7

ಪೊದೆ ಬಿಟ್ಟು ಅಲುಗಾಡದ ಗಜರಾಜರು!

Published:
Updated:
ಪೊದೆ ಬಿಟ್ಟು ಅಲುಗಾಡದ ಗಜರಾಜರು!

ಚಿತ್ರದುರ್ಗ / ನಾಯಕನಹಟ್ಟಿ: ಎರಡು ದಿನಗಳಿಂದ ಆಂಧ್ರಪ್ರದೇಶದ ಗಡಿಭಾಗ, ಮೊಳಕಾಲ್ಮುರು ತಾಲ್ಲೂಕು ಕೇಂದ್ರದ ಆಸುಪಾಸಿನಲ್ಲಿ ಸುತ್ತಾಡುತ್ತ ಪಟ್ಟಣದ ಜನರಲ್ಲಿ ಆತಂಕ ಮೂಡಿಸಿದ್ದ ಎರಡು ಆನೆಗಳು ಮಂಗಳವಾರ ಮುಂಜಾನೆ ಚಳ್ಳಕೆರೆ ತಾಲ್ಲೂಕಿನ ತಳಕು ಸಮೀಪದ ತಿಮ್ಮಪ್ಪಯ್ಯನಹಳ್ಳಿಯ ಜಮೀನುಗಳಲ್ಲಿ ಪ್ರತ್ಯಕ್ಷವಾಗಿವೆ.

ಭಾನುವಾರ ಆಂಧ್ರದ ಗಡಿಯಲ್ಲಿ ಇಬ್ಬರನ್ನು ಸಾಯಿಸಿ, ಮೊಳಕಾಲ್ಮುರು ಪಟ್ಟಣದ ಆಸುಪಾಸಿನಲ್ಲಿ ಓಡಾಡುತ್ತಿದ್ದ ಈ ಸಲಗಗಳು, ವೇದಾವತಿ ನದಿ ಪಾತ್ರದ ಮೂಲಕ ಬಿಟಿಪಿ ಜಲಾಶಯಕ್ಕೆ ಹೋಗುವ ಸಾಧ್ಯತೆಯಿದೆ ಎಂದು ಕಾರ್ಯಾಚರಣೆಯಲ್ಲಿ ತೊಡಗಿದ್ದ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿ ಜಲಾಶಯದ ಬಳಿ ಕಾಯುತ್ತಿದ್ದರು. ಆದರೆ, ಆನೆಗಳು ಬರಲೇ ಇಲ್ಲ.

ಮಂಗಳವಾರ ರಾತ್ರಿ ಮೊಳಕಾಲ್ಮುರು ಹೊರವಲಯದಿಂದ ಹೊರಟ ಆನೆಗಳು ಕೋನಸಾಗರ, ಬಿ.ಜಿ.ಕೆರೆ ಮಾರ್ಗವಾಗಿ ಹೆದ್ದಾರಿ ದಾಟಿಕೊಂಡು ಗರಣಿ ಕ್ರಾಸ್ ಮೂಲಕ ತಿಮ್ಮಪ್ಪಯ್ಯನ ಹಳ್ಳಿ ಕೆರೆ ಅಂಗಳ ತಲುಪಿವೆ. ನೀರಿಲ್ಲದ ಕೆರೆಯಲ್ಲಿ, ಬಳ್ಳಾರಿ ಜಾಲಿ ಮುಳ್ಳಿನ ಗಿಡಗಳ ಪೊದೆಗಳು ಬೆಳೆದಿವೆ. ಅವುಗಳ ಮರೆಯಲ್ಲಿ ಆನೆಗಳು ವಿರಮಿಸಿವೆ.

ಮುಂಜಾನೆ 6.30ರ ಸುಮಾರಿಗೆ ಕೆರೆ ಅಂಗಳದ ಬಳಿ ಬಹಿರ್ದೆಸೆಗೆ ಹೋದ ತಿಮ್ಮಪ್ಪಯ್ಯನ ಹಳ್ಳಿಯ ಕರಿಯಣ್ಣ ಜಾಲಿ ಗಿಡಗಳ ನಡುವೆ ಓಡಾಡುತ್ತಿದ್ದ ಆನೆಗಳನ್ನು ನೋಡಿ‌ ಆತಂಕಗೊಂಡ ಅವರು ಗ್ರಾಮಸ್ಥರಿಗೆ, ಅರಣ್ಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಬಿಟಿಪಿ ಜಲಾಶಯದ ಬಳಿ ಕಾಯುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ತಕ್ಷಣ ಅಲ್ಲಿಂದ ತಿಮ್ಮಪ್ಪಯ್ಯನಹಳ್ಳಿಗೆ ಬಂದಿದ್ದಾರೆ. 7.30ರ ಹೊತ್ತಿಗೆ ಪಟಾಕಿ ಸಿಡಿಸುತ್ತಾ ಆನೆಗಳನ್ನು ಓಡಿಸುವ ಕಾರ್ಯಾಚರಣೆ ಆರಂಭಿಸಿದರು.

ಇತ್ತ ಆನೆಗಳು ಗ್ರಾಮದ ಸಮೀಪ ಸುತ್ತಾಡುತ್ತಿವೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಆತಂಕಗೊಂಡ ಸುತ್ತ ಮುತ್ತಲಿನ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಕೆರೆಯಂಗಳದ ಸಮೀಪ ಜಮಾಯಿಸಿದರು. ಆನೆಗಳನ್ನು ಕಂಡು ಕೂಗು ಹಾಕಿದರು. ಜನರ ಸಂಖ್ಯೆ ಕ್ರಮೇಣ ಹೆಚ್ಚುತ್ತಾ ಹೋಯಿತು. ಬಳಿಕ ಜನರನ್ನು ನಿಯಂತ್ರಿಸಲು ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಬಿ.ಮಂಜುನಾಥ್ ಅವರು ಪೊಲೀಸ್ ಇಲಾಖೆ ನೆರವು ಕೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್‌ ಜೋಶಿ ಅವರು ಸ್ಥಳಕ್ಕೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ತುಕಡಿಯನ್ನು ಕಳುಹಿಸಿದರು.

‘ಜನರು ಕೂಗಾಡುತ್ತಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಆನೆಗಳು ಬೀಡುಬಿಟ್ಟಿರುವ ಕೆರೆ ಅಂಗಳದ ಸಮೀಪದಲ್ಲೇ ತುಂಬಾ ಹಳ್ಳಿಗಳಿವೆ. ಜನರ ಕೂಗಾಟದಿಂದ ಆನೆಗಳು ದಾರಿ ಬದಲಿಸಿದರೆ, ತೊಂದರೆಯಾಗುತ್ತದೆ. ಜನರು ಸಹಕಾರ ನೀಡಿ ಸಂಯಮದಿಂದ ಇದ್ದರೆ ಕಾರ್ಯಾಚರಣೆ ಸುಲಭವಾಗುತ್ತದೆ’ ಎಂದು ಉಪ ಅರಣ್ಯಸಂರಕ್ಷಣಾಧಿಕಾರಿ ಕೆ.ಬಿ.ಮಂಜುನಾಥ್ ‘ಪ್ರಜಾವಾಣಿ’ ಮೂಲಕ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಪಿಎಸ್ಐ ಸತೀಶ್ ನಾಯಕ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್, ಕಂದಾಯ ಅಧಿಕಾರಿಗಳು, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಒಬ್ಬೊಬ್ಬರಿಗೆ ಒಂದೊಂದು ಚಿಂತೆ...!

‘ನಮ್ ಜೀವನ್ದಾಗೆ ಈ ಕಡೆಗೆ ಆನೆ ಬಂದಿದ್ದು ಗೊತ್ತಿಲ್ಲ. ಆನೆ ನೋಡಿದರೆ ಖುಷಿಯಾಗ್ತದೆ. ಇನ್ನೊಂದು ಕಡೆ ಎಲ್ಲಾರ ಊರೊಳಕ್ಕೆ ನುಗ್ಗಿಬಿಟ್ಟರೆ ಅಂತ ಭಯ ಆಗ್ತದೆ...’ ಇದು ಆನೆಗಳನ್ನು ನೋಡುವುದಕ್ಕಾಗಿ ಕೆರೆಯಂಗಳದ ಬದಿಯಲ್ಲಿ ನಿಂತಿದ್ದ ಎನ್. ದೇವರಹಳ್ಳಿ ಮಲ್ಲಿಕಾರ್ಜುನ, ಕರಿಯಣ್ಣ ಅವರ ಅಭಿಪ್ರಾಯ.

‘ಈಗ ಬಿಸಿಲಿದೆ. ಆನೆಗಳು ಹೊರಗೆ ಹೊರಡುವುದಿಲ್ಲ. ಕತ್ತಲೆಯಾದರೆ, ತಾನಾಗೇ ಸಂಚಾರ ಆರಂಭಿಸುತ್ತವೆ. 40–50 ಕಿ.ಮೀ ಪ್ರಯಾಣ ಮಾಡುತ್ತವೆ. ಆಗ ಓಡಿಸುವುದು ಸುಲಭ. ಆದರೆ, ಸುತ್ತ ಸುಮಾರು 16 ಗ್ರಾಮಗಳಿವೆ. ಅಲ್ಲಿನ ಜನರನ್ನು ರಕ್ಷಿಸುವುದು ಸವಾಲಿನ ಕೆಲಸವಾಗಿದೆ’ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಚಿಂತಿಸುತ್ತಿದ್ದರು.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ, ಆನೆಗಳು ಸಂಚರಿಸಬಹುದಾದ ಹಳ್ಳಿಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಡಂಗೂರ ಹೊಡೆಸಿ ಗ್ರಾಮಸ್ಥರಲ್ಲಿ ಜಾಗೃತಿಮೂಡಿಸುತ್ತಿದೆ.

ಆನೆ ಓಡಿಸಲು ಈಗಿರುವ ದಾರಿ, ಕಷ್ಟಗಳು

ತಿಮ್ಮಪ್ಪಯ್ಯನಹಳ್ಳಿಯಲ್ಲಿರುವ ಆನೆಗಳನ್ನು ರಾತ್ರಿ ವೇಳೆ ಸಂಗೇನಹಳ್ಳಿ ಮೂಲಕ ಜೋಗಿಮಟ್ಟಿ ಅರಣ್ಯ ತಲುಪಿಸಿದರೆ, ಮುಂದೆ ಅವುಗಳ ದಾರಿಯಲ್ಲಿ ಸಾಗುತ್ತವೆ ಎಂಬುದು ಅರಣ್ಯ ಇಲಾಖೆಯ ಲೆಕ್ಕಾಚಾರ.

ತಿಮ್ಮಪ್ಪಯ್ಯನಹಳ್ಳಿ– ಗಜ್ಜುಗಾನಹಳ್ಳಿ, ಓಬಯ್ಯನಹಟ್ಟಿ, ನಾಯಕನಹಟ್ಟಿವರೆಗೆ ಕಳುಹಿಸಬಹುದು. ಅಲ್ಲಿ ಕೆರೆ ಇದೆ. ಆನೆಗಳು ಕೆರೆಗೆ ಇಳಿದರೆ ಓಡಿಸುವುದು ಕಷ್ಟ. ಒಂದೊಮ್ಮೆ ಕಷ್ಟಪಟ್ಟು ಓಡಿಸಿದರೆ, ಮುಂದೆ ಸಂಗೇನಹಳ್ಳಿ ಕೆರೆ ತಲುಪುತ್ತವೆ. ಅಲ್ಲಿಂದ ತುರುವನೂರು ಹೋಬಳಿಯ ಹಳ್ಳಿಗಳನ್ನು ದಾಟಿಸುತ್ತಾ ಜೋಗಿಮಟ್ಟಿಯತ್ತ ಓಡಿಸಬಹುದು ಎಂದು ಕಾರ್ಯಾಚರಣೆಯಲ್ಲಿ ತೊಡಗಿಕೊಂಡ ತಂಡ ಯೋಜನೆ ಹಾಕಿಕೊಂಡಿದೆ. ಆದರೆ, ದಾರಿಯಲ್ಲಿ ಸಿಗುವ 20ರಿಂದ 30 ಹಳ್ಳಿಗಳನ್ನು ದಾಟಿಸುವುದು ಸವಾಲಿನ ಕೆಲಸವಾಗಿದೆ.

* * 

ಸಮೀಪದಲ್ಲೇ ಮೆಕ್ಕೆಜೋಳದ ಹೊಲಗಳಿವೆ. ಬೆಳೆ ಸಮೃದ್ಧವಾಗಿ ಬೆಳೆದಿದೆ. ಆನೆ ದಾಳಿ ಮಾಡಿದರೆ ಒಂದೇ ಒಂದು ತೆನೆ ಜೋಳವೂ ಸಿಗಲ್ಲ.

ಇಟ್ಟಿಗೆ ಪಾಲಯ್ಯ, ತಿಪ್ಪೇಸ್ವಾಮಿ ರೈತರು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry