7
ತರಕಾರಿ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳದ್ದೇ ರಾಜ್ಯಭಾರ

ಸಗಟು, ಚಿಲ್ಲರೆ ಬೆಲೆಯಲ್ಲಿ ಭಾರಿ ವ್ಯತ್ಯಾಸ

Published:
Updated:

ಮೈಸೂರು: ನಗರದಲ್ಲಿ ತರಕಾರಿಗಳ ಸಗಟು ಹಾಗೂ ಚಿಲ್ಲರೆ ಬೆಲೆಗಳಲ್ಲಿ ಭಾರಿ ವ್ಯತ್ಯಾಸ ಇರುವುದು ಕಂಡು ಬಂದಿದೆ. ಇದರಿಂದ ಒಂದೆಡೆ ರೈತರು ಕಡಿಮೆ ದರಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದ್ದರೆ, ಮತ್ತೊಂದೆಡೆ ಗ್ರಾಹಕರು ದುಬಾರಿ ಬೆಲೆ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದಕ್ಕೊಂದು ತಾಜಾ ಉದಾಹರಣೆ ಎಂದರೆ ಬೀನ್ಸ್ ದರ. ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ನವೆಂಬರ್ 8ರಂದು ಕೆ.ಜಿಗೆ ₹ 18ರಿಂದ ₹ 20ಕ್ಕೆ ಬೀನ್ಸ್ ದರ ಇಳಿಯಿತು. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಇದರ ದರ ಕಡಿಮೆಯಾಗಲೇ ಇಲ್ಲ. ಕೆ.ಜಿಗೆ ₹ 50ರಲ್ಲೇ ವ್ಯಾಪಾರಸ್ಥರು ಮಾರಾಟ ಮಾಡಿದರು. ನವೆಂಬರ್ ತಿಂಗಳಾಂತ್ಯಕ್ಕೆ ಬೀನ್ಸ್ ಸಗಟು ದರ ₹ 15ರಿಂದ ₹ 16ಕ್ಕೆ ಆಯಿತು. ರೈತರಿಗೂ ಇಷ್ಟೇ ಹಣ ಸಿಕ್ಕಿತು. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಇದರ ದರ ₹ 50ರ ಗಡಿಯಲ್ಲೇ ಇತ್ತು.

ಇದೇ ರೀತಿ ಬದನೆ ದರವೂ ನವೆಂಬರ್ 19ರಂದು ₹ 18ಕ್ಕೆ ಸಗಟು ದರ ಕಡಿಮೆಯಾಯಿತು. ನಂತರದ ದಿನಗಳಲ್ಲಿ ಇದರ ದರ ₹ 8ಕ್ಕೆ ಕುಸಿಯಿತು. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಇದರ ದರ ₹ 30ರಲ್ಲೇ ಮಾರಾಟವಾಗುತ್ತಿತ್ತು.

ಟೊಮೆಟೊ ದರವೂ ಸಗಟು ಮಾರುಕಟ್ಟೆಯಲ್ಲಿ ₹ 18ಕ್ಕೆ ನವೆಂಬರ್ 23ರಂದು ಕುಸಿಯಿತು. ಚಿಲ್ಲರೆ ಮಾರುಕಟ್ಟೆಯಲ್ಲಿ ಇದರ ದರ ₹ 50ರಲ್ಲೇ ಇತ್ತು.

ಏಕೆ ಹೀಗೆ?: ಎಲ್ಲ ತರಕಾರಿಗಳ ಬೆಲೆಗಳು ಸಗಟು ಬೆಲೆಯಲ್ಲಿ ತೀರಾ ಕಡಿಮೆ ಇದ್ದರೆ, ಚಿಲ್ಲರೆ ಬೆಲೆಯಲ್ಲಿ ಹೆಚ್ಚಿರುತ್ತದೆ. ರೈತರು ತಾವು ಬೆಳೆದ ತರಕಾರಿಗಳು ಹೆಚ್ಚಿನ ಪ್ರಮಾಣದಲ್ಲಿದ್ದರೆ ಎಪಿಎಂಸಿ ಮಾರುಕಟ್ಟೆಗೆ ತರುತ್ತಾರೆ. ಇಲ್ಲಿ ಮಧ್ಯವರ್ತಿಗಳು ಬೆಲೆಯನ್ನು ನಿಗದಿ ಮಾಡುತ್ತಾರೆ. ಮುಖ್ಯವಾಗಿ ಎಪಿಎಂಸಿ ಮಾರುಕಟ್ಟೆಗೆ ಕೇರಳ ರಾಜ್ಯದ ವರ್ತಕರೂ ಖರೀದಿಗೆ ಬರುತ್ತಾರೆ. ಇಲ್ಲಿಂದ ಖರೀದಿಸುವ ಮಧ್ಯವರ್ತಿಗಳು ನಂತರ ಹೆಚ್ಚಿನ ಬೆಲೆಗೆ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಾರೆ. ವ್ಯಾಪಾರಿಗಳು ತಮಗೆ ಲಾಭ ಇಟ್ಟುಕೊಂಡು ಬೆಲೆಯನ್ನು ಇನ್ನಷ್ಟು ಹೆಚ್ಚಿಸಿ ಗ್ರಾಹಕರಿಗೆ ಮಾರಾಟ ಮಾಡುವುದರಿಂದ ಸಗಟು ಮತ್ತು ಚಿಲ್ಲರೆ ಬೆಲೆಗಳಲ್ಲಿ ಭಾರಿ ವ್ಯತ್ಯಾಸ ಕಂಡು ಬರುತ್ತಿದೆ.

ಇದರ ಜತೆಗೆ, ಬೆಲೆ ದಿಢೀರನೇ ಸಗಟು ಮಾರುಕಟ್ಟೆಯಲ್ಲಿ ಕುಸಿದ ತಕ್ಷಣ ಚಿಲ್ಲರೆ ಮಾರುಕಟ್ಟೆಯಲ್ಲಿ ಬೇಕೆಂದೇ ಬೆಲೆಯನ್ನು ಇಳಿಸುವುದಿಲ್ಲ. ಕೆಲವು ದಿನಗಳ ಕಾಲ ಹಳೆಯ ಬೆಲೆಯಲ್ಲೇ ಮಾರಾಟ ಮಾಡುತ್ತಾರೆ. ರೈತರಿಗೆ ಕನಿಷ್ಠ ಬೆಲೆ ಸಿಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಗ್ರಾಹಕರು ದುಬಾರಿ ಬೆಲೆ ತೆರಬೇಕಾಗುತ್ತದೆ. ಲಾಭ ಮಾತ್ರ ಇವರಿಬ್ಬರಿಗೂ ದಕ್ಕದೆ ಮಧ್ಯವರ್ತಿಗಳ ಪಾಲಾಗುತ್ತಿದೆ.

ಚಿಲ್ಲರೆ ಖರೀದಿಗೆ ಅವಕಾಶ ಇಲ್ಲ: ಅತ್ತ ಎಪಿಎಂಸಿಯಲ್ಲೂ ಚಿಲ್ಲರೆಯಾಗಿ ಖರೀದಿಸುವುದಕ್ಕೂ ಅವಕಾಶ ಇಲ್ಲ. ಸಗಟಾಗಿ ಖರೀದಿಸುವಷ್ಟು ಶಕ್ತಿ ಸಾಮಾನ್ಯ ವ್ಯಾಪಾರಸ್ಥರಲ್ಲಿ ಇಲ್ಲ. ಹೀಗಾಗಿ, ಅನಿವಾರ್ಯವಾಗಿ ಮಧ್ಯವರ್ತಿಗಳನ್ನೇ ವ್ಯಾಪಾರಸ್ಥರು ನೆಚ್ಚಿಕೊಳ್ಳಬೇಕಿದೆ. ಎಂ.ಜಿ.ರಸ್ತೆ ಮಾರುಕಟ್ಟೆ ಹಾಗೂ ದೇವರಾಜ ಮಾರುಕಟ್ಟೆಗೆ ಕೆಲವು ರೈತರು ತರಕಾರಿಗಳನ್ನು ತೆಗೆದುಕೊಂಡು ಬರುತ್ತಾರೆ. ಇಲ್ಲೂ ದಲ್ಲಾಳಿಗಳೇ ಖರೀದಿಸಿ ರಸ್ತೆಬದಿ ಮಾರಾಟ ಮಾಡುವ ಹಾಗೂ ತಳ್ಳುವ ಗಾಡಿಯಲ್ಲಿ ಮಾರಾಟ ಮಾಡುವ ಸಣ್ಣಪುಟ್ಟ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. ಇದರಿಂದ ಗ್ರಾಹಕರು ನೀಡುವ ಬಹುಪಾಲು ಮಧ್ಯವರ್ತಿಗಳ ಜೇಬು ತುಂಬುತ್ತಿದೆ. ವ್ಯಾಪಾರಿಗಳು ಹಾಗೂ ರೈತರಿಗೆ ಹೆಚ್ಚಿನ ಲಾಭ ದೊರೆಯುತ್ತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry