ಗುರುವಾರ , ಮಾರ್ಚ್ 4, 2021
29 °C
ಪಂಪ್‌ವೆಲ್ ಬಸ್‌ನಿಲ್ದಾಣಕ್ಕೆ ಸ್ಮಾರ್ಟ್‌ ಸಿಟಿಯೇ ಬರಬೇಕಾಯಿತು

ಪ್ರಸ್ತಾವನೆಗೆ ಎಸ್‌ಪಿವಿ ಅನುಮೋದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಸ್ತಾವನೆಗೆ ಎಸ್‌ಪಿವಿ ಅನುಮೋದನೆ

ಮಂಗಳೂರು: ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಪಂಪ್‌ವೆಲ್‌ ಬಸ್‌ ನಿಲ್ದಾಣಕ್ಕೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಸ್ಮಾರ್ಟ್‌ ಯೋಜನೆಯ ಅಡಿಯಲ್ಲಿ ಬಸ್‌ನಿಲ್ದಾಣದ ನಿರ್ಮಾಣಕ್ಕೆ ಸಿದ್ಧತೆಗಳು ಶುರುವಾಗಿವೆ.

ಸುಮಾರು 7.23 ಎಕರೆ ಪ್ರದೇಶ ದಲ್ಲಿ ಬಹುಮಹಡಿಯ ಬಸ್‌ನಿಲ್ದಾಣ ನಿರ್ಮಾಣಕ್ಕೆ ₹400 ಕೋಟಿ ಮೊತ್ತದ ಕ್ರಿಯಾಯೋಜನೆ ರೂಪಿಸಲಾಗಿದ್ದು, ನವೆಂಬರ್‌ 29ರಂದು ಬೆಂಗಳೂರಿನಲ್ಲಿ ನಡೆದ ಸ್ಮಾರ್ಟ್‌ ಸಿಟಿಯ ಎಸ್‌ಪಿವಿ ಸಭೆ ಯಲ್ಲಿ ಅನುಮೋದನೆ ಪಡೆಯಲಾಗಿದೆ.

ಎಸ್‌ಪಿವಿಗೆ ಪ್ರಸ್ತಾವನೆ: ಪಂಪ್‌ವೆಲ್‌ ಬಳಿ ಖಾಸಗಿ ಸಹಭಾಗಿತ್ವದಲ್ಲಿ ಬಸ್‌ ನಿಲ್ದಾಣವನ್ನು ಸ್ಮಾರ್ಟ್ ಸಿಟಿ ಯೋಜ ನೆಯಡಿ ನಿರ್ಮಿಸುವ ಪ್ರಸ್ತಾವನೆಯನ್ನು ಎಸ್‌ಪಿವಿಗೆ ಕಳುಹಿಸಲು ನವೆಂಬರ್‌ 28ರಂದು ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿತ್ತು.

ಅದರಂತೆ ಮರುದಿನ ಬೆಂಗಳೂರಿನಲ್ಲಿ ನಡೆದ ಎಸ್‌ಪಿವಿ ಸಭೆಯಲ್ಲಿ ಮೇಯರ್‌ ಕವಿತಾ ಸನಿಲ್‌ ಈ ಪ್ರಸ್ತಾವನೆಯನ್ನು ಮಂಡಿಸಿದ್ದರು. ಇದೀಗ ಎಸ್‌ಪಿವಿ ಅನು ಮೋದನೆ ದೊರೆತಿದ್ದು, ತಾಂತ್ರಿಕ ಒಪ್ಪಿಗೆ ಸಿಗುವುದು ಬಾಕಿ ಇದೆ ಎಂದು ಆಯುಕ್ತ ಮುಹಮ್ಮದ್‌ ನಜೀರ್‌ ತಿಳಿಸಿದ್ದಾರೆ.

ಮರೋಳಿಯಲ್ಲಿ 7.23 ಎಕರೆ ಜಮೀನು ಭೂಸ್ವಾಧೀನ ಮಾಡಿ ಕೊಳ್ಳಲಾಗಿದ್ದು, ವಿನ್ಯಾಸ, ನಿರ್ಮಾಣ, ಹಣಕಾಸು ನಿರ್ವಹಣೆ ಮತ್ತು ವರ್ಗಾವಣೆ ಮಾದರಿಯಲ್ಲಿ ಈ ಬಸ್‌ನಿಲ್ದಾಣದ ನಿರ್ಮಾಣ ಆಗಲಿದೆ.

ಚೆಟ್ಟಿನಾಡ್‌ ಬಿಲ್ಡರ್‌ ತಯಾರಿಸಿದ ನೀಲನಕ್ಷೆಗೆ ಜಿಲ್ಲಾಧಿಕಾರಿ ಒಪ್ಪಿಗೆ ಸೂಚಿಸಿದ್ದಾರೆ. ಈ ಬಸ್‌ ನಿಲ್ದಾಣದ ಪ್ರಥಮ ಮತ್ತು ದ್ವಿತೀಯ ಮಹಡಿಗಳಲ್ಲಿ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳ ನಿಲುಗಡೆ, ಮೇಲಿನ ಮಹಡಿಯಲ್ಲಿ ವಾಣಿಜ್ಯ ಮಳಿಗೆ, ಥಿಯೇಟರ್‌, ಕಾರ್‌ ಪಾರ್ಕಿಂಗ್, ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. 33 ವರ್ಷಗಳಲ್ಲಿ ಸಂಪೂರ್ಣ ಸಂಕೀರ್ಣವನ್ನು ಪಾಲಿಕೆಗೆ ಹಸ್ತಾಂತರಿಸುವ ಪ್ರಸ್ತಾವನೆಯನ್ನು ಯೋಜನೆ ಹೊಂದಿದೆ.

ಈ ಹೊಸ ಬಸ್‌ನಿಲ್ದಾಣದಲ್ಲಿ 197 ಬಸ್‌ಬೇಗಳನ್ನು ನಿರ್ಮಿಸಲಾಗುತ್ತಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಬಸ್‌ನಿಲ್ದಾಣ ಬೇರೆಲ್ಲೂ ಇಲ್ಲ ಎನ್ನುತ್ತಾರೆ ಮೇಯರ್‌ ಕವಿತಾ ಸನಿಲ್‌. ಇದು ಕೇವಲ ಸರ್ವೀಸ್‌ ಬಸ್‌ಗಳ ನಿಲ್ದಾಣವಾಗಿದ್ದು, ಸಿಟಿ ಬಸ್‌ಗಳು ಇಲ್ಲಿಗೆ ಬಂದು ಪ್ರಯಾಣಿಕರನ್ನು ಕರೆದೊಯ್ಯಲಿವೆ. 2040 ನೇ ಇಸ್ವಿಯ ಸಂಚಾರ ದಟ್ಟಣೆಯನ್ನು ಗಮನದಲ್ಲಿ ಇಟ್ಟುಕೊಂಡು ಬಸ್‌ನಿಲ್ದಾಣದ ಯೋಜನೆಯನ್ನು ರೂಪಿಸಲಾಗಿದೆ ಎಂದು ಮುಹಮ್ಮದ್‌ ನಜೀರ್‌ ತಿಳಿಸಿದ್ದಾರೆ.

***

ಮೂರು ವರ್ಷಗಳಲ್ಲಿ ಬಸ್‌ ನಿಲ್ದಾಣದ ಕಾಮಗಾರಿ ಪೂರ್ಣ

33 ವರ್ಷಗಳ ನಿರ್ವಹಣೆ ನಂತರ ಪಾಲಿಕೆಗೆ ಹಸ್ತಾಂತರ

ತಾಂತ್ರಿಕ ಅನುಮೋದನೆಗಾಗಿ ಕ್ರಿಯಾ ಯೋಜನೆ ಸಲ್ಲಿಸಲು ಸಿದ್ಧತೆ

***

ಪಂಪ್‌ವೆಲ್‌ ಬಸ್‌ನಿಲ್ದಾಣದ ಕುರಿತು ಈಗಾಗಲೇ ಎಸ್‌ಪಿವಿಯಲ್ಲಿ ಅನುಮೋದನೆ ಪಡೆಯಲಾಗಿದೆ. ತಾಂತ್ರಿಕ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ.

      -ಮುಹಮ್ಮದ್‌ ನಜೀರ್‌

          ಪಾಲಿಕೆ ಆಯುಕ್ತ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.