3

ರಾಜಕಾರಣ ಬರೀ ಮಾತಾದರೆ ಸಾಕೇ?

Published:
Updated:

ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಚಂಪಾ ಅವರ ‘ರಾಜಕೀಯ ಭಾಷಣ’ದ ವಿವಾದವನ್ನು ಹಿರಿಯರಾದ ಸಿ.ಎನ್. ರಾಮಚಂದ್ರನ್ ವಿಶ್ಲೇಷಿಸುತ್ತ, ‘ಈ ನಿಲುವಿನ ಆಳದಲ್ಲಿ ರಾಜಕೀಯವೆಂಬುದರ ತಿರಸ್ಕಾರ ಹಾಗೂ ಶ್ರೇಷ್ಠ ಸಾಹಿತ್ಯದಲ್ಲಿ ರಾಜಕೀಯ ಇರುವುದಿಲ್ಲ ಎಂಬ ಗೃಹೀತಗಳಿವೆ...

ಇಂದು ಅಧಿಕಾರದಲ್ಲಿರುವ ವ್ಯಕ್ತಿಗಳಿಂದ ಆಗುತ್ತಿರುವ ಮೋಸ, ವಂಚನೆ ಹಾಗೂ ಭ್ರಷ್ಟಾಚಾರವೇ ರಾಜಕೀಯ ಎಂಬ ಗೃಹೀತವಿದೆ’ ಎಂದು ಹೊಸದಾಗಿ ಸಂಶೋಧಿಸಿದ್ದಾರೆ (ಚರ್ಚೆ, ಪ್ರ.ವಾ., ಡಿ.4). ಇದರ ಸಮರ್ಥನೆಗಾಗಿ ಅವರು ಜೇನ್ ಆಸ್ಟಿನ್, ಎಡ್ವರ್ಡ್ ಸೈದ್‌ ಮುಂತಾದ ಲೇಖಕರ ಚಿಂತನೆಗಳನ್ನು ಉಲ್ಲೇಖಿಸಿದ್ದಾರೆ. ‘ಅಂತಿಮವಾಗಿ ಎಲ್ಲವೂ ರಾಜಕೀಯವೇ’ ಎಂಬ ಫ್ರೆಡರಿಕ್ ಜೇಮ್ಸನ್ ನಿಲುವನ್ನು ತಮ್ಮ ಲೇಖನದ ಅಂತ್ಯದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ತಾವು ಮಾತ್ರ ‘ಚಂಪಾ ಮಾಡಿದ್ದು ನಿಜಕ್ಕೂ ರಾಜಕೀಯ ಭಾಷಣವೇ; ಒಂದು ವೇಳೆ ಹೌದಾದಲ್ಲಿ, ಅದು ಯಾವ ಬಗೆಯ ರಾಜಕಾರಣ’ ಎಂಬಿತ್ಯಾದಿ ಪ್ರಶ್ನೆಗಳನ್ನು ತಪ್ಪಿಯೂ ಕೈಗೆತ್ತಿಕೊಳ್ಳುವುದಿಲ್ಲ.

ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ ಚಂಪಾ ತಮ್ಮ ಆಯ್ಕೆಯ ರಾಜಕೀಯ ಪಕ್ಷ ಯಾವ ಸ್ವರೂಪದ್ದಾಗಿರಬೇಕು ಎಂದು ಸೂಚಿಸಿದ್ದರು. ‘ಅದು ಜಾತ್ಯತೀತವಾಗಿರಬೇಕು, ಒಂದು ಪ್ರಬಲ ರಾಷ್ಟ್ರೀಯ ಪಕ್ಷವಾಗಿರಬೇಕು, ಕರ್ನಾಟಕದ ಬಗ್ಗೆ ಪ್ರಾದೇಶಿಕ ಕಳಕಳಿ ಹೊಂದಿರಬೇಕು, ಪ್ರಾದೇಶಿಕ ಅಜೆಂಡಾ ಇರಬೇಕು’ (ಪ್ರ.ವಾ., ನ. 25) ಎಂದೆಲ್ಲ ಹೇಳುವ ಮೂಲಕ ತಾವು ಬೆಂಬಲಿಸುವ ರಾಜಕೀಯ ಪಕ್ಷ ಯಾವುದು ಎಂಬುದನ್ನು ಕನ್ನಡಿಗರ ಊಹೆಗೆ ಬಿಟ್ಟಿದ್ದರು. ಸಾಲದೆಂದು ಬಿಜೆಪಿಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ‘ಹಿಂದಿ ಹೇರಿಕೆ ಹಾಗೂ ಕನ್ನಡ ಧ್ವಜಕ್ಕೆ ಸಂಬಂಧಿಸಿದ ಚರ್ಚೆಯಲ್ಲಿ ರಾಷ್ಟ್ರೀಯ ಪಕ್ಷವೊಂದು ಮೌನವಾಗಿದ್ದುದನ್ನು ಕನ್ನಡ ಜನತೆ ಗಮನಿಸಬೇಕು’ ಎಂದಿದ್ದರು.

ಚಂಪಾ ಅವರ ರಾಜಕೀಯ ಆಯ್ಕೆ ಇಂದು ನಿನ್ನೆಯದಲ್ಲ. ಕಾಂಗ್ರೆಸ್ ಮತ್ತು ಕಾಂಗ್ರೆಸ್ಸೇತರ ಪಕ್ಷಗಳ ಆಯ್ಕೆಯ ವಿಷಯದಲ್ಲಿ ಹುಟ್ಟಿಕೊಂಡ ಈ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಕಾರಣದಿಂದಲೇ ದಶಕಗಳ ಹಿಂದೆ ಚಂಪಾ ಮತ್ತು ಪಿ. ಲಂಕೇಶ್ ನಡುವಿನ ಸಂಬಂಧ ಹಳಸಿತ್ತು. ಅದೇನೇ ಇರಲಿ, ತಮ್ಮ ಕಲ್ಪನೆಯ ರಾಜಕೀಯ ಪಕ್ಷದ ಕುರಿತು ಹೇಳಿಕೊಳ್ಳುವ ಮತ್ತು ಅದನ್ನು ಪ್ರಚಾರ ಮಾಡುವ ಸ್ವಾತಂತ್ರ್ಯ ಅವರಿಗೆ ಇದ್ದೇ ಇದೆ. ಅದನ್ನು ಯಾರೂ ಪ್ರಶ್ನಿಸಲಾರರು.

ಈ ಹಿಂದೆ ಚಿತ್ರದುರ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಎಲ್. ಬಸವರಾಜು ಸಹ ಸಮ್ಮೇಳನಾಧ್ಯಕ್ಷ ಭಾಷಣದಲ್ಲಿ, ಚಂಪಾ ಅವರಿಗಿಂತಲೂ ತೀವ್ರವಾಗಿ ರಾಜಕೀಯ ಮಾತನಾಡಿದ್ದರು. ಆದರೆ ಆಗ ಇಂತಹ ಯಾವುದೇ ವಿವಾದ ಉದ್ಭವಿಸಿರಲಿಲ್ಲ. ಅಂದು ಬಸವರಾಜು ಸಭಿಕರಿಗೆ ವೇದಿಕೆಯ ಮೇಲಿದ್ದ ರಾಜಕಾರಣಿಗಳನ್ನು ತೋರಿಸಿ, ‘ಇವರ ಆಶ್ವಾಸನೆಗಳನ್ನು ನಂಬದಿರಿ. ಅಂತಹ ಆಶ್ವಾಸನೆಗಳಿಗೆ ಇವರ ಕೈಲಿ ಸ್ಟಾಂಪ್ ಪೇಪರ್‌ನಲ್ಲಿ ಸಹಿ ಹಾಕಿಸಿಕೊಳ್ಳಿ. ಭರವಸೆಗಳು ಈಡೇರದಿದ್ದರೆ ಇವರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಕರೆ ನೀಡಿದ್ದರು. ಇಂತಹ ಮಾತುಗಳನ್ನು ಚಂಪಾರಿಂದ ನಿರೀಕ್ಷಿಸಲಾದೀತೇ?

ಅದೇ ರೀತಿ ದೇವನೂರ ಮಹಾದೇವ ಅವರು ‘ಪ್ರಾಥಮಿಕ ಹಂತದಲ್ಲಿ ಕನ್ನಡ ಭಾಷಾ ಮಾಧ್ಯಮ ಕಡ್ಡಾಯವಾಗಿ ಅನುಷ್ಠಾನಗೊಳ್ಳುವವರೆಗೆ ಸಮ್ಮೇಳನಾಧ್ಯಕ್ಷ ಸ್ಥಾನ ವಹಿಸಿಕೊಳ್ಳುವುದಿಲ್ಲ’ ಎಂದಿದ್ದರು, ಇತ್ತೀಚೆಗೆ ಡಿ.ಎಸ್. ನಾಗಭೂಷಣ ಸಹ ರಾಜ್ಯೋತ್ಸವ ಪ್ರಶಸ್ತಿ ತಿರಸ್ಕರಿಸುವ ಮೂಲಕ, ಕನ್ನಡ ಮಾಧ್ಯಮ ಅನುಷ್ಠಾನಗೊಳಿಸದ ಸರ್ಕಾರದ ನಿಷ್ಕ್ರಿಯತೆಗೆ ಪ್ರತಿರೋಧ ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ, ಆಡಳಿತ ಪಕ್ಷವನ್ನು ಟೀಕಿಸುವ, ಸಾಂಕೇತಿಕವಾಗಿಯಾದರೂ ಪ್ರತಿರೋಧಿಸುವ ವಿಷಯದಲ್ಲಿ ಚಂಪಾ ತಳೆದಿದ್ದ ಮೃದುಧೋರಣೆ ಮತ್ತು ಅವರ ಓಲೈಕೆಯ ಬಡಿವಾರ ಎದ್ದುಕಾಣುವಂತಿತ್ತು. ‘ಹತ್ತು ವರ್ಷಗಳಲ್ಲಿ ಶಾಂತರಸ, ಕೆ.ಎಸ್.ನಿಸಾರ್ ಅಹಮದ್, ಎಲ್.ಬಸವರಾಜು, ಗೀತಾ ನಾಗಭೂಷಣ, ಕೋಚೆ, ನಾ.ಡಿಸೋಜ, ಸಿದ್ಧಲಿಂಗಯ್ಯ... ಇವರೆಲ್ಲರ ಮುಂದುವರಿದ ಪರಿಷ್ಕೃತ ಆವೃತ್ತಿಯಾಗಿ ನಾನು ನಿಮ್ಮೆದುರು ನಿಂತಿದ್ದೇನೆ’ ಎಂಬ ಅವರ ಹೇಳಿಕೆ ಅವರದೇ ಅಸಂಗತ ನಾಟಕದ ಒಂದು ಹಾಸ್ಯ ಸಂಭಾಷಣೆಯ ಭಾಗದಂತಿತ್ತು.

ಮೋದಿ ಮತ್ತು ಬಿಜೆಪಿ ಸರ್ಕಾರಗಳನ್ನು ನೇರವಾಗಿಯೇ ಟೀಕಿಸಬಲ್ಲ ಅವರು, ಶಿಕ್ಷಣ ಮಾಧ್ಯಮವನ್ನು ಅನುಷ್ಠಾನಗೊಳಿಸಲು ವಿಫಲವಾಗಿರುವ ರಾಜ್ಯ ಸರ್ಕಾರವನ್ನು ಟೀಕಿಸುವ ವಿಷಯದಲ್ಲಿ ಹಿಂಜರಿದುದು ಅಂದು ಸಭಿಕರಿಗೆ ಸ್ಪಷ್ಟವಾಗಿಯೇ ಗೋಚರಿಸುತ್ತಿತ್ತು. ನೇರವಾಗಿ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳದೆ, ಸರ್ಕಾರದ ವೈಫಲ್ಯಕ್ಕೆ ಒಂದು ನಿರ್ದಿಷ್ಟ ಇಲಾಖೆಯ ಒಬ್ಬ ನಿರ್ದಿಷ್ಟ ಸಚಿವನೇ (ತನ್ವೀರ್ ಸೇಠ್) ಕಾರಣವೆಂದು ಮಾತನಾಡಿದ್ದು ಅವರ ರಾಜಕೀಯ ನಿಲುವು ಮತ್ತು ಕನ್ನಡಪರ ಕಾಳಜಿ ‘ಅದೆಷ್ಟು ಉದಾತ್ತ’ ಎಂಬುದನ್ನು ಬಯಲು ಮಾಡುತ್ತಿತ್ತು.

ರಾಜಕೀಯ ಹೇಳಿಕೆಗಳ ವಿಷಯಕ್ಕೆ ಬಂದಾಗ ‘ಯಾವ ಹೇಳಿಕೆ’ ಎಂಬುದಕ್ಕಿಂತ ‘ಯಾರು ಹೇಳಿದರು’ ಎಂಬುದು ಮುಖ್ಯವಾಗುತ್ತದೆ ಎಂದು  ಜಿ.ಕೆ. ಗೋವಿಂದರಾವ್ ಹೇಳುತ್ತಾರೆ. ‘ಒಬ್ಬ ಸಾರ್ವಜನಿಕ ವ್ಯಕ್ತಿಯ (ಆತ ರಾಜಕಾರಣಿಯಿರಲಿ ಅಥವಾ ಚಳವಳಿಗಾರನಿರಲಿ) ಬದುಕು ಸದಾ ಪಾರದರ್ಶಕವಾಗಿರಬೇಕು’ ಎಂದು ಮಹಾತ್ಮ ಗಾಂಧಿ ಕಿವಿಮಾತು ಹೇಳಿದ್ದು ಸಹ ಈ ಹಿನ್ನೆಲೆಯಲ್ಲೇ.

ಚಂಪಾ ತಾವು ಎಡಪಂಥೀಯರೆಂದು ಹೇಳಿಕೊಳ್ಳುತ್ತಲೇ ಆಳುವ ಪಕ್ಷ ದಯಪಾಲಿಸುವ ಪ್ರಾಧಿಕಾರ ಮುಂತಾದ ಸ್ಥಾನಮಾನಗಳನ್ನು ಮುಜುಗರವೇ ಇಲ್ಲದಂತೆ ಅಲಂಕರಿಸುತ್ತಾರೆ. ಆಳುವ ಸರ್ಕಾರದ ಮುಲಾಜಿಗೆ ಬಿದ್ದ ಕೂಡಲೇ ಎಡಪಂಥೀಯತೆ ಸತ್ವಹೀನವಾಗಿಬಿಡುತ್ತದೆ ಎಂಬುದನ್ನು ಮರೆಯುತ್ತಾರೆ. ಈ ಹಿಂದೆ ಪರಿಷತ್ತಿನ ಚುನಾವಣೆಗೆ ನಿಂತಾಗ ಮತ ಗಳಿಕೆಗಾಗಿ ಮಠಾಧಿಪತಿಗಳಿಗೆ ಸಮಸ್ಯೆಯೇ ಇಲ್ಲದೆ ಶರಣಾಗಿದ್ದ ಚಂಪಾಗೆ ನಾಡದೇವಿ ಭುವನೇಶ್ವರಿಗೆ ಕೈಮುಗಿಯಲು ಸಮಸ್ಯೆಯಾದುದು ವಿಪರ್ಯಾಸ.

ಕೆಲವು ರಾಜಕೀಯ ಪಕ್ಷಗಳು ಚಂಪಾ ಅವರ ‘ರಾಜಕೀಯ ಭಾಷಣ’ವನ್ನು ಅದಾವ ಕಾರಣಕ್ಕೆ ಪ್ರಶ್ನಿಸುತ್ತಿವೆಯೋ ತಿಳಿಯದು. ಆದರೆ ನಾಡಿನ ಜನ ಪ್ರಶ್ನಿಸುತ್ತಿರುವುದು ‘ಚಂಪಾ ಅವರ ನಾಸ್ತಿಕ ನಂಬಿಕೆಯನ್ನಾಗಲಿ ಅಥವಾ ರಾಜಕೀಯ ನಿಲುವನ್ನಾಗಲಿ’ ಅಲ್ಲ. ಅವರು ಸಂಶಯಿಸುತ್ತಿರುವುದು ಚಂಪಾರ ‘ಈ ನಂಬಿಕೆ ಹಾಗೂ ನಿಲುವುಗಳಲ್ಲಿ ಕಂಡುಬರುತ್ತಿರುವ ಬಿರುಕುಗಳನ್ನು’. ಆದ್ದರಿಂದಲೇ ಅವರು ರಾಜಕೀಯದ ಬಗ್ಗೆ ಬೋಧಪ್ರದ (ಡೈಡಾಕ್ಟಿಕ್) ಮಾತುಗಳನ್ನಾಡಿದರೂ ಅವು ವಿವಾದವಾಗಿ ಪರಿಣಮಿಸುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry