ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ ಟೀಕೆಯಲ್ಲಿ ರಾಹುಲ್‌ ಎಡವಟ್ಟು

Last Updated 5 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ ಗಾಂಧಿ ಮತ್ತೊಮ್ಮೆ ಬಿಜೆಪಿ ವಿರುದ್ಧದ ದಾಳಿಗೆ ಹಿಂದಿ ಕಾವ್ಯವನ್ನು ಅಸ್ತ್ರವನ್ನಾಗಿ ಬಳಿಸಿಕೊಂಡಿದ್ದಾರೆ.

ಈ ಬಾರಿ ಅವರು ಜೀವನಾವಶ್ಯಕ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಪಡುತ್ತಿರುವ ಕಷ್ಟಗಳನ್ನು ಕಾವ್ಯದ ರೂಪದಲ್ಲಿ ಹಿಡಿದಿಟ್ಟಿದ್ದಾರೆ. ಆ ಭರದಲ್ಲಿ ಮತ್ತೊಂದು ಯಡವಟ್ಟು ಮಾಡಿಕೊಂಡು ತಕ್ಷಣ ಸರಿಪಡಿಸಿಕೊಂಡಿದ್ದಾರೆ.

ಬೇಳೆ, ಟೊಮೆಟೊ, ಈರುಳ್ಳಿ, ಹಾಲು, ಡೀಸೆಲ್‌, ಪೆಟ್ರೋಲ್‌ ಅಡುಗೆ ಅನಿಲ ಮುಂತಾದ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ಶೇಕಡಾವಾರು ಪ್ರಮಾಣದ ಪಟ್ಟಿಯನ್ನು ಅವರು ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದ್ದರು.

ಈ ಪಟ್ಟಿಯಲ್ಲಿ ಶೇಕಡಾವಾರು ಬೆಲೆ ಏರಿಕೆ ಪ್ರಮಾಣ ತೋರಿಸುವ ಅಂಕಿ, ಅಂಶ ತಪ್ಪಾಗಿದ್ದವು. ಇದನ್ನು ಗಮನಿಸಿದ ಅವರು ತಕ್ಷಣ ಎಚ್ಚೆತ್ತುಕೊಂಡು ಪರಿಷ್ಕೃತ ಪಟ್ಟಿ ಪ್ರಕಟಿಸಿದ್ದಾರೆ. ಇದನ್ನೇ ಬಿಜೆಪಿ, ರಾಹುಲ್‌ ಲೇವಡಿಗೆ ಬಳಸಿಕೊಂಡಿದೆ.

‘ಜುಲ್ಮೊ ಕೀ ಬೇವಫಾಯಿ ಮಾರ್‌ ಗಯಿ. ನೋಟ್‌ ಬಂದಿ ಕೀ ಲೂಟಾಯಿ ಮಾರ್‌ ಗಯಿ. ಜಿಎಸ್‌ಟಿ ಸಾರಿ ಕಮಾಯಿ ಮಾರ್ ಗಯಿ. ಬಾಕಿ ಕುಚ್‌ ಬಚಾ ತೊ ಮೆಹಂಗಾಯಿ ಮಾರ್‌ ಗಯಿ’ ಎಂಬ ಕಾವ್ಯಾತ್ಮಕ ಟೀಕೆಯನ್ನು ಅವರು ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದ್ದಾರೆ. (ಸುಳ್ಳು ಭರವಸೆಗಳನ್ನು ನಂಬಿ ಮೋಸ ಹೋದೆವು. ನೋಟು ರದ್ದತಿಯಲ್ಲೂ ಕೊಳ್ಳೆ ಹೊಡೆಯಲಾಯಿತು. ಜಿಎಸ್‌ಟಿ ನಮ್ಮ ಎಲ್ಲ ಗಳಿಕೆಯನ್ನು ತಿಂದು ಹಾಕಿದೆ. ಉಳಿದ ಅಲ್ಪಸ್ವಲ್ಪವನ್ನು ಈ ಬೆಲೆ ಏರಿಕೆ ಕಬಳಿಸಿದೆ.)

ಗುಜರಾತ್‌ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವಿಟರ್‌ನಲ್ಲಿ ರಾಹುಲ್‌ ದಿನಕ್ಕೊಂದು ಪ್ರಶ್ನೆ ಕೇಳುತ್ತಿದ್ದಾರೆ.  2014 ಮತ್ತು 2017ರ ಅವಧಿಯಲ್ಲಿ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಲ್ಲಾದ ವ್ಯತ್ಯಾಸಗಳನ್ನು ಮಂಗಳವಾರ ಅವರು ಅಂಕಿ, ಅಂಶಗಳ ಸಮೇತ ಪ್ರಕಟಿಸಿದ್ದಾರೆ.

2014ರಲ್ಲಿ ₹414ರಷ್ಟಿದ್ದ ಅಡುಗೆ ಅನಿಲದ ಸಿಲಿಂಡರ್‌ ಬೆಲೆ ಮೂರು ವರ್ಷಗಳಲ್ಲಿ(2017) ₹742 ತಲುಪಿದೆ. ₹45ಕ್ಕೆ ಸಿಗುತ್ತಿದ್ದ  ಬೇಳೆ ₹80 ಆಗಿದೆ. ಟೊಮೆಟೊ ಬೆಲೆ ಮೂರು ಪಟ್ಟು, ಈರುಳ್ಳಿ ಬೆಲೆ ದುಪ್ಪಟ್ಟು ಆಗಿದೆ. ₹38 ಇದ್ದ ಹಾಲು ₹50 ಆಗಿದೆ.  ಪೆಟ್ರೋಲ್‌, ಡೀಸೆಲ್‌ ಬೆಲೆಗಳು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿವೆ ಎಂದು ಅವರು ಮೋದಿ ಆಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT