ಭಾನುವಾರ, ಮಾರ್ಚ್ 7, 2021
31 °C

ಟ್ಯುಟೋರಿಯಲ್‌ನಲ್ಲಿ ಬೆಂಕಿ ಹಚ್ಚಿಕೊಂಡ ಟೆಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟ್ಯುಟೋರಿಯಲ್‌ನಲ್ಲಿ ಬೆಂಕಿ ಹಚ್ಚಿಕೊಂಡ ಟೆಕಿ

ಬೆಂಗಳೂರು: ಮಕ್ಕಳಿಗೆ ಪ್ರತಿಷ್ಠಿತ ಶಾಲೆಯಲ್ಲಿ ಪ್ರವೇಶ ಕೊಡಿಸುವುದಾಗಿ ಟ್ಯುಟೋರಿಯಲ್ ಮಾಲೀಕ ಹಣ ಪಡೆದು ವಂಚಿಸಿದ್ದರಿಂದ ಬೇಸರಗೊಂಡ ಸಾಫ್ಟ್‌ವೇರ್ ಉದ್ಯೋಗಿ ರಿತೇಶ್ ಕುಮಾರ್ (35), ಆ ಟ್ಯುಟೋರಿಯಲ್‌ನಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜೆ.ಪಿ.ನಗರ 2ನೇ ಹಂತದ ‘ಆದಿತ್ಯ ಟ್ಯುಟೋರಿಯಲ್‌’ನಲ್ಲಿ ನ.30ರಂದು ಈ ದುರ್ಘಟನೆ ನಡೆದಿದ್ದು, ರಿತೇಶ್ ರಕ್ಷಣೆಗೆ ಮುಂದಾದ ಟ್ಯುಟೋರಿಯಲ್ ಮಾಲೀಕ ಆದಿತ್ಯ ಸಹ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ.‌ ಮೃತರ ಪತ್ನಿ ಪಾರೂಲ್ ಮೆಹನ್ಸಾರಿಯಾ ಕೊಟ್ಟಿರುವ ದೂರಿನ ಅನ್ವಯ ಪೊಲೀಸರು ವಂಚನೆ (420) ಹಾಗೂ ಆತ್ಮಹತ್ಯೆಗೆ ಪ್ರಚೋದನೆ (306) ಆರೋಪಗಳಡಿ ಆದಿತ್ಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮಾರತ್ತಹಳ್ಳಿಯ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ರಿತೇಶ್, ಪತ್ನಿ ಪಾರೂಲ್, ಮಗ ದರ್ಶ್ (7) ಹಾಗೂ ಮಗಳು ವಿಧಿ (3) ಜತೆ ಎಚ್‌ಎಎಲ್ ಸಮೀಪದ ಲಾಲ್ ಬಹದ್ಧೂರ್ ಶಾಸ್ತ್ರಿ ನಗರದಲ್ಲಿ ನೆಲೆಸಿದ್ದರು.

ತಮ್ಮ ಇಬ್ಬರು ಮಕ್ಕಳಿಗೆ ಪ್ರತಿಷ್ಠಿತ ಶಾಲೆಯಲ್ಲಿ ಪ್ರವೇಶ ಕೊಡಿಸುವುದಾಗಿ ರಿತೇಶ್ ಅವರಿಂದ ₹ 2.5 ಲಕ್ಷ ಪಡೆದಿದ್ದ ಆದಿತ್ಯ, ಪ್ರವೇಶವನ್ನೂ ಕೊಡಿಸದೆ, ಹಣವನ್ನೂ ಮರಳಿಸಿದೆ ಸತಾಯಿಸಿದ್ದರು. ಇದರಿಂದ ಬೇಸರಗೊಂಡ ರಿತೇಶ್, ನ.30ರ ರಾತ್ರಿ ನೀರಿನ ಬಾಟಲ್‌ನಲ್ಲಿ ಪೆಟ್ರೋಲ್ ತುಂಬಿಕೊಂಡು ಟ್ಯುಟೋರಿಯಲ್‌ಗೆ ತೆರಳಿದ್ದರು. ಅಲ್ಲಿ ಹಣದ ವಿಚಾರವಾಗಿ ಪರಸ್ಪರರ ನಡುವೆ ಗಲಾಟೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

‘ನನ್ನ ಬಳಿ ಸದ್ಯ ಹಣವಿಲ್ಲ. ಇನ್ನೂ ಸ್ವಲ್ಪ ಕಾಲಾವಕಾಶ ಬೇಕೆಂದು ಕೋರಿದೆ. ಅದಕ್ಕೆ ಒಪ್ಪದ ರಿತೇಶ್, ಬ್ಯಾಗ್‌ನಿಂದ ಬಾಟಲಿ ತೆಗೆದು ಏಕಾಏಕಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡರು. ನಂತರ ‘ಹಣ ಕೊಡಲು ಆಗುವುದಿಲ್ಲ ತಾನೆ. ಸರಿ ಹಾಗಾದರೆ. ನೀನೇ ಬೆಂಕಿ ಹಚ್ಚಿ ನನ್ನನ್ನು ಕೊಂದುಬಿಡು...’ ಎಂದು ಬೆಂಕಿ ಪೊಟ್ಟಣವನ್ನು ನನ್ನ ಕೈಗಿಟ್ಟರು. ಆಗ ನಾನು ಬೈದು ಪೊಟ್ಟಣವನ್ನು ಮೇಜಿನ ಮೇಲೆ ಬಿಸಾಡಿದೆ. ಆದರೆ, ಸ್ವಲ್ಪ ಸಮಯದಲ್ಲೇ ಅವರು ಆ ಪೊಟ್ಟಣ ತೆಗೆದುಕೊಂಡು ಬೆಂಕಿ ಹಚ್ಚಿಕೊಂಡುಬಿಟ್ಟರು’ ಎಂದು ಆದಿತ್ಯ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

‘ಕೂಡಲೇ ನಾನು ಮೈ ಮೇಲೆ ನೀರೆರಚಿ ಬೆಂಕಿ ನಂದಿಸಲು ಯತ್ನಿಸಿದೆ. ಅವರು ಚೀರಾಡುತ್ತ ನನ್ನ ಮೇಲೆಯೇ ಬಿದ್ದರು. ಇದರಿಂದ ನನಗೂ ಸುಟ್ಟ ಗಾಯಗಳಾದವು. ಅಕ್ಕ–ಪಕ್ಕದ ಮನೆಯವರು ನಮ್ಮಿಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದರು’ ಎಂದು ಆದಿತ್ಯ ಹೇಳಿದ್ದಾರೆ.

ದೂರಿನ ವಿವರ: ಮಕ್ಕಳಿಬ್ಬರನ್ನೂ ‘ನ್ಯಾಷನಲ್ ಪಬ್ಲಿಕ್ ಸ್ಕೂಲ್‌’ಗೆ ಸೇರಿಸಲು ನಿರ್ಧರಿಸಿದ್ದೆವು. ₹ 2.5 ಲಕ್ಷ ಕೊಟ್ಟರೆ ಅಲ್ಲಿ ಪ್ರವೇಶ ಕೊಡಿಸುವುದಾಗಿ ಆದಿತ್ಯ ಹೇಳಿದ್ದ. ಅಂತೆಯೇ ಪತಿ ಹಣ ಹೊಂದಿಸಿ ಕೊಟ್ಟಿದ್ದರು. ತಿಂಗಳು ಕಳೆದರೂ ಪ್ರವೇಶ ಕೊಡಿಸದಿದ್ದಾಗ ಪತಿ ಗಲಾಟೆ ಮಾಡಿ ಹಣ ವಾಪಸ್ ಕೇಳಿದ್ದರು. ಆಗ ಆದಿತ್ಯ ₹ 1.25 ಲಕ್ಷವನ್ನು ಮರಳಿಸಿ, ಉಳಿದ ಹಣ ಹಿಂದಿರುಗಿಸಲು ಒಂದು ವಾರ ಕಾಲಾವಕಾಶ ಕೇಳಿದ್ದ’ ಎಂದು ಪಾರೂಲ್ ದೂರಿನಲ್ಲಿ ಹೇಳಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.

‘ವಾರದ ಗಡುವು ಮುಗಿದ ಬಳಿಕ ವಿಚಾರಿಸಿದಾಗ, ‘ನೀನು ಸತ್ತರೂ ಹಣ ಕೊಡುವುದಿಲ್ಲ’ ಎಂದು ಹೇಳಿದ. ಇದರಿಂದ ಕೆರಳಿದ ಪತಿ ಪೊಲೀಸರಿಗೆ ದೂರು ಕೊಡುವುದಾಗಿ ತಿಳಿಸಿದ್ದರು. ನ.30ರ ರಾತ್ರಿ 8 ಗಂಟೆ ಸುಮಾರಿಗೆ ಪತಿ, ‘ಏನಾದರೂ ಆಗಲಿ. ಇಂದು ಸಮಸ್ಯೆ ಬಗೆಹರಿಸಿಕೊಂಡು ಬರುತ್ತೇನೆ. ಹಣ ಪಡೆದುಕೊಂಡೇ ಮನೆಗೆ ಮರಳುತ್ತೇನೆ’ ಎಂದು ಹೇಳಿ ಆದಿತ್ಯನ ಟ್ಯುಟೋರಿಯಲ್ ಬಳಿ ಹೋಗಿದ್ದರು. 11 ಗಂಟೆಗೆ ನನಗೆ ಅಲ್ಲಿಂದ ಕರೆ ಮಾಡಿದ ವ್ಯಕ್ತಿಯೊಬ್ಬರು, ಪತಿ ಬೆಂಕಿ ಹಚ್ಚಿಕೊಂಡ ಹಾಗೂ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿರುವ ವಿಚಾರವನ್ನು ತಿಳಿಸಿದರು.’

‘ತಕ್ಷಣ ನಾನು ಆಸ್ಪತ್ರೆಗೆ ಹೋದೆ. ಪತಿ ಇದ್ದ ವಾರ್ಡ್‌ನಲ್ಲೇ ಅದಿತ್ಯ ಸಹ ದಾಖಲಾಗಿದ್ದ. ಆತನಿಗೂ ಸುಟ್ಟ ಗಾಯಗಳಾಗಿದ್ದವು. ಚಿಕಿತ್ಸೆಗೆ ಸ್ಪಂದಿಸದ ಪತಿ ನ.1ರಂದು ಕೊನೆಯುಸಿರೆಳೆದರು. ನಮಗೆ ವಂಚಿಸಿರುವ ಹಾಗೂ ಪತಿಯ ಸಾವಿಗೆ ಕಾರಣನಾದ ಆದಿತ್ಯ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಪಾರೂಲ್ ದೂರಿನಲ್ಲಿ ಕೋರಿದ್ದಾರೆ.

ತಂಗಿಯಿಂದ ಪರಿಚಯ

ರಿತೇಶ್ ತಂಗಿ ನೇಹಾ 2010 ರಿಂದ 2012ರವರೆಗೆ ‘ಆದಿತ್ಯ ಟ್ಯುಟೋರಿಯಲ್‌’ನಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ಹೀಗಾಗಿ, ಆದಿತ್ಯಗೆ ರಿತೇಶ್ ಅವರ ಪರಿಚಯವಿತ್ತು. ತಮ್ಮ ಮಕ್ಕಳಿಬ್ಬರನ್ನೂ ಪ್ರತಿಷ್ಠಿತ ಶಾಲೆಗೆ ಸೇರಿಸಲು ನಿರ್ಧರಿಸಿದ್ದ ರಿತೇಶ್, ಅದಕ್ಕೆ ಅವರ ನೆರವು ಕೇಳಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.