ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಿಂಗಾಯತರ ಏಕತೆ ಒಡೆದ ಸರ್ಕಾರ’

Last Updated 6 ಡಿಸೆಂಬರ್ 2017, 6:20 IST
ಅಕ್ಷರ ಗಾತ್ರ

ಬಳ್ಳಾರಿ: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಲಿಂಗಾಯತರ ಏಕತೆಯನ್ನು ಒಡೆದಿದೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಲಿಂಗಾಯತ ಸಮುದಾಯದ ಹಲವರು ಮುಖ್ಯಮಂತ್ರಿಗಳಾಗಿದ್ದರು. ಆದರೆ, ಕಾಂಗ್ರೆಸ್‌ ಪಕ್ಷವು ಆ ಸಮುದಾಯವನ್ನು ಈಗ ನುಚ್ಚು ನೂರಾಗುವಂತೆ ಮಾಡಿದೆ’ ಎಂದರು.

‘ಜಾತಿಗಳಲ್ಲಿ ಸಂಘರ್ಷ ಉಂಟು ಮಾಡುವುದರಿಂದ, ಹಣ ಬಲದಿಂದ ಅಧಿಕಾರವನ್ನು ಉಳಿಸಿಕೊಳ್ಳಬಹುದು ಎಂದುಕೊಂಡವರಿಗೆ ತಿಳಿವಳಿಕೆ ಇಲ್ಲ ಎಂದರ್ಥ’ಎಂದು ಹೇಳಿದರು.

ತಲೆ ಮೇಲೆ ಹೊತ್ತು ತಿರುಗಿದ್ದೆ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಲೆಯ ಮೇಲೆ ಹೊತ್ತು ತಿರುಗಿದ್ದೆ. ಆದರೆ ಅವರು ಪಕ್ಷ ಬಿಟ್ಟರು. ನನ್ನೊಂದಿಗಿದ್ದು ಉಪ ಮುಖ್ಯಮಂತ್ರಿಯಾಗಿದ್ದಾಗಲೇ ಅವರು ಕಾಂಗ್ರೆಸ್‌ ಜೊತೆ ಕೈಜೋಡಿಸಿದ್ದರು. ತಾವು ಮತ್ತು ಎಂ.ಪಿ.ಪ್ರಕಾಶ್‌ ತೊರೆದರೆ ಜೆಡಿಎಸ್‌ ಉಳಿಯುವುದಿಲ್ಲ ಎಂದು ತಿಳಿದುಕೊಂಡಿದ್ದರು. ಈಗಲೂ ಅವರು ಜೆಡಿಎಸ್‌ ಅನ್ನು ಮುಗಿಸುವ ಮಾತನಾಡುತ್ತಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಗಣೇಶ ಬೀಡಿ ಮಾರ್ಕೆಟಿಂಗ್‌ ಅಲ್ಲ: ‘ಸಿದ್ದರಾಮಯ್ಯ, ಹನ್ನೆರಡು ಮಂದಿ ರಾಜಕೀಯ ಕಾರ್ಯದರ್ಶಿಗಳನ್ನು ನೇಮಿಸಿಕೊಳ್ಳುವ ಅಗತ್ಯವೇನಿದೆ? 120 ನಿಗಮ ಮಂಡಳಿಗಳೂ ಬೊಕ್ಕಸಕ್ಕೆ ಹೊರೆಯಾಗಿವೆ. ಅಧಿಕಾರವನ್ನು ಕಳೆದುಕೊಳ್ಳುವ ಭಯವಿರುವ ಅವರು ಪತ್ರಿಕೆಗಳಿಗೆ ಪುಟಗಟ್ಟಲೆ ಜಾಹೀರಾತು ಕೊಡುತ್ತಿದ್ದಾರೆ. ಟಿ.ವಿ.ಗಳಲ್ಲಿ ಹಲವು ಭಾಷೆಗಳಲ್ಲಿ ಜಾಹೀರಾತು ಪ್ರಸಾರವಾಗುತ್ತಿವೆ. ಅದೆಲ್ಲವೂ ಜನರ ತೆರಿಗೆ ಹಣ. ರಾಜಕಾರಣ ಎಂದರೆ ಗಣೇಶ ಬೀಡಿ ಮಾರ್ಕೆಟಿಂಗ್‌ ಕೆಲಸ ಅಲ್ಲ’ ಎಂದು ದೇವೇಗೌಡ ಕುಟುಕಿದರು.

‘ತಮ್ಮ ಬೆಂಬಲಕ್ಕಿರುವ ಕುರುಬ ಸಮುದಾಯದ ಪ್ರತಿನಿಧಿಗಳಿಗೆ ಸಿದ್ದರಾಮಯ್ಯ ಹೆಚ್ಚಿನ ಅಧಿಕಾರ ನೀಡದೆ ಎಲ್ಲವನ್ನೂ ತಾವೇ ನಿಭಾಯಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲೆಂದು ಕೆಂಪಯ್ಯ ಅವರನ್ನು ಸೂಪರ್‌ ಹೋಂ ಮಿನಿಸ್ಟರ್‌ ಮಾಡಿದ್ದಾರೆ’ ಎಂದು ಜರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT