7

9 ವರ್ಷಗಳ ಬಳಿಕ ಲಿಫ್ಟ್‌ ಪ್ರಾರಂಭ

Published:
Updated:
9 ವರ್ಷಗಳ ಬಳಿಕ ಲಿಫ್ಟ್‌ ಪ್ರಾರಂಭ

ಗದಗ: ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಕಳೆದ 9 ವರ್ಷಗಳಿಂದ ಕೆಟ್ಟು ನಿಂತಿದ್ದ ಲಿಫ್ಟ್‌ಗೆ ಕೊನೆಗೂ ದುರಸ್ತಿ ಭಾಗ್ಯ ಲಭಿಸಿದೆ. ವಾರದ ಹಿಂದಿನಿಂದ ಮತ್ತೆ ಲಿಫ್ಟ್‌ ಕಾರ್ಯಾಚರಣೆ ಪ್ರಾರಂಭಿಸಿದ್ದು, ಸರ್ಕಾರದ ವಿವಿಧ ಯೋಜನೆಗಳ ನೆರವು ಪಡೆದುಕೊಳ್ಳಲು ಜಿಲ್ಲಾಡಳಿತ ಭವನಕ್ಕೆ ಬರುವ ವಯೋವೃದ್ಧರು, ಅಂಗವಿಕಲರು ಅನುಭವಿಸುತ್ತಿದ್ದ ತೊಂದರೆ ಇದರಿಂದ ತಪ್ಪಿದೆ.

2008ರಲ್ಲಿ ಜಿಲ್ಲಾಡಳಿತ ಭವನ ಉದ್ಘಾಟನೆಗೊಂಡಿತ್ತು. ಜಿಲ್ಲಾ ಪಂಚಾಯ್ತಿಗೆ ಸೇರಿದ 40ಕ್ಕೂ ಹೆಚ್ಚು ಕಚೇರಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ನಿತ್ಯ ಸಾವಿರಾರು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ, ಕಟ್ಟಡದಲ್ಲಿ ಅಳ­ವಡಿಸಿದ್ದ ‘ಲಿಫ್ಟ್’ ಆರಂಭದ ಒಂದೆರಡು ತಿಂಗಳು ಕೆಲಸ ಮಾಡಿದ್ದು ಬಿಟ್ಟರೆ,ನಂತರ ಕೆಟ್ಟು ನಿಂತಿತ್ತು. ತಾಂತ್ರಿಕ ಸಮಸ್ಯೆಯಿಂದಾಗಿ ಇಲ್ಲಿಯವರೆಗೂ ದುರಸ್ತಿ ಭಾಗ್ಯ ಕಂಡಿರಲಿಲ್ಲ. ಇದೀಗ ಜಿಲ್ಲಾಧಿಕಾರಿ ಮನೋಜ್‌ ಜೈನ್‌ ಅವರೇ ಸ್ವತಃ ಮುತುವರ್ಜಿ ವಹಿಸಿ ಲಿಫ್ಟ್‌ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.

ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ, ಸಿಇಒ ಕಚೇರಿ, ಅಂಬೇಡ್ಕರ್ ನಿಗಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಗಳು ಜಿಲ್ಲಾಡಳಿತ ಭವನದ ನೆಲಮಹಡಿಯಲ್ಲಿದ್ದರೆ, ಆರೋಗ್ಯ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ನಗರಾಭಿವೃದ್ಧಿ ಕೋಶ, ಚುನಾವಣಾ ಅಧಿಕಾರಿಗಳ ಕಚೇರಿ ಎರಡನೇ ಮಹಡಿಯಲ್ಲಿವೆ. ಪಂಚಾಯತ್‌ರಾಜ್‌ ಇಲಾಖೆ, ಉದ್ಯೋಗ ವಿನಿಮಯ ಕೇಂದ್ರ, ನೀರು ಮತ್ತು ಒಳಚರಂಡಿ ಇಲಾಖೆ, ಗ್ರಂಥಾಲಯ ಇಲಾಖೆ ಸೇರಿ

ದಂತೆ ಹಲವು ಕಚೇರಿಗಳು ಮೂರನೇ ಮಹಡಿಯಲ್ಲಿವೆ.

ಲಿಫ್ಟ್‌ ದುರಸ್ತಿಯಲ್ಲಿ ಇದ್ದಿದ್ದರಿಂದ ಅಂಗವಿಕ­ಲರು, ವಯಸ್ಸಾದವರು ಎರಡು ಮತ್ತು ಮೂರನೇ ಮಹಡಿಗೆ ಹೋಗಲು ಪರದಾಡುತ್ತಿದ್ದರು. ಮೆಟ್ಟಿಲು ಹತ್ತಿ­ಕೊಂಡೇ ಹೋಗಬೇಕಾಗಿತ್ತು. ನೆಲಮಹ­ಡಿ ಮುಖ್ಯದ್ವಾರ ಹೊರತುಪಡಿಸಿದರೆ ಇನ್ನೆಲ್ಲಿಯೂ ಅಂಗವಿಕ­ಲರಿಗೆ ರ್‍ಯಾಂಪ್‌ ನಿರ್ಮಿಸಿಲ್ಲ. ಹೀಗಾಗಿ ಅಂಗವಿಕಲರು ಮತ್ತೊಬ್ಬರ ಸಹಾಯವಿಲ್ಲದೆ, ಮೇಲಕ್ಕೆ ಹತ್ತಲಾಗದೇ ಒದ್ದಾಡುವ ದೃಶ್ಯಗಳು ನಿತ್ಯ ಇಲ್ಲಿ ಸಾಮಾನ್ಯವಾಗಿದ್ದವು.

ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯುಡಿ) ನಿಯಮದ ಪ್ರಕಾರ, ಸರ್ಕಾರಿ ಕಚೇರಿ, ಬಹುಮಹಡಿ ಕಟ್ಟಡಗಳಲ್ಲಿ ವೃದ್ಧರು, ಅಂಗವಿಕಲರ ಓಡಾಟಕ್ಕೆ ಪೂರಕ ಸೌಲಭ್ಯ ಕಲ್ಪಿಸುವುದು ಕಡ್ಡಾಯ. ಆದರೆ, ದೀಪದ ಬುಡದಲ್ಲೇ ಕತ್ತಲು ಎನ್ನುವಂತೆ ಇಷ್ಟು ದಿನ ಜಿಲ್ಲಾಡಳಿತ ಭವನದಲ್ಲೇ ಲಿಫ್ಟ್‌ ಇರಲಿಲ್ಲ. ಸೋಜಿಗದ ಸಂಗತಿ ಎಂದರೆ ಈ ಲಿಫ್ಟ್‌ ಯಾವಾಗಿನಿಂದ ಕೆಟ್ಟು ನಿಂತಿದೆ ಎಂಬ ಸ್ಪಷ್ಟ ಮಾಹಿತಿ ಸ್ವತಃ ಜಿಲ್ಲಾಡಳಿತಕ್ಕೂ ಇರಲಿಲ್ಲ. ಜಿಲ್ಲಾಡಳಿತ ಭವನ ಉದ್ಘಾಟನೆಯಾದ ಬಳಿಕ ಈ ಲಿಫ್ಟ್‌ ಕೆಲಸ ಮಾಡಿದ್ದನ್ನು ಯಾರೂ ಗಮನಿಸಿರಲಿಲ್ಲ. ಕೊನೆಗೂ ಇದು ಜಿಲ್ಲಾಧಿಕಾರಿಗಳ ಕಣ್ಣಿಗೆ ಬಿದ್ದು, ದುರಸ್ತಿ ಭಾಗ್ಯ ಪಡೆದುಕೊಂಡಿದೆ.

* * 

ಲಿಫ್ಟ್‌ ಆರಂಭವಾಗಿರು ವುದರಿಂದ ಎರಡು, 3ನೇ ಮಹಡಿಗೆ ಹೋಗಲು ಮೆಟ್ಟಿಲು ಹತ್ತಿ ಇಳಿಯುವ ಪರದಾಟ ತಪ್ಪಿದೆ. ಅಂಗವಿಕ­ಲರಿಗಾಗಿ ಇಲ್ಲಿ ರ್‍ಯಾಂಪ್‌ ನಿರ್ಮಿಸಬೇಕು

ದಾಕ್ಷಾಯಿಣಿ ಜಿ. ಅಂಗವಿಕಲೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry