರೂಪಿಸಲಾಗಿದೆ.

‘ಕೇರಳದ ಕುಕುಂಬರ್‌ಟೌನ್‌ (cucumbertown) ಸಂಸ್ಥೆ ವಶಪಡಿಸಿಕೊಂಡು ಭಾರತದಲ್ಲಿ ವಹಿವಾಟು ಆರಂಭಿಸಿರುವ ಸಂಸ್ಥೆ ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿದೆ. 2014ರಿಂದ ಇತರ ದೇಶಗಳಿಗೆ ವಹಿವಾಟು ವಿಸ್ತರಿಸಲು ಮುಂದಾದ ಸಂಸ್ಥೆ ಇದುವರೆಗೆ 18 ದೇಶಗಳಲ್ಲಿ ತನ್ನ ಶಾಖೆಗಳನ್ನು ತೆರೆದಿದೆ. 55 ಭಾಷೆಗಳಲ್ಲಿ ಪಾಕ ವಿಧಾನದ  ವಿವರಗಳು ಇಲ್ಲಿ ವಿಪುಲ ಪ್ರಮಾಣದಲ್ಲಿ ಲಭ್ಯ ಇವೆ. 2021ರ ವೇಳೆಗೆ 100 ದೇಶಗಳಿಗೆ ವಹಿವಾಟು ವಿಸ್ತರಿಸುವ ಗುರಿ ಹಾಕಿಕೊಂಡಿದೆ. ಜಪಾನ್‌ನಲ್ಲಿ 6 ಕೋಟಿ ಮತ್ತು ವಿಶ್ವದ ಇತರ ದೇಶಗಳಲ್ಲಿ 3 ಕೋಟಿ ಬಳಕೆದಾರರು ಇರುವುದು ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

‘ಇಲ್ಲಿ ಗೃಹಿಣಿಯರು, ಬ್ಲಾಗರ್ಸ್‌, ಷೆಪ್‌ಗಳೂ ತಮ್ಮ ಪಾಕ ವಿಧಾನಗಳನ್ನು ಹಂಚಿಕೊಳ್ಳಬಹುದು. ಇತರರ ಜತೆ ಪಾಕ ವಿಧಾನ ಕಲೆ ಹಂಚಿಕೊಳ್ಳಬಹುದು. ತಮ್ಮದೇ ಪ್ರತ್ಯೇಕ ಗುಂಪುಗಳನ್ನು ರಚಿಸಿಕೊಳ್ಳಬಹುದು. ಇಲ್ಲಿಯ ಪಾಕ ವಿಧಾನಗಳು ಸದ್ಯಕ್ಕೆ ಇಂಗ್ಲಿಷ್‌ನಲ್ಲಿ ಇವೆ. ಶೀಘ್ರದಲ್ಲಿಯೇ ಹಿಂದಿ ಆನಂತರ ತಮಿಳು, ಕನ್ನಡದಲ್ಲಿಯೂ ಲಭ್ಯ ಇರಲಿವೆ. ಎರಡು ವರ್ಷಗಳವರೆಗೆ ಲಾಭದ ಬಗ್ಗೆ ಗಮನ ಕೇಂದ್ರಕರಿಸಿಲ್ಲ. ವಹಿವಾಟು ವಿಸ್ತರಣೆ ಉದ್ದೇಶಕ್ಕೆ ಸಂಸ್ಥೆಯು ಐಐಟಿ ತಂತ್ರಜ್ಞರನ್ನೂ ನೇಮಿಸಿಕೊಳ್ಳುತ್ತಿದೆ’ ಎಂದು ಶ್ರೀನಿವಾಸ್ ಹೇಳುತ್ತಾರೆ.

ಎಂಬಿಎ ಪದವೀಧರ ಶ್ರೀನಿವಾಸ್‌ ಮುಟ್ನೂರೆ (32) ಅವರು ಕುಕ್‌ಪ್ಯಾಡ್‌ಗೆ ಪ್ರಾಡಕ್ಟ್‌ ಮ್ಯಾನೇಜರ್‌ ಆಗಿ ಸೇರ್ಪಡೆಗೊಂಡು ಈಗ ಭಾರತದ ವಹಿವಾಟಿನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಶಿವಮೊಗ್ಗದ ರಾಜೇಶ್ವರಿ ಭಟ್ಟ ಅವರು ಈ ತಾಣದಲ್ಲಿ ನಿಯಮಿತವಾಗಿ ತಮ್ಮ ಪಾಕ ವಿಧಾನಗಳನ್ನು ಪರಿಚಯಿಸುತ್ತಿದ್ದಾರೆ. ಈ ತಾಣದಲ್ಲಿ ದಾಖಲಾಗುವ, ಬಳಕೆದಾರರ ಮನ್ನಣೆ ಪಡೆಯುವ ಪಾಕ ವಿಧಾನಗಳನ್ನು ಡಿಜಿಟಲ್ ಸ್ವರೂಪದಲ್ಲಿ ಕಾಯ್ದಿಡಲಾಗುತ್ತಿದೆ.

ಈ ತಾಣದಲ್ಲಿ ಪಾಕ ವಿಧಾನ ಹಂಚಿಕೊಳ್ಳುವುದರಿಂದ ಏನು ಪ್ರಯೋಜನ ಎನ್ನುವ ಪ್ರಶ್ನೆಯೂ ಇಲ್ಲಿ ಎದುರಾಗುತ್ತದೆ. ಅನೇಕರು ತಾವು ತಯಾರಿಸಿದ ಅಡುಗೆಯನ್ನು ಇತರರು ಬಾಯಿ ಚಪ್ಪರಿಸಿ ತಿಂದು ಹೊಗಳಿದರೆ ಸಾಕು ಎನ್ನುವ ಮನೋಭಾವ ಹೊಂದಿರುತ್ತಾರೆ. ಅವರಿಗೆ ಇದೊಂದು ಉತ್ತಮ ವೇದಿಕೆಯಾಗಿದೆ. ‘ಒಂದೆರಡು ವರ್ಷಗಳ ನಂತರ ಸಂಸ್ಥೆಯ ವಹಿವಾಟು ಬೇರುಬಿಟ್ಟು ಲಾಭದ ಹಾದಿಗೆ ಮರಳಿದ ನಂತರ ಪಾಕ ವಿಧಾನ ಪರಿಚಯಿಸುವವರಿಗೆ, ಅವರ ಅಡುಗೆ ಕಲೆಯ ಬಳಕೆ ಆಧರಿಸಿ ಸಂಭಾವನೆ ನೀಡುವುದನ್ನು ಪರಿಗಣಿಸಬಹುದು’ ಎಂದು ಶ್ರೀನಿವಾಸ್‌ ಹೇಳುತ್ತಾರೆ.

‘25 ರಿಂದ 34 ವಯೋಮಾನದವರ ಕೈಯಲ್ಲಿ ಸಾಕಷ್ಚು ದುಡ್ಡು ಹರಿದಾಡುತ್ತಿದೆ. ವಾರಾಂತ್ಯಕ್ಕೆ ರೆಸ್ಟೋರೆಂಟ್‌ಗಳಿಗೆ ಅಲೆದಾಡಿ ಸಾಕಷ್ಟು ದುಡ್ಡು ಖರ್ಚು ಮಾಡುತ್ತಾರೆ. ವಾರದ ಉಳಿದ ದಿನಗಳಲ್ಲಿ ಆರೋಗ್ಯಕರವಾದ ಮನೆಯಲ್ಲಿಯೇ ತಯಾರಿಸಿದ ಅಡುಗೆ ಬಗ್ಗೆ ಅವರಲ್ಲಿ ಈಗ ಹೆಚ್ಚು ಅರಿವು ಮೂಡುತ್ತಿದೆ. ಪಾಕ ವಿಧಾನಗಳೆಲ್ಲ ಅವರ ಮೊಬೈಲ್‌ನಲ್ಲಿಯೇ ದೊರೆಯುತ್ತಿದೆ. ಆರೋಗ್ಯದ ಬಗ್ಗೆ ಕಾಳಜಿ ತೋರುವವರು ಕುಕ್‌ಪ್ಯಾಡ್‌ನಲ್ಲಿ ಲಭ್ಯ ಇರುವ ಅಸಂಖ್ಯ ಪಾಕ ವಿಧಾನಗಳನ್ನು ಬಳಸಲು ಒಲವು ತೋರುತ್ತಿದ್ದಾರೆ’ ಎಂಬುದು ಶ್ರೀನಿವಾಸ್‌ ಅವರ ಅಭಿಪ್ರಾಯವಾಗಿದೆ.

ಮಾಹಿತಿಗೆ ಅಂತರ್ಜಾಲ ತಾಣ https://cookpad.com/in ಕ್ಕೆ ಭೇಟಿ ನೀಡಬಹುದು.

**

18 - ಕುಕ್‌ಪ್ಯಾಡ್‌ ಬಳಕೆಯಲ್ಲಿ ಇರುವ ದೇಶಗಳ ಸಂಖ್ಯೆ

55 - ವಿವಿಧ ಭಾಷೆಗಳಲ್ಲಿನ ಪಾಕ ವಿಧಾನ ಇಲ್ಲಿ ಲಭ್ಯ

100- 2021ಕ್ಕೆ ವಹಿವಾಟು ವಿಸ್ತರಿಸಲಿರುವ ದೇಶಗಳ ಸಂಖ್ಯೆ

6 ಕೋಟಿ- ಜಪಾನ್‌ನಲ್ಲಿನ ಚಂದಾದಾರರು

3 - ಕೋಟಿ ವಿಶ್ವದ ಇತರ ದೇಶಗಳಲ್ಲಿನ ಬಳಕೆದಾರರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry