7

‘ಮೋದಿ ಅವರದ್ದು ತುಘಲಕ್ ಸರ್ಕಾರ’

Published:
Updated:

ದೇವನಹಳ್ಳಿ: ‘ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ತುಘಲಕ್ ದರ್ಬಾರ್ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಕೃಷ್ಣ ಬೈರೇಗೌಡ ವಾಗ್ದಾಳಿ ನಡೆಸಿದರು.

ಬೆಂಗಳೂರು ಸಚಿವರ ನಿವಾಸದಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ವಿವಿಧ ಘಟಕ ಪದಾಧಿಕಾರಿಗಳನ್ನು ನೇಮಕ ಮಾಡಿದ ಹಿನ್ನೆಲೆಯಲ್ಲಿ ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲಾಗಿದೆ. ಪಕ್ಷದ ಆಂತರಿಕ ಚುನಾವಣೆ ಬಗ್ಗೆ ಮಾತನಾಡುವ ನೈತಿಕತೆ ಪ್ರಧಾನಿ ಅವರಿಗೆ ಇಲ್ಲ. ರಾಹುಲ್ ಗಾಂಧಿ ವಿರುದ್ಧದ ಹೇಳಿಕೆಗಳು ಪ್ರಜಾತಂತ್ರ ವ್ಯವಸ್ಥೆಗೆ ಮಾರಕ, ಕೀಳು ಮಟ್ಟದ ಭಾಷೆ ಮತ್ತು ಹೇಳಿಕೆ ಬಿಜೆಪಿಯವರಿಂದ ಮಾತ್ರ ಸಾಧ್ಯ ಎಂದು ದೂರಿದರು.

132 ವರ್ಷ ಇತಿಹಾಸ ಇರುವ ಕಾಂಗ್ರೆಸ್ 2018ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲಿದೆ. ಬಿಜೆಪಿ, ಜೆಡಿಎಸ್ ಹಗಲು ಕನಸು ಕಾಣುತ್ತಿವೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪುಟಿದೇಳಲಿದೆ ಎಂದರು.

ಮುಖಂಡ ವೆಂಕಟಸ್ವಾಮಿ, ಮುನಿನರಸಿಂಹಯ್ಯ, ಎಂ. ನಾರಾಯಣಸ್ವಾಮಿ, ಜಿ.ಸುರೇಶ್‌, ಜಿಲ್ಲಾ ಪಂಚಾಯಿತಿ ಸದಸ್ಯರಾದ ಲಕ್ಷ್ಮಿನಾರಾಯಣ, ಕೆ.ಸಿ.ಮಂಜುನಾಥ್, ಕಾಂಗ್ರೆಸ್ ಹಿಂದುಳಿದ ವರ್ಗ ಘಟಕ ರಾಜ್ಯ ಉಪಾಧ್ಯಕ್ಷ ಸಿ.ಜಗನ್ನಾಥ್, ಪರಿಶಿಷ್ಟ ಪಂಗಡ ಘಟಕ ರಾಜ್ಯ ಉಪಾಧ್ಯಕ್ಷ ಮಜ್ಜಿಗೆ ಹೊಸಹಳ್ಳಿ ವೆಂಕಟೇಶ್, ಕೆ.ಪಿ.ಸಿ.ಸಿ. ಸದಸ್ಯ ಚೇತನ್ ಗೌಡ, ಕಾಂಗ್ರೆಸ್ ಜಿಲ್ಲಾ ಹಿಂದುಳಿದ ಘಟಕ ಅಧ್ಯಕ್ಷ ಅಪ್ಪಣ್ಣ, ಪುರಸಭೆ ಸದಸ್ಯರಾದ ಎನ್‌.ರಘು, ಜಿ.ಎನ್‌.ವೇಣುಗೋಪಾಲ್‌, ಜಿಲ್ಲಾ ಕಾಂಗ್ರೆಸ್‌ ಘಟಕ ಪ್ರದಾನ ಕಾರ್ಯದರ್ಶಿ ಪ್ರಸನ್ನ ಕುಮಾರ್‌, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಆರ್.ರವಿಕುಮಾರ್‌, ಜಿಲ್ಲಾ ಕಾಂಗ್ರೆಸ್‌ ಪರಿಶಿಷ್ಟ ಜಾತಿ ಘಟಕ ಅಧ್ಯಕ್ಷ ಲೋಕೆಶ್, ತಾಲ್ಲೂಕು ಕೃಷಿಕ ಸಮಾಜ ಅಧ್ಯಕ್ಷ ಶ್ರೀನಿವಾಸಗೌಡ, ಮುಖಂಡ ಲಕ್ಷ್ಮಣ ಗೌಡ, ಎಸ್‌.ಜಿ.ನಾರಾಯಣಸ್ವಾಮಿ, ಕೋದಂಡರಾಮಯ್ಯ ಇದ್ದರು.

ಬಿಜೆಪಿಯ ಡೊಂಗಿ ಹೇಳಿಕೆಗಳು ನಡೆಯಲ್ಲ

ನರೇಂದ್ರ ಮೋದಿ ಅವರು ಜಾರಿಗೆ ತಂದ ನೋಟು ಅಮಾನ್ಯ, ಜಿಎಸ್‌ಟಿಯಿಂದ ಪರಿಣಾಮಗಳ ಬಗ್ಗೆ ಮತದಾರರಿಗೆ ನಿಧಾನವಾಗಿ ಅರ್ಥವಾಗಿದೆ.ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಜನರ ಆಶೋತ್ತರಗಳಿಗೆ ನುಡಿದಂತೆ ನಡೆದಿದೆ ಎಂದರು.

ಭ್ರಷ್ಟಾಚಾರ ಮುಕ್ತ ಕಳಂಕ ರಹಿತ ಸರ್ಕಾರ ನಮ್ಮದಾಗಿದ್ದು, ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದೆ. ಮತದಾರರ ಮುಂದೆ ಡೊಂಗಿ ಹೇಳಿಕೆಗಳು ನಡೆಯಲ್ಲ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry